ಪುತ್ತೂರು: ಘಟ್ಟದ ಮೇಲಿಂದ ಇಳಿದು ಬಂದು ತುಳುನಾಡಿನ ಹಲವು ಕಡೆಗಳಲ್ಲಿ ನೆಲೆ ನಿಂತು ತನ್ನದೇ ಕಾರಣಿಕತೆಯನ್ನು ಮೆರೆದ ದೈವಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಕ ಗ್ರಾಮದ ದೈಪಿಲ ಶ್ರೀ ಶೀರಾಡಿ ದೈವವೂ ಒಂದು.
ಅಪಾರ ಶಕ್ತಿ, ಕಾರಣಿಕತೆಯುಳ್ಳ ಶ್ರೀ ಕ್ಷೇತ್ರ ದೈಪಿಲದ ಶೀರಾಡಿ ದೈವದ ನೇಮೋತ್ಸವವು ಫೆ. 8 ರಂದು ಚಾರ್ವಕ ಗ್ರಾಮದ ಅರುವಗುತ್ತಿನ ಕೂಡುಕಟ್ಟಿನಲ್ಲಿ ನಡೆಯಿತು.
ವರ್ಷಂಪ್ರತಿ ಈ ದೈವಕ್ಕೆ 3 ನೇಮಗಳು ನಡೆಯುತ್ತದೆ. ಅದರಲ್ಲಿ ದೈಪಿಲದಲ್ಲಿ ವಿಶೇಷವಾದ ಜಾತ್ರೆ ಫೆ.7, 8ರಂದು ನಡೆದರೆ, ಕಾಲಾವಧಿ ಜಾತ್ರೆಯು ಭಂಡಾರದ ಮನೆ ಇರುವಂತಹ ಕೊಪ್ಪ ಸ್ಥಳದಲ್ಲಿ ಸುಗ್ಗಿ ತಿಂಗಳಲ್ಲಿ ನಡೆಯುತ್ತದೆ. ಎಪ್ರಿಲ್ ಮೇ ತಿಂಗಳಲ್ಲಿ ಅಂಕದ ಕೂಟೇಲು ಎಂಬ ಮೂಲ ಸ್ಥಳದಲ್ಲಿ ನೇಮ ನಡೆಯುತ್ತದೆ. ಪಾಜೋವು ಮಾಲ್ಯದಲ್ಲಿಈ ದೈವವು ನೆಲೆಯಾಗಿತ್ತು ಎಂಬ ಪ್ರತೀತಿ ಇದೆ.
ಹರಕೆ ಹೇಳಿಕೊಂಡರೆ ಫಲ ಖಂಡಿತ. ಇದಕ್ಕೆ ಸಾವಿರಾರು ನಿದರ್ಶನಗಳು ಇಲ್ಲಿ ಕಂಡು ಬರುತ್ತವೆ. ಚಿನ್ನ, ಬೆಳ್ಳಿ, ಹಣದ ರೂಪದಲ್ಲೂ ಇಲ್ಲಿ ಹರಕೆ ಸಲ್ಲುತ್ತದೆ. ವಿಶಿಷ್ಠವೆಂದರೆ ಮಾತನಾಡಲು ಬಾರದು ಮೂಗ, ನಡೆಯಲು ಬಾರದ ಕುಂಟ ಇಲ್ಲಿ ಭಕ್ತಿಯಿಂದ ಬೇಡಿಕೊಂಡ ಫಲವಾಗಿ ಮಾತು ಬಂದಿದೆ. ನಡೆಯಲು ಬಾರದವರು ನಡೆದಾಡಿದ್ದಾರೆ. ದೈವಕ್ಕೆ ಸಂಬಂಧಪಟ್ಟಂತೆ ಯಾವುದೇ ವಿಚಾರಗಳು, ಹರಕೆ ವಿಚಾರಕ್ಕೆ ಸಂಬಂಧಪಟ್ಟ ವಿಚಾರಗಳು ಅರುವಗುತ್ತಿನ ಮನೆಯಲ್ಲಿ ನಿರ್ಧಾರಿತವಾಗುವುದು ವಾಡಿಕೆ.
ದೈಪಿಲದಲ್ಲಿ ಶೀರಾಡಿ ದೈವ ಅಲ್ಲದೆ ಕೊಡಮಣಿತ್ತಾಯ ದೈವಕ್ಕೂ ನೇಮ ನಡಾವಳಿ ನಡೆಯುತ್ತದೆ. ಅರುವಗುತ್ತಿನ ಕುಕ್ಕಪ್ಪ ಗೌಡರ ಕಾಲದಿಂದ ನೇಮ ನಡಾವಳಿಗಳು ಪ್ರಾಮುಖ್ಯತೆಯನ್ನು ಪಡೆದಿದೆ. ದಿ.ಅರುವಗುತ್ತು ಸಿ.ಕೆ.ಪದ್ಮಯ್ಯ ಗೌಡರ ಕಾಲದಿಂದ ನೇಮ ನಡಾವಳಿಗಳು ವಿಜೃಂಭಣೆಯಿ0ದ ನಡೆಯುತ್ತಿವೆ.