ಶ್ರೀ ರಾಘವೇಂದ್ರ ಸ್ವಾಮಿಗಳ 426 ವರ್ಧಂತ್ಯುತ್ಸವದ ಅಂಗವಾಗಿ ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ಎರಡನೇ ಮಂತ್ರಾಲಯವೆಂದೇ ಪ್ರಖ್ಯಾತ ಪಡೆದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಆಚಾರ್ಯರ ಹಾಗೂ ಜಿ.ಕೆ ಆಚಾರ್ಯರ ನೇತೃತ್ವದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣದಿಂದ ಫಲಪಂಚಾಮೃತಾಭಿಷೇಕ ನೆರವೇರಿತು.
ತದನಂತರ ಪವಮಾನ ಹೋಮದ ಪೂರ್ಣಾಹುತಿ, ಉತ್ಸವಗಳು ಪಾದಪೂಜೆ, ಕನಕಾಭಿಷೇಕ ನೆರವೇರಿತು. ಶ್ರೀಮಠದ ಆಹ್ವಾನದ ಮೇರೆಗೆ ಉಡುಪಿಯ ಪೇಜಾವರ ಮಠದ ಶ್ರೀ 108 ಶ್ರೀ ವಿಶ್ವಪ್ರಸನ್ನತೀರ್ಥ- ಶ್ರೀಪಾದರೂ ಶ್ರೀಮಠಕ್ಕೆ ಆಗಮಿಸಿ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಶ್ರೀ ರಾಘವೇಂದ್ರಸ್ವಾಮಿಗಳವರ ಬೃಂದಾವನಕ್ಕೆ-ವಿಶೇಷವಾಗಿ ವಿಷ್ಣುಸಹಸ್ರನಾಮ, ವೆಂಕಟೇಶ ಸ್ತೋತ್ರ, ಶ್ರೀಹರಿ-ವಾಯುಸ್ತುತಿ, ಶ್ರೀ ರಾಘವೇಂದ್ರ ಅಷ್ಟೋತ್ತರ ಸ್ತೋತ್ರ ಪಾರಾಯಣದಿಂದ ನಾನಾವಿಧವಾದ ಪುಷ್ಪಗಳಿಂದ “ಲಕ್ಷ ಪುಷ್ಪಾರ್ಚನೆ”ಯನ್ನೂ ನೆರವೇರಿಸಿದರು. ಶ್ರೀ ಗುರುರಾಯರ ಮಹಿಮೆಯನ್ನು ತಿಳಿಸಿ ಭಕ್ತರನ್ನು ಅನುಗ್ರಹಿಸಿದರು.
ತದನಂತರ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ 7-ಕ್ಕೆ ವಿದ್ವಾನ್ ವಿ, ವಿವೇಕ್ ಕೃಷ್ಣ ಅವರಿಂದ “ಕೊಳಲುವಾದನ” ಕಾರ್ಯಕ್ರಮದೊಂದಿಗೆ ಶ್ರೀ ಗುರುರಾಯರ 426 ವರ್ಧಂತಿ ಮಹೋತ್ಸವವು ಸಮಾಪ್ತಿಯಾಯಿತು,ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಗುರುರಾಯರ ದರ್ಶನಪಡೆದು ಅನುಗ್ರಹಕ್ಕೆ ಪಾತ್ರರಾದರು ಎಂದು ಕಿಶೋರ್ ಆಚಾರ್ಯ ತಿಳಿಸಿದರು ಈ ಸಂದರ್ಭದಲ್ಲಿ ಚಿತ್ರನಟಿ-ಪ್ರೇಮಾ,ಚಿತ್ರನಟ ದೀಪಕ್ ಹಾಗೂ ಹಲವಾರು ಗಣ್ಯರು ಆಗಮಿಸಿ ಶ್ರೀಗುರು- ರಾಯರ ದರ್ಶನದೊಂದಿಗೆ ಅನುಗ್ರಹ ಪಡೆದರು , ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಆಚಾರ್ಯರು ಭಕ್ತರಿಗೆ ಅಚ್ಚುಕಟ್ಟಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದರು.