ರಂಭಾಪುರಿ ಪೀಠ (ಬಾಳೆಹೊನ್ನೂರು) :
ಜಗದಗಲ ಮುಗಿಲಗಲ ತುಂಬಿದ ಶಿವನ ಮಹಿಮ ಅಪಾರ. ಸತ್ಯ ಸ್ವರೂಪರಾದ ಶಾಂತರೂಪಿ ಶಿವನು ತಾಪತ್ರಯ ಪರಿಹಾರಕ. ಭಜಿಸುವ ಭಕ್ತರ ಪಾಲಿಗೆ ಕಾಮಧೇನು ಕಲ್ಪವೃಕ್ಷ. ಮಹಾಶಿವರಾತ್ರಿಯಂದು ಎಲ್ಲೆಡೆ ಶಿವನನ್ನು ಪೂಜಿಸಿ ಪುಣ್ಯ ಫಲವನ್ನು ಸಂಪಾದಿಸಿಕೊಳ್ಳುವರೆ0ದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಮಾರ್ಚ್ 11 ರಂದು ಮಹಾಶಿವರಾತ್ರಿ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ನೆರವೇರಿಸಿ ಆಶೀರ್ವಚನ ನೀಡಿದರು.
ಮಹಾಶಿವರಾತ್ರಿ ಶಿವನಿಗೆ ಪ್ರಿಯವಾದ ದಿನ. ಶಿವನೊಲುಮೆಗಾಗಿ ರುದ್ರಾಭಿಷೇಕ ಬಿಲ್ವಾರ್ಚನೆ ನೆರವೇರಿಸಿ ಶಿವಧ್ಯಾನ ಮಾಡುವ ಹಬ್ಬ ಶಿವರಾತ್ರಿ. ಶಿವನನ್ನು ಪೂಜಿಸಿದರೆ ಸಕಲ ದೇವಾನು ದೇವತೆಗಳನ್ನು ಪೂಜಿಸಿದ ಪುಣ್ಯ ಫಲ ಪ್ರಾಪ್ತವಾಗುತ್ತದೆ. ಶಿವತಪಸ್ಸು, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಮೂಲಕ ಶಿವನನ್ನು ಆರಾಧಿಸಬೇಕೆಂದು ವೀರಶೈವ ಧರ್ಮ ಸಿದ್ಧಾಂತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅಗಮ್ಯ ಅಗೋಚರ ಅಪ್ರತಿಮವಾದ ಭಗವಂತ ಭಕ್ತನ ಉದ್ಧಾರಕ್ಕಾಗಿ ಕರದಲ್ಲಿ ಕರದಿಷ್ಟಲಿಂಗವಾಗಿ ಪೂಜೆಗೊಳ್ಳುತ್ತಾನೆ. ಸಪ್ತ ಕೋಟಿ ಮಹಾ ಮಂತ್ರಗಳಲ್ಲಿ ಅತ್ಯಂತ ಸರ್ವ ಶ್ರೇಷ್ಠವಾದ ಶಿವ ಪಂಚಾಕ್ಷರಿ ಮಂತ್ರ ಪಠಿಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ನಾಡಿನೆಲ್ಲೆಡೆಯಲ್ಲಿರುವ ಶಿವಾಲಯಗಳಲ್ಲಿ ಮಹಾಶಿವರಾತ್ರಿಯಂದು ಲಿಂಗರೂಪಿ ಶಿವನನ್ನು ಪೂಜಿಸಿ ಕೃತಾರ್ಥರಾಗುತ್ತಾರೆ ಎಂದರು.
ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಅಭಿಷೇಕ ಬಿಲ್ವಾರ್ಚನೆ ಮಹಾಪೂಜೆ ನೆರವೇರಿಸಲಾಯಿತು. ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಧನ್ಯರಾದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು