ಆ ಸೋಲು ಎಂದಿಗೂ ಅವಮಾನವಲ್ಲ

*ಜಯಶ್ರೀ.ಜೆ. ಅಬ್ಬಿಗೇರಿ

ನಾನೀಗ ಹೇಳ ಹೊರಟಿರುವುದು ಕಟ್ಟುಕಥೆಯಲ್ಲ ನಿಜ ಜೀವನದ ಪ್ರೇರಣಾದಾಯಿ ಕತೆ. ಇದನ್ನೊಮ್ಮೆ ನೀವು ಓದಲೇಬೇಕು.
ವಿಲ್ಮಾ ರುಡಾಲ್ಫ್ ಜನಿಸಿದ್ದು ಒಂದು ಬಡ ಕುಟುಂಬದಲ್ಲಿ. ಎಲ್ಲ ಮಕ್ಕಳಂತೆ ನಾಲ್ಕು ವರ್ಷದವರೆಗೆ ಆಡುತ್ತ ಬೆಳೆದವಳು. ನಾಲ್ಕು ವರ್ಷದವಳಿದ್ದಾಗ ಅದೇನು ವಿಧಿಯಾಟವೋ ಏನೋ ಎರಡೂ ಶ್ವಾಸಕೋಶದ ಉರಿಯೂತ ಮತ್ತು ಜ್ವರಕ್ಕೆ ಬಲಿಯಾದಳು. ಬೇರೇನೋ ಆಗಿದ್ದಿದ್ದರೆ ಗುಣಮುಖ ಆಗುತ್ತಿದ್ದಾಳೇನೋ ಆದರೆ ಇವೆರಡು ಎಂಥ ಮಾರಕ ಜೋಡಿಯೆಂದರೆ ವಿಲ್ಮಾ ಪೋಲಿಯೋ ಪೀಡಿತಳಾದಳು. ಆಕೆಯನ್ನು ಪರೀಕ್ಷಿಸಿದ ವೈದ್ಯರು ‘ಜೀವಮಾನದಲ್ಲಿ ವಿಲ್ಮಾಗೆ ನಡೆಯಲು ಸಾಧ್ಯವಾಗಲಿಕ್ಕಿಲ್ಲ’ ಎಂದು ಬಿಟ್ಟರು. ಈ ಸಂಗತಿ ಎಂಥವರಲ್ಲೂ ನಡುಕ ಹುಟ್ಟಿಸುವಂತಿತ್ತು.

ಆದರೆ ಆಕೆಯ ತಾಯಿ ಆಕೆಯನ್ನು ಉತ್ತೇಜಿಸಿದಳು. ಪ್ರತಿನಿತ್ಯ ಆಕೆಗೆ ಧೈರ್ಯ ತುಂಬುವ ಕಾಯಕದಲ್ಲಿ ನಿರತಳಾದಳು ‘ಮಗು, ನಿನ್ನಲ್ಲಿ ನಿನಗೆ ಅಚಲ ನಂಬಿಕೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.ಆದರೆ ಅದಕ್ಕೆ ಸತತ ಪರಿಶ್ರಮ ಬೇಕು’ ಎಂದು ಆತ್ಮವಿಶ್ವಾಸ ತುಂಬುತ್ತಿದ್ದಳು.

ತಾಯಿಯಿಂದ ಉತ್ತೇಜಿತಳಾದ ವಿಲ್ಮಾ ‘ವಿಶ್ವದಲ್ಲಿಯೇ ಅತಿ ವೇಗದ ಓಟಗಾರ್ತಿಯಾಗಬೇಕು.’ ಎಂಬ ಮಹದಾಸೆ ವ್ಯಕ್ತಪಡಿಸಿದಳು. ವಿಲ್ಮಾ ತನ್ನ ಒಂಬತ್ತನೇ ವಯಸ್ಸಿನಲ್ಲಿದ್ದಾಗ ಅಗಾಧವಾದ ಆತ್ಮವಿಶ್ವಾಸದ ಫಲವಾಗಿ ವೈದ್ಯರು ಆಕೆಯಿಂದ ಅಸಾಧ್ಯವೆಂದಿದ್ದ ಭೂಮಿಯ ಮೇಲೆ ಮೊದಲ ಹೆಜ್ಜೆಯಿಟ್ಟಿದ್ದಳು. ಮೊದಲ ಬಾರಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸೋಲಿನ ಕಹಿ ಅನುಭವಿಸಿದಾಗ ಆಕೆ ಹದಿಮೂರು ವರ್ಷದ ಪೋರಿ. ಆಕೆಯ ಕೊನೆಯ ಸ್ಥಾನದಲ್ಲಿದ್ದುದನ್ನು ಕಂಡು ಜನ ‘ ಕುಂಟ ಹಾರಲು ಬಯಸಿದಂತೆ’ ಎಂದು ಅವಮಾನಿಸಿದರು. ಆದರೆ ವಿಲ್ಮಾ ಧೈರ್ಯಗೆಡಲಿಲ್ಲ. ತನ್ನ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ. ಮತ್ತೆ ಮತ್ತೆ ಭಾಗವಹಿಸಿದ ಸ್ಪರ್ಧೆಗಳಲ್ಲೂ ಕೊನೆಯ ಸ್ಥಾನದಲ್ಲೇ ಇದ್ದಳು. ಹಾಗಿದ್ದಾಗ್ಯೂ ಅಭ್ಯಾಸವನ್ನು ಶ್ರದ್ಧೆಯಿಂದ ಮುಂದುವರೆಸಿದ್ದಳು. ಆಕೆ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವವರೆಗೆ.

ವಿಲ್ಮಾಗೆ ಹದಿನೈದು ತುಂಬಿದಾಗ ಎಡ್ ಟೆಂಪಲ್ ಎಂಬ ಕೋಚ್‌ನನ್ನು ಭೇಟಿಯಾದಳು. ‘ವಿಶ್ವದಲ್ಲಿ ನಾನು ಮಿಂಚಿನ ಓಟಗಾರ್ತಿಯೆಂದು ಅನಿಸಿಕೊಳ್ಳಬೇಕು. ನಾನು ಅತಿ ವೇಗದ ಓಟಗಾರ್ತಿಯಾಗಬೇಕೆಂಬುದು ನನ್ನ ಗುರಿ’ ಎಂದು ತನ್ನ ಮನದ ಹೆಬ್ಬಯಕೆಯನ್ನು ಕೋಚ್ ಮುಂದೆ ತೋಡಿಕೊಂಡಳು. ಅದಕ್ಕೆ ಕೋಚ್ ‘ನಿನ್ನಲ್ಲಿರುವ ಉತ್ಸಾಹದ ಮಟ್ಟ ನೋಡಿದರೆ ನಿನ್ನನ್ನು ಅತಿ ವೇಗದ ಓಟಗಾರ್ತಿಯಾಗುವುದರಿಂದ ಯಾರೂ ತಡೆಯಲಾರರು. ನಾನು ನಿನಗೆ ಗುರಿ ಮುಟ್ಟುವಲ್ಲಿ ಸಹಾಯ ಮಾಡುವೆ’ ಎಂದ.
ಕೊನೆಗೂ ವಿಲ್ಮಾಳ ಕನಸಿನ ದಿನ ಬಂತು. ವಿಲ್ಮಾ ಓಲಿಂಪಿಕ್ಸ್ ಸ್ಪರ್ಧೆಯಲ್ಲಿ ಓಡಲು ನಿಂತಳು ಓಲಿಂಪಿಕ್ಸ್ ಸ್ಪರ್ಧೆಯೆಂದರೆ ಕೇಳಬೇಕೆ? ಜಗತ್ತಿನ ಮಹಾನ ಓಟಗಾರರು ಅಲ್ಲಿದ್ದರು ಎಂದು ಬೇರೆ ಹೇಳಬೇಕಿಲ್ಲ. ವಿಲ್ಮಾಗೆ ಪ್ರತಿಸ್ಪರ್ಧಿ ಜುಟ್ಟಾ ಹೈನ್. ಆಕೆಯನ್ನೂ ಅಲ್ಲಿಯವರೆಗೆ ಯಾರೂ ಸೋಲಿಸಿರಲಿಲ್ಲ. ಮೊದಲು ನೂರು ಮೀಟರ್ ಓಟದ ಸ್ಪರ್ಧೆ ಆ ಸ್ಪರ್ಧೆಯಲ್ಲಿ ಜುಟ್ಟಾಳನ್ನು ಹಿಂದಕ್ಕಟ್ಟಿ ತನ್ನ ಜೀವನದ ಮೊದಲ ಓಲಿಂಪಿಕ್ಸ್ ಚಿನ್ನದ ಪದಕ ಪಡೆದಳು ವಿಲ್ಮಾ! ಎರಡನೆಯದು ಎರಡು ನೂರು ಮೀಟರ್ ಸ್ಪರ್ಧೆ.

ಅದರಲ್ಲೂ ಜುಟ್ಟಾಳನ್ನು ಹಿಂದಕ್ಕೆ ಹಾಕಿ ಎರಡನೆಯ ಚಿನ್ನದ ಪದಕ ತನ್ನದಾಗಿಸಿಕೊಂಡಳು. ಮೂರನೆಯದು ನಾಲ್ಕು ನೂರು ಮೀಟರ್ ರಿಲೇ ಓಟದ ಸ್ಪರ್ಧೆ. ಈಗಾಗಲೇ ಎರಡು ಚಿನ್ನದ ಪದಕ ಗಳಿಸಿದ ವಿಲ್ಮಾ ಮೂರನೆಯ ಪದಕ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳಾ? ಎಂಬ ತೀವ್ರ ಕುತೂಹಲ ಕೆರಳಿಸಿತ್ತು. ರಿಲೇ ಪಂದ್ಯದಲ್ಲಿ ವೇಗವಾಗಿ ಓಡುವವರು ಕೊನೆಯಲ್ಲಿ ಓಡುವುದು ವಾಡಿಕೆ. ಎರಡೂ ತಂಡಗಳಲ್ಲಿ ವಿಲ್ಮಾ ಮತ್ತು ಜುಟ್ಟಾ ಕೊನೆಯಲ್ಲಿ ಓಡುವವರೆಂದು ನಿರ್ಧಾರವಾಗಿತ್ತು. ಮೊದಲ ಮೂರು ಆಟಗಾರ್ತಿಯರು ಓಡಿದರು. ರಿಲೇ ದಂಡವನ್ನು ಹಸ್ತಾಂತರಿಸಿದರು. ವಿಲ್ಮಾಳ ಪಾಳಿ ಬಂದಾಗ ಆಕೆ ದಂಡವನ್ನು ಕೆಡವಿಬಿಟ್ಟಳು. ಇನ್ನೊಂದು ಕಡೆ ಜುಟ್ಟಾ ಆಗಲೇ ದಂಡ ಹಿಡಿದು ಓಡಲು ಆರಂಭಿಸಿಬಿಟ್ಟಿದ್ದಳು. ವಿಲ್ಮಾ ನೆಲಕ್ಕೆ ಬಿದ್ದ ದಂಡವನ್ನು ಎತ್ತಿ ಜಿಂಕೆಯAತೆ ಛಂಗನೆ ಓಡಲು ಆರಂಭಿಸಿದಳು. ನೋಡ ನೋಡುತ್ತಿದ್ದಂತೆ ವಿಲ್ಮಾ ಗುರಿಯ ರೇಖೆಯನ್ನು ದಾಟಿದ್ದಳು. ಮೂರನೆಯ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಳು.
೧೯೬೦ ನೇ ಇಸ್ವಿಯಲ್ಲಿ ನಡೆದ ಓಲಿಂಪಿಕ್ಸ್ ಪಂದ್ಯಾವಳಿಯಲ್ಲಿ ವಿಲ್ಮಾ ಪ್ರಮುಖ ಆಕರ್ಷಣೆಯಾದಳು. ಅಂಗವಿಕಲೆಯಾಗಿ ‘ಜಗತ್ತಿನ ಮಿಂಚಿನ ಓಟಗಾರ್ತಿ’ ಯಾಗಿ ಮಿಂಚಿದ್ದು ಓಲಿಂಪಿಕ್ಸ್ ಚರಿತ್ರೆಯಲ್ಲಿ ಮಹಾನ್ ಗಾಥೆಯಾಗಿ ಹೋಯಿತು. ಸಾಧಿಸುವ ಛಲವೊಂದು ಬಲವಾಗಿದ್ದರೆ ಸಾಕು ದೌರ್ಬಲ್ಯಗಳು ಮತ್ತು ಜಗದ ಯಾವ ಶಕ್ತಿಯೂ ಸಾಧನೆಯನ್ನು ತಡೆಯಲು ಸಾಧ್ಯವಿಲ್ಲ ಎನ್ನುವದಕ್ಕೆ ವಿಲ್ಮಾ ಜ್ವಲಂತ ನಿದರ್ಶನ. ಕೈ ಕಾಲು ಗಟ್ಟಿಯಿದ್ದರೂ ಉಳಿದೆಲ್ಲ ಅಂಗಾ0ಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದರೂ ಸಾಧನೆಗೆ ತಡೆಯುವ ಇಲ್ಲ ಸಲ್ಲದ ನೆಪಗಳನ್ನು ಹೇಳುವ ನಾವು ವಿಲ್ಮಾಳಂಥ ಅಪರೂಪದ ಸಾಧಕರಿಂದ ಪ್ರೇರಣೆ ಸ್ಪೂರ್ತಿ ಪಡೆಯಬಹುದಲ್ಲವೇ? ದೌರ್ಬಲ್ಯಗಳನ್ನು ಶಕ್ತಿಯಾಗಿಸುವ ಶಕ್ತಿ ನಮ್ಮ ಕೈಯಲ್ಲೇ ಅದೆ. ಶ್ರದ್ಧೆಯಿಂದ ಪ್ರಯತ್ನಿಸುವ ಛಲ ಬೇಕು ಅಷ್ಟೆ.


ಬೇಡ ಮೀನ ಮೇಷ
ಬದುಕು ಪಾಠ ಕಲಿಸಿದ ಮೇಲೆ ಎಚ್ಚೆತ್ತುಕೊಳ್ಳಲು ಮೀನಮೇಷ ಎಣಿಸುವುದು ಮೂರ್ಖತನದ ಸಂಕೇತ. ಬದುಕು ಪಾಠ ಕಲಿಸುವ ಮುಂಚೆಯೇ ಬದಲಾಗುವುದು ಜಾಣರ ಲಕ್ಷಣ. ಏಕೆಂದರೆ ಬದುಕು ನಾವು ಬದಲಾಗುವವರೆಗೆ ಬಿಡುವುದೇ ಇಲ್ಲ. ಅದೇ ಪಾಠವನ್ನು ನಾವು ಕಲಿಯುವವರೆಗೆ ಕಲಿಸುತ್ತಲೇ ಇರುತ್ತದೆ ಅದೊಂದು ಶಿಕ್ಷೆ. ತಮ್ಮಲ್ಲಿಯ ನ್ಯೂನತೆಯನ್ನೇ ಶಕ್ತಿಯನ್ನಾಗಿ ಬದಲಾಗಿಸಿ ಸಮಸ್ಯೆಯೆಂಬ ಮಗ್ಗಲು ಮುಳ್ಳನ್ನೇ ಸುಂದರ ಹೂವನ್ನಾಗಿ ಬದಲಾಯಿಸಿ ಬೇರೆಯವರಿಗೂ ಮಾದರಿ ಪ್ರೇರಣೆದಾಯಕ ವ್ಯಕ್ತಿತ್ವವಾಗಿ ನಿರ್ಮಾಣಗೊಳ್ಳುತ್ತಾರೆ ತಮ್ಮ ಅತ್ಯದ್ಭುತ ಫಲಿತಾಂಶಗಳನ್ನು ತೋರಿಸಿ ಉಳಿದವರಿಗೆ ಸ್ಪೂರ್ತಿದಾಯಿಗಳಾಗುತ್ತಾರೆ. ಬೇರೆಯವರಿಗೆ ಮೇಲೇರಲು ಸಹಕರಿಸುತ್ತಾರೆ. ಕಲಿಯುವುದನ್ನು ನಿಲ್ಲಿಸಿದರೆ ಬೆಳೆಯುವುದನ್ನು ನಿಲ್ಲಿಸಿದಂತೆ. ಪ್ರತಿದಿನ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ನಿಮ್ಮ ದಾರಿಯನ್ನು ನೀವೇ ನಿರ್ಮಿಸಿಕೊಳ್ಳಿ. ಬೇರೆಯವರ ದಾರಿಯಲ್ಲಿ ಅಡ್ಡ ಸಾಗಬೇಡಿ. ಆಗ ಅವಕಾಶಗಳು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.


ರಿಸ್ಕ್ ತೆಗೆದುಕೊಳ್ಳಿ
ಶಕ್ತಿಯ ಆಗರದಂತಿರುವವರು ಇಲ್ಲವೇ ಕೇವಲ ದೌರ್ಬಲ್ಯಗಳಿರುವ ವ್ಯಕ್ತಿಗಳು ಇಲ್ಲವೇ ಇಲ್ಲ. ದೌರ್ಬಲ್ಯಗಳಿಲ್ಲದವರು ಯಾರೂ ಇಲ್ಲ. ನಾವೆಲ್ಲ ಶಕ್ತಿ ಮತ್ತು ದೌರ್ಬಲ್ಯಗಳ ಒಟ್ಟು ಮೊತ್ತವೇ ಆಗಿದ್ದೇವೆ ಹೀಗಾಗಿ ದೌರ್ಬಲ್ಯಗಳಿಗೆ ಹೆದರಬಾರದು. ಸಾಮರ್ಥ್ಯದ ಕಡೆ ಗಮನ ಕೇಂದ್ರೀಕರಿಸಬೇಕು. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ ಇದೆ. ಆ ಶಕ್ತಿಯನ್ನು ಉಪಯೋಗಿಸುವ ಕಲೆಯನ್ನು ಕರಗತಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದು ಅವುಗಳನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನ ಪಡುವುದು ನಮ್ಮ ಆದ್ಯ ಕರ್ತವ್ಯ. ಪ್ರಾಮಾಣಿಕ ಪ್ರಯತ್ನ ನಿಮ್ಮ ಮಿತ್ರನಂತೆ ಕಾರ್ಯ ನಿರ್ವಹಿಸುತ್ತದೆ. ಮಾನಸಿಕವಾಗಿ ಬಲಿಷ್ಠರಾದರೆ ದೈಹಿಕ ಅಂಗವಿಕತೆಯು ಯಾವುದೇ ಪರಿಣಾಮ ಬೀರದು. ಬಲಹೀನತೆಯನ್ನೇ ಬಲವನ್ನಾಗಿಸಿಕೊಳ್ಳುವ ಬಲ ನಮ್ಮಲ್ಲೇ ಇದೆ! ಸಣ್ಣ ಪುಟ್ಟ ಸಮಸ್ಯೆಗಳಿಗೆ ಹೆದರಿ ಹಿಂದೆ ಹೆಜ್ಜೆ ಇಟ್ಟರೆ ಮುಂದೆ ಸಾಗುವ ಧೈರ್ಯ ಇಲ್ಲದಂತಾಗುತ್ತದೆ. ಎಲ್ಲದರಲ್ಲೂ ಸುಖ ಬಯಸುವ ನಾವು ಸುರಕ್ಷಿತ ವಲಯದಲ್ಲೇ ಇದ್ದು ಕಾಲ ಕಳೆದು ಬಿಡುತ್ತೇವೆ. ಸುರಕ್ಷಿತ ವಲಯ (ಕಂಫರ್ಟ್ ಝೋನ್) ಬಿಟ್ಟು ಹೊರಬಂದು ಕನಸುಗಳಿಗಾಗಿ ರಿಸ್ಕ್ ತೆಗೆದುಕೊಳ್ಳಬೇಕು.’ರಿಸ್ಕ್ ತೆಗೆದುಕೊಳ್ಳದ ಜೀವನದಲ್ಲೇ ಹೆಚ್ಚು ರಿಸ್ಕ್ ಇರುತ್ತದೆ.


ಸೋಲು ಅವಮಾನವಲ್ಲ
ನಮ್ಮಲ್ಲಿ ಬಹಳಷ್ಟು ಜನ ಸೋಲನ್ನು ಅವಮಾನದ ವಿಷಯವೆಂದು ತಿಳಿಯುತ್ತೇವೆ. ವಾಸ್ತವದಲ್ಲಿ ಸೋಲು ಮುಜುಗರ ತರುವ ಸಂಗತಿಯೇ ಅಲ್ಲ. ಅದು ಹೊಸದಾಗಿ ಏನಾದರೂ ಒಂದನ್ನು ಸಾಧಿಸಲು ಪ್ರಯತ್ನಿಸಿರುವುದರ ಫಲವಷ್ಟೇ ಎಂದು ತಿಳಿದರೆ ಕಪ್ಪು ಚುಕ್ಕೆಯನ್ನು ನಕ್ಷತ್ರವನ್ನಾಗಿಸುವ ತಾಕತ್ತು ಬರುತ್ತದೆ. ಸೋಲಿನ ರಾಶಿಗಳೇ ಗೆಲುವಿನ ಮುಗಿಲೆತ್ತರಕ್ಕೆ ಬೆಳೆಸುತ್ತವೆ. ಗೆಲುವಿನ ಮೊದಲ ಹೆಜ್ಜೆ ಸೋಲು ಸೋಲು ಕಲಿಸುವ ಪಾಠಗಳನ್ನು ಕಲಿಯಬೇಕು.ಸೋಲುಗಳನ್ನು ಮೆಟ್ಟಿಲಾಗಿಸಿಕೊಂಡು ಗೆಲುವಿನ ಶಿಖರ ಏರುವ ಛಲ ಹೊಂದಬೇಕು. ಸೋಲು ನಿಭಾಯಿಸುವುದೊಂದು ಕಲೆ ಅದನ್ನು ಕರತಲಾಮಲಕ ಮಾಡಿಕೊಂಡರೆ ಎಂಥ ಸೋಲುಗಳನ್ನೂ ಗೆಲುವುಗಳನ್ನಾಗಿ ಪರಿವರ್ತಿಸಲು ಸಾಧ್ಯ. ಸೋಲನ್ನು ಸಂತೋಷವಾಗಿ ಸ್ವೀಕರಿಸಬೇಕು.ಆಗ ಗೆಲುವು ತಾನಾಗಿಯೇ ಬಂದು ಚುಂಬಿಸುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles