ಮಾರ್ಚ್ 11 ರಂದು ಮಹಾಶಿವರಾತ್ರಿ, ಕೆಂಗೇರಿ ಚಕ್ರಪಾಣಿ ಅವರ ಛಾಯಾಚಿತ್ರಗಳ ಪ್ರದರ್ಶನ

ಬೆಂಗಳೂರು: ಕೆಂಗೇರಿ ಉಪನಗರದ ಏಕದಳ ಬಂಡೆ ಮಠದಲ್ಲಿ, ಬಂಡೇ ಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 11 ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹವ್ಯಾಸಿ ಛಾಯಾಗ್ರಾಹಕ ಹಾಗೂ ದೇಗುಲ ಶಿಲ್ಪಗಳ ಅಧಯನಕಾರರಾದ ಕೆಂಗೇರಿ ಚಕ್ರಪಾಣಿ ಅವರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಬೆಳಗ್ಗೆ 9.30 ರಿಂದ ರಾತ್ರಿ 11 ಗಂಟೆಯವರೆಗೆ ಪ್ರದರ್ಶನ ಇರಲಿದೆ.

ಶಿವಮೊಗ್ಗ ಜಿಲ್ಲೆ ತಾಳಗುಂದದ ಕರ್ನಾಟಕದ ಪ್ರಾಚಿನ ಶಿವಲಿಂಗ ಪ್ರಣವೇಶ್ವರ, ತಲೆಯ ಮೇಲೆ ಗಂಗೆಯನ್ನೆ ಹೊತ್ತ ತುರುವೇಕೆರೆಯ ಗಂಗಾಧರ, ಒಂದೇ ಪಾಣಿ ಪೀಠದ ಮೇಲೆ ತ್ರಿಮೂರ್ತಿಗಳನ್ನು ಬಿಂಬಿಸುವ ಗದಗದ ತ್ರಿಕೂಟೇಶ್ವರ ಹಾಗೆಯೆ ಐದು ಶಿವಲಿಂಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಮುನವಳ್ಳಿಯ ಪಂಚಲಿಂಗೇಶ್ವರ, ಪರಶಿವನ ಮುಖವನ್ನು ಹೊಂದಿರುವ ಸೊರಬ ಸಮೀಪದ ಭಾರಂಗಿಯ ಮುಖಲಿಂಗ, ಮಂಡ್ಯ ಜಿಲ್ಲೆ ನೆಲಮನೆ, ಚಿತ್ರದುರ್ಗ ಜಿಲ್ಲೆ , ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆ, ಬೆಂಗಳೂರು ಜಿಲ್ಲೆ ಬೂದಿಗೆರೆ ಸಮೀಪದ‌ ಚೌಡಪ್ಪನಹಳ್ಳಿಯ ಹದಿನಾರು ಮೂಲೆಗಳುಳ್ಳ ಧಾರಾಲಿಂಗಗಳು, ಒಂದು ಶಿವಲಿಂಗದಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆ ಬಂದಣಿಕೆ, ಧಾರವಾಡ ಜಿಲ್ಲೆ ನರೇಂದ್ರ , ಕೊಪ್ಪಳ ಜಿಲ್ಲೆ ಪುರದ ಸಹಸ್ರ ಲಿಂಗಗಳು, ಹಂಪಿಯ ಚಕ್ರತೀರ್ಥದಲ್ಲಿರುವ ಶಿವಲಿಂಗಗಳ  ವ್ಯೂಹ, ಕದಂಬ, ಚಾಲುಕ್ಯ, ಗಂಗ, ನೊಳಂಬ, ಕಲ್ಯಾಣ ಚಾಲುಕ್ಯ , ಹೊಯ್ಸಳ, ವಿಜಯನಗರಸರು, ಮೈಸೂರು ಒಡೆಯರು ನಿರ್ಮಿಸಿರುವ ವೈವಿಧ್ಯಮಯ, ವೈಶಿಷ್ಟ್ಯಪೂರ್ಣ ಸಾವಿರಾರು ಶಿವಲಿಂಗಗಳ ಛಾಯಾಚಿತ್ರ ಚಿತ್ರಗಳನ್ನು ಒಂದೇ ಸೂರಿನಡಿಯಲ್ಲಿ ನೋಡಬಹುದು.

ಸಾವಿರಾರು ಶಿವಲಿಂಗಗಳ ಛಾಯಾಚಿತ್ರಗಳ ಜೊತೆ ಶಿವನ ಲೀಲಾಮೂರ್ತಿಗಳಾದ ಚಂದ್ರಶೇಖರ, ದಕ್ಷಿಣಾಮೂರ್ತಿ, ಕಾಲಭೈರವ, ವೀರಭದ್ರ, ನಂದಿವಾಹನ ಶಿವ, ನಾಟ್ಯಶಿವರ ವೈವಿಧ್ಯಮಯ ಛಾಯಾಚಿತ್ರಗಳ ಜೊತೆ ಶಿವನ ಪರಿವಾರ ದೇವತೆಗಳಾದ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದೀಶ್ವರ ಹಾಗೂ ನೂರಾರು ಶಿವದೇವಾಲಯಗಳ ಛಾಯಾಚಿತ್ರಗಳನ್ನು ನೋಡಬಹುದು.

ದೇವಾಲಯ ಅಧ್ಯಯನಕಾರ ಕೆಂಗೇರಿ ಚಕ್ರಪಾಣಿ ಕಿರು ಪರಿಚಯ

ಬೆಂಗಳೂರು ಸಮೀಪದ ಕೆಂಗೇರಿಯವರಾದ ಚಕ್ರಪಾಣಿ ಭಾರತ್ ಸಂಚಾರ್ ನಿಗಮ (ಬಿ.ಎಸ್.ಎನ್.ಎಲ್) ನ ನಿವೃತ್ತ ಅಧಿಕಾರಿ. ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿದ್ದರೂ ಪ್ರವೃತ್ತಿಯಲ್ಲಿ ದೇವಾಲಯಗಳ  ಛಾಯಾಗ್ರಾಹಕರು ಹಾಗೂ ಸಂಶೋಧಕರು.

ತಮ್ಮ ಸಹಪಾಠಿ ಕೆಂಗೇರಿಯ ಶ್ರೀ ಮುನಿ ಆಂಜಿನಪ್ಪನವರಿಂದ ಛಾಯಾ ಚಿತ್ರಕಲೆಯನ್ನು ಕಲಿತ ಚಕ್ರಪಾಣಿ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ತರಗತಿಗೆ ಸೇರಿ ದೇವಾಲಯದ ಶಾಸ್ತೀಯ ಅಧ್ಯಯನವನ್ನೂ ಕಲಿತರು.

ಚಕ್ರಪಾಣಿಯವರು ಕನ್ನಡನಾಡಿನ ಮೂಲೆಮೂಲೆಗಳಲ್ಲೂ ಸಂಚರಿಸಿ ನಾಡಿನ ದೇವಾಲಯಗಳ , ದೇವತಾಮೂರ್ತಿಗಳ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿದ್ದಾರೆ ಹಾಗೂ ದೇವಾಲಯಗಳನ್ನು ಕುರಿತು ಪುಸ್ತಕಗಳನ್ನೂ ಬರೆದಿರುವರು.ಇವರು ಸುಮಾರು ಇಪ್ಪತೈದು ವರ್ಷಗಳಿಂದ ಯಾವ ಪ್ರತಿ ಫಲಾಪೇಕ್ಷೆಯು ಇಲ್ಲದೆ ,ತಮ್ಮ ಸ್ವಂತ ಕರ್ಚಿನಲ್ಲಿ ಛಾಯಾಚಿತ್ರಗಳನ್ನು ತೆಗೆಯುವ  ಹಾಗೂ ಸಾರ್ವಜನಿಕರಿಗೆ ಪ್ರದರ್ಶಿಸುವ ಕೈಂಕರ್ಯವನ್ನು ಕೆಂಗೇರಿಚಕ್ರಪಾಣಿಯವರು ಕೈಗೊಂಡಿರುವರು.

ಚೆನೈ ಮೈಸೂರು, ಕೆ.ಆರ್.ನಗರ, ಮಧುಗಿರಿ, ದೇವನಹಳ್ಳಿ ತಾಲ್ಲೂಕು ವಿಜಯಪುರ, ಕೆಂಗೇರಿ, ಧರ್ಮಸ್ಥಳ, ಬೆಂಗಳೂರಿನಲ್ಲಿ ಅನೇಕ ಕಡೆ ಇವರ ದೇವಾಲಯಗಳ ಚಿತ್ರಪ್ರದರ್ಶನವೂ ಪ್ರದರ್ಶಿತವಾಗಿ ವಿದ್ವಾಂಸರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles