ಅಪ್ರತಿಮ ನಾದಸಂತ ತ್ಯಾಗರಾಜರು

ಫೆ. 2 ತ್ಯಾಗರಾಜ ಆರಾಧನೆ. ಈ ಪ್ರಯುಕ್ತ ವಿಶೇಷ ಲೇಖನ

*ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಪಂಡಿತ-ಪಾಮರ ಭೇದಗಳಿಲ್ಲವೆಂಬಂತೆ ಎಲ್ಲರಿಗೂ ದಕ್ಕಿದ ಮಹಾ ಸಂತ ತ್ಯಾಗರಾಜರು. ಭಕ್ತರಿಗೆ ಅವರೊಬ್ಬ ಭಾಗವತ, ಮುಮಕ್ಷಿಗಳಿಗೆ ಯೋಗಿ, ರಸಿಕರಿಗೆ ನಾದದ ಮೂರ್ತರೂಪ. ಶ್ರೀರಾಮನಿಗಾದರೋ ಭಕ್ತಾಗ್ರೇಸರ. ಸಂಗೀತ ಪ್ರಪಂಚಕ್ಕೆ ತ್ಯಾಗರಾಜರ ಕೊಡುಗೆ ವಿಸ್ತಾರವಾದದ್ದು ಮತ್ತು ಉತ್ಕೃಷ್ಟ ಗುಣಮಟ್ಟದ್ದು.

ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳೆನಿಸಿದ ಶ್ಯಾಮಾ ಶಾಸ್ತ್ರೀಗಳು, ತ್ಯಾಗರಾಜರು, ಮುತ್ತು ಸ್ವಾಮಿ ದೀಕ್ಷಿತರಿಗಿಂತ ಮೊದಲೇ ಪಲ್ಲವಿ ಗೋಪಾಲಯ್ಯ, ಪಚ್ಚಿಮಿರಿಯ ಆದಪ್ಪಯ್ಯನವರಂತಹ ವಾಗ್ಗೇಯಕಾರರು ಇದ್ದರು. ಆದರೂ ಕೃತಿ ಅಥವಾ ಕೀರ್ತನ ಪ್ರಕಾರವು ಕರ್ನಾಟಕ ಸಂಗೀತದ ಪ್ರಾತಿನಿಧಿಕವೋ ಎನ್ನುವಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದು ತ್ರಿಮೂರ್ತಿಗಳ ಕಾಲದಲ್ಲಿ, ವಿಶೇಷವಾಗಿ ತ್ಯಾಗರಾಜರ ವೈವಿಧ್ಯಮಯವಾದ ಕೃತಿಗಳ ಮೂಲಕ ಮತ್ತು ಅವರು ಕಟ್ಟಿದ ವಿಸ್ತಾರವಾದ ಶಿಷ್ಯ ಪರಂಪರೆಯ ಮೂಲಕ. ಸ್ವತಃ ಕವಿಶ್ರೇಷ್ಠರೂ ಮತ್ತು ಯೋಗಿಸದೃಶರೂ ಆಗಿದ್ದ ಅವರ ಸಂಗೀತದಲ್ಲಿ ಕಾವ್ಯ. ಭಕ್ತಿ ಮತ್ತು ಅಧ್ಯಾತ್ಮವು ಮೇಳವಿಸಿದ್ದು ಆಶ್ಚರ್ಯವಲ್ಲವಷ್ಟೇ. ‘ಅಪ್ರತಿಮ ಕವಿತ್ವ ಮತ್ತು ಆಧ್ಯಾತ್ಮಿಕ ಮೌಲ್ಯ ಇವೆರಡೂ ಅಪ್ರಯತ್ನವಾಗಿ ಮೇಳೈಸಿದಾಗ ಚಿನ್ನಕ್ಕೆ ಸುವಾಸನೆ ದಕ್ಕಿದಂತೆ (ಹೇಮ್ನಃ ಪರಮಾಮೋದಃ )- ಇದು ತ್ಯಾಗರಾಜರ ಸಂಗೀತದ ಲಕ್ಷಣ’.
ಒಂದು ಕತೆಯ ಪ್ರಕಾರ, ಚಿಕ್ಕವಯಸ್ಸಿನಲ್ಲೇ ರಾಮಬ್ರಹ್ಮರು ದೇವತಾಪೂಜೆಗೆಂದು ಉಪಯೋಗಿಸಿದ್ದ ತುಳಸೀಮಾಲೆ ಬಾಡಿಹೋಗಿದ್ದು ನೋಡಿ ನೊಂದ ಬಾಲಕ ತ್ಯಾಗರಾಜ, ಬಾಡದ ಹೂವು ಅದಾವುದು ಎಂದು ಯೋಚಿಸಿ ಅಪ್ರಯತ್ನವಾಗಿ ಕೀರ್ತನೆಯೊಂದನ್ನು ಗೋಡೆಯ ಮೇಲೆ ಗೀಚಿದನಂತೆ. ಅದನ್ನೇ ರಾಮನ ಪಾದಪೂಜೆಯಾಗಿ ಸಲ್ಲಿಸಿದನಂತೆ. ತ್ಯಾಗರಾಜರಿಗೆ ನಾರದರು ‘ಸ್ವರಾರ್ಣವ’ ಎಂಬ ಸಂಗೀತಶಾಸ್ತ್ರ ಗ್ರಂಥವನ್ನು ದಯಪಾಲಿಸಿದರು ಎಂಬ ಕತೆಯಿದೆಯಾದರೂ ಬೇರೆ ವಿವರಗಳು ದೊರಕುವುದಿಲ್ಲ. ‘ನಾರದಮುನಿ ವೆಡಲಿನ’ ಕೃತಿಯ ಚರಣದಲ್ಲಿ ‘ರಾಜಿನಲ್ಲಿನ ಶ್ರೀತ್ಯಾಗರಾಜರ ಸಖುನಿ ಮರ್ಮಮುನು’ ಎಂದು ಹೇಳುವಾಗ ನಾರದರನ್ನು ‘ತ್ಯಾಗರಾಜಸಖ’ ಎಂದೇ ಬಳಸುತ್ತಾರೆ ಎಂಬುದನ್ನು ಗಮನಿಸಿದರೆ, ಏನಾದರೂ ಐತಿಹ್ಯವಿರಬರಹುದೇನೋ ಎಂಬ ಊಹೆಯನ್ನಷ್ಟೇ ಮಾಡಬಹುದು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಆದ್ಯರಾದ ತ್ಯಾಗರಾಜರ ಸಾಧನೆ ಮತ್ತು ಕೊಡುಗೆ ಅನ್ಯಾದೃಶವಾದುದು. ಸಾವಿರಾರು ಕೀರ್ತನೆಗಳನ್ನು ರಚಿಸಿರುವ ತ್ಯಾಗರಾಜರ ಕೃತಿಗಳಲ್ಲಿನ ಸಂಗೀತದ ಮಹತ್ತು ಮತ್ತು ಸಾಹಿತ್ಯದ ಸಮೃದ್ಧಿ ಬೆರಗುಗೊಳಿಸುವಂಥದು. ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ ಹುಟ್ಟಿ ಎಂಬತ್ತು ವರ್ಷ ಸಾರ್ಥಕ ಬದುಕು ನಡೆಸಿದ ಈ ಮಹಾನುಭಾವ ಉಜ್ವಲವಾದ ತಮ್ಮ ರಚನೆಗಳ ಉದ್ದಕ್ಕೂ ಅತ್ಯಂತ ವೈವಿಧ್ಯಪೂರ್ಣವಾದ ಸಂಗೀತವನ್ನು, ತಾವೇ ಕಂಡುಕೊಂಡ ನೂರಕ್ಕೂ ಹೆಚ್ಚು ರಾಗಗಳನ್ನು ಯೋಜಿಸಿಟ್ಟಿದ್ದಾರೆ.

ತ್ಯಾಗರಾಜರು ತಮ್ಮ ಶಿಷ್ಯರೊಡಗೂಡಿ ಅನೇಕ ದಿವ್ಯಕ್ಷೇತ್ರಗಳನ್ನು ದರ್ಶಿಸಿ ಆಯಾ ದೇವತೆಯನ್ನು ಹಾಡಿ ಹೊಗಳಿದ್ದಾರೆ. ತ್ಯಾಗರಾಜ ಬಹುತೇಕ ರಚನೆಗಳು ತೆಲುಗು ಭಾಷೆಯಲ್ಲಿದ್ದು, ಕೆಲವು ಸಂಸ್ಕೃತ ರಚನೆಗಳೂ ಇವೆಯಷ್ಟೇ. ಸರಳವಾದ ಬಾಲಪಾಠಕ್ಕೆ ಉಪಯುಕ್ತವಾಗುವ, ದೇವತಾರ್ಚನೆ-ಉತ್ಸವ ಸಂದರ್ಭದಲ್ಲಿ ಹಾಡುವುದಕ್ಕೆ ಅನುಕೂಲವಾಗುವ ಕೃತಿಗಳಿಂದ ಹಿಡಿದು, ಹಿಂದಿನ ಪ್ರಬಂಧ ಸ್ವರೂಪದಲ್ಲಿರುವ ಪಂಚರತ್ನಗಳ0ತಹ ಕೃತಿಗಳವರೆಗೂ ಇದೆ.

ತ್ಯಾಗರಾಜಾಂಕಿತರಾಗಿ ಘನರಾಗ ಪಂಚರತ್ನ, ಕೊವೂರಿ ಸುಂದರೇಶ್ವರ ಪಂಚರತ್ನ (ಚೆನ್ನೈ ಪ್ರವಾಸದಲ್ಲಿದ್ದಾಗ ರಚಿಸಿದ್ದು- ಒಂದು ಪುಟ್ಟ ಬೀದಿಯಲ್ಲಿದ್ದ ಗುಡಿಯೊಂದು ತ್ಯಾಗರಾಜರಲ್ಲಿ ‘ಏ ವಸುಧಾ’ ಅಂತಹ ಪಂಚರತ್ನ ಕೃತಿಗೆ ಸ್ಫೂರ್ತಿಯಾಗಿದ್ದು ವಿಶೇಷವೇ ಸರಿ), ಲಾಲ್ಗುಡಿ ಪಂಚರತ್ನ (ಲಾಲ್ಗುಡಿಯಲ್ಲಿ ತಮ್ಮ ಶಿಷ್ಯರಾದ ರಾಮ ಅಯ್ಯರ್ ಅವರ ಮನೆಗೆ ಭೇಟಿ ನೀಡಿದಾಗ ರಚಿಸಿದ್ದು), ಶ್ರೀರಂಗ, ಪಂಚರತ್ನ (ಶ್ರೀರಂಗದ ಪ್ರವಾಸದಲ್ಲಿ, ವಿನರಾದರಾ ಮನವಿ- ದೇವಗಾಂಧಾರಿಯ ಕೃತಿಯ ಕತೆ ಲೋಕಪ್ರಸಿದ್ಧ), ತ್ರಿಪುರಸುಂದರಿ ಪಂಚರತ್ನ, ಉತ್ಸವ ಸಂಪ್ರದಾಯ ಕೃತಿಗಳು, ದಿವ್ಯನಾಮ ಸಂಕೀರ್ತನೆಗಳು, ಅನೇಕ ದೇವದೇವತೆಗಳ ಕುರಿತಾದ ನೂರಾರು ಕೃತಿಗಳು; ಇದರ ಜೊತೆಗೆ ಪ್ರಹ್ಲಾದ ವಿಜಯ ಮತ್ತು ನೌಕಾ ಚರಿತಮ್ ಎಂಬ ಎರಡು ಸಂಗೀತ ರೂಪಕಗಳನ್ನೂ ರಚಿಸಿದ್ದಾರೆ. ತ್ಯಾಗರಾಜರ ಔಪಾಸನೆಯ ಕೇಂದ್ರ ಶ್ರೀರಾಮನಾದರೂ, ಅವರ ಮಾಧ್ಯಮ ಸಂಗೀತ. ನಾದೋಪಾಸನೆಯ ವಿನಾ ಮುಕ್ತಿ ಇಲ್ಲವೆನ್ನುವುದು ಅವರ ತತ್ತ್ವ. ಆದುದರಿಂದಲೇ ಅವರು ನಾದಯೋಗಿ.
‘ನಾದಬ್ರಹ್ಮಾನಂದಸ್ವಾಮಿ’ ಎಂಬ ಸಂನ್ಯಾಸ ನಾಮವನ್ನು ಪಡೆದು, ಪರಭಾವ ಸಂವತ್ಸರದ ಪುಷ್ಯ ಬಹುಳ ಪಂಚಮಿ (6.1.1847)ಯಂದು ನಾದದಲ್ಲಿ ಲೀನವಾದರು. ಆ ನಂತರದ ವರ್ಷಗಳಲ್ಲಿ ಶಿಥಿಲವಾಗಿದ್ದ ಅವರ ಬೃಂದಾವನವನ್ನು ಗುರುತಿಸಿ ಅದಕ್ಕೊಂದು ಸೂರನ್ನು ನಿರ್ಮಿಸಿದ ಕೀರ್ತಿ ಬೆಂಗಳೂರು ನಾಗರತ್ನಮ್ಮನವರಿಗೆ ಸಲ್ಲುತ್ತದೆ. ಪ್ರತಿ ಆರಾಧನಾ ದಿನದಂದು ಅವರ ಸಮಾಧಿ ಇರುವ ಕಾವೇರಿತೀರದ ತಿರುವ್ಯಯಾರಿನಲ್ಲಿ ಹಿರಿಯ-ಕಿರಿಯ ಸಂಗೀತ ವಿದ್ವಾಂಸರು – ವಿದುಷಿಯರು ಒಕ್ಕೊರಲಿನಿಂದ ಪಂಚರತ್ನಗಳನ್ನು ಹಾಡಿ ತಮ್ಮ ಭಕ್ತಿಯನ್ನು ಆ ತ್ಯಾಗಬ್ರಹ್ಮರಿಗೆ ಅರ್ಪಿಸುತ್ತಾರೆ.

ಹೀಗೆಯೇ ಕರ್ನಾಟಕದಲ್ಲಿ ಶ್ರೀರಂಗಪಟ್ಟಣದಲ್ಲಿರುವ ತ್ಯಾಗರಾಜರ ಮೃತ್ತಿಕಾ ಬೃಂದಾವನವಿರುವ ದೇವಸ್ಥಾನದಲ್ಲಿ, ಬೆಂಗಳೂರಿನ ವಸಂತಪುರದಲ್ಲಿರುವ ಭವಾನಿ ಶಂಕರದ ದೇವಸ್ಥಾನದಲ್ಲಿರುವ ಪುರಂದರ- ತ್ಯಾಗರಾಜರ ವಿಗ್ರಹಗಳ ಸನ್ನಿಧಿಯಲ್ಲದೆ, ಪ್ರಪಂಚದಾದ್ಯಂತ ವಿದ್ವಾಂಸರು ತ್ಯಾಗರಾಜರಿಗೆ ಪಂಚರತ್ನ ಕೃತಿಗಳ ಗಾಯನದ ಮೂಲಕ ತಮ್ಮ ಗೌರವ – ಶ್ರದ್ಧೆಗಳನ್ನು ಸಮರ್ಪಿಸುತ್ತಾರೆ.


Related Articles

ಪ್ರತಿಕ್ರಿಯೆ ನೀಡಿ

Latest Articles