ಬೆಂಗಳೂರು: ಶ್ರೀ ಪುರಂದರ ಇಂಟರ್‍ನ್ಯಾಷನಲ್ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಳ್ಳಲಾಗಿರುವ 22 ನೇ ವರ್ಷದ ಪುರಂದರದಾಸರ ಆರಾಧನೆ ಅಂಗವಾಗಿ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ, ಗಾಯನ, ಭರತನಾಟ್ಯ, ಕೋಲಾಟ ಕಾರ್ಯಕ್ರಮ ಫೆ.11 ರಂದು ದಾಸರ ಮನೆಯಲ್ಲಿ, 12ರಂದು ಬೆಳಗ್ಗೆ 10.30 ಗಂಟೆಗೆ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಚಿಕ್ಕಬಳ್ಳಾಪುರ ಜಿಲ್ಲೆಯ ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ರಂಗಸ್ಥಳದ ಭೂ-ನೀಳಾ ಸಮೇತ ಮೋಕ್ಷ ಶ್ರೀರಂಗನಾಥನ ಸನ್ನಿಧಿಯಲ್ಲಿ ಆಯೋಜಿಸಿದೆ.
ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ
ವಿದ್ವಜ್ಜನರ ವ್ಯಾಪ್ತಿಯಲ್ಲಿ ಕಿರಿಯ ವಯಸ್ಸಿಗೆ ಸೇರ್ಪಟ್ಟು ಜ್ಞಾನ ಸಾಂಗತ್ಯದಿಂದ ಓದುಗರಿಗೆ ಚಿರಪರಿಚಿತ. ಸಾಮಾಜಿಕ ಕಳಕಳಿಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಸಾತ್ವಿಕ ಚೇತನ ಹರಿದಾಸ ಸಂಸ್ಕøತಿ ಪ್ರಚಾರ ಕೈಂಕರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಯುವ ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ಶ್ರೀಪುರಂದರ ಇಂಟರ್‍ನ್ಯಾಷನಲ್ ಟ್ರಸ್ಟ್‍ನ ವತಿಯಿಂದ 22ನೇ ವರ್ಷದ ಪುರಂದರದಾಸರ ಪುಣ್ಯದಿನದ ಸಂಸ್ಮರಣೆಯಲ್ಲಿ ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನ ಮಾಡಿ ಪುರಸ್ಕರಿಸುತ್ತಿರುವುದು ದಾಸಸಾಹಿತ್ಯ ಪರಂಪರೆಯ ಶಿಖರ ಗೌರವವೆಂದು ಭಾವಿಸಿ ಅಭಿನಂದಿಸುತ್ತಿದ್ದೇವೆ ಎಂದು ಕಾರ್ಯದರ್ಶಿ ಡಾ.ಸುವರ್ಣ ಮೋಹನ್ ತಿಳಿಸಿರುತ್ತಾರೆ.
ಪುರಂದರ ಇಂಟರ್ ನ್ಯಾಷನಲ್ ಟ್ರಸ್ಟ್ ಬಗ್ಗೆ
ಕಳೆದ ಎರಡು ದಶಕಗಳಿಂದ ಸಂಗೀತ -ನೃತ್ಯ -ಯಕ್ಷಗಾನ ಇತ್ಯಾದಿ ದೇಶಿಯ ಕಲೆಗಳಿಗೆ ವೇದಿಕೆಯಾಗಿ ದಾಸರ ತತ್ವ, ಮಹತ್ವಗಳನ್ನು ಸಮಾಜದಲ್ಲಿ ನಾನಾ ಆಯಾಮಗಳಲ್ಲಿ ಪ್ರಸರಿಸುತ್ತಿರುವವರು ಪುರಂದರ ಇಂಟರ್ ನ್ಯಾಷನಲ್ ಟ್ರಸ್ಟ್ನ ರೂವಾರಿ ಸುವರ್ಣ ಮೋಹನ್ . ಬೆಂಗಳೂರು ಹೊರವಲಯದ ಹೆಸರುಘಟ್ಟ ಮುಖ್ಯ ರಸ್ತೆಯ ಸೌಂದರ್ಯ ಬಡಾವಣೆಯಲ್ಲಿರುವ ಇವರ ಮನೆ ಪುರಂದರ ವಿಠಲನ ಆಲಯ. ಹರಿದಾಸರ ಕರುಣಾಲಯ. ಮೋಹನ್ ಕುಮಾರ್ ಮತ್ತು ಸುವರ್ಣ ದಂಪತಿಗಳು ಸುಮಾರು 22 ವರ್ಷದ ಹಿಂದೆ ಆರಂಭಿಸಿದ ಈ ಸಂಸ್ಥೆ ಹಲವಾರು ಅರ್ಥಪೂರ್ಣ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿದೆ.
ಕಲಾವಿದರ ಕುಟುಂಬದ ಸುವರ್ಣ ಬೆಂಗಳೂರು ಸಮೀಪದ ಹೆಸರುಘಟ್ಟದವರು. ಮನೆಯೆ ಮೊದಲ ಪಾಠಶಾಲೆ, ತಂದೆಯೇ ಗುರು ಪತಿಯು ಇವರ ಕಲಾಪ್ರತಿಭೆಗೆ ಪ್ರೋತ್ಸಾಹಿಸಿ ಇವರ ಎಲ್ಲಾ ಚಟುವಟಿಕೆಗಳಿಗೆ ಪ್ರೇರಕರು. ಸ್ವದೇಶಿ ಉತ್ಪನ್ನಗಳ ವ್ಯಾಪಾರೋದ್ಯಮ ಇವರ ಜೀವನ ನಿರ್ವಹಣೆಗೆ ದಾರಿ. ಮಹಿಳೆಯರ ಸಬಲೀಕರಣಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಸುವರ್ಣ ಬಡಾವಣೆಯ ಸ್ತ್ರೀ ಗುಂಪುಗಳನ್ನು ಒಂದೆಡೆ ಕಲೆಹಾಕಿ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಅವರ ಕಲೆಗೆ ಬೆಂಬಲವನ್ನು ನೀಡುತ್ತಿರುವ ಅನನ್ಯ ವ್ಯಕ್ತಿಯಲ್ಲ ಒಂದು ಶಕ್ತಿ ಎಂದರೆ ಅತಿಶಯೋಕ್ತಿಯಲ್ಲ.
ಎಲ್ಲ ಭವಬಂಧನಗಳನ್ನು ಕಳಚಿಸಿದ ಭಗವಂತನಿಗೆ ದಾಸರಿಗೆ ದಾಸರಾಗುವುದರಲ್ಲೇ ಸಾರ್ಥಕತೆ ಕಂಡ ನಿಸ್ವಾರ್ಥ ಮನೋಭಾವದ ದಂಪತಿ ಶ್ರೀಮತಿ ಸುವರ್ಣ ಮೋಹನ್ ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಾ ಕೆಲವು ಸಲ ಜೀವನದಲ್ಲಿ ಜಿಗುಪ್ಸೆ/ಹತಾಶೆ ಉಂಟಾಗುವುದು ಸಹಜ. ಇಂದಿನ ಒತ್ತಡದ ಜೀವನ ಶೈಲಿಯಿಂದ ಮುಕ್ತರಾಗಲು ಆಧ್ಯಾತ್ಮದ ಮೊರೆಹೋಗುವ ಅನೇಕರಿಗೆ ಸುವರ್ಣರ ಬದುಕು ಆದರ್ಶವೆನಿಸುತ್ತದೆ.
ಸುವರ್ಣ ಮೋಹನ್ ಸಾಹಿತ್ಯ ಲೋಕದಲ್ಲಿ ಅನೇಕ ಹಣತೆಗಳನ್ನು ಹಚ್ಚಿಟ್ಟಿದ್ದಾರೆ. ನವ ಜೀವನ ಸಂಗಾತಿ, ಸವಿಗಾನಸಿರಿ ಪ್ರಕಟಣೆಗಳಲ್ಲಿ ಪ್ರತಿ ವ್ಯಕ್ತಿಯ ನಿತ್ಯ ಜೀವನಕ್ಕೆ ಬೇಕಾಗುವ ಹಲವು ರೀತಿಯ ಸಾಂಸ್ಕøತಿಕ ಚಟುವಟಿಕೆಗಳ ಆಗರ ಇದಾಗಿದೆ. ರಂಗವಲ್ಲಿ, ಜನಪದ ಗೀತೆ, ದಾಸರ ಪದಗಳು, ವಚನಗಳು, ಭಾವಗೀತೆ ಹಾಗೂ ದೇಶಭಕ್ತಿ ಗೀತೆ ಸಾರ-ಸಂಗ್ರಹ ಈ ನವಜೀವನ ಸಂಗಾತಿ. ಹೆಸರೇ ಸೂಚಿಸಿರುವಂತೆ ಈ ಕೃತಿರತ್ನ ಸದಾ ಇದ್ದರೆ ಸಾಂಸ್ಕøತಿಕ ಲೋಕದ ಕೈ ದೀಪವಾಗಿ ನಮ್ಮನ್ನು ಮುಂದೆ ಸಾಗಿಸುತ್ತದೆ. ಹೆಣ್ಣಿನ ಜನ್ಮ ಉತ್ಕøಷ್ಠವಾದುದು. ಅನೇಕ ಜನ್ಮಗಳ ಪುಣ್ಯಫಲದಿಂದ ಹೆಣ್ಣಾಗಿ ಹುಟ್ಟುವಳು. ತಾಯ್ತನ ನಿಸ್ವಾರ್ಥ ಸೇವೆಯ ಪ್ರತೀಕ. ತಾಯಾಗಿ, ಮಗಳಾಗಿ, ಸೊಸೆಯಾಗಿ, ಮೊಮ್ಮಗಳಾಗಿ, ಹಲವು ಪಾತ್ರಗಳಲ್ಲಿ ಸಮಾಜವನ್ನು ವಿಕಸಿತಗೊಳಿಸಿ ಬಾಂಧವ್ಯಗಳನ್ನು ಬೆಸೆಯುತ್ತಾ, ಜೀವನವನ್ನು ಸೇವೆಗೆ ಮುಡಿಪಿಟ್ಟು ಸದಾ ಒಂದಲ್ಲ ಒಂದು ರೀತಿಯಲ್ಲಿ ಮತ್ತೊಬ್ಬರಿಗೆ ಕೊಟ್ಟು, ಕೊಡುವಿಕೆಯಲ್ಲಿ ಖುಷಿಪಟ್ಟು ಜೀವನ ಸವೆಸುವ ಮಹಾನುಭಾವಳು ಎನ್ನುವ ಸುವರ್ಣ ಸೌಜನ್ಯದ ಸರಳ ಸ್ವಭಾವದವರು, ಭಾರತೀಯ ಸಂಸ್ಕøತಿಗಳ ಹಿನ್ನೆಲೆಯ ದಂಪತಿಗಳು ಧಾರ್ಮಿಕವಾಗಿ, ಸಾಮಾಜಿಕವಾಗಿ ಸ್ಪಂದಿಸಿ ಅನೇಕರಿಗೆ ನೆರವಾಗಿದ್ದಾರೆ. ತಮ್ಮ ಕೌಟುಂಬಿಕ ಸೌಂದರ್ಯವನ್ನು ಕಾಪಾಡಿಕೊಂಡು ದಾಸ ಸಾಹಿತ್ಯ ಲೋಕದಲ್ಲಿ ಮಾಧುರ್ಯ ಸೇವೆ ಸಲ್ಲಿಸುತ್ತಾ ಸಾತ್ವಿಕ ಸಮಾಜದ ಆದರ್ಶ ಗೃಹಣಿಯಾಗಿದ್ದಾರೆ. ಯಕ್ಷಗಾನದಲ್ಲಿ ಎತ್ತಿದ ಕೈ. ಕಥಕ್ ನೃತ್ಯದಲ್ಲಿ ಒಳ್ಳೆಯ ಪಟುತ್ವ, ಕಲಾತ್ಮಕ ಅಭಿವ್ಯಕ್ತಿಯ ನೃತ್ಯಪಟುವಾಗಿರುವ ಮಗ ಮತ್ತು ಮಗಳು ಸದಾ ಚಟುವಟಿಕೆ, ಲವಲವಿಕೆಯಿಂದ ಪುಟಿಯುತ್ತಿರುವ ಹಸನ್ಮುಖಿ, ಆತಿಥ್ಯಕ್ಕೆ ಹೆಸರಾದ ಸುವರ್ಣ ಅವರಿಗೆ ಸರಿದೊರೆಯಾಗಿ ನಿಲ್ಲುವ ಅವರ ಪತಿ ಮೋಹನ್ ಎಲ್ಲ ಕಾರ್ಯಕ್ರಮಗಳ ಯೋಜನೆ, ಪೂರ್ವಕಲ್ಪನೆ, ಸಿದ್ಧತೆ, ಸಂಪರ್ಕ. ಸಂವಹನದಿಂದ ಆದರಿಸುವ ಕುಟುಂಬ.
ಸೇವೆ, ಸಾಧನೆ
ಮಹಿಳಾ ಆಂದೋಲನ ಕ್ಷೇತ್ರದಲ್ಲಿ ಮಾಡಿದ ಜೀವಿತಾವಧಿ ಸಾಧನೆಗಾಗಿ ರಾಜ್ಯ ಗೌರವ ಪ್ರಶಸ್ತಿ, ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರುನಾಡ ಧೃವತಾರೆ ಮತ್ತು ಕರ್ನಾಟಕ ಮಹಿಳಾ ರತ್ನ ರಾಜ್ಯ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳು ಇವರ ಮುಡಿಗೇರಿದೆ. ಇವೆಲ್ಲಕ್ಕೆ ಕಲಶವಿಟ್ಟಂತೆ ಇಂಡಿಯನ್ ವರ್ಚುಯಲ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿರುವ ಕಲಾತಪಸ್ವಿ.
ವಿವರಗಳಿಗೆ: 9449974931, 9481243950.