ರಂಭಾಪುರಿ ಪೀಠ (ಬಾಳೆಹೊನ್ನೂರು): ಜೀವನ ಜಂಜಡದಲ್ಲಿ ಸಿಲುಕಿದ ಮನುಷ್ಯನಿಗೆ ಧರ್ಮ ಕ್ಷೇತ್ರಗಳು ಸ್ಫೂರ್ತಿ ಮತ್ತು ಚೈತನ್ಯವನ್ನು ನೀಡುವ ಕೇಂದ್ರಗಳಾಗಿವೆ. ಸಮೃದ್ಧ ಮತ್ತು ಶಾಂತಿಯ ನಾಡು ಕಟ್ಟುವುದೇ ಧರ್ಮಗಳ ಧ್ಯೇಯವಾಗಿದೆ. ವ್ಯಕ್ತಿತ್ವ ವಿಕಸನವೇ ಎಲ್ಲ ಧರ್ಮಗಳ ಮೂಲ ಗುರಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ 30 ನೇ ವರ್ಷದ ಪೀಠಾರೋಹಣ ವರ್ಧಂತಿ ಅಂಗವಾಗಿ ಫೆಬ್ರುವರಿ 12 ರಂದು ಜರುಗಿದ ಶತರುದ್ರ ಯಾಗದ 3ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹೆತ್ತ ತಾಯಿ ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವು ಮುಖ್ಯ. ವಿವೇಕದ ತುತ್ತ ತುದಿಯೇ ದೈವ ಸಾಕ್ಷಾತ್ಕಾರ. ಅಂತರಂಗ ಬಹಿರಂಗ ಶುದ್ಧಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಎಲ್ಲರ ಬಾಳ ಬದುಕಿಗೆ ಬೆಳಕಾಗಿವೆ. ಧರ್ಮದಲ್ಲಿ ಮಾರ್ಗವಿದೆ. ಆದರೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಇವೆರಡೂ ಸಮನ್ವಯತೆಯಿಂದ ಸಾಗಿದರೆ ದೇಶಾಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮದ ದೋಣಿಗೆ ರಂಧ್ರ ಕೊರೆಯುವ ಕೆಲಸ ಯಾರೂ ಮಾಡಬಾರದೆಂದರು.
ನೇತೃತ್ವ ವಹಿಸಿದ ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿ0ಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನೀರಿಲ್ಲದ ನದಿ, ಅತಿಥಿ ಇಲ್ಲದ ಮನೆ, ಫಲವಿಲ್ಲದ ವೃಕ್ಷ ಹೇಗೆ ವ್ಯರ್ಥವೋ ಹಾಗೆಯೇ ಜೀವನದಲ್ಲಿ ಗುರು ಮತ್ತು ಗುರಿ ಇಲ್ಲದಿದ್ದರೆ ಬಾಳು ನಿರರ್ಥಕವೆಂದರು.
ಎಮ್ಮಿಗನೂರು, ಮಳಲಿ, ಕೆಂಭಾವಿ, ಸಂಗೊಳ್ಳಿ, ಹಾವೇರಿ, ಮಸ್ಕಿ, ಅರಗಿನಡೋಣಿ, ಸಿಂಧನೂರು, ದೊಡ್ಡಸಗರ, ಚಿಮ್ಮಲಗಿ ಶ್ರೀಗಳು ಉಪಸ್ಥಿತರಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಶತರುದದ್ರ ಯಾಗದ ಸಂಚಾಲಕತ್ವ ವಹಿಸಿದ್ದರು. ವೇದವಿದ್ವಾನ್ ಚನ್ನಬಸವಾರಾಧ್ಯರು ಮತ್ತು ೨೧ ಜನ ಪುರೋಹಿತರಿಂದ ಶತರುದ್ರ ಯಾಗದ ೩ನೇ ದಿನದ ಪೂಜಾ ಕಾರ್ಯ ನೆರವೇರಿತು. ತಿಪಟೂರಿನ ಶಿವಶಂಕರ-ಜಯಮ್ಮ, ಭದ್ರಾವತಿಯ ದ್ವಾರಕ-ಸ್ವರೂಪಿಣಿ, ಚಿಕ್ಕಮಗಳೂರಿನ ಯು.ಎಂ. ಬಸವರಾಜ ಮತ್ತು ದೇವರಾಜ್, ಮಲೆಬೆನ್ನೂರಿನ ಗುರುಪಾದಯ್ಯ-ಪುಷ್ಪಾವತಿ, ವೀರಯ್ಯ-ಯಶೋಧ ಹಿರೇಮಠ, ದಾವಣಗೆರೆ ಹಂಪಯ್ಯ-ಬಸಲಿ0ಗಮ್ಮ ದಂಪತಿಗಳು ಪೂಜಾ ಸೇವೆ ಸಲ್ಲಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.