ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪುರೋಹಿತ ನಾಗರಾಜ ಭಟ್ ಸಂಚಾಲಕತ್ವದ ಶ್ರೀ ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ವಿಂಶತಿ ವರ್ಷದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವೇ|ಮೂ| ಅಭಿರಾಮ ಶರ್ಮಾ ಸರಳಿಕುಂಜ ಅವರು ಶಿಬಿರದ ವಿಶೇಷತೆ ಏನಿತ್ತು ಎಂಬುದರ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.
“ಲೋಕೋ ಭಿನ್ನ ರುಚಿಃ’ ಎಂಬಂತೆ ಭಿನ್ನ ಭಿನ್ನ ಆಲೋಚನೆಗಳ ನಡುವೆ, ತಾನು ಕಲಿತ, ನಮ್ಮ ಸಮಾಜದ ಬೆನ್ನೆಲುಬಾದ, ಆರ್ಷ ಪರಂಪರೆಯಿಂದ ವಾಹಿನಿಯಾಗಿ ಹರಿಯುತ್ತಾ ಬಂದ ವೇದ ಸಾಗರದ ಪರಿಚಯವನ್ನು ಲೋಕಕ್ಕೆ ನೀಡುವ ಉದ್ದೇಶದಿಂದ ಗುರು ಹಿರಿಯರ ಆಶಯದಂತೆ ಪುರೋಹಿತ ನಾಗರಾಜ ಭಟ್ಟರು ನೆಟ್ಟ ಗಿಡ ಶ್ರೀ ಕೇಶವ ಕೃಪಾ ವೇದ ಮತ್ತುಕಲಾ ಪ್ರತಿಷ್ಠಾನ. ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವಂತಹ ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಸಂತ ಶಿಬಿರ ಇಂದು ಲೋಕವಿಖ್ಯಾತ.
2000 ನೇ ಇಸವಿಯಲ್ಲಿ ನೆಟ್ಟಂತಹ ಈ ಸಸಿ ಇಂದು ಮಾಗಿದ ಫಲ ನೀಡುವ ವೃಕ್ಷವಾಗಿದೆ. ಇಪ್ಪತ್ತರ ಹರೆಯಕ್ಕೆ ಕಾಲಿಟ್ಟ ಶಿಬಿರ, ಈ ವರ್ಷ ಬಹಳ ಅದ್ದೂರಿಯಾಗಿ ನಡೆಯಬೇಕಿದ್ದ ಕಲ್ಪನೆ ಚೀನೋತ್ಪಾದಿತ ಪಿಡುಗು ಇಲ್ಲವಾಗಿಸುತ್ತದೆ ಎಂಬ ಕೊರಗಿನಲ್ಲಿರುವಾಗಲೇ ನಾಗರಾಜ ಭಟ್ಟರಲ್ಲಿ ಉದಿಸಿದ ಶ್ರೇಷ್ಠ ಕಲ್ಪನೆಗೆ ಮೂರ್ತ ರೂಪ ಕೊಟ್ಟಾಗ ನಡೆದದ್ದೇ ವಿಂಶತಿಯ ಸಾರ್ಥಕ ಶಿಬಿರ. ಅದುವೇ ಗಣಪತಿ ಹವನ ಹಾಗೂ ದುರ್ಗಾಪೂಜೆ ಮಂತ್ರ ಮತ್ತು ಪ್ರಯೋಗ ಪಾಠ.
“ಯಜ್ಞೋ ಹಿ ಶ್ರೇಷ್ಠತಮಂ ಕರ್ಮ’ ಎಂಬ ವೇದವಾಕ್ಯದಂತೆ ಆರ್ಷ ಪರಂಪರೆಯಲ್ಲಿ ಅಗ್ನಿಯ ಆರಾಧನೆ ಪ್ರಮುಖವಾದುದು. ಆದಿವಂದಿತನಾದ ಗಣಪನಿಗೆ ಹವ್ಯವಾಹನನ ಮೂಲಕ ಮಂತ್ರಪೂತವಾದ ಹವಿಸ್ಸಿನ ಸಮರ್ಪಣೆ ಬಹಳ ಶ್ರೇಷ್ಠವಾದ ವೈದಿಕ ಕರ್ಮ. ಈ ಮೂಲಭೂತ ಚಿಂತನೆಯನ್ನು ನವಪೀಳಿಗೆಯಲ್ಲಿ ಬೆಳೆಸುವ ಪ್ರಯತ್ನವಾಗಿ ವಿದ್ಯಾರ್ಥಿಗಳ ಮನೆಗಳನ್ನೇ ಶಿಬಿರಗಳನ್ನಾಗಿಸಿ, ಹವನಕ್ಕೆ ಸಂಬಂಧಿತ ಮಂತ್ರಗಳನ್ನೂ, ತತ್ಸಂಭಧಿತವಾದ ಪ್ರಯೋಗ ಪಾಠಗಳನ್ನು ಹಂತಹಂತವಾಗಿ ಕಲಿಸುತ್ತಾ, ಕಂಠಸ್ಥಗೊಳಿಸುತ್ತಾ, ಸ್ವತಃ ವಿದ್ಯಾರ್ಥಿಗಳೇ ಹವನ ಮಾಡುವ ಸಾಮಥ್ರ್ಯ ಹೊಂದಿದ್ದು ಶಿಬಿರದ ಹೆಚ್ಚುಗಾರಿಕೆ.
ಇದರೊಂದಿಗೆ ಜಗನ್ಮಾತೆ ದುರ್ಗೆಯ ಸಂಬಂಧಿತ, ಅತ್ಯಂತ ಶ್ರೇಷ್ಠ “ಸಪ್ತಶತೀ’ ಅಥವಾ “ದೇವೀ ಮಹಾತ್ಮೆ’ ಹಾಗೂ ದುರ್ಗಾಪೂಜೆಯ ಪಾಠಗಳೂ ಸಂಪನ್ನಗೊಂಡಿದೆ.
“ಕಲೌ ದುರ್ಗಾ ವಿನಾಯಕೌ‘ ಎಂಬ ವಾಕ್ಯ ಇಲ್ಲಿ ಅರ್ಥಗರ್ಭಿತವಾಗುತ್ತದೆ. ಕಲಿಯುಗದ ಶೀಘ್ರ ಫಲದಾಯಕ ದೇವತೆಗಳಾದ ದುರ್ಗೆ, ಗಣಪತಿಯ ಆರಾಧನೆಯು ಪರಿಪೂರ್ಣವಾಗಿ ಈ ಶಿಬಿರದಲ್ಲಿ ಮಿಳಿತಗೊಂಡಿದೆ. ಶ್ರೀ ಕೇಶವ ಕೃಪಾದ ಮೂಲ ಗುರುತಾದ ಉಚ್ಚ ಸ್ವರದಲ್ಲಿ ಸ್ಪಷ್ಟವಾದ ಮಂತ್ರ ಉಚ್ಚಾರಣೆ, ಶಾರೀರಿಕ ಹಾಗೂ ಪೂಜಾ ಸ್ಥಳ, ಪರಿಕರ, ದ್ರವ್ಯಗಳ ಸ್ವಚ್ಛತೆ, ಅಚ್ಚುಕಟ್ಟುತನ, ಸೃಜನಶೀಲತೆ, ವಿಧೇಯತೆ ಶಿಬಿರಕ್ಕೆ ಇನ್ನಷ್ಟು ಮೆರುಗು ತುಂಬಿದೆ. ವಿದ್ಯಾರ್ಥಿಗಳು ಹಾಗೂ ಅವರ ಮನೆಯವರ ಆಸಕ್ತಿ, ಸ್ಪಂದನೆ
ಅಲ್ಲದೇ ಪುರೋಹಿತರಂತೆಯೇ ವಿದ್ಯಾರ್ಥಿಗಳು ಪೂಜಾಕೈಂಕರ್ಯ ನಡೆಸುವ ಪರಿ ನಾಗರಾಜ ಭಟ್ಟರು ಈ ಕಾರ್ಯದಲ್ಲಿ ವಹಿಸಿದ ಶ್ರದ್ಧೆಗೆ ಹಿಡಿದ ಕೈಗನ್ನಡಿ ಹೇಗೆಯೋ ಹಾಗೆಯೇ ವಿದ್ಯಾರ್ಥಿಗಳ ಪೂಜಾನಿರ್ವಹಣೆಯನ್ನು ನೋಡುತ್ತಾ ನಾಗರಾಜ ಭಟ್ಟರ, ವಿದ್ಯಾರ್ಥಿಗಳ ಹಿರಿಯರ ಕಣ್ಣಲ್ಲಿ ಕಾಣುವ ಸಂತೃಪ್ತಿ, ಶಿಬಿರದ ಸಾರ್ಥಕತೆಯನ್ನು ಬಿಂಬಿಸುತ್ತದೆ.
ಸಪ್ತಶತಿಯಲ್ಲಿ ಶ್ರೀ ದೇವಿ ನುಡಿದಂತೆ “ಮಮ ಸನ್ನಿಧಿಕಾರಕಮ್’ ಎಂಬಂತೆ, ವಿದ್ಯಾರ್ಥಿಗಳು ಸತತವಾಗಿ ನಡೆಸುತ್ತಿರುವ ಗಣಪತಿಹೋಮ, ಸಪ್ತಶತೀ ಪಾರಾಯಣ ಸಹಿತ ದುರ್ಗಾಪೂಜೆಯು ಧರಿತ್ರಿಯಲ್ಲಿ ಭಗವಚ್ಚೈತನ್ಯವನ್ನು ಪುಷ್ಟಿಗೊಳಿಸುವುದೆಂಬುದು ನಿಸ್ಸಂದೇಹ.
ಕೊರೋನಾ ಭೀತಿಯಿಂದ ತತ್ತರಿಸಿದ ಲೋಕದ ಕ್ಷೇಮಕ್ಕೆ, ಸನಾತನ ಧರ್ಮದ ಮೂಲ ಆಶಯವಾದ “ಲೋಕಾಃ ಸಮಸ್ತಾ ಸುಖಿನೋ ಭವಂತು’ ಎಂದು ಪ್ರತೀ ಗಣಪತಿ ಹವನ, ದುರ್ಗಾಪೂಜೆಗಳಲ್ಲಿ ಸಂಪ್ರಾರ್ಥಿಸುತ್ತಾ, ಸರ್ವದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಛತಿ’ ಎಂಬಂತೆ ಎಲ್ಲವನ್ನು ಶ್ರೀ ಕೇಶವನ ಪದತಲಕ್ಕೆ ಅರ್ಪಿಸಿದ ಧನ್ಯತಾಭಾವ ಕೇಶವ ಕೃಪಾ ಬಳಗದಲ್ಲಿಕಂಗೊಳಿಸುತ್ತಿದೆ.
ಒಟ್ಟಿನಲ್ಲಿ ಅನೂಚಾನ, ಅವಿಚ್ಛಿನ್ನವಾಗಿ ನಡೆದು ಬಂದಂತಹ ಶ್ರೀ ಕೇಶವ ಕೃಪಾ ವಸಂತ ವೇದ ಶಿಬಿರಕ್ಕೆ, ತನ್ನ ಇಪ್ಪತ್ತನೆಯ ವರ್ಷವು ಕಲಶಪ್ರಾಯವಾಗಿ ಅವಿಸ್ಮರಣೀಯ “ವಿಂಶತಿಯ ವಿಶಿಷ್ಟ ಸಾರ್ಥಕ’ ಶಿಬಿರವಾಯಿತು.