ಗಾನ- ಜ್ಞಾನ ಯಜ್ಞ ; ಅಹೋರಾತ್ರಿ ಸಂಗೀತ - ಹರಿದಾಸಾನುಗ್ರಹ ಪ್ರಶಸ್ತಿ ಪ್ರದಾನ

ಫೆ. 11 ರಂದು ಶ್ರೀನಿವಾಸ ಉತ್ಸವ ಬಳಗದಿಂದ ಪುರಂದರ ದಾಸರ ಆರಾಧನಾ ಮಹೋತ್ಸವ

ಬೆಂಗಳೂರು: ಸುಸ್ವರಲಯ ಕಾಲೇಜ್ ಆಫ್ ಮ್ಯೂಸಿಕ್, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಆಕಾಡೆಮಿ ಟ್ರಸ್ಟ್ ಬೆಂಗಳೂರು ಮತ್ತು ಕಲರ್ಬುಗಿಯ ದಾಸ ಸೌರಭ ಸಹಯೋಗದಲ್ಲಿ ಫೆ. 11 ರಂದು ಬಸವನಗುಡಿಯ ಪಂಪ ಮಹಾಕವಿ ರಸ್ತೆಯಲ್ಲಿರುವ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ..

ದಾಸ ಸಾಹಿತ್ಯ ಪ್ರಚಾರ ಮಾಧ್ಯಮ – ಶ್ರೀನಿವಾಸ ಉತ್ಸವ ಬಳಗದಿಂದ ಶ್ರೀ ಉತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ದಾಸಸಾಹಿತ್ಯದ ಪಿತಾಮಹ ಶ್ರೀಪುರಂದರದಾಸರ ಬೃಹತ್ ಏಕಶಿಲಾ ವಿಗ್ರಹವನ್ನು ಬೆಂಗಳೂರು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಎದುರಿನ ಶ್ರೀಮದ್ ಉತ್ತರಾದಿ ಮಠದ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಕಳೆದ ವರ್ಷ ಪ್ರತಿಷ್ಠಾಪನೆಗೊಂಡಿತ್ತು.

ಇದೀಗ ಪ್ರತಿಷ್ಠಾಪನೆಯ ಮೊದಲನೆ ವರ್ಷದ ಸಂಭ್ರಮ. ಜತೆಗೆ ಪುರಂದರದಾಸರ ಆರಾಧನಾ ಮಹೋತ್ಸವ ಅಂಗವಾಗಿ ಫೆ. 11 ರಂದು ಬೆಳಗ್ಗೆ 8.30 ರಿಂದ ವಿದ್ವಾನ್ ಎಸ್. ಶಂಕರ್ ಮತ್ತು ಶಿಷ್ಯವೃಂದದಿ0ದ ಪುರಂದರದಾಸರ ನವರತ್ನ ಮಾಲಿಕೆ ಕೃತಿಗಳ ಗೋಷ್ಠಿ ಗಾಯನದೊಂದಿಗೆ ಪುರಂದರ ದಾಸರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಬೆಳಗ್ಗೆ 9.45 ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತರಾದಿಮಠದ ಕಾರ್ಯನಿರ್ವಹಣಅಧಿಕಾರಿ ಪಂ. ವಿದ್ಯಾಧೀಶಾಚಾರ್ಯ ಗುತ್ತಲ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೋಣನಕುಂಟೆ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ, ಖ್ಯಾತ ಶಿಕ್ಷಣ ತಜ್ಞ ಡಾ. ಕೆ.ಎಸ್. ಸಮೀರ್ ಸಿಂಹ ಮತ್ತು ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಭಾಗವಹಿಸುವ ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ವ್ಯಾಸರಾಜ ಗುರುರಾವ್ ಸಂತೆಕೆಲ್ಲೂರ, ಪತ್ರಕರ್ತ ಶಾಮರಾವ್ ಕುಲಕರ್ಣಿ (ಶಾಮಸುಂದರ್), ಶೇಷಗಿರಿ ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಂಜೆ 4 ರಿಂದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕ ಕೃತಿಗಳ ಗೋಷ್ಠಿ ಗಾಯನ. ನಂತರ ಸಭಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ ಗಾನಕಲಾ ಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ ಮುಖ್ಯ ಅತಿಥಿಗಳಾಗಿ ಆಗಮಿಸಿ ಜಾಹ್ನವಿ ಭಜನಾ ಮಂಡಳಿಯ ರೇಖಾಪದಕಿ, ಬಾಗಲಕೋಟೆಯ ಖ್ಯಾತ ಗಾಯಕ ಅನಂತ ಕುಲಕರ್ಣಿ ಮತ್ತು ಹರಿದಾಸ ಸಂಪದ ಟ್ರಸ್ಟ್ ಸಂಸ್ಥಾಪಕ ಮಧುಸೂದನ್ ಎಂ.ವಿ. ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು.

ಖ್ಯಾತ ದಾಸ ಸಾಹಿತ್ಯ ಸಂಶೋಧಕ ಡಾ. ಅನಂತಪದ್ಮನಾಭ ರಾವ್ ಮತ್ತು ಗಾಯಕ ಮುದ್ದುಮೋಹನ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಬೆಳಗ್ಗೆ ವಿದ್ವಾನ್ ಹೆಚ್.ಎಸ್. ಸುಧೀಂದ್ರ ಮತ್ತು ವಿದ್ವಾನ್ ಜಯಚಂದ್ರ ರಾವ್ ಕೆ.ಯು ರವರ ನೇತೃತ್ವದಲ್ಲಿ ಸುಸ್ವರಲಯ ಕಾಲೇಜ್ ಆಫ್ ಮ್ಯೂಸಿಕ್, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಆಕಾಡೆಮಿ ಟ್ರಸ್ಟ್ ಬೆಂಗಳೂರು ರವರ ಶಿಷ್ಯವೃಂದದಿ0ದ ಆಹೋರಾತ್ರಿ ಸಂಗೀತ ಸಭಾವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ. ಟಿ. ವಾದಿರಾಜ್ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ ಮೊ.9886108550.

ಪುರಂದರದಾಸ ಪ್ರತಿಮೆ ಸ್ಥಾಪನೆಯ ಹಿಂದೆ
ಭಾರತೀಯ ಸನಾತನ ಪರಂಪರೆಗೆ ದ್ವೈತತ ಸಿದ್ಧಾಂತದ ಕೊಡುಗೆ ಅಪಾರ ಮತ್ತು ಅನುಪಮ. ಜಗದ್ಗುರು ಮಧ್ವಾಚಾರ್ಯರ ತತ್ವ ಸಿದ್ಧಾಂತಗಳು ಜನಸಾಮಾನ್ಯರಿಗೆ ತಲುಪಿ ಅವರ ಬದುಕು ಸಾರ್ಥಕತೆಯನ್ನು ಪಡೆಯಲು ಅದನ್ನು ತಿಳಿಗನ್ನಡ ಭಾಷೆಯಲ್ಲಿ ಮನೆ ಮನೆಗೂ ತಲುಪಿಸಿದ ಕೀರ್ತಿ ಹರಿದಾಸರಿಗೆ ಸಲ್ಲುತ್ತದೆ.

ಈ ಹರಿದಾಸ ಪರಂಪರೆಗೆ ಬುನಾದಿ ಹಾಕಿದವರು ಶ್ರೀಪುರಂದರದಾಸರು. ಮನುಕುಲದ ಉನ್ನತಿಗೆ ಅಗತ್ಯವಾದ ಆತ್ಮಶುದ್ಧಿ, ಆತ್ಮಜ್ಞಾನ, ಆತ್ಮವಿಶ್ವಾಸಕ್ಕಾಗಿ ತತ್ವಜ್ಞಾನದ ವಿಕೇಂದ್ರೀಕರಣವನ್ನು ಪದಗಳ ರೂಪದಲ್ಲಿ ಆವಿಷ್ಕಾರಗೊಳಿಸಿದ ಮಹಾಸಂತ ಪುರಂದರದಾಸರು.
ಶ್ರೀ ವ್ಯಾಸರಾಜ ಯತಿಪುಂಗವರಿ0ದ ದೀಕ್ಷೆ ಸ್ವೀಕರಿಸಿ, ದಾಸಕೂಟವನ್ನು ಸಂಘಟಿಸಿ, ಹರಿಪಾರಮ್ಯದ, ಘನಗರಿಮೆಯನ್ನು ತಮ್ಮ ಕೃತಿಗಳ ಮೂಲಕ ಜಗದಗಲ ನಿರಂತರವಾಗಿ ಪರಸರಿಸಿದ ವಿಭೂತಿ ಪುರುಷರು ಅವರು. ಕನ್ನಡ ಸಂಸ್ಕೃತಿ-ಸಾಹಿತ್ಯ-ಕಲೆಗಳ ಉಳಿವು ಹಾಗೂ ಬೆಳವಣಿಗೆಗೆ ಕಾರಣೀಭೂತರಾದ ಶ್ರೇಷ್ಠ ದಾಸವರೇಣ್ಯರು.

ಸಾರ್ವಕಾಲಿಕ- ಸಾರ್ವಜನಿಕವಾದ ಅವರ ಸಾಹಿತ್ಯ ಭಂಡಾರ ಜಗತ್ತಿಗೆ ದೊರೆತ ಅಪೂರ್ವನಿಧಿ. ಇವರ ಸ್ಮರಣೆ ನಮ್ಮ ಜೀವನವನ್ನು ಪಾವನನ್ನಾಗಿಸಿದರೆ, ಅವರ ಕೃತಿಗಳ ಚಿಂತನ-ಮ0ಥನ ನಮ್ಮನ್ನು ಧರ್ಮಭೀರುಗಳನ್ನಾಗಿಸಿ, ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ಧಾರ್ಮಿಕರನ್ನಾಗಿಸಿ, ಅದರಿಂದಲೇ ಅವರ ಗುರುಗಳಾದ ವ್ಯಾಸತೀರ್ಥರು ದಾಸರೆಂದರೆ ಪುರಂದರದಾಸರಯ್ಯ’ ಎಂದು ಹಾಡಿ ಹೊಗಳಿದ್ದಾರೆ. ೨೦೧೨ರಲ್ಲಿ ಜನ್ಮತಳೆದ ಶ್ರೀನಿವಾಸ ಉತ್ಸವ ಬಳಗ ಅಂದಿನಿ0ದ ಇಂದಿನವರೆಗೆ ಹರಿದಾಸ ಸಾಹಿತ್ಯ ಪ್ರಚಾರ ಕೈಂಕರ್ಯವನ್ನು ಹಾಗೂ ಅದಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಅಭಿಮಾನಿಗಳ ಹಾಗೂ ಹಿತೈಷಿಗಳ ಕಾಯಾ, ವಾಚಾ, ಮನಸಾ ಸಹಕಾರದಿಂದ ಬಹು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಪ್ರತೀ ವರ್ಷ ಪುರಂದರ ದಾಸರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಿರಂತರವಾಗಿ ಸಂಗೀತ, ಭಜನೆ, ಉಪನ್ಯಾಸ, ಗಮಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ನಾಡಿನ ಬಹುತೇಕ ಎಲ್ಲಾ ಖ್ಯಾತ ಸಂಗೀತ ವಿದ್ವಾಂಸರು, ಕಲಾವಿದರು, ಭಜನಾ ಮಂಡಳಿಗಳುಸಂಗೀತ ಪಿತಾಮಹ’ ಪುರಂದರದಾಸರಿಗೆ ಸಂಗೀತ ಸೇವೆ ಸಮರ್ಪಣೆ ಮಾಡಿ ಧನ್ಯರಾಗುತ್ತಾರೆ. ಅಪಾರ ಜನಮನ್ನಣೆ ದೊರೆತಿರುವ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುಲಕಿತರಾಗಿದ್ದಾರೆ.
ಅಖಿಲ ಸಂಪತ್ತನ್ನೂ ಕ್ಷಣಮಾತ್ರದಲ್ಲಿ ತೊರೆದು ಕಾಲಿಗೆ ಗೆಜ್ಜೆಕಟ್ಟಿ ತಾಳ ತಂಬೂರಿ ಹಿಡಿದು, ಬೀದಿಬೀದಿಗಳಲ್ಲಿ ಹಾಡುತ್ತಾ ನಡೆದು ಲೋಕದ ಡೊಂಕನ್ನು ತಿದ್ದುತ್ತ ಜನಸಾಮಾನ್ಯರ ಬಾಳಿಗೊಂದು ನಂಬಿಕೆ ತಂದ ಪುರಂದರದಾಸರ ಶಿಲಾಪ್ರತಿಮಾ ಪ್ರತಿಷ್ಠಾಪನೆಯ ಕಲ್ಪನೆಯೇ ಒಂದು ರೋಮಾಂಚನ ಸಂಗತಿ. ಇದು ಸಾಕಾರವಾಗಿ ಕನ್ನಡಿಗರ ಮನದಲ್ಲಿ ಧನ್ಯತೆಯ ಭಾವ ಆವರಿಸಿದೆ. ಭಕ್ತ ಮಹಾಶಯರಿಂದ ಬಂದ ಈ ಅಭೂತಪೂರ್ವ ಬೆಂಬಲದಿ0ದ ನಾಡಿನ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ `ಶ್ರೀ ಪುರಂದರದಾಸರ ಪ್ರತಿಮೆಯ ಶಿಲಾವಿನ್ಯಾಸ ಮತ್ತು ಕೆತ್ತನೆಯ ಮಹತ್ಕಾರ್ಯ ನಡೆದಿದೆ ಎಂದು ಇದರ ರೂವಾರಿ ಡಾ.ವಾದಿರಾಜ ಟಿ ವಿವರಿಸುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles