ಪಲ್ಲವ ಶೈಲಿ ನೆನಪಿಸುವ ಗಂಗಾವರದ ಸೋಮೇಶ್ವರ

*ಶ್ರೀನಿವಾಸ ಮೂರ್ತಿ ಎನ್ ಎಸ್

ಶ್ರೀನಿವಾಸ ಮೂರ್ತಿ ಎನ್ ಎಸ್

ರಾಜ್ಯದ ದೇವಾಲಯಗಳ ಪರಂಪರೆಯಲ್ಲಿ ಹಲವು ಅರಸು ಮನೆತನದವರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಆದರೆ ರಾಜ್ಯದ ಗಡಿ ಭಾಗಗಳಲ್ಲಿ ಅದರಲ್ಲು ಬೆಂಗಳೂರು ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಚೋಳರ ಪ್ರಭಾವ ಸಾಕಷ್ಟು ಇದ್ದು ಅವರ ಹಲವು ದೇವಾಲಯಗಳು ಇವೆ. ಆದರೆ ಪಲ್ಲವರ ಶೈಲಿಯನ್ನು ನೆನಪಿಸುವ ಅಪರೂಪದ ದೇವಾಲಯವೊಂದು ದೇವನಹಳ್ಳಿ ತಾಲ್ಲೂಕಿನ ಗಂಗಾವರದಲ್ಲಿದೆ.

ಇತಿಹಾಸ ಪುಟದಲ್ಲಿ ಗಂಗಾವರವನ್ನು ಗಂಗಪುರವೆಂದು ಕರೆಯಲಾಗಿದೆ. ಇಲ್ಲಿನ ಲಭ್ಯವಿರುವ ಶಾಸನಗಳಲ್ಲಿಯೂ ಗಂಗಪುರದ ಉಲ್ಲೇಖವನ್ನು ನೋಡಬಹುದು. ಆ ಕಾಲದಲ್ಲಿ ಇಲ್ಲಿನ ಸುತ್ತಲಿನ ಪರಿಸರದಲ್ಲಿ ಗಂಗರ ಕಾಲದ ಸಾಕಷ್ಟು ದೇವಾಲಯಗಳ ನಿರ್ಮಾಣದ ಕುರುಹಗಳನ್ನು ನೋಡಬಹುದು. ಇಲ್ಲಿನ 11 ಮತ್ತು 13 ನೇ ಶತಮಾನದಲ್ಲಿರುವ ಶಾಸನಗಳು ಗಂಗಪುರವೆಂದೇ ಉಲ್ಲೇಖಿಸಿದೆ.

ಊರಿನಲ್ಲಿ ಪೂರ್ವಾಭಿಮುಖವಾಗಿರುವ ಈ ದೇವಾಲಯ ಮೂಲತಹ ಗಂಗರ ಕಾಲದ್ದು ನಂತರ
ಚೋಳರ ಕಾಲದಲ್ಲಿ ನವೀಕರಣಗೊಂಡಿದೆ. ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ
ಇದ್ದು ಗರ್ಭಗುಡಿಯಲ್ಲಿ ಸೋಮೇಶ್ವರ ಎಂದು ಕರೆಯುವ ಶಿವಲಿಂಗವಿದೆ. ದೇವಾಲಯವನ್ನು ಈಗ
ನವೀಕರಿಸಲಾಗಿದ್ದು ದೇವಾಲಯ ಒಳ ಭಾಗ ಹೊರತು ಪಡಿಸಿ ಹೊರಭಾಗದಲ್ಲಿ ಸಾಕಷ್ಟು ಆಧುನಿಕ
ಸ್ಪರ್ಶ ಪಡೆದಿದೆ. ಅಂತರಾಳದ ಎದುರಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿ ಸ್ಥಾಪಿಸಲಾಗಿದೆ.

ನವರಂಗದಲ್ಲಿ ಸುಮಾರು 12 ಕಂಭಗಳಿದ್ದು ಬಹುತೇಕ ಗಂಗರ ಕಾಲದ ನಿರ್ಮಾಣದ ಕಂಭಗಳು.
ಇನ್ನೊಂದು ಗರ್ಭಗುಡಿಯಲ್ಲಿ ಪಾರ್ವತಿ ದೇವರನ್ನು ಸ್ಥಾಪಿಸಲಾಗಿದ್ದು ಇಲ್ಲಿನ ದೇವ
ಕೋಷ್ಟಕಗಳಲ್ಲಿ ಗಣಪತಿ ಶಿಲ್ಪ ನೋಡಬಹುದು. ಪ್ರಮುಖವಾಗಿ ಇಲ್ಲಿನ ದೇವಾಲಯವನ್ನು
ಗೋಪುರವನ್ನ ದಾಟಿ ಬಂದರೆ ಕಾಣುವ ಪಲ್ಲವ ಶೈಲಿಯ ಸಿಂಹ ಮುಖದ ಕಂಭಗಳು. ಇತಿಹಾಸ
ತಜ್ಞರಾದ ದೇವಕೊಂಡರೆಡ್ಡಿಯವರು ಇದು ಪಲ್ಲವರ ಕಂಭಗಳಲ್ಲ ಹಾಗೂ ಅವರ ಪ್ರಭಾವದಿಂದ
ರೂಪಿತಗೊಂಡ ಗಂಗರ ಕಾಲದ ನಿರ್ಮಾಣವೆಂದೇ ಅಭಿಪ್ರಾಯ ಪಡುತ್ತಾರೆ.

ದೇವಾಲಯಕ್ಕೆ ಹೊಸದಾಗಿ ಚಿಕ್ಕದಾದ ನವೀಕೃತ ಗೊಪುರ ನಿರ್ಮಾಣವಾಗಿದೆ. ದೇವಾಲಯ
ವಿಶಾಲವಾದ ಆವರಣವನ್ನು ಹೊಂದಿದ್ದು ಇಲ್ಲಿನ ದೇವ ಕೋಷ್ಟಕಗಳಲ್ಲಿ ಸೂರ್ಯ, ಭೈರವ,
ಕಾರ್ತಿಕೇಯ ಸೇರಿದಂತೆ ಹಲವು ದೇವರ ಶಿಲ್ಪಗಳಿವೆ ಹಾಗು ದೊಡ್ಡದಾದ ನಂದಿಯಿದೆ. ಎರಡೂ
ದೇವಾಲಯಕ್ಕೆ ಹೊಸದಾಗಿ ನಿರ್ಮಾಣವಾದ ಶಿಖರವಿದೆ. ದೇವಾಲಯದ ಹೊರಭಿತ್ತಿಯಲ್ಲಿ ಚೋಳರ
ಕಾಲದ ತಮಿಳು ಶಾಸನ ನೋಡಬಹುದು. ಊರಿನಲ್ಲಿನ ದುರ್ಗೆಯ ಶಿಲ್ಪ ಗಮನ ಸೆಳೆಯುತ್ತದೆ.

ತಲುಪುವ ಬಗೆ: ದೇವನಹಳ್ಳಿಯಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು ಚೌಡೇನಹಳ್ಳಿಯ
ಸಮೀಪದಲ್ಲಿದೆ. ಇಲ್ಲಿನ ಹೊಸ ದೇವಾಲಯದಲ್ಲಿನ ಪುರಾತನ ತಬ್ಬುಲಿಂಗೇಶ್ವರ (ಗಂಗರ ಕಾಲದ)
ನೋಡಿ ಹೋಗಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles