ಉಡುಪಿ: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ಶ್ರೀಪಾದರ ಅಕಾಲಿಕ ನಿಧನರಾಗಿ ಮೂರು ವರ್ಷಗಳ ಬಳಿಕ ಶಿರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ ಎಂದು ಸೋದೆ ಮಠದ ಸ್ವಾಮೀಜಿ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ತಿಳಿಸಿದರು.
ಅವರು ಮಂಗಳವಾರ ಹಿರಿಯಡ್ಕ ಬಳಿಯ ಶಿರೂರು ಮೂಲ ಮಠದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘‘ ಬೆಳ್ತಂಗಡಿ ಮೂಲದ ಡಾ. ಎಂ.ಉದಯ ಕುಮಾರ್ ಸರಳತ್ತಾಯ ಅವರ ಪುತ್ರ ಅನಿರುದ್ಧ ಎಂಬ ವಟುವನ್ನು ನೂತನ ಉತ್ತಾರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಶೀರೂರು ಮಠದ ಪರಂಪರೆಯ 31ನೇ ಯತಿಗಳಾಗಲಿದ್ದಾರೆ. ಸನ್ಯಾಸ ದೀಕ್ಷೆ, ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕಕ್ಕೆ ಸಂಬಂಧಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಿರಸಿ ಬಳಿಯ ಸೋಂದಾದಲ್ಲಿ ಮೇ 11 ರಂದು ಆರಂಭಗೊಳ್ಳಲಿದ್ದು, ಮೇ14 ರಂದು ದೀಕ್ಷೆ, ಪಟ್ಟಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.
ಅನಿರುದ್ಧ್ ಸೋಂದೆಯಲ್ಲಿ ಉತ್ತಾರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಂದೆಯಲ್ಲಿ ಉನ್ನತ ಅಧ್ಯಯನ ಮಾಡಲಾಗುತ್ತದೆ. ಇದಕ್ಕಾಗಿ ವಿದ್ವಾಂಸರನ್ನು ನೇಮಕ ಮಾಡಲಾಗುತ್ತದೆ. ಮತ್ತು ವಿವಿಧ ಮಠಾಧೀಶರು ಪಾಠ-ಪ್ರವಚನ ಮಾಡಲಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಶಿರೂರು ಮಠದ ಪರ್ಯಾಯ ನಡೆಯಲಿದ್ದು, ಈ ವೇಳೆ ಅನಿರುದ್ಧನಿಗೆ ಒಂದು ಹಂತದ ಶಿಕ್ಷಣ ಪೂರ್ಣಗೊಳ್ಳಲಿದೆ.
ಶಿರೂರು ಮಠಾಧೀಶರಾಗಿದ್ದ ಶ್ರೀ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು 2018ರ ಜುಲೈ 19ರಂದು ನಿಧನರಾಗಿದ್ದರು.