ಮೂಡಲಗಿ: ಕೂಡಲಸಂಗಮದ ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಪಾದಯಾತ್ರೆಯು ಯಶಸ್ವಿಯತ್ತ ಸಾಗಿ ಶೀಘ್ರ ಬೆಂಗಳೂರು ತಲುಪುವ ಮುಖಾಂತರ ಫೆ. 21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರಗುವ ಬೃಹತ್ ಸಮಾವೇಶದಲ್ಲಿ ರಾಜ್ಯ ಹೊರ ರಾಜ್ಯಗಳಿಂದ ಆಗಮಿಸುವ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸುವಂತೆ ಪಂಚಮಸಾಲಿ ಯುವ ಮುಖಂಡ ಈಶ್ವರ ಢವಳೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪಾದಯಾತ್ರೆಯ ಮುಂಚೆ ಬೆಳಗಾವಿ ಸುವರ್ಣ ಸೌಧ ದೆದುರು ಮೀಸಲಾತಿಗಾಗಿ ಸ್ವಾಮೀಜಿಯವರು ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸರಕಾರ ಒಂದು ತಿಂಗಳ ಗಡುವು ನೀಡಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ ನಮ್ಮ ಸ್ವಾಮೀಜಿ ತಮ್ಮ ಹುಟ್ಟುಹಬ್ಬದ ಸಮಯದಲ್ಲಿ ನಮ್ಮ ರಕ್ತ ಕೊಟ್ಟು ಮೀಸಲಾತಿ ಪಡೆಯುತ್ತೇವೆ ಎಂದು ರಕ್ತ ದಾನ ಮಾಡುವುದರ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ, ಸಂಕ್ರಾಂತಿಯಂದು ಕೂಡಲಸಂಗಮದಿಂದ ಪಂಚ ಲಕ್ಷ ಹೆಜ್ಜೆಗಳ ಪಾದಯಾತ್ರೆ ಪ್ರಾರಂಭಿಸಿ ಬೆಂಗಳೂರು ತಲುಪುವ ಹಂತದಲ್ಲಿದ್ದರೂ ಮೀಸಲಾತಿ ನೀಡುವ ಸುಳಿವು ನೀಡದ ಕಾರಣ ಫೆ. 21 ನಡೆಯುವ ಬೃಹತ್ ಸಮಾವೇಶದ ಮುಖಾಂತರ ಸರಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು. ಅಂದು 4 ಗಂಟೆಯ ಒಳಗೆ ಮೀಸಲಾತಿ ನೀಡದಿದ್ದರೆ ಸಮಾವೇಶ ಸ್ಥಳದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ತೆರಳಿ ಮಾ. 4ರವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಇದಕ್ಕೂ ಸರಕಾರ ಬಗ್ಗದಿದ್ದರೆ ಅಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಲ್ಲದೆ ಸಮುದಾಯದ ಶಾಸಕರು, ಸಚಿವರು, ಸಂಸದರು ಸರಕಾರದ ಹಂತದಲ್ಲಿ ಮೀಸಲಾತಿಗಾಗಿ ಪ್ರಯತ್ನಿಸಬೇಕು. ಮೀಸಲಾತಿ ಪಡೆಯುವುದು ನಮ್ಮ ಹಕ್ಕಾಗಿರುವುದರಿಂದ ಅಂದಿನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಭಾಗಿಯಾಗುವಂತೆ ವಿನಂತಿಸಿದ್ದಾರೆ.