ನದಿ ದಾಟಲು ನೌಕೆ ಬೇಕು, ಭವ ಸಾಗರ ದಾಟಲು ಗುರು ಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು): ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸತ್ಯದ ತಳಹದಿಯ ಮೇಲೆ ಸುಸಂಸ್ಕೃತ ಜೀವನ ನಿರ್ಮಾಣಗೊಳ್ಳಲು ಸಾಧ್ಯ. ಮನುಷ್ಯನಿಗೆ ಬರುವ ತಾಪತ್ರಯ ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜ.28 ರಂದು ಜರುಗಿದ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನದಿ ದಾಟಲು ನೌಕೆ ಬೇಕು, ಭವ ಸಾಗರ ದಾಟಲು ಗುರು ಬೇಕು. ಅರಿವು ಆದರ್ಶಗಳಿಂದ ಬದುಕು ಶ್ರೀಮಂತಗೊಳ್ಳಬೇಕಾಗಿದೆ. ಇಂದು ಎಲ್ಲ ರಂಗಗಳಲ್ಲಿ ನಡೆದಿರುವ ಸಂಘರ್ಷಗಳಿಗೆ ಅರಿವಿನ ಕೊರತೆಯೇ ಕಾರಣವೆಂದರೆ ತಪ್ಪಾಗದು. ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ಸಹಜ. ಇವೆರಡರ ಮಧ್ಯದ ಬದುಕು ಇನ್ನಿತರರಿಗೆ ಮಾದರಿಯಾಗಬೇಕು. ಪೂರ್ವ ಕಾಲದ ಆಚಾರ್ಯರು ಮತ್ತು ಋಷಿ ಮುನಿಗಳು ಕೊಟ್ಟ ಸಂದೇಶ ಉಜ್ವಲ ಬದುಕಿಗೆ ಪ್ರೇರಕ ಶಕ್ತಿಯಾಗಿವೆ. ವಿಶ್ವ ಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವೀಯತೆಯ ಉತ್ಕೃಷ್ಟ ಮೌಲ್ಯಗಳನ್ನು ಬೋಧಿಸಿದ್ದಾರೆ. ಆ ಮಹಾ ಬೆಳಕಿನಲ್ಲಿ ಮನುಷ್ಯ ಮುನ್ನಡೆದಾಗ ಬದುಕಿಗೆ ಬೆಲೆ ಬರುತ್ತದೆ ಎಂದರು.

ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ಹಂಪಸಾಗರದ ಶಿವಲಿಂಗ ರುದ್ರಮುನಿ ಶ್ರೀ, ನೆಗಳೂರು ಗುರುಶಾಂತೇಶ್ವರ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ತರೀಕೆರೆ ಉಪವಿಭಾಗಾಧಿಕಾರಿ ರೇಣುಕ ಪ್ರಸಾದ್ ಶ್ರೀ ಪೀಠಕ್ಕೆ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಾಳೆಹೊನ್ನೂರು ಉಪತಹಶೀಲ್ದಾರ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾತ:ಕಾಲದಲ್ಲಿ ಕ್ಷೇತ್ರದ ಎಲ್ಲ ದೈವಗಳಿಗೆ ಪೌರ್ಣಿಮೆ ನಿಮಿತ್ಯ ವಿಶೇಷ ಪೂಜೆ ಜರುಗಿದವು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles