ಮುನವಳ್ಳಿ: “ಜೇವೂರ ಗುರುಗಳು ಕೇವಲ ವಿದ್ಯಾ ಸಂಸ್ಥೆಯನ್ನು ಕಟ್ಟಲಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಲಭಿಸುವಂತೆ ಪ್ರಯತ್ನಿಸಿದರು. ತಮ್ಮ ಹೃದಯದಲ್ಲಿ ಸಮಾಜವಾದ, ಸಮತಾವಾದದ ವಿಚಾರಗಳನ್ನೇ ತುಂಬಿಕೊಂಡ ಅವರು ಅನೇಕ ಜನಹಿತ ಕಾರ್ಯಗಳನ್ನು ಮಾಡುತ್ತ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದರು’ ಎಂದು ಬಾಗಲಕೋಟೆಯ ವಿಶ್ರಾಂತ ಉಪನ್ಯಾಸಕ ಎಸ್.ವ್ಹಿ.ಚೌಡಾಪೂರ ಹೇಳಿದರು.
ಅವರು ಮುನವಳ್ಳಿಯ ಜೆ.ಎಸ್.ಪಿ.ಸಂಘದ ಶ್ರೀ ರೇಣಮ್ಮತಾಯಿ ಯಲಿಗಾರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ವ್ಹಿ.ಪಿ.ಜೇವೂರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿಂದುಳಿದ ಜನಾಂಗದಲ್ಲಿ ಜನಿಸಿದ ಶ್ರೀ ದಿಲೀಪ ಜಂಬಗಿಯವರು ಸರಕಾರಿ ಸೇವೆಯಲ್ಲಿ ಉನ್ನತ ಸ್ಥಾನದಲ್ಲಿದ್ದು, ನಿವೃತ್ತರಾದ ನಂತರ ತಾವೂ ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಶ್ರೀ ಜೇವೂರ ಗುರುಗಳಿಗೆ ಒಂದು ಶಾಶ್ವತವಾದ ಗುರುದಕ್ಷಿಣೆಯಾಗಿ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ಯೋಜಿಸಿದರು.ಇಂಥ ಅಪರೂಪದ ಗುರು ಶಿಷ್ಯರು ಇಂದಿನ ದಿನಗಳಲ್ಲಿ ವಿರಳ ಎಂದರು.
ಭಂಡಾರಹಳ್ಳಿ ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಮಹಾಸ್ವಾಮಿಗಳು, ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಟ ಮುಕ್ತಾನಂದ ಮಹಾಸ್ವಾಮಿಗಳು, ಬಳಗಾನೂರಿನ ಸಿದ್ದಬಸವ ಮಹಾಸ್ವಾಮಿಗಳು, ಚಿಕಲಪರವಿಯ ಅನ್ನದಾನಿ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು.
ಇದೇ ಸಂದರ್ಭದಲ್ಲಿ ವೈ.ಬಿ.ಕಡಕೋಳ ಪ್ರಧಾನ ಸಂಪಾದಕತ್ವದಲ್ಲಿ ಮೂಡಿಬಂದ ಸ್ಮರಣ ಸಂಚಿಕೆ “ಗುರುಶಿಷ್ಯರ ಅಪೂರ್ವ ಸಂಗಮ” ಕೃತಿಯನ್ನು ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ ಮಾತನಾಡುತ್ತ “ಜೇವೂರ ಗುರುಗಳ ಹಾಗೆ ಪ್ರತಿಯೊಬ್ಬರೂ ಪಾರದರ್ಶಕ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು. ಜೇವೂರ ಗುರುಗಳು ಕೇವಲ ಶಿಕ್ಷಕರಾಗದೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಬಯಸಿ ಗುರುಗಳಾಗಿ ಚಿರಸ್ಥಾಯಿಯಾದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಪಾಠ ಬೋಧನೆಯ ಶಿಕ್ಷಕರಾಗದೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಗುರುಗಳಾದರೆ ಬದುಕು ಸಾರ್ಥಕ”ಎಂದು ನುಡಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಸಂಪಾದಕರಾದ ವೈ.ಬಿ.ಕಡಕೋಳ, ಸಹ ಸಂಪಾದಕರಾದ ವೀರಣ್ಣ ಕೊಳಕಿ., ಬಸನಗೌಡ ಹುಲಿಗೊಪ್ಪ, ಶಿವುಕುಮಾರ ಕಾಟಿ, ಬಸವರಾಜ ತುಳಜನ್ನವರ ಇವರನ್ನು ಸನ್ಮಾನಿಸುವ ಜೊತೆಗೆ ಸ್ಮರಣ ಸಂಚಿಕೆಗೆ ಲೇಖನ ಕವನ ನೀಡಿದ ಎಲ್ಲ ಲೇಖಕ ಬಳಗವನ್ನು ಗೌರವಿಸಲಾಯಿತು. ಎಂ.ಆರ್.ಗೋಪಶೆಟ್ಟಿ, ಉಮೇಶ ಬಾಳಿ ಪಂಚನಗೌಡ ದ್ಯಾಮನಗೌಡರ, ರಮೇಶ ಗೋಮಾಡಿ, ಡಾ.ಮೋಹನ ಬಾಳಿ, ಎಂ.ಆರ್.ಗೋಮಾಡಿ, ವೈ.ಬಿ.ಕಡಕೋಳ, ರೇಣುಕಪ್ರಸಾದ ಜಂಬಗಿ, ಜೇವೂರ ಪ್ರತಿಷ್ಠಾನದ ಪದಾಧಿಕಾರಿಗಳು ಸರ್ವ ಸದಸ್ಯರು, ಕಿವುಡು ಮೂಕ ಮಕ್ಕಳ ಶಾಲೆಯ ಸರ್ವಸಿಬ್ಬಂಧಿ ಅಭಿಮಾನಿ ವರ್ಗದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ವಿಜಯ ಅಮಠೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಭೂಷಿತ ಸಿ.ಬಿ.ಕೋಣಿ, ಗುರುನಾಥ ಪತ್ತಾರ, ಸವದತ್ತಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಅನಸೂಯ ಮದನಬಾವಿ ಇವರನ್ನ ಸನ್ಮಾನಿಸಲಾಯಿತು. ಬಿ.ಬಿ.ಹುಲಿಗೊಪ್ಪ ಕಾರ್ಯಕ್ರಮ ನಿರೂಪಿಸಿದರು.n ಅನಿತಾ ಯಲಿಗಾರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಬಾಳು ಹೊಸಮನಿ ಸ್ವಾಗತಿಸಿ, ಶಿವುಕುಮಾರ ಕಾಟಿ ವಂದಿಸಿದರು.