* ಕೃಷ್ಣಪ್ರಕಾಶ ಉಳಿತ್ತಾಯ
ಆಚಾರ್ಯ ಶಂಕರರು ಪಾರ್ವತಿಯನ್ನು ವರ್ಣಿಸಿದ ಸ್ತೋತ್ರಮಾಲೆ ಸೌಂದರ್ಯಲಹರಿ. ಒಂದೊಂದು ಹಾಡು ಅತಿಶಯವಾದ ಸೌಂದರ್ಯದಿಂದಲೂ ಗಾಂಭೀರ್ಯದಿಂದಲೂ ಮತ್ತು ಅಷ್ಟೇ ನಿಗೂಢತೆಯಿಂದಲೂ ಕೂಡಿದವಾಗಿದೆ. ಇಲ್ಲಿ ಶಕ್ತಿಯ ಪಾರಮ್ಯವನ್ನು ಕೊಂಡಾಡಿದ್ದಾರೆ. ಶಕ್ತಿಯ ಜತೆಗಿದ್ದರೆ ಮಾತ್ರ ಶಿವ ಪ್ರಪಂಚವನ್ನು ಸೃಷ್ಟಿಸಲು ಸಾಧ್ಯ. ಶಕ್ತಿರಹಿತನಾಗಿದ್ದರೆ ಶಿವ ತನ್ನ ಲೀಲೆಯನ್ನು ತೋರಿಸಲು ಸಾಧ್ಯವಿಲ್ಲ, ಹೆಚ್ಚೇನು, ಚಲಿಸಲೂ ಸಾಧ್ಯವಿಲ್ಲ ಎಂಬುದನ್ನು ವರ್ಣಿಸಿದ್ದಾರೆ. ಅಂದರೆ ಮಾಯೆ ಅನ್ನುವುದು ಇಡೀ ಪ್ರಪಂಚದ ಚಾಲಕ ಶಕ್ತಿ. ಈ ಚಾಲಕ ಶಕ್ತಿಯ ಅನುಸಂಧಾನದಿಂದ ಮಾತ್ರ ಪರಬ್ರಹ್ಮಸ್ವರೂಪದ ಅರಿವಾಗುತ್ತದೆ. “ಮಾಯೆ ಮುಸುಕಿದೆ” ಅನ್ನುತ್ತಾರಲ್ಲಾ ಅದು ದೇವಿಯ ಶಕ್ತಿಯ ಅಭಿವ್ಯಕ್ತಿ, ಆ ಶಕ್ತಿಗೆ ಮಣಿಯದೆ ಪರಮ ಪುರುಷದ ಸಾಕ್ಷಾತ್ಕಾರ ಅಸಾಧ್ಯ. ಈ ತಥ್ಯದ ಸೂಚನೆ ಕೆಳಗಿನ ಆಚಾರ್ಯ ಶಂಕರರು ರಚಿಸಿದ ಹಾಡಲ್ಲಿದೆ.
ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ
ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ|
ಅತಸ್ತ್ವಾಮಾಧ್ಯಾಂ ಹರಿಹರವಿರಿಂಚಾದಿಭಿರಪಿ
ಪ್ರಣಂತುಂ ಸ್ತೋತುಂ ವಾ ಕಥವಕೃತಪುಣ್ಯಃ ಪ್ರಭವತಿ||
ಶರಣಾಗತಿಯೊಂದೇ ನಮಗಿರುವ ದಾರಿ: ನಮ್ಮ ದೇಹವನ್ನೇ ಪುರವನ್ನಾಗಿಸಿಕೊಂಡವಳು ಶಕ್ತಿ. ತನ್ನ ಶಕ್ತಿಯನ್ನು ಯಾವತ್ತೂ ದೇಹದಲ್ಲಿ ಪ್ರವಹಿಸುತ್ತಾ ಮಾಯಾ ಸ್ವರೂಪಿ ಇರುತ್ತಿದ್ದಾಳೆ. ಇವಳನ್ನು ಭಜಿಸದೆ ಮಾಯೆಯನ್ನು ದಾಟಲು ಸಾಧ್ಯವಿಲ್ಲ. ನಮಗೆ ಬರುವ ಸುಖ-ಕಷ್ಟ ಎಲ್ಲವೂ ಇವಳದೇ ಸ್ವರೂಪ. ಶರಣಾಗತಿಯೊಂದೇ ನಮಗಿರುವ ದಾರಿ. ಕಷ್ಟ ಬಂದಾಗ ಎದುರಿಸುವೆನೆಂದು ಹೇಳುವುದು ಮೂರ್ಖತನ. ಬದಲಾಗಿ ಅದು ಬಂದಾಗ ಅದಿರಲು ಜಾಗ ಕೊಡಿ. ಅದು ನಿಮ್ಮಲ್ಲಿರಲಿ ಅದಕ್ಕೆ ಶರಣಾಗತರಾಗಿದ್ದು ನೀವು ಮಾಡುವ ಕರ್ತವ್ಯ ಮಾಡಿ (ರೋಗ ಬಂದಾಗ ಔಷಧ ತೆಗೆದುಕೊಳ್ಳುವುದು ನಿಮ್ಮ ಕರ್ತವ್ಯ, ನೆನಪಿರಲಿ). ತಾಯಿ ದೇಹದ ಮೂಲಾಧಾರ ಚಕ್ರದಲ್ಲಿರುವ ಭೂತತ್ತ್ವ,ಮಣಿಪೂರ ಚಕ್ರದ ಜಲ ತತ್ತ್ವ, ಸ್ವಾಧಿಷ್ಠಾನ ಚಕ್ರದ ಅಗ್ನಿ ತತ್ತ್ವ, ಅನಾಹತ ಚಕ್ರದಲ್ಲಿರುವ ವಾಯುತ್ತ್ವ, ಆಜ್ಞಾ ಚಕ್ರದಲ್ಲಿರುವ ಮನಸ್ಸಿನ ತತ್ತ್ವದ ಅಧಿಷ್ಠಾತ್ರಿಯಾಗಿ ಅದನ್ನು ಭೇದಿಸಿ ಸಹಸ್ರಾರಲ್ಲಿ ಸದಾಶಿವನೊಡನೆ ಸೇರಿರುವಿ ಎನ್ನುವ ಹಾಡೂ ಸೌಂದರ್ಯ ಲಹರಿಯಲ್ಲಿದೆ. ಅಂದರೆ ದೇಹವನ್ನು ಅವಳ ವಾಸಸ್ಥಾನವಾಗಿ ಅನುಸಂಧಾನ ಮಾಡಿ ಈ ದೇಹದ ಮೂಲಕವೇ ಪರತತ್ತ್ವವನ್ನು ಪಡೆಯಬಹುದೆಂಬ ನಿಗೂಢ ವಿಷಯ ಇಲ್ಲಿ ಹೇಳಿದೆ. ಹಾಗಾಗಿ ಶಕ್ತಿ ಆರಾಧನೆ ಭಾರತದ ಜನಮಾನಸದಲ್ಲಿ ಹಾಸುಕೊಕ್ಕಾಗಿದೆ. ಇದಕ್ಕೆ ಪ್ರಾಚೀನ ಪರಂಪರೆಯೇ ಕಾರಣ.
ಶರದೃತು, ಆಶ್ವಿನ ಮಾಸ ಶುಕ್ಲ ಪಾಡ್ಯದಿಂದ ನವಮಿ ತಿಥಿಯವರೆಗೆ ದುರ್ಗಾಪೂಜಾ ಅಥವಾ ನವರಾತ್ರಿಯ ಸಂಭ್ರಮ ಭಾರತದಾದ್ಯಂತ ನಡೆಯುತ್ತದೆ. ಇದು ಮಾತೃಪೂಜೆ. ಶಕ್ತಿ ದೇವಿಯ ಆರಾಧನೆ. ಅನೂಹ್ಯವಾದ ಶ್ರದ್ಧಾ ಭಕ್ತಿಯಿಂದ ದುರ್ಗೆಯನ್ನು ಒಂಭತ್ತು ದಿನಗಳ ಪರ್ಯಂತ ದಶಮಿಯ ವಿದ್ಯಾಧಿದೇವತೆ ಶಾರದೆಯ ಆರಾಧನೆ ಸೇರಿದರೆ ಹತ್ತು ದಿನಗಳ ಕಾಲ ಉತ್ಕಟ ಭಾವದಿಂದ ಹಲವು ವಿಧವಾದ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಮಾರ್ಕಂಡೇಯ ಪುರಾಣದಲ್ಲಿ ಬರುವ ಶ್ಲೋಕದಂತೆ
ಶರತ್ಕಾಲೇ ಮಹಾಪೂಜಾ ಕ್ರಿಯತೇ ಯಾ ಚ ವಾರ್ಷಿಕೀ |ತಸ್ಯಾಂ ಮಮೈತನ್ಮಾಹಾತ್ಮ್ಯಂ ಶ್ತುತ್ವಾ ಭಕ್ತಿ ಸಮನ್ವಿತಃ| ಸರ್ವಬಾಧಾವಿನರ್ಮುಕ್ತೋ ಧನಧಾನ್ಯ ಸಮನ್ವಿತಃ| ಮನುಷ್ಯೋ ಮತ್ಪ್ರಸಾದೇನ ಭವಿಷ್ಯತಿ ನ ಸಂಶಯಃ|| ಶರತ್ಕಾಲದಲ್ಲಿ ನವರಾತ್ರವನ್ನು ಆಚರಿಸಬೇಕೆಂಬುದು ಪುರಾಣ ವಚನ. ಈ ಸಮಯದ್ಲಲ್ಲಿ ದೇವಿಯ ಮಹಾತ್ಮೈಯನ್ನು ಶ್ರದ್ಧಾ ಭಕ್ತಿಯಿಂದ ಕೇಳುವುದರಿಂದ ಎಲ್ಲಾ ವಿಧವಾದ ಬಾಧೆಗಳು ನಿವಾರಣೆಯಾಗುತ್ತವೆ; ಧನ ಧಾನ್ಯ ಸಮೃದ್ದಿ ದುರ್ಗಾದೇವಿಯ ಅನುಗ್ರಹದಿಂದ ಪ್ರಸಾದ ರೂಪವಾಗಿ ದೊರಕುತ್ತದೆ ಎನ್ನುವುದು ಮಾರ್ಕಂಡೇಯ ಪುರಾಣ ವಚನ. ದೇವೀಪುರಾಣದ ಮಾತಿನಂತೆ ಈ ನವರಾತ್ರ ವ್ರತ ಅತ್ಯಂತ ಪುಣ್ಯತಮವಾದದ್ದು; ಸರ್ವ ಶತ್ರುಗಳನ್ನು (ಆಂತರಿಕ ಮತ್ತು ಬಾಹ್ಯ) ನಾಶಗೋಳಿಸುವಂತಹದ್ದು; ಸರ್ವಲೋಕೋಪಕಾರಕ್ಕಾಗಿ, ಪ್ರಜಾಕ್ಷೇಮಕ್ಕಾಗಿ, ಕೃಷಿ-ವ್ಯಾಪಾರದ ಅಭಿವೃದ್ಧಿಗಾಗಿ ಮತ್ತು ಸೌಭಾಗ್ಯಕ್ಕಾಗಿ ಆಚರಿಸಲ್ಪಡಬೇಕಾದದ್ದು. ಈ ಹಿಂದೆ ರಾಜ-ಮಹಾರಾಜರುಗಳು ಇದನ್ನು ಆಚರಿಸುತ್ತಿದ್ದುದರಿಂದ ಇದು ಪ್ರಾಚೀನದಲ್ಲೇ ಸಾರ್ವಜನಿಕವಾಗಿ ಆಚರಿಸಲ್ಪಡುತ್ತಿದ್ದ ಉತ್ಸವವೆಂದು ಹೇಳಲಡ್ಡಿಯಿಲ್ಲ. ಸರ್ವಜನರಿಂದ ಆದರಿಸಲ್ಪಡುವ ಈ ವ್ರತವು ಭವಿಷ್ಯಪುರಾಣದ ವಚನದಂತೆ ಎಲ್ಲ ಬಗೆಯ ಸ್ಥಳಗಳಲ್ಲಿ, ಪಟ್ಟಣಗಳಲ್ಲಿ, ಮನೆಗಳಲ್ಲಿ, ಗ್ರಾಮಗಳಲ್ಲಿ, ಕಾಡುಗಳಲ್ಲಿ ಸಮಾಜದ ಎಲ್ಲಾ ಸ್ತರದವರಿಂದ ಜಾತಿ-ಮತ ಬೇಧವಿಲ್ಲದೆ ಭಕ್ತಿಯಿಂದ ಶುಚಿರ್ಭೂತರಾಗಿ ಆಚರಿಸಬಹುದಾದ ವ್ರತವಿದು. ಕರ್ನಾಟಕದಲ್ಲಿ ವಿಜಯನಗರದ ಅರಸರು ಮತ್ತು ಮೈಸೂರಿನ ಮಹಾರಾಜರು ಇದನ್ನು ನಾಡಹಬ್ಬದಂತೆ ಆಚರಿಸುತ್ತಿದ್ದ ನಿದರ್ಶನ ಇದ್ದ ಕಾರಣ ಇದರ ಸಾರ್ವಜನಿಕ ಆಚರಣೆಗೆ ಪ್ರಾಚೀನ ಹಿನ್ನೆಲೆ ಇದೆ ಎನ್ನಬಹುದು.
ದುರ್ಗಾ-ವಿನಾಯಕರ ಆರಾಧನೆ
ಕಲಿಯುಗದಲ್ಲಿ ದುರ್ಗಾ-ವಿನಾಯಕರ ಆರಾಧನೆ ಅತ್ಯಂತ ಬೇಗ ಫಲಕೊಡುವಂತದ್ದು ಎನ್ನುವ ಶ್ರುತಿವಚನವಿದೆ. ದುರ್ಗೆಯ ಅಥವಾ ಶಕ್ತಿದೇವತೆಯ ಆರಾಧನೆ ಈ ಸಂದರ್ಭದಲ್ಲಿ ಜಪ-ತಪ; ದುರ್ಗಾ ಪೂಜೆ, ದೀಪನಮಸ್ಕಾರ ಪೂಜೆ, ಕಲ್ಪೋಕ್ತ ನವರಾತ್ರಾ ಪೂಜಾವಿಧಿ, ತ್ರಿಕಾಲ ಪೂಜೆ, ದುರ್ಗಾ ಹೋಮ, ಚಂಡೀ ಹೋಮ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಲಲಿತಾ ಸಹಸ್ರನಾಮ ಹೋಮ, ಶ್ರೀಚಕ್ರ ಪೂಜೆ ಹೀಗೆ ಬಹುವಿಧವಾಗಿ ಪ್ರಾಚೀನ ಪದ್ಧತಿಯಂತೆ ನಡೆಯುತ್ತದೆ. ಇದಲ್ಲದೆ, ಭಜನೆ, ಹರಿಕಥಾ ಶ್ರವಣ, ಪುರಾಣ ಶ್ರವಣ, ಸಂಗೀತ,ನಾಟಕ, ಯಕ್ಷಗಾನಾದಿಗಳಿಂದಲೂ ದೇವಿಯ ಆರಾಧನೆ ಅನುಸಂಧಾನ ನಡೆಯುತ್ತದೆ. ಚಂಡೀ ಪಾರಾಯಣಕ್ಕೆ ದುರ್ಗಾರಾಧನೆಯಲ್ಲಿ ಮಹತ್ತ್ವವಿದೆ. ದೇವಿಯು ಪ್ರಪಂಚದ ತಾಮಸ ಶಕ್ತಿಯನ್ನು ಮಣಿಸುವುದಕ್ಕೆ ಮಾಡಿದ ಮೂರು ಅವತಾರಗಳ ವರ್ಣನೆ ಮತ್ತು ಆಕೆಯ ಸ್ತುತಿ ಅತ್ಯಂತ ಹೃದ್ಯವಾಗಿ ಮಾರ್ಕಂಡೇಯ ಪುರಾಣದಲ್ಲಿ ವಿವೃತವಾಗಿದೆ. ಅತ್ಯಂತ ಸುಂದರವಾದ ವಿವರಗಳಿಂದಲೂ ಪಾಠಕರ ಮತ್ತು ಶ್ರೋತ್ರುಗಳ ಮನದಲ್ಲಿ ಭಕ್ತಿಭಾವವನ್ನು ಉದ್ದೀಪಿಸಿ ಸಂಪೂರ್ಣ ಪಠನ ಅಥವಾ ಶ್ರವಣ ಮಾಡಿದವರ ಹೃದಯಕ್ಕೆ ಸ್ಪಂದಿಸುವ ಈ ಏಳುನೂರು ಶ್ಲೋಕಗಳ ಸಪ್ರಶತೀ ಎಂದೇ ಪ್ರಸಿದ್ಧವಾಗಿರುವ ಚಂಡೀ ಪಾಠ ಅಥವಾ ಶ್ರೀ ದೇವೀಮಹಾತ್ಮ್ಯೆ ಸುಪ್ರಸಿದ್ಧವಾದದ್ದು. ಕಾಯೇನ ವಾಚಾ ಮನಗಳ ತ್ರಿಕರಣ ಶುದ್ಧಿಯನ್ನು ಅಪೇಕ್ಷಿಸುವಂತಹಾದ್ದು.
ಶ್ರದ್ಧೆ ಇದ್ದಷ್ಟು ಫಲ ಕೊಡುವಂತಹಾ ಭಾರತೀಯ ಧಾರ್ಮಿಕ ಪರಂಪರೆಯ ಬಹುದೊಡ್ಡ ಗ್ರಂಥವಿದು. ನವರಾತ್ರದ ಸಂದರ್ಭ ಇದರ ಪಠಣ, ಶ್ರವಣ ಪುಣ್ಯಪ್ರದವಾದ್ದು ಎಂದು ಜನರ ವಿಶ್ವಾಸ. ಹದಿಮೂರು ಅಧ್ಯಾಯದಲ್ಲಿ ಹರಡಿರುವ ಈ ಕಥೆ ದೇವಿಯು ಮಧುಕೈಠಭರನ್ನು ಮಥಿಸಲು ಯೋಗನಿದ್ರೆಯಲ್ಲಿದ್ದ ವಿಷ್ಣುವನ್ನು ಎಚ್ಚರಿಸಿ ಆತನಿಗೆ ಚಕ್ರ ಪ್ರದಾನ ಮಾಡುವ ಮಹಾಕಾಳಿಯ ಚರಿತ್ರೆ; ಮಹಿಷಾಸುರನನ್ನು ಕೊಲ್ಲಲು ಮಹಾಲಕ್ಷ್ಮಿಯ ಸ್ವರೂಪಿ ಶ್ರೀದೇವಿಯಾಗಿ ಆವಿರ್ಭವಿಸುವ ಚರಿತ್ರೆ; ಮತ್ತು ಶುಂಭ,ನಿಶುಂಭ, ರಕ್ತಬೀಜ, ಚಂಡ-ಮುಂಡಾದಿ ರಕ್ಕಸರನ್ನು ಕೊಲ್ಲಲು ಮಹಾಸರಸ್ವತಿ ರೂಪಿಯಾದ ಶಾಂಭವಿಯಾಗಿ ಉದಿಸುವ ಚರಿತ್ರೆಯೇ ಇಲ್ಲಿ ವಿವೃತವಾಗಿದೆ. ಉಪದೇಶಿಸ ರೀತಿಯಲ್ಲೇ ಪಾರಾಯಣಾದಿಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಬೇಕಾದ ಪವಿತ್ರವಾದ ಮಂತ್ರ ಸಮುಚ್ಛಯವಿದು.
ಇಂತಹ ಅದ್ಭುತ ದುರ್ಗಾಸಪ್ತಶತೀ, ಶ್ರೀಚಂಡೀ ಅಥವಾ ದೇವೀಮಹಾತ್ಮ್ಯೆ ಇಂಗ್ಲೀಷ್, ಲ್ಯಾಟಿನ್, ಗ್ರೀಕ್ ಮತ್ತುಜರ್ಮನ್ ಭಾಷೆಗಳಿಗೆ ಮತ್ತು ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿದೆ. ಇದನ್ನು ಕುರಿತಾಗಿ ಎಪ್ಪತ್ತನಾಲ್ಕಕ್ಕೂ ಹೆಚ್ಚಿನ ವ್ಯಾಖ್ಯಾನಗಳಿವೆ. ಹಾಗಾಗಿಯೇ ಚಂಡೀಪಾಠಕ್ಕೆ ಇಷ್ಟು ಮಹತ್ತ್ವ. ಈ ಶರದೃತುವಿನ ಆಶ್ವಿನ ಮಾಸದಲ್ಲಿ ಬರುವ ನವರಾತ್ರ ಆರಾಧನೆ ನಮ್ಮೆಲ್ಲರ ಕಾಮನೆಗಳನ್ನು ಈಡೇರಿಸಲಿ. ಮುಖ್ಯವಾಗಿ ಜಗತ್ತಿಗೇ ಮಹಾಮಾರಿಯಾಗಿ ಪರಿಣಮಿಸಿದ ಕೊರೋನಾವನ್ನು ಮಹಾಮಾರೀ ಸ್ವರೂಪಿಣಿಯಾದ ಸರ್ವಶಕ್ತೆ ಭಗವತಿ ನಿವಾರಿಸಲಿ.
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ, ಬರಹಗಾರರು, ಖ್ಯಾತ ಮದ್ದಳೆವಾದಕರು, ಮಂಗಳೂರು)