ಬೆಳಗಾವಿ: ಕೊರೊನಾ ಪರಿಣಾಮದಿಂದ 10 ತಿಂಗಳು ಬಂದ್ ಆಗಿದ್ದ ಜಿಲ್ಲೆಯ ಸವದತ್ತಿ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನ ಇಂದಿನಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಯಲ್ಲಮ್ಮನ ದರ್ಶನಕ್ಕೆ ಬರುವ ಭಕ್ತರು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಮತ್ತು ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.
ಸವದತ್ತಿ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಅಸಂಖ್ಯ ಭಕ್ತರಿದ್ದಾರೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಎರಡೂ ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ಬಂದ್ ಮಾಡಿ 10 ತಿಂಗಳಾಯಿತು.
ಪ್ರತಿವರ್ಷ ಬನದ ಹುಣ್ಣಿಮೆಗೆ ನಡೆಯುತ್ತಿದ್ದ ಯಲ್ಲಮ್ಮದೇವಿ ಜಾತ್ರೆಯೂ ಈ ಬಾರಿ ಮುಂದಕ್ಕೆ ಹೋಗಿದೆ. ಈಗ ಸಮಾವೇಶ, ಉತ್ಸವ, ಜಾತ್ರೆ, ಸಮಾರಂಭಗಳಿಗೆ ಅವಕಾಶ ನೀಡಲಾಗಿದ್ದು, ದೇವಸ್ಥಾನ ತೆರೆಯುವಂತೆ ಭಕ್ತರ ಒತ್ತಡವೂ ಇತ್ತು.
ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆ, ಉತ್ಸವ ಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ದೇವಸ್ಥಾನ ಸಿಇಒ ರವಿ ಕೋಟಾರಗಸ್ತಿ ನೇತೃತ್ವದಲ್ಲಿ ದೇವಸ್ಥಾನ ಕ್ಕೆ ಬರುವ ಭಕ್ತರ ಸುರಕ್ಷಿತೆಗೆ ಆದ್ಯತೆ ನೀಡಲಾಗುತ್ತಿದೆ.