*ಕೃಷ್ಣಪ್ರಕಾಶ್ ಉಳಿತ್ತಾಯ
ಮಹಾಪದ್ಮಾಟವೀಸಂಸ್ಥಾ ಕದಂಬವನವಾಸಿನೀ
ಸುಧಾಸಾಗರಮಧ್ಯಸ್ಥಾ ಕಾಮಾಕ್ಷೀ ಕಾಮದಾಯಿನೀ |23|
ಪದ್ಮಗಳ ಸಮೂಹಗಳ ಮಧ್ಯದಲ್ಲಿ ಲಲಿತೆಯನ್ನು ಋಷಿ ಧ್ಯಾನಿಸಿದ್ದಾರೆ “ಮಹಾಪದ್ಮಾಟವೀಸಂಸ್ಥಾ” ಎಂಬ ನಾಮದಲ್ಲಿ. ಇಲ್ಲಿ ಏಳು ಯೌಗಿಕ ಚಕ್ರಗಳಲ್ಲಿ ಬರುವಂಥ ಸಹಸ್ರಾರದ ನಿರೂಪದಲ್ಲಿ ಕಾಣುವ ಅಸಂಖ್ಯ ಪದ್ಮಗಳನ್ನೇ ಋಷಿ ಪರಿಭಾವಿಸಿರುವ ಸಾಧ್ಯತೆ ಇದೆ. ಅಂಥ ಸಹಸ್ರ ಪದ್ಮಗಳ ಮಧ್ಯೆ ಕುಳಿತಿರುವ ದೇವಿಯನ್ನು ಋಷಿ ಕಂಡು ಪದ್ಮಗಳ ವನದಲ್ಲಿ ದೇವಿಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ. ಸಹಸ್ರಾರ ಸಹಸ್ರಪದ್ಮಗಳ ಆಕೃತಿಯಲ್ಲಿ ಇದೆ ಎಂಬ ವಿವರವೂ ಇದೆ. ಇಲ್ಲಿ ಕಾಮೇಶ್ವರನೊಡನೆ ಲಲಿತೆ ವಿರಾಜಮಾನಳಾಗಿದ್ದಾಳೆ ಎಂಬುದು ಶ್ರೀಚಕ್ರಾರಾಧನೆಯಲ್ಲಿ ಕಾಣುವ ವಿಷಯ. ಹಾಗಾಗಿ ಈ ನಾಮ ದೇವಿಗೆ.
“ಕಂಬವನವಾಸಿನೀ” ಲಲಿತೆಯು ಕದಂಬವನದ ಮಧ್ಯ ನೆಲೆಸಿರುವವಳು. ಚಿಂತಾಮಣಿಗೃಹದ ಸುತ್ತಲೂ ಇರುವ ಕದಂಬ ವನದಲ್ಲಿ ತಾಯಿ ನೆಲೆಸಿರುವಳು. ಶ್ರೀ ದೇವೀಮಾಹಾತ್ಮ್ಯೆಯಲ್ಲೂ ಇದರ ವಿವರ ಬರುತ್ತದೆ. ಶುಂಭಾಸುರನನ್ನು ಕೊಲ್ಲಲು ದೇವಿ ಕದಂಬವನದಲ್ಲಿ ಕೌಶಿಕೆಯಾಗಿ ನೆಲೆಸಿ ರಾಕ್ಷಸರ ಹನನ ಮಾಡಿದಳು ಎಂಬುದು.
“ಸುಧಾಸಾಗರಮಧ್ಯಸ್ಥಾ” ಅಮೃತದ ಸಾಗರದ ಮಧ್ಯದಲ್ಲಿ ಲಲಿತೆ ನೆಲೆಸಿದ್ದಾಳೆ. ಇನ್ನೊಂದು ನೆಲೆಯಿಂದ ನೋಡಲು: ಲಲಿತೆಯ ನಾಮ ಸ್ಮರಣೆಯಿಂದ ಅಮೃತದ ಕಡಲಲ್ಲಿ ತೇಲಿದಂತಾಗುತ್ತದೆ. ಅಂದರೆ, ಆಕೆಯ ನಾಮದಲ್ಲಿ ತಾದಾತ್ಮ್ಯವನ್ನು ಹೊಂದಿದರೆ ಆಗುವ ಅನುಭವ ಸುಧಾಸಾಗರದಲ್ಲಿ ಮನಸ್ಸು ತೇಲುವಂಥ ಆನಂದಾನುಭವ.
“ಕಾಮಾಕ್ಷೀ” ಲಲಿತೆ ಮನೋಹರವಾದ ಕಣ್ಣುಳ್ಳವಳು.
“ಕಾಮದಾಯಿನೀ” ನಮ್ಮೆಲ್ಲರ ಕಾಮನೆಗಳನ್ನು ಈಡೇರಿಸುವವಳು. ಕಾಮೇಶ್ವರನ ಮಡದಿ ಕಾಮೇಶ್ವರಿ ನಮ್ಮಲ್ಲಿ ಕಾಮನೆಗಳನ್ನು ಹುಟ್ಟಿಸುವವಳೂ ಹೌದು. ನಮ್ಮ ಕಾಮನೆಗಳನ್ನು ಬಿಟ್ಟುಕೊಟ್ಟರೆ ನಮ್ಮೊಳಿತಿಗೆ ಬೇಕಾದ ಕಾಮನೆಯನ್ನು ಬೇಡುವ ಮನಃಸಂಕಲ್ಪವನ್ನು ಹುಟ್ಟಿಸುವವಳೂ ಹೌದು.