*ಕೃಷ್ಣಪ್ರಕಾಶ್ ಉಳಿತ್ತಾಯ
ಚಂಪಕಾಶೋಕಪುನ್ನಾಗ ಸೌಗಂಧಿಕಲಸತ್ಕಚಾ ಕುರುವಿಂದಮಣಿಶ್ರೇಣಿಕನತ್ಕೋಟೀರಮಂಡಿತಾ|| ಮುಡಿಯಿಂದ ಅಡಿಯವರೆಗಿನ ವರ್ಣನೆಗೆ ತೊಡಗುತ್ತದೆ ಮುಂದಿನ ನಾಮಗಳು. ಸೌಂದರ್ಯ ಅದೆಷ್ಟು ಬಗೆಯಿಂದ ತೆರೆದುಕೊಂಡಿದೆ ನೋಡೋಣ.
ತಾಯಿಯ ಕೇಶರಾಶಿಯನ್ನು ಮಾತ್ರವೇ ವರ್ಣಿಸಲು ತೊಡಗದೆ ಅವಳ ಕೂದಲನ್ನು ಅಲಂಕರಿಸಿದ ಬಗೆಬಗೆಯ ಹೂವುಗಳನ್ನು ಕುರಿತಾಗಿಯೂ ವರ್ಣಿಸುತ್ತಾ ಆ ಹೂವುಗಳು ತಾಯಿಯ ಕೇಶಗಳಿಗೆ ಕೊಡುವ ಅನುಪಮ ಸುಗಂಧವನ್ನೂ ಕುರಿತು ಹೆಸರುಗಳು ಹೇಳುತ್ತವೆ. ಎಂತಹಾ ಹೂವುಗಳಿವೆ ತಾಯಿಯ ಮುಡಿಯಲ್ಲಿ?
“ಚಂಪಕಾಶೋಕಪುನ್ನಾಗಸೌಗಂಧಿಕಲಸತ್ಕಚಾ” ಚಂಪಕಾ, ಅಶೋಕ, ಪುನ್ನಾಗ, ಸೌಗಂಧಿಕ ಇತ್ಯಾದಿ ಹೂವುಗಳು ತಾಯಿಯ ಮುಡಿಯನ್ನು ಏರಿ ತಮ್ಮನ್ನು ತಾವು ಸಾರ್ಥಕ ಪಡಿಸಿಕೊಂಡಿವೆ. ಹೂವುಗಳು ತಮ್ಮ ಪರಿಮಳವನ್ನು ತಾಯಿಯ ಮುಡಿಗೆ ಅರ್ಪಿಸುವುದಲ್ಲ.
ತಾಯಿಯ ಕೇಶದ ಪರಿಮಳವನ್ನು ತಾವೇ ಪಡೆದುಕೊಂಡು ಮತ್ತೂ ಸೌಗಂಧವನ್ನು ಕಾಂತಿಯನ್ನೂ ಪಡೆದಿವೆ. ಕುರುವಿಂದವೆಂದರೆ ಪದ್ಮರಾಗವೆಂಬ ಮಣಿ. ಇಂತಹಾ ಮಣಿಗಳು ಸಾಲಾಗಿ ಅಲಂಕರಿಸಲ್ಪಟ್ಟ ಕಿರೀಟವನ್ನು ತಾಯಿ ಧರಿಸಿದ್ದಾಳೆ.
ಹೀಗೆ “ಕುರುವಿಂದಮಣಿಶ್ರೇಣೀಕನತ್ಕೋಟೀರಮಂಡಿತಾ” ಎಂಬ ಹೆಸರಿನ ರಚನೆಯೂ ಸಾಲಾಗಿ ಇರಿಸಿದ ಕುರುವಿಂದ ಮಣಿಯಂತೆಯೇ ಇದೆ. ಇದರ ರಚನೆಯೂ ಮಣಿಗಣಗಳ ಸಾಲಿನಂತೆಯೇ ಕಾಣುತ್ತದೆ.
ಇಂತಹಾ ಮಣಿಗಳನ್ನಿರಿಸಿದ ಕಿರೀಟವನ್ನು ಧರಿಸಿ ಹೂವುಗಳ ಸುಗಂಧದಿಂದ ಕೂಡಿರುವ ಕೇಶವನ್ನು ಹೊಂದಿರುವ ತಾಯಿ ನಿನಗೆ ನಮಸ್ಕಾರ.