ಸವದತ್ತಿ ಎಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ಜಾತ್ರೆಯ ಸಂಭ್ರಮ

ಫೆ. 27 ರಂದು ಭಾರತ ಹುಣ್ಣಿಮೆ. ಇದು ರೈತ ಜನರು ಚಕ್ಕಡಿಗಳಲ್ಲಿ, ಟ್ಯಾಕ್ಟರ್‍ಗಳಲ್ಲಿ, ಸ್ವಂತ ವಾಹನಗಳಲ್ಲಿ, ಕಾಲ್ನಡಿಗೆಯಲ್ಲಿ ಬರುವ ಮೂಲಕ ಭಕ್ತರು ತಮ್ಮ ಭಕ್ತಿ ಪರಾಕಾಷ್ಠೆಯನ್ನು ತೋರ್ಪಡಿಸುವರು. ಈ ಜಾತ್ರೆ ಲಕ್ಷಾಂತರ ಭಕ್ತರು ಆಗಮಿಸುವ ಸಂಗಮವಾಗಿದೆ.

*ವೈ. ಬಿ. ಕಡಕೋಳ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡವು ದೇಶದ ಸುಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾಗಿದ್ದು ನಮ್ಮ ರಾಜ್ಯದಿಂದಷ್ಟೇ ಅಲ್ಲದೇ ನೆರೆಯ ಆಂಧ್ರಪದೇಶ, ತಮಿಳುನಾಡು, ಕೇರಳ, ಮಹಾರಾಷ್ಟç ರಾಜ್ಯಗಳಿಂದಲೂ ವರ್ಷವಿಡೀ ತಂಡೋಪತಂಡವಾಗಿ ಲಕ್ಷ ಲಕ್ಷ ಜನ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.
ಅಗಸ್ತö್ಯ ಋಷಿಗಳ ಆಶೀರ್ವಾದದಂತೆ ಪುತ್ರಕಾಮೇಷ್ಠಿಯಾಗವನ್ನು ಮಾಡಿದ ಕಾಶ್ಮೀರದ ಅರಸು ರೇಣುಕರಾಜ – ಭೋಗವತಿ ದಂಪತಿಗಳ ಮಗಳಾಗಿ ಯಜ್ಞಕುಂಡದಲ್ಲಿ ಜನಿಸಿದ ಶ್ರೀ ರೇಣುಕಾದೇವಿ ಸಾಮಾನ್ಯಳಾಗಿರದೇ ಆದಿಶಕ್ತಿಯ ಸ್ವರೂಪವಾಗಿದ್ದು ಸಿದ್ದಾಚಲ ಪವತದಲ್ಲಿ ನೆಲೆಸಿ ಜಮದಗ್ನಿ ಪತ್ನಿಯಾಗಿ ತನ್ನ ಪಾತಿವೃತ್ಯದಿಂದ ಮಹಾಮಹಿಮಳಾಗಿ ಇಂದಿಗೂ ಕೂಡ ಜನಮಾನಸದ ಆರಾಧ್ಯ ದೈವಾಗಿರುವಳು.

ದೇವಾಲಯದ ಆಚರಣೆಗಳು

ದೇವಾಲಯದ ಆಚರಣೆಗಳೆಂದರೆ ಪ್ರತಿ ದಿವಸ ಮುಂಜಾನೆ ಅಭಿಷೇಕ ಪೂಜೆ ಬೆಳಗ್ಗೆ 4ರಿಂದ 6 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6.30 ರವರೆಗೆ ಜರುಗುವುದು. ಇದರ ಜೊತೆಗೆ ಚೈತ್ರ ಮಾಸದ ಶುದ್ದ ಚತುರ್ಥಿಯಂದು ದೇವಿಗೆ ಕಂಕಣ ಮಂಗಳ ಸೂತ್ರ ಧಾರಣೋತ್ಸವ ಜರುಗುತ್ತದೆ. ವೈಶಾಖ ಮಾಸದ ಶುದ್ದ ತೃತಿಯ(ಅಕ್ಷಯ ತೃತಿಯಾ)ದಂದು ಶ್ರೀ ಕ್ಷೇತ್ರದಲ್ಲಿ ಪರಶುರಾಮ ಜಯಂತಿ ಜರುಗುತ್ತದೆ.

ಹಡ್ಡಲಿಗೆ ತುಂಬುವುದು
ಭಾರತ ಹುಣ್ಣಿಮೆ, ದವನದ ಹುಣ್ಣಿಮೆಗಳ ಸಂದರ್ಭದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಭಕ್ತಾದಿಗಳು ಅಲಂಕೃತ ಎತ್ತಿನ ಗಾಡಿಗಳಲ್ಲಿ ದೇವಾಲಯಕ್ಕೆ ಆಗಮಿಸುವ ಮೂಲಕ ದಾರಿಯುದ್ದಕ್ಕೂ ಸಿಗುವ ಕೆರೆ, ಹಳ್ಳ, ನದಿಗಳನ್ನು ಪೂಜಿಸುತ್ತ ಎಲ್ಲಮ್ಮನ ಗುಡ್ಡ ತಲುಪುವರು.

ದೇವಾಲಯದ ಆವರಣದಲ್ಲಿ ತಂಗುವ ಇವರು ಬೆಳಗಿನ ಹೊತ್ತು ಎಣ್ಣೆ ಹೊಂಡದಲ್ಲಿ ಸ್ನಾನ ಮಾಡಿ ಅಲ್ಲಿ ನೀರನ್ನು ಕೊಡದಲ್ಲಿ ತುಂಬಿಕೊoಡು ಮಡಿಯಿಂದ ಮಹಿಳೆಯರು ಅಡುಗೆ ಮಾಡ ತೊಡಗುವರು. ಪುರುಷರು ಎತ್ತು(ರಾಸು)ಗಳ ಮೈ ತೊಳೆದು ಸಿಂಗರಿಸುವರು .ಐದು ಜನ ಜೋಗಮ್ಮ (ಜೋಗತಿಯರು) ಮತ್ತು ಐದು ಜನ ಮುತ್ತೈದೆಯರು ಸೇರಿ ಹಡಲಿಗೆ ತುಂಬುವ ಕಾರ್ಯಕ್ಕೆ ಅಣತಿಯಾಗುವರು. ಕಡಬು, ವಡೆ, ರೊಟ್ಟಿ, ಚಪಾತಿ, ಪಲ್ಯ… ಇತ್ಯಾದಿಗಳನ್ನು ತಯಾರಿಸಿಕೊಂಡು ತಾವು ತಂದಿದ್ದ ದವಸ ಧಾನ್ಯಗಳನ್ನು ಹಡಲಿಗೆಯಲ್ಲಿಟ್ಟು ಚೌರಿಕೆಗಳನ್ನು ಹಡಲಿಗೆ ಪಕ್ಕದಲ್ಲಿಟ್ಟು ಪೂಜಿಸುವ ಮೂಲಕ ಆರತಿ ಕರ್ಪೂರವನ್ನು ಬೆಳಗುತ್ತ
“ಎಲ್ಲಮ್ಮ ನಿನ್ನ ಪಾದಕೆ ಉಧೋ ಉಧೋ
ಜಗದಂಭಾ ನಿನ್ನ ಪಾದಕೆ ಉಧೋ ಉಧೋ
ಜೋಗುಳ ಭಾವಿ ಸತ್ಯವ್ವ ನಿನ್ನ ಪಾದಕೆ ಉಧೋ ಉಧೋ
ಪರಶು ರಾಮ ನಿನ್ನ ಪಾದಕೆ ಉಧೋ ಉಧೋ

ಎನ್ನುತ್ತ ಸುತ್ತಲಿನ ಎಲ್ಲ ದೇವರ ಹೆಸರನ್ನು ಸ್ಮರಿಸುವರು. ತದ ನಂತರ ಮಂಗಳಾರತಿ ಮಾಡಿ ಜೋಗತಿಯರಿಗೆ ಮತ್ತು ಮುತೈದೆಯರಿಗೆ ಉಣಬಡಿಸಿ ನಂತರ ಕುಟುಂಬದವರೂ ತಮ್ಮೊಡನೆ ಆಗಮಿಸಿದ ನೆರೆ ಹೊರೆಯ ಎಲ್ಲರೂ ಊಟ ಮಾಡುವ ಮೂಲಕ ಹಡ್ಡಲಿಗೆ ತುಂಬುವ ಆಚರಣೆ ಇಂದಿಗೂ ಇದೆ. ಇದು ದೇವಾಲಯ ಅವರಣಕ್ಕೆ ಮಾತ್ರ ಸೀಮಿತವಾದೇ ತಮ್ಮತಮ್ಮ ಊರುಗಳಲ್ಲಿ, ಮ್ಮತಮ್ಮ ಮನೆಗಳಲ್ಲಿ ಮಾಡುವ ಆಚರಣೆ. ಮನೆಯನ್ನು ಸಾರಣೆ ಮಾಡಿ ಸಿಂಗರಿಸಿ, ಎಕ್ಕದ ಹೂ, ಭತ್ತ/ಗೋಧಿ ತೆನೆ, ಜೋಳದ ತೆನೆ, ಕಡ್ಲಿ ತೆನೆ, ಮಾವಿನ ಎಲೆಗಳಿಂದ ಮನೆ ಬಾಗಿಲಿಗೆ ತೋರಣ ಕಟ್ಟಿ ಮನೆಗೆ ಐದು ಜನ ಜೋಗಮ್ಮಂದಿರು, ಐದು ಜನ ಮುತೈದೆಯರನ್ನು ಆಮಂತ್ರಿಸಿ ಪೂಜೆ ಕಾರ್ಯ ನಡೆಸುವ ಮೂಲಕ ಮನೆಮನೆಗಳಲ್ಲಿ ಇಂದಿಗೂ ಈ ಸಂಪ್ರದಾಯ ಜರುಗುತ್ತಿದೆ.

ದೀಪದ ಹರಕೆ
ದೀಪ ಹಚ್ಚುವ ಪರಂಪರೆ ಪುರಾತನವಾದುದು. ಸಾಮಾನ್ಯವಾಗಿ ಎಲ್ಲ ಭಕ್ತರು ತಾವು ಬೇಡಿಕೊಂಡ ಸಂಗತಿ ಈಡೇರಿದರೆ ದೇವಿಗೆ ದೀಪ ಹಚ್ಚುವುದಾಗಿ ಹರಕೆ ಸಲ್ಲಿಸುತ್ತಾರೆ. ಅದರಂತೆ ಇಚ್ಚಿತ ಸಂಗತಿ ಫಲಶ್ರುತಿಯಾದಾಗ ದೇವಾಲಯಕ್ಕೆ ಬಂದು ದೀಪ ಹಚ್ಚಿ ಹೋಗುವರು. ಈ ದೀಪ ಹಚ್ಚುವುದರಲ್ಲಿ ಎರಡು ವಿಧ ಒಂದು ಎಣ್ಣೆಯ ದೀಪ ಇನ್ನೊಂದು ತುಪ್ಪದ ದೀಪ. ಇನ್ನು ತಮ್ಮ ತಮ್ಮ ಮನೆಗಳಲ್ಲಿ ಆಕಳು ಮತ್ತು ಎಮ್ಮೆ ಕರು ಹಾಕಿದರೆ ಕೆಲವು ಜನ ಮೊದಲ ಐದು ದಿನ ಇನ್ನು ಕೆಲವರು ಮೊದಲ ಹನ್ನೊಂದು ದಿನಗಳಲ್ಲಿ ಗಿಣ್ಣದ ಹಾಲನ್ನು ತಗೆದಿರಿಸಿ ಅದರಿಂದ ಬೆಣ್ಣೆ ತಗೆದು ತುಪ್ಪ ಮಾಡಿಕೊಂಡು ಮೀಸಲು ತುಪ್ಪ ಎಂದು ಅದನ್ನು ಕರೆಯುವರು. ಅಷ್ಟು ದಿನಗಳವರೆಗೆ ಆ ಹಸು ಅಥವ ಎಮ್ಮೆಯ ಹಾಲನ್ನು ಮನೆಯ ಹೊರಗೆ ಕೊಡುವುದಿಲ್ಲ. ಈ ರೀತಿ ತಯಾರಿಸಿದ ತುಪ್ಪವನ್ನು ತಂದು ದೇವಿಯ ಹೆಸರಿಗೆ ದೀಪ ಹಚ್ಚುವ ಮೂಲಕ ತಮ್ಮ ಮನೆಯ ಪರಂಪರಾನುಗತ ಬಂದ ಆಚರಣೆ ಪೂರ್ಣಗೊಳಿಸುವರು.


ವಾಹನ ಪೂಜೆ
ಹೊಸದಾಗಿ ವಾಹನ ಖರೀದಿಸಿದವರು ಅದನ್ನು ನೇರವಾಗಿ ದೇವಾಲಯದ ಆವರಣಕ್ಕೆ ತರುವರು. ಅಲ್ಲಿ ಪೂಜಾರಿಗಳನ್ನು ಸಂಪರ್ಕಿಸಿ ಅವರಿಂದ ಪೂಜೆ ಮಾಡಿಸಿ ಲಿಂಬೆ ಹಣ್ಣನ್ನು ದೇವಿ ಆಶೀರ್ವಾದ ರೂಪದಲ್ಲಿ ಪಡೆದು ಅದನ್ನು ವಾಹನಕ್ಕೆ ಕಟ್ಟಿಕೊಂಡು ಹೊರಡುವರು.


ದೀಡ ನಮಸ್ಕಾರ

ತಮಗೆ ಒದಗಿರುವ ಕಷ್ಟ ಪರಿಹರಿಸಿದರೆ ದೀಡ ನಮಸ್ಕಾರ ಅಥವಾ ಉರುಳುಸೇವೆ ಮಡುವುದಾಗಿ ಹರಕೆ ಹೊತ್ತ ಭಕ್ತರು ದೀಡ ನಮಸ್ಕಾರ ಹಾಕುವರು.ನೆಲದ ಮೇಲೆ ಮಲಗಿ ಕೈ ಚಾಚಿ ಕೈಯಲ್ಲಿ ಒಂದು ದಂಟನ್ನು ಹಿಡಿದು ಅದರಿಂದ ಒಂದು ಗೆರೆ ಎಳೆದು ಮೇಲೆ ನಿಂತು ಆ ಗೆರೆ ಎಳೆದ ಸ್ಥಳದಿಂದ ಮತ್ತೆ ಮಲಗಿ ಕೈ ಚಾಚಿ ಗೆರೆ ಎಳೆಯುತ್ತ ದೇವಾಲಯದವರೆಗೂ ಸಾಗಿ ಅಲ್ಲಿ ಎರಡು, ಐದು… ಹೀಗೆ ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ದೇವಾಲಯ ಪ್ರವೇಶಿಸಿ ದೇವಿ ದರ್ಶನ ಪಡೆದು ತಮ್ಮ ಹರಕೆ ತೀರಿಸುವ ಪದ್ದತಿ ಇಂದಿಗೂ ರೂಢಿಯಲ್ಲಿದೆ. ಇನ್ನು ಕೆಲವರು ಉರುಳು ಸೇವೆಯ ಮೂಲಕ ಈ ರೀತಿ ಹರಕೆ ತೀರಿಸುವರು. ಕೆಲವರು ದೇವಾಲಯದ ಆವರಣದಲ್ಲಿ ಈ ಹರಕೆ ತೀರಿಸಿದರೆ ಇನ್ನೂ ಕೆಲವರು ಜೋಗುಳಬಾವಿಯಿಂದ ಆರಂಭಿಸಿ ದೇವಾಲಯದವರೆಗೂ ದೀಡ ನಮಸ್ಕಾರ ಹಾಕುವುದನ್ನು ರಸ್ತೆಯುದ್ದಕ್ಕೂ ಕಾಣಬಹುದು.
ತನ್ನದೇ ಅದ ವೈಶಿಷ್ಟತೆಯಿಂದ ಭಕ್ತ ಜನರಲ್ಲಿ ಮನೆಮಾತಾಗಿರುವಳು ಅವಳನ್ನು ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟç, ಕೇರಳ ತಮಿಳುನಾಡಿನೆಲ್ಲೆಡೆ ಪೂಜಿಸುವ ಆರಾಧಿಸುವ ಭಕ್ತರಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles