ಮನುಷ್ಯ ತನ್ನ ಅನಿಶ್ಚಿತತೆಯ ಬಗ್ಗೆ ಬಹಳಷ್ಟು ಭಯಭೀತನಾಗುತ್ತಾನೆ. ಇಂದಿನ ಸ್ಥಿತಿಗಿಂತ ನಾಳೆ ಏನಾಗುತ್ತದೆ ಎನ್ನುವ ಚಿಂತೆಯೇ ಆತನನ್ನು/ಆಕೆಯನ್ನು ಬಹಳಷ್ಟು ಕಾಡುತ್ತದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದ್ದು ಇಷ್ಟೇ ಇಂದು ಅರಳಿ ನಿಂತ ಹೂವು ಬಾಡಿ ಮಣ್ಣಾಗಲೇ ಬೇಕು, ಕೆಲವು ಹೂಗಳು ವಾರಗಟ್ಟಲೇ ಹಾಗೆಯೇ ಗಿಡದಲ್ಲಿ ನಳನಳಿಸಬಹುದು. ಇನ್ನು ಕೆಲವು ಒಂದೇ ದಿನದಲ್ಲಿ ಮುದುಡಿ ಬಿದ್ದು ಹೋಗಬಹುದು. ಅಂತೆಯೇ ನಮ್ಮ ಬದುಕೂ ಕೂಡಾ…
*ಶ್ರೀದೇವಿ ಅಂಬೆಕಲ್ಲು
ನಾವು ಚಿಕ್ಕವರಾಗಿದ್ದಾಗ ಹಠ ಮಾಡಿದರೆ ನಮ್ಮನ್ನು ಭಯ ಪಡಿಸಿ ಊಟ ಮಾಡಿಸುವಂತಹ ವಿಷಯಗಳು ಬೇರೆಯೇ ಇರುತ್ತಿದ್ದವು. ಮಕ್ಕಳಾಗಿದ್ದಾಗ ದೆವ್ವ ಭೂತಗಳಿಗೆ ಹೆದರುತ್ತಿದ್ದೆವು. ನಮ್ಮ ಮಕ್ಕಳಿಗೂ ನಾವು ಅದನ್ನೇ ಮಾಡುತ್ತೇವೆ ಕೂಡಾ.
ಈಗ ಬೆಳೆದು ನಿಂತಿದ್ದೇವೆ, ಲೋಕದ ಹಲವಾರು ವಿಚಾರಗಳು ನಮ್ಮ ಅರಿವಿಗೆ ಬಂದಿದೆ. ಲೌಕಿಕ ಜಗತ್ತು ನಮ್ಮನ್ನು ಬೇಕು ಬೇಡ ಎಂಬ ಅರಿವೂ ಇರದೇ ನಮ್ಮನ್ನು ಸೆಳೆಯುತ್ತದೆ. ಹಣವೊಂದೇ ಎಲ್ಲದಕ್ಕೂ ಪರಿಹಾರ ಅನ್ನುವ ಮನಸ್ಥಿತಿ ಬೆಳೆದುಬಿಟ್ಟಿರುತ್ತದೆ. ಮನೆ, ಮಕ್ಕಳು, ಸಂಸಾರ, ಹೆಚ್ಚು ಹಣ ಮಾಡಬೇಕು, ಐಷಾರಾಮಿ ಬದುಕು ಹೊಂದಬೇಕು, ನಂಗೊಂದು ಐಡೆಂಟಿಟಿ ಇರಬೇಕು, ಎಲ್ಲರೂ ನನ್ನನ್ನು ಗೌರವಿಸಬೇಕು… ಎಂಬ ಕನಸು ಕಾಣುತ್ತಿರುತ್ತೇವೆ. ಇವೆಲ್ಲದರಿಂದಾಗಿ ನಮ್ನನ್ನು ಇತ್ತೀಚಿನ ದಿನಗಳಲ್ಲಿ ಕಾಡುವ ಭಯ ಒಂದೆರಡಲ್ಲ.
ಪ್ರಾಪಂಚಿಕ ಬದುಕಿನ ಪ್ರಜ್ಞೆ ಬಂದ ಮೇಲೆ ನಾವು ಹೆದರೋದು ಭವಿಷ್ಯದ ಬದುಕಿಗೆ, ಬಡತನಕ್ಕೆ, ನಿರುದ್ಯೋಗಕ್ಕೆ, ಮತ್ತೊಬ್ಬರಿಂದ ಅಗೌರವಕ್ಕೆ ಒಳಗಾಗುತ್ತೇವೆಯೋ ಅನ್ನುವ ಭಯ, ನಮ್ಮನ್ನು ಯಾವಾಗ ಕಾಯಿಲೆ ಕಾಡುತ್ತದೋ, ಸಾವು ಬರುತ್ತದೋ ಎನ್ನುವ ಭಯ ಮನಸ್ಸಿನೊಳಗೆ ಆಗಾಗ ಬಂದು ಹೋಗುತ್ತಿರುತ್ತದೆ. ಇದರಿಂದಾಗಿ ಭಯದಲ್ಲಿಯೇ ದಿನ ದೂಡುವಂತಾಗುತ್ತದೆ. ಇಂತಹ ಭಯ ನಮ್ಮನ್ನು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ. ಇವೆಲ್ಲವುಗಳಿಗೂ ನಮ್ಮ ಮನಸ್ಥಿತಿಯೇ ಕಾರಣ.
ಉದಾಹರಣೆಗೆ ಬಲಿಷ್ಠ ರಾಷ್ಟ್ರಗಳೂ ಕೂಡಾ ತನ್ನ ನೆರೆ ಹೊರೆಯ ರಾಷ್ಟ್ರಗಳ ಬಗ್ಗೆ ಭಯವನ್ನು ಹೊಂದಿರುತ್ತದೆ. ಚುನಾವಣೆ ಬಂದಾಗ ರಾಜಕಾರಣಿಗಳಿಗೆ ತಾನು ಚುನಾವಣೆ ಸೋತು ಬಿಡುತ್ತೇನೋ ಎಂಬ ಭಯ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಚೆನ್ನಾಗಿ ಬರೆದಿಲ್ಲವಾಗಿದ್ದರೆ ಎಲ್ಲಿ ಅನುತ್ತೀರ್ಣನಾಗುತ್ತೇನೋ ಎಂಬ ಭಯ, ತಾಯಂದಿರಿಗೆ ಯಾವಾಗಲೂ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಭಯ ಇದ್ದೇ ಇರುತ್ತದೆ. ಒಟ್ಟಿನಲ್ಲಿ ಜನರು ತಮ್ಮ ಅನಿಶ್ಚಿತತೆಯ ಭವಿಷ್ಯದ ಬಗ್ಗೆ ಹೆದರುತ್ತಾರೆ.
ಭಯ ಒಂದು, ಸಮಸ್ಯೆಗಳು ನೂರಾರು
ಭಯವೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಮೂಲ. ನಮ್ಮೊಳಗಿನ ಭಯ ನಮ್ಮ ದುರಾದೃಷ್ಟಕ್ಕೂ ಕಾರಣವಾಗಬಹುದು. ಭಯದಿಂದಲೇ ಬದುಕುವುದರಿಂದ ನಮ್ಮ ಶಕ್ತಿಯೇ ಕುಂದಿದ0ತಾಗುವುದು, ಇರುವ ಸಂತೋಷವನ್ನು ಅನುಭವಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ಒಂದರ್ಥದಲ್ಲಿ ಅದು ನಮ್ಮ ಮನಸ್ಸಿಗೆ ಪಾರ್ಶ್ವವಾಯು ಬಡಿದಂತೆ. ನಮ್ಮ ನರಮಂಡಲದ ಮೇಲೆ ಒತ್ತಡವನ್ನು ತರುತ್ತದೆ. ಉದ್ವೇಗಕ್ಕೆ ಕಾರಣವಾಗುತ್ತದೆ. ಆರೋಗ್ಯವನ್ನು ಹದಗೆಡಿಸುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲವಾಗಿಸುತ್ತದೆ. ಮಾಡುವ ಎಲ್ಲಾ ಕಾರ್ಯಗಳಿಗೂ ತಡೆ ಒಡ್ಡುತ್ತದೆ.
ಕೊರೋನಾ ರೋಗದ ಈ ಸಂದರ್ಭದಲ್ಲಿ, “ನನಗೂ ಕೊರೊನಾ ಬಂದರೆ….’ ಎನ್ನುವ ಭಯ, ನಮ್ಮಲ್ಲಿ ಅದರ ಬಗೆಗಿನ ಜಾಗೃತಿಯನ್ನು ಮೂಡಿಸಬೇಕೇ ವಿನಾಃ, ಭಯವೇ ನಮ್ಮ ಬದುಕಿಗೆ ತೊಡಕು ಉಂಟು ಮಾಡುವಂತಿರಬಾರದು. ಕೊರೊನಾ ಬಂದರೆ ಅನ್ನುವ ಭಯ, ಬರದಂತೆ ಏನು ಮಾಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ.
‘ಕೊರೊನಾ ಬಂದಿದೆ, ನಾನಿನ್ನು ಬದುಕುವುದಿಲ್ಲ ಅನ್ನುವ ನಕಾರಾತ್ಮಕ ಭಯ ಮಾನಸಿಕವಾಗಿ ನಮ್ಮನ್ನು ಮತ್ತಷ್ಟು ಕುಗ್ಗಿಸಿಬಿಡುತ್ತದೆ.
ಮಿಲ್ಟನ್ ಒಂದು ಕಡೆ ಹೇಳುತ್ತಾರೆ ‘ನಮ್ಮ ಮನಸ್ಸು ಸ್ವರ್ಗವನ್ನು ಸೃಷ್ಟಿಸಬಹುದು, ಇಲ್ಲ ನರಕವನ್ನು ಸೃಷ್ಟಿಸಬಹುದು’ ಎಂದು. ಎಲ್ಲದಕ್ಕೂ ಕಾರಣಕರ್ತರು ನಾವೇ ಎಂದು. ಮನುಷ್ಯನ ಮನಸ್ಸು ಭಯ ಭೀತಿಯನ್ನು ಹುಟ್ಟಿಸಬಹುದು, ಇಲ್ಲವೇ ಅವನೊಳಗೊಂದು ಸುರಕ್ಷತೆಯ ಭಾವ ಮತ್ತು ಆತ್ಮವಿಶ್ವಾಸವನ್ನು ಉಂಟು ಮಾಡಬಹುದು. ಹಾಗಾಗಿ ಭಯ ಮತ್ತು ಆತ್ಮವಿಶ್ವಾಸ ಇವೆರಡಲ್ಲಿನ ಆಯ್ಕೆ ನಮ್ಮ ಮನಸ್ಸಿಗೆ ಸಂಬ0ಧಿಸಿದ್ದು.
ಭಯ ಬಿಡುವುದು ಹೇಗೆ
ಬದುಕಿಗೆ ಭಯ ಬೇಕು ನಿಜ. ಆದರೆ ಅದುವೇ ಬದುಕಾಗಬಾರದಲ್ವಾ? ನಾಳೆ ಹೀಗಾದರೆ, ಹಾಗಾದರೆ ಎನ್ನುವ ದೂರಾಲೋಚನೆ ನಮ್ಮನ್ನು ಎಚ್ಚರದಿಂದಿರುವಂತೆ ಮಾಡುತ್ತದೆ. ಮಾಡಬಾರದದ್ದನ್ನು ಮಾಡದಂತೆ ಎಚ್ಚರಿಸುತ್ತದೆ. ನಾಳೆ ಮಾಡಬೇಕಾದ ಕೆಲಸವನ್ನು ಇವತ್ತೇ ಮಾಡಿ ಮುಗಿಸುವಂತೆ ಪ್ರೇರೇಪಿಸಲೂ ಬಹುದು. ಒಂದು ರೀತಿಯಲ್ಲಿ ಅದು ಸಕಾರಾತ್ಮಕ ಭಯ.
ಭಯ ಅನ್ನೋದು ನಮ್ಮ ಮನಸ್ಸಿಗೆ ಸಂಬಂಧಿಸಿರುವುದರಿಂದ, ಮೊದಲಾಗಿ ನಾವು ಯಾವುದಕ್ಕೆ ಭಯ ಪಟ್ಟುಕೊಳ್ಳುತ್ತಿದ್ದೇವೆ ಎಂಬುದನ್ನು ಕಂಡುಕೊಳ್ಳಬೇಕು. ಇಂದು ಇರುವುದು ನಾಳೆ ಇಲ್ಲವಾದರೆ ಎನ್ನುವ ಭಯ ಕಾಡುತ್ತಿದ್ದರೆ… ಇಂದು ಇರುವುದು ನಾಳೆ ಇರುತ್ತದೆಯೋ ಖಂಡಿತಾ ಯಾರಿಗೂ ಗೊತ್ತಿಲ್ಲ. ಆದರೆ ಈ ಕ್ಷಣವನ್ನು ಆನಂದಿಸುವ ಅವಕಾಶನಮಗೆ ಸಿಕ್ಕಿದೆ ಎನ್ನುವ ಭಾವ ಇರಬೇಕು. ಪರಿವರ್ತನೆ ಜಗದ ನಿಯಮ. ಕಳೆದುಕೊಳ್ಳಲು ನಾವು ಪಡೆದುಕೊಂಡು ಬಂದಿರುವುದಾದರೂ ಏನನ್ನು? ಎಂಬ ಸಂದೇಶ ಭಗವದ್ಗೀತೆಯಲ್ಲಿದೆ.
ಡಿವಿಜಿ ಅವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳುತ್ತಾರೆ, “ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು, ಹರುಷಕ್ಕಿದೆ ದಾರಿಯು’ ಎಂದು. ಪ್ರಸ್ತುತ ನಮ್ಮೊಂದಿಗೆ ಏನು ಇದೆಯೋ ಅದನ್ನು ಖುಷಿಯಿಂದ ಅನುಭವಿಸಬೇಕು.
ಮನಸ್ಸಿಂದ ಸಾಧ್ಯ
ನಮ್ಮ ಮನಸ್ಸಿನ ಶಕ್ತಿಯ ಬಗ್ಗೆ ನಾವೆಂದಿಗೂ ಅಂಡರ್‌ಎಸ್ಟಿಮೇಟ್ ಮಾಡಬಾರದು. ಯಾಕಂದರೆ ಮನಸ್ಸಿಗಿರುವ ಶಕ್ತಿಯೇ ಅಂಥದ್ದು. ಕೆಲವೊಮ್ಮೆ ಮಾತಿಗೆ ಹೇಳುವುದಿದೆ ‘ಮನಸ್ಸಿದ್ದರೆ ಮಾರ್ಗ’ ಎಂದು. ಭಯವನ್ನು ಬಿಟ್ಹಾಕುವುದು ಕೂಡಾ ನಮ್ಮ ಮನಸ್ಸಿಂದ ಸಾಧ್ಯ. ಮನಸ್ಸಿನ ಆಲೋಚನೆ ಸರಿಯಾದ ಕ್ರಮದಲ್ಲಿರಬೇಕು. ಭಯದಿಂದ ಮುಕ್ತರಾದಾಗ ಆರೋಗ್ಯ, ಸಂತೋಷ, ಸಾಮರಸ್ಯ ಹೊಂದುವುದಕ್ಕೆ ಸಾಧ್ಯ.
ಜೀವನದ ಅನಿಶ್ಚಿತತೆಗಳನ್ನು ಧೈರ್ಯದಿಂದಲೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾವು ಎಂಬುದು ಅನಿಶ್ಚಿತತೆಯಿಂದ ಕೂಡಿರುವುದರಿಂದ ಅದರ ಬಗೆಗಿನ ಚಿಂತೆ ಅನಗತ್ಯ. ಅದರಿಂದ ಪಲಾಯನ ಮಾಡುವುದು ಪರಿಹಾರವಲ್ಲ. “ಧೈರ್ಯಂ ಸರ್ವತ್ರ ಸಾಧನಂ’ ಎನ್ನುವಂತೆ ಎಲ್ಲವನ್ನು ಧೈರ್ಯದಿಂದ ಎದುರಿಸುವ ಮನಸ್ಥಿತಿ ಹೊಂದಿದರೆ ಅಲ್ಲಿ ಭಯಕ್ಕೆ ಅವಕಾಶವಿಲ್ಲ. ಧೈರ್ಯ ಇಲ್ಲದೇ ಹೋದರೆ ನಂಬಿಕೆ ಮತ್ತು ಭರವಸೆ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮಾನಸಿಕ ಪ್ರಭೆ ನಮ್ಮೊಳಗಿನ ಸಂತೋಷ, ನೆಮ್ಮದಿ, ಶಾಂತಿಯೆ0ಬ ಹೂವನ್ನು ಅರಳಿಸುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಭಯರಹಿತ ಮಾನಸಿಕ ಸ್ಥಿತಿಯನ್ನು ಹೊಂದಲು ಪ್ರಯತ್ನಿಸಬೇಕು. ಅಂತಹ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಪ್ರಕಾಶಿಸಲಿ.