ಹರವಿನಲ್ಲಿ ಅರಳಿದ ಕಲಾತ್ಮಕ ಶ್ರೀರಾಮ ದೇವಾಲಯ

ಏಪ್ರಿಲ್ 21 ಶ್ರೀ ರಾಮನವಮಿ. ಈ ಸಂದರ್ಭದಲ್ಲಿ ಶ್ರೀರಾಮನ ಪುರಾತನ ದೇಗುಲಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಂಡ್ಯದ ಹರವು ಶ್ರೀರಾಮ ದೇವರ ದೇಗುಲವನ್ನು ಪರಿಚಯಿಸಿದ್ದಾರೆ ಲೇಖಕರಾದ ಶ್ರೀನಿವಾಸ ಮೂರ್ತಿ ಎನ್.ಎಸ್. ಅವರು.

ಮಂಡ್ಯ ಜಿಲ್ಲೆಯೆಂದರೆ ನಮಗೆ ನೆನಪಾಗುವುದು ಹೊಯ್ಸಳರ ಅಸಂಖ್ಯ ದೇವಾಲಯಗಳು. ಇದಲ್ಲದೇ ಇತರ ಅರಸರ ದೇವಾಲಯಗಳು ಅಲ್ಲಲ್ಲಿ ಕಾಣ ಸಿಗುತ್ತದೆ.  ಇವುಗಳಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಮೇಲುಕೋಟೆ ಹಾಗು ತೊಣ್ಣೂರಿನ ದೇವಾಲಯಗಳು ಪ್ರಮುಖವಾದವು.  ಆದರೆ ವಿಜಯನಗರ ಕಾಲದಲ್ಲಿಯೇ ನಿರ್ಮಾಣವಾದರೂ ಅಷ್ಟಾಗಿ ಪ್ರಚಾರ ಸಿಗದ ಸುಂದರ ದೇವಾಲಯವೆಂದರೆ ಪಾಂಡವಪುರದ ಹತ್ತಿರದ ಹರವು ಗ್ರಾಮದಲ್ಲಿನ ರಾಮ ದೇವಾಲಯ. ವಿಜಯನಗರ ಪೂರ್ವದಲ್ಲಿ ವಿರಳವಾಗಿದ್ದ ರಾಮನ ದೇವಾಲಯಗಳು ಇವರ ಕಾಲದಲ್ಲಿ ಸಾಕಷ್ಟು ನಿರ್ಮಾಣಗೊಂಡವು. 

ಇತಿಹಾಸ ಪುಟದಲ್ಲಿ ಹರವು ಎಂಬ ಉಲ್ಲೇಖವಿದೆ. ಬಹುಷಹ ಕಾವೇರಿ ನದಿಯ ವಿಸ್ತಾರ ಪ್ರದೇಶದಲ್ಲಿ ಇದ್ದ ವ್ಯಾಪಾರ ಕೇಂದ್ರವಾದ ಕಾರಣ ಈ ಹೆಸರು ಬಂದಿರಬಹುದು ಎಂಬ ನಂಬಿಕೆ ಇದೆ. ಮೈಸೂರು ಅರಸರ ಕಾಲದಲ್ಲಿ ನಾಲೆ ಇಲ್ಲಿ ಹಾದು ಹೋದ ಕಾರಣ ಊರು ದೇವಾಲಯದ ಪಕ್ಕದಲ್ಲಿ ವಿಸ್ತಾರಗೊಂಡಿದೆ.  13 ನೇ ಶತಮಾನದ ಶಾಸನದಲ್ಲಿ ದೇವಾಲಯ ನಿರ್ಮಾಣದ ಉಲ್ಲೇಖವಿದ್ದರೆ, 15 ನೇ ಶತಮಾನದ ಶಾಸನದಲ್ಲಿ ಇಲ್ಲಿ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು.

ಮೂಲತಹ ಈ ದೇವಾಲಯವನ್ನು ಸುಮಾರು 13 ನೇ ಶತಮಾನದಲ್ಲಿ ವೀರಬುಕ್ಕಣ್ಣನ ಕಾಲದಲ್ಲಿ ನಿರ್ಮಾಣಗೊಂಡಿದ್ದು ವಿಸ್ತಾರವಾಗಿದೆ. ದೇವಾಲಯ ಗರ್ಭಗುಡಿ, ಅಂತರಾಳ, ಅಲಿಂದ್ರ, ನವರಂಗ, ಮುಖಮಂಟಪ, ವಿಶಾಲವಾದ ಹಜಾರ ಹಾಗು ಪ್ರವೇಶದ್ವಾರವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಈಗ ನೂತನವಾಗಿ ಪ್ರತಿಷ್ಠಾಪಿಸಿದ ಶ್ರೀ ರಾಮ, ಸೀತಾ, ಲಕ್ಷಣ ಹಾಗೂ ಆಂಜನೇಯನ ಶಿಲ್ಪಗಳು ದೇವಾಲಯಕ್ಕೆ ಕಲಶಪ್ರಾಯದಂತಿದೆ. ಈ ಮೊದಲು ಇದ್ದ ಮೂಲ ವಿಗ್ರಹಗಳು ಕಾಣೆಯಾದದ ಕೆಲ ಕಾಲ ಶ್ರೀ ಲಕ್ಶ್ಮೀನಾರಾಯಣ, ಶ್ರೀದೇವಿ ಹಾಗೂ ಭೂದೇವಿಯ ಇರಿಸಲಾಗಿತ್ತು. ಈಗ ಈ ಮೂರ್ತಿಗಳನ್ನು ದೇವಾಲಯದ ಆವರಣದಲ್ಲಿ ಇರಿಸಲಾಗಿದೆ. ಪ್ರವೇಶದ್ವಾರದಲ್ಲಿ ಜಯ ವಿಜಯರ ಪ್ರತಿಮೆ ಇದೆ.  ಆದರೆ ಇಲ್ಲಿನ ರಾಮನ ಉತ್ಸವ ಮೂರ್ತಿಗಳು ಸುಂದರವಾಗಿದೆ. ಈಗ ಇರುವ  ಗರ್ಭಗುಡಿಯ ಸುತ್ತ  ಕಂಭಗಳಿರುವ ಅಲಿಂದ್ರವಿದ್ದು ಗರ್ಭಗುಡಿಯ ಉತ್ತರಕ್ಕೆ ಇರುವ ಸಿಂಹವಕ್ತ್ರ ಶೈಲಿಯ ಪ್ರನಾಳ ನೋಡಲೇ ಬೇಕಾದ ಕೆತ್ತನೆ. ಏಕಶಿಲಾಕೄತಿಯ ಮುಷ್ಟಿಕೆ ಹಾಗು ಅದರಲ್ಲಿನ ಅಷ್ಟದಿಕ್ಪಾಲಕರ ಕೆತ್ತನೆ ಅತ್ಯಂತ ಕಲಾತ್ಮಕವಾಗಿದೆ.

ನವರಂಗ ವಿಸ್ತಾರವಾಗಿದ್ದು ಸುಮಾರು 36 ಕಂಭಗಳಿದ್ದು ವಿಜಯನಗರ ಶೈಲಿಯನ್ನ ನೆನಪಿಸುತ್ತದೆ. ಮುಖಮಂಟಪದಲ್ಲಿ ಸುಮಾರು 78 ಕಂಭಗಳಿದ್ದು ದೇವಾಲಯ ವಿಸ್ತಾರವಾಗಿ ಕಾಣ ಬರುವಂತೆ ಮಾಡಿದೆ. ಇಲ್ಲಿನ ಕಂಭಗಳಲ್ಲಿ ದೀಪ ಹಚ್ಚಲು ದೀಪಾಕೄತಿಯನ್ನ ಮಾಡಲಾಗಿದೆ. ಇದರ ಜೊತೆಯಲ್ಲಿ ಎರಡು ಅರ್ಧ ಮಂಟಪಗಳನ್ನ ನೋಡಬಹುದು.  ದೇವಾಲಯದ ಮುಂಭಾಗದಲ್ಲಿ ಬೃಹತ್ ಗಾತ್ರದ 30 ಅಡಿ ಎತ್ತರದ ಗರುಡಗಂಭವಿದೆ. ಇಲ್ಲಿ ಗರುಡ (ಪಶ್ಚಿಮ), ಶಂಖಚಕ್ರ (ಪೂರ್ವ), ಸಿಂಹ (ಉತ್ತರ) ಹಾಗು ಆಂಜನೇಯ (ದಕ್ಷಿಣ) ನ ಕೆತ್ತನೆ ಇದೆ.  ಗರುಡ ಗಂಭದ ಸಮೀಪದಲ್ಲಿ ಓಕುಳಿ ಗುಂಡಿ ನೋಡಬಹುದು.

ವಿನಾಶದ ಹಾದಿಯಲ್ಲಿ ಸಾಗಿದ ಈ ದೇವಾಲಯವನ್ನು ಸುಮಾರು 1997 ರಲ್ಲಿ ನವೀಕರಣ ಮಾಡಲಾಗಿದ್ದು ಸುಂದರವಾಗಿ ನಿರ್ವಹಣೆ ಮಾಡಲಾಗಿದೆ.  ದೇವಾಲಯದ ಪುನುರುತ್ಥಾನಕ್ಕೆ ಇಲ್ಲಿನ ಹರವು ದೇವೇಗೌಡ ಮತ್ತು ಅವರ ತಂಡದ ಪರಿಶ್ರಮ ನೆನೆಯಬೇಕಾದದ್ದು. ಜಲಾಶಯಕ್ಕೆ ಹೋಗುವ ಪ್ರವಾಸಿಗರು ಈ ದೇವಾಲಯಕ್ಕೆ ಹೋದಲ್ಲಿ ಪುರಾತನ ಕೊಂಡಿಯ ಪರಿಚಯವಾದಂತಾಗುತ್ತದೆ.

ತಲುಪುವ ಬಗೆ: ಹರವು ಮೈಸೂರಿನಿಂದ ಸುಮಾರು 27 ಕಿ.ಮೀ, ಶ್ರೀ ರಂಗಪಟ್ಟಣದಿಂದ 12 ಕಿ.ಮೀ, ಪಾಂಡವಪುರದಿಂದ ಸುಮಾರು 7 ಕಿ.ಮೀ ಹಾಗು ಕೆ ಆರ್ ಎಸ್ ಜಲಾಶಯದಿಂದ 6 ಕಿ ಮೀ ದೂರದಲ್ಲಿದೆ.  ದೇವಾಲಯದ ದರ್ಶನಕ್ಕೆ 94816 75575 (ಹರವು ದೇವೇಗೌಡ) ಅಥವಾ ಶ್ರೀ ಪುಟ್ಟರಾಮೇಗೌಡ (78295 74515) ಸಂಪರ್ಕಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles