ಇಂದು ವೈಶಾಖ ಬಹುಳ ದ್ವಾದಶೀ, ಶ್ರೀ ಸೂರ್ಯಾಂಶ ಸಂಭೂತರೂ, ಭಕ್ತರಭೀಷ್ಟಗಳನ್ನು ಈಡೇರಿಸಲೆಂದೇ ಕಣ್ವ ನದಿ ತೀರದಲ್ಲಿ ನೆಲಸಿದವರಾದ ‘ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ’ ಮಧ್ಯಾರಾಧನಾ ಪರ್ವದಿನವೂ.
*ಗುರುರಾಜ್ ಪಂಘ್ರಿ

ವಾಯುದೇವರ ಮೂರವತಾರಗಳಲ್ಲಿನ ಕೊನೆಯ ಅವತಾರವಾದ ಶ್ರೀಮದಾಚಾರ್ಯರ ಪರಂಪರೆಯಲ್ಲಿ ಬಂದ ಯತಿಕುಲೋತ್ತಮರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು. ಶ್ರೀ ರಾಜೇಂದ್ರತೀರ್ಥರ ಪೂರ್ವಾಧಿಮಠದ ಪರಂಪರೆಯಲ್ಲಿ ಬಂದವರಾದ ಯತಿವರೇಣ್ಯರು.
ಸ್ವಯಂ ಪ್ರಲ್ಹಾದರಾಜರೇ ಇಡೀ ವಿಜಯಗರದ ಸಾಮ್ರಾಜ್ಯದ ರಾಜನಾದ ಕೃಷ್ಣದೇವರಾಯರೇ ಮೊದಲಾದ ಐದು ಜನ ಮಹಾರಾಜರನ್ನು , ವಿಜಯನಗರ ಸಾಮ್ರಾಜ್ಯವನ್ನೂ ಸಂರಕ್ಷಿಸಿದವರಾದ, ಶ್ರೀಮದಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನ ವಜ್ರಗಳಾದ *ವ್ಯಾಸತ್ರಯಗಳನ್ನು* ನೀಡಿದವರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಾಗಿ ಹುಟ್ಟಿಬರುವಾಗ, ಅವರಿಗೆ ಗುರುಗಳಾಗಿ ಜ್ಞಾನವನ್ನು ಪ್ರಸಾದಿಸಲು ಬಂದ ಯತಿ ದ್ವಯರಲ್ಲಿ ಆದ್ಯರಿವರು.
ಬನ್ನೂರಿನ ನಿಷ್ಠಾಗರಿಷ್ಠರಾದ, ಸದ್ ಬ್ರಾಹ್ಮಣರಾದ, ರಾಮಾಚಾರ್ಯರ ಮಡದಿ ಸಹಗಮನ ಮಾಡಲು ಅನುಜ್ಞ ಬೇಡಲು ಬಂದಾಗ ಸೌಮಾಂಗಲ್ಯವನ್ನು ನೀಡುವುದಲ್ಲದೇ, ಸಂತಾನವಾಗುತ್ತದೆ ಎಂದು ನುಡಿದ ಸೂರ್ಯದೇವರಿವರು. ಹಾಗೆ ಹುಟ್ಟಿದ ಮಗುವನ್ನು ಭೂ ಸ್ಪರ್ಶ ಮಾಡಿಸದೇ ಹರಿವಾಣದಲ್ಲಿ ತರಿಸಿ, ಆ ಸಣ್ಣ ಕೂಸನ್ನ ನದಿಯ ನೀರಿನಲ್ಲಿ ಮಿಂದೇಳಿಸಿ, ಪ್ರತೀದಿನ ತಮ್ಮ ಆರಾಧ್ಯ ದೈವವಾದ ಶ್ರೀ ವೇಣುಗೋಪಾಲನಿಗೆ ಅಭಿಷೇಕ ಮಾಡಿದ ಕ್ಷೀರವನ್ನುಣಿಸಿ ವೇದಾಂತ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿದ ಮಹಾನ್ ಗುರುಗಳು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು..
ನಂತರ ತಮ್ಮ ಪೂರ್ವಾಶ್ರಮದ ಅನುಜರಾದ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರ ಬಳಿ ತಮ್ಮ ಪ್ರೀತಿಯ ಶಿಷ್ಯರಾದ ಶ್ರೀಮಚ್ಚಂದ್ರಿಕಾಚಾರ್ಯರನ್ನು ವಿದ್ಯೆ ಕಲಿಯಲು ಕಳಿಸುತ್ತಾರೆ.
(ಪ್ರಹ್ಲಾದರಾಜರ ಅವತಾರಿಗಳಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ಯತಿದ್ವಯರ ಅನುಗ್ರಹವಾಗಬೇಕೆಂದು ಪರಮಾತ್ಮನ ಸಂಕಲ್ಪದ ಫಲವಿದು).
ತಪೋಸಂಪನ್ನರೂ, ಇಂದಿಗೂ ಅಬ್ಬೂರು ಕ್ಷೇತ್ರದ ಬೆಟ್ಟದ ಮೇಲಿನ ಗುಹೆಯಲ್ಲಿ ತಪವನ್ನಾಚರಿಸುತ್ತಿರುವ ಶ್ರೀ ಪುರುಷೋತ್ತಮ ತೀರ್ಥರ ಕರಕಮಲಸಂಜಾತರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು. ಮಹಾನ್ ಚೇತನರು, ವೈರಾಗ್ಯ ಮೂರ್ಧನ್ಯರು, ಇಡೀ ಭಾರತದ ಎಲ್ಲ ಕ್ಷೇತ್ರಗಳ ಸಂಚಾರ ಮಾಡಿ ಅಲ್ಲಿನ ದುರ್ವಾದಿಗಳನ್ನು ನಿಗ್ರಹ ಮಾಡಿದ ವಾದಿಸಿಂಹರು ಇವರು. ಈ ವಿಷಯವನ್ನು ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ *ಬ್ರಹ್ಮಣ್ಯತೀರ್ಥ ಪಂಚರತ್ನಮಾಲಿಕಾ ಸ್ತೋತ್ರದಲ್ಲಿ* ಘಂಟಾಘೋಶವಾಗಿ ತಿಳಿಸಿ ದಾಖಲಿಸಿ ಇಟ್ಟಿದ್ದಾರೆ. ಹೀಗೆ ಸಂಚಾರತ್ವೇನ ವಿಜಯನಗರ ಸಾಮ್ರಾಜ್ಯವನ್ನು ಸೇರಿ, ಅಲ್ಲಿದ್ದ ಕ್ಷಾಮವನ್ನು ದೂರಮಾಡಿ ಮಳೆಯನ್ನು ಸುರಿಸ್ತಾರೆ..
ಶ್ರೀಬ್ರಹ್ಮಣ್ಯತೀರ್ಥರು ಮಾಡಿದ ಪರಮಾನುಗ್ರಹ
ಶ್ರೀಬ್ರಹ್ಮಣ್ಯತೀರ್ಥರು ಸಾತನೂರಿನಲ್ಲಿ ಮಾಡಿದ ಪರಮಾನುಗ್ರಹ ಎಷ್ಟೆಂದರೆ ಈಗಲೂ ಸಾವಿರಾರು ಭಕ್ತರು ಅದರ ಫಲ ಪಡೆದು ಅನಗ್ರಹೀತರಾಗುತ್ತಿದ್ದಾರೆ.
ಅಲ್ಲಿಯ ಪ್ರಾಣದೇವರು ‘ಶಾಂತೇಶ’ ಅಂತ ಪ್ರಸಿದ್ಧಿ. ( ಈ ಪ್ರಾಣದೇವರು ಬಹುಷಃ ಪುರಾತನ ವಾಗಿದ್ದು ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀವ್ಯಾಸರಾಜರು ಇದನ್ನು ಪುನರ್ ಪ್ರತಿಷ್ಠಾಪಿಸಿದ್ದಿರಬಹುದು). ಆಗಿನ ಕಾಲದಲ್ಲಿ ಆ ಊರಲ್ಲಿ ತುಂಬಾ ವರ್ಷಗಳಿಂದ ಮಳೆಯಾಗದೆ ಜನ ತತ್ತರಿಸುತ್ತಿದ್ದಾಗ, ಅಲ್ಲಿಯ ಜನ ಊರಿನ ಬ್ರಾಹ್ಮಣರನ್ನು ದಯವಿಟ್ಟು ಇನ್ನೂ ಸ್ವಲ್ಪ ದಿನಗಳಲ್ಲಿ ಮಳೆ ಬರುವಂತೆ ಏನಾದರೂ ಹೋಮ, ಹವನ, ಜಪಾದಿಗಳನ್ನು ಮಾಡಬೇಕೆಂತಲೂ ಪ್ರಾರ್ಥಿಸಿ , ಆಗಲೂ ಮಳೆಯಾಗದಿದ್ದರೆ ತಾವೆಲ್ಲಾ ಊರು ಬಿಟ್ಟು ಹೋಗುವುದಾಗಿ ಹೇಳಿದರು. ಅಲ್ಲಿಯ ಬ್ರಾಹ್ಮಣರು ವಿಶೇಷವಾಗಿ ಜಪತಪಾದಿಗಳನ್ನು ಮಾಡುತ್ತಾ ,ಭಗವಂತನನ್ನು ದಾರಿ ತೋರಿಸು ಎಂದು ಪ್ರಾರ್ಥಿಸುತ್ತಿದ್ದಾಗ, ಆ ಕರಾಳ ಕತ್ತಲ ದಿನಗಳಲ್ಲಿ ಉದಯಿಸಿಬಂದ ಸೂರ್ಯನಂತೆ ಸೂರ್ಯಾಂಶ ಸಂಭೂತರಾದ ನಮ್ಮ ಶ್ರೀಬ್ರಹ್ಮಣ್ಯತೀರ್ಥರ ಆಗಮನವಾಯಿತು. ಭಕ್ತರಿಗೆ ಅವರನ್ನು ದರ್ಶಿಸಿದ ಕ್ಷಣಮಾತ್ರದಲ್ಲಿ ಕವಿದಿದ್ದ ಚಿಂತೆ, ಭಯಗಳೆಲ್ಲವೂ ದೂರವಾಯಿತು. ಆಗ ಭಕ್ತಾದಿಗಳು ಭಕ್ತಿಯಿಂದ ವಂದಿಸಿ,ಆ ಊರಿಗೆ ಇರುವ ತೊಂದರೆಯನ್ನು ನಿವಾರಿಸಿ ಎಲ್ಲರನ್ನೂ ಉದ್ಧರಿಸಬೇಕೆಂದು ಕೇಳಿಕೊಂಡರು. ಕರುಣಾಳುಗಳಾದ ಶ್ರೀಬ್ರಹ್ಮಣ್ಯತೀರ್ಥರು ಅವರ ಪ್ರಾರ್ಥನೆಯನ್ನು ಮನ್ನಿಸಿ ಆ ಊರಿನಲ್ಲೆ ಜಪ ತಪ ಪಾಠ ಪ್ರವಚನಾದಿಗಳನ್ನು ಮಾಡುತ್ತಾ, ಮಳೆಯನ್ನು ಬರಿಸುವಂತೆ ವಿಶೇಷವಾಗಿ ತಮ್ಮ ಗುರುಗಳ, ಪರಂಪರೆಯಲ್ಲಿ ಬಂದ ಸಕಲ ಯತಿಗಳನ್ನೂ, ವಾಯುದೇವರನ್ನೂ, ಮೂಲ ಗೋಪಾಲ ಕೃಷ್ಣ, ಪಟ್ಟಾಭಿರಾಮ ದೇವರನ್ನೂ ವಿಶೇಷವಾಗಿ ಧ್ಯಾನಿಸುತ್ತಾ, ಪ್ರಾರ್ಥಿಸುತ್ತಿದ್ದರು.ಕೆಲವೇ ದಿನಗಳಲ್ಲಿ ಆ ಊರಿನಲ್ಲಿ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಳೆಯಾಗಿ ಜನರು ಹರ್ಷಸಾಗರದಲ್ಲಿ ಮುಳುಗಿ ಸಂತೋಷ ಪಟ್ಟು ಗುರುಗಳಿಗೆ ಭಕ್ತಿಯಿಂದ ನಮಸ್ಕರಿಸಿ, ಈ ಅಸಾಧ್ಯವಾದ, ಅಗಾಧವಾದ ಮಹಿಮೆಯನ್ನು ಕೊಂಡಾಡಿದರು.
ಇದರ ಜೊತೆ ಶ್ರೀಬ್ರಹ್ಮಣ್ಯತೀರ್ಥರು ಆ ಊರಿನ ಒಬ್ಬ ಬ್ರಾಹ್ಮಣನಿಗೆ ಒಂದು ರಹಸ್ಯ ಮಂತ್ರೋಪದೇಶ ಕೊಟ್ಟು ಮತ್ತು ಅದರ ಜೊತೆಗೆ ಕೆಲವು ಔಷಧಗಳನ್ನು ಹೇಳಿಕೊಟ್ಟು, ಸಂತಾನವಿಲ್ಲದವರು ಯಾರೇ ಈ ಕ್ಷೇತ್ರಕ್ಕೆ ಬಂದು ಶಾಂತೇಶನನ್ನು ದರ್ಶಿಸಿ ನಿಮ್ಮನ್ನು ಕೇಳುತ್ತಾರೋ ಅವರಿಗೆ ಈ ಔಷಧಯನ್ನು ಕೊಡಬೇಕೆಂದು, ಮುಖ್ಯಪ್ರಾಣದೇವರು ಅವರಿಗೆ ಖಂಡಿತವಾಗಿಯೂ ಸಂತಾನವನ್ನು ಕರುಣಿಸುತ್ತಾನೆಂತಲೂ ಅನುಗ್ರಹಿಸಿದರು.
ಗುರುಗಳು ಆ ದಿನ ಪ್ರಸಾದಿಸಿದ ಆ ಸಿದ್ಧಿಯು ಈಗಲೂ ಆ ವಂಶಸ್ಥರಲ್ಲಿದ್ದು, ಪ್ರತಿ ವಿಜಯದಶಮಿಯ ದಿನ ಮಾತ್ರ ಸಂತಾನಕ್ಕಾಗಿ ಔಷಧ ಕೊಡಲಾಗುತ್ತದೆ. ಸುಮಾರು 1500 ಭಕ್ತರು ಆದಿನ ಅಲ್ಲಿ ಬಂದು ಭಕ್ತಿಯಿಂದ ಶಾಂತೇಶನನ್ನು ದರ್ಶಿಸಿ ಆ ಔಷಧವನ್ನು ಸ್ವೀಕರಿಸಿ ಫಲಗಳನ್ನು ಪಡೆಯುತ್ತಿದ್ದಾರೆ. ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ( ಹಿಂದೂ, ಮುಸ್ಲಿಂ ಮಹಿಳೆಯರೂ) ಔಷಧ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಆ ಊರಿನ ಸುತ್ತಮುತ್ತಲಿನ ಜಾನುವಾರುಗಳಿಗೂ ಆ ಔಷಧವನ್ನು ಕೊಡಿಸುತ್ತಾರೆ. ಇದಲ್ಲವೇ ಶ್ರೀಬ್ರಹ್ಮಣ್ಯತೀರ್ಥರ ಪರಮ ಕಾರುಣ್ಯ.
ಜ್ಞಾನ ಭಕ್ತಿ ವೈರಾಗ್ಯ ಬೆಳೆಸುವ ಗುರುಸಾರ್ವಭೌಮರು
ಹೀಗೆ ತಾವು ಸಂಚಾರ ಮಾಡಿದ ಎಲ್ಲ ಕಡೆ ಕ್ಷೇತ್ರಸ್ಥ ಮೂರ್ತಿಗಳ ದರ್ಶನದ , ಶ್ರೀಮನ್ ಮಧ್ವಮತದ ಪ್ರಚಾರ, ವಾದಿ ನಿಗ್ರಹ, ದೀನ ಜನರ ಉದ್ಧಾರ ಇವೆಲ್ಲವೂ ಬಿಡದೆ ಮಾಡುತ್ತಾ ತಮ್ಮ ಕಾರ್ಯಕ್ಷೇತ್ರವಾದ ಅಬ್ಬೂರಿಗೆ ಬಂದು ಶ್ರೀಮಚ್ಚಂದ್ರಿಕಾಚಾರ್ಯರಿಗೆ ಪಟ್ಟವನ್ನಿತ್ತು, ‘ವೈಶಾಖ ಬಹಳ ದ್ವಾದಶಿಯ’ ದಿನ ಅವತಾರವನ್ನು ಮುಗಿಸಿ ತೆರಳಿದ್ದಾರೆ.
ಇಂದಿಗೂ ಆ ವೃಂದಾವನಕ್ಕೆ ಪ್ರದಕ್ಷಿಣೆ ಬಂದವರ, ದರ್ಶನ ಪಡೆದವರ, ಸೇವೆ ಮಾಡಿದವರ ಎಲ್ಲ ಕಷ್ಮಲಗಳನ್ನೂ ಕಳೆದು ಅವರಿಗೆ ಸುಖವನ್ನಿತ್ತು, ಜ್ಞಾನ ಭಕ್ತಿ ವೈರಾಗ್ಯಗಳನ್ನು ಬೆಳೆಸುವವರಾಗಿದ್ದಾರೆ.
ಅಬ್ಬೂರು ಕ್ಷೇತ್ರ ಮಾಧ್ವರ ಪರಮ ಪವಿತ್ರವಾದ ಕ್ಷೇತ್ರಗಳಲ್ಲಿ ಮುಖ್ಯವಾದ ಕ್ಷೇತ್ರವಾಗಿದೆ. ದರ್ಶನಾಕಾಂಕ್ಷಿಗಳಾದರೂ ಅದು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಅನುಗ್ರಹವಾದನಂತರ ಮಾತ್ರ ದರ್ಶನ ಸಾಧ್ಯ, ನಮ್ಮ ಪಾಪಕರ್ಮಗಳು ಸ್ವಲ್ಪ ಮಾತ್ರವೂ ದೂರವಾಗಿದ್ದಾಗ ಮಾತ್ರ ಗುರುಗಳ ವೃಂದಾವನ ದರ್ಶನ ಪ್ರಾಪ್ತವಾಗುವುದೇ ಹೊರತು, ನಾನು ದರ್ಶನ ಮಾಡ್ತೇನೆ, ನಾನು ಅಬ್ಬೂರಿಗೆ ಹೋಗಿ ಬರ್ತೇನೆ ಅಂದರೆ ಅದು ಸಾಧ್ಯವಾಗದ ವಿಷಯವೆನ್ನುವುದು ಸತ್ಯ ಮತ್ತು ಅನುಭವಿಸಿದವರ ಅಭಿಪ್ರಾಯವೂ ಕೂಡ.
ಅಬ್ಬೂರಿನಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ಆರಾಧನೆ
ಶ್ರೀಕ್ಷೇತ್ರ ಅಬ್ಬೂರಿನಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ಆರಾಧನೆಯೂ ಮೂರುದಿನದ ಕಾಲ (ಏಕಾದಶಿಯೂ) ಅತ್ಯದ್ಭುತವಾದ ರೀತಿಯಲ್ಲಿ ನಡೆಯುತ್ತದೆ. ಸಾವಿರಾರು ಜನ ಭಕ್ತ ಜನರ ಮಧ್ಯದಲ್ಲಿ, ಯತಿಗಳ ಆಧ್ವರ್ಯದಲ್ಲಿ, ಭಜನೆ, ಸ್ತೋತ್ರ, ಪುರಾಣಾದಿಗಳು ನಡೆಸುತ್ತಾ, ವಿಜೃಂಭಣೆಯಿಂದ ಆರಾಧನಾ ಸಂಭ್ರಮ ನಡೆಯುತ್ತದೆ.
ಆರಾಧನೆ ಸಮಯವಲ್ಲದೇ ಇದ್ದರೂ ಪ್ರತೀದಿನ ಭಕ್ತರ ಸಂದೋಹವು ತುಂಬಿ ಕಾಣ್ತದೆ. ವಿಶೇಷವಾಗಿ ಸೂರ್ಯದೇವರ ಅವತಾರವಾದುದ್ದರಿಂದ ಭಾನುವಾರ ವಿಶೇಷವಾಗಿ ಭಕ್ತರು ದರ್ಶನಕ್ಕೆ ಬರ್ತಾರೆ. ಅಲ್ಲಿ ಸಂಪ್ರದಾಯದ ವಸ್ತ್ರಧಾರಣೆ ಮಾಡಿದವರಿಗೆ ಮಾತ್ರ ದರ್ಶನಕ್ಕೆ ಪ್ರವೇಶ. ಆಧುನಿಕ ವಸ್ತ್ರಗಳು ಧರಿಸಿದವರಿಗೆ ದರ್ಶನ ನಿಷಿದ್ಧ. ಈ ಕಡ್ಡಾಯವು ನಿಜಕ್ಕೂ ಶ್ಲಾಘನೀಯ. ನಮ್ಮ ಮಾಧ್ವರಿಗೆ ಮುಖ್ಯವಾದ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿಯ ಕಡ್ಡಾಯವನ್ನು ಅನುಸರಿಸುವ ಪದ್ಧತಿ ಬರುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಆಗ ಮಾತ್ರ ನಾವು ನಮ್ಮ ಸಂಪ್ರದಾಯವನ್ನು ಗೌರವಿಸಲೂ ಸಾಧ್ಯ.
ಉತ್ತಮ ಸಂತಾನದ ಅನುಗ್ರಹಕ್ಕೆ ವೃಂದಾವನ ಪ್ರದಕ್ಷಿಣೆ
ಶ್ರೀ ಬ್ರಹ್ಮಣ್ಯತೀರ್ಥರ ಅನುಗ್ರಹ ಪಡೆದವರು ಲಕ್ಷಾಂತರ ಜನ ಇದ್ದಾರೆ. ಮಕ್ಕಳು ಇಲ್ಲದೇ ಇದ್ದ ಗಂಡ ಹೆಂಡತಿ ಬಂದು ಗುರುಗಳ ವೃಂದಾವನ ಪ್ರದಕ್ಷಿಣೆ ಮಾಡಿ ಮೂರು ದಿನ ಸೇವೆ (ತೆಂಗಿನಕಾಯಿಯನ್ನು ಅಭಿಮಂತ್ರಿಸಿ ಸಂಕಲ್ಪದಿಂದ ) ಮಾಡಿದಾಗ ಉತ್ತಮ ಸಂತಾನ ಪಡೆದದ್ದೂ ಸಾವಿರಾರು ಜನರ ಅನುಭವವೂ. ಮತ್ತೆ ಕಣ್ಣು ಸರಿಯಿಲ್ಲದವರಿಗೆ ಕಣ್ಣಿನ ದೃಷ್ಟಿಯನ್ನು ಸರಿಪಡಿಸಿದ ಸೂರ್ಯ ದೇವರೇ ಇವರು. ಆರೋಗ್ಯದ, ಸಂಸಾರದ ಗೊಂದಲ ಯಾವುದೇ ಸಮಸ್ಯೆ ಇರಲಿ ‘ನೀವೇ ರಕ್ಷ’ ಎಂದು ಬೇಡಿ ಬಂದವರನ್ನು ತಾಯಿಯಂತೆ ಕೈ ಹಿಡಿದು ಕಾಪಾಡುತ್ತಿರುವ ಕರುಣಾಳುಗಳು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು.
ಶ್ರೀಮಚ್ಚಂದ್ರಿಕಾಚಾರ್ಯರು ತಿಳಿಸಿದಂತೆ, ಇವರ ವೃಂದಾವನ ದರ್ಶನ ಪಾವನವೂ, ಮೃತ್ತಿಕಾ ಧಾರಣೆ ಜೀವನದ ಉದ್ಧಾರವೂ, ಸೇವೆ ಎಲ್ಲ ಕಷ್ಟಗಳ ನಾಶದ ಮಾರ್ಗವೂ ಆಗಿದೆ ಎನ್ನುವುದು ಮನದಾಳದ, ಅನುಭವದ, ಎಲ್ಲರ ಆತ್ಮವಿಶ್ವಾಸದ ನಿದರ್ಶನವಾಗಿದೆ.
ಶ್ರೀ ಬ್ರಹ್ಮಣ್ಯತೀರ್ಥರ ಸ್ತುತಿ
ಇಂತಹಾ ಮಹಾನ್ ಗುರುಗಳನ್ನು ಪ್ರತೀದಿನವೂ ಸ್ಮರಣೆ ಮಾಡುವುದರೊಂದಿಗೆ, ಆರಾಧನಾ ಸಮಯದಲ್ಲಿ ವಿಶೇಷವಾಗಿ ಸ್ಮರಿಸಿ ಅವರ ಪರಮ ಕಾರುಣ್ಯಕ್ಕೆ ಪಾತ್ರರಾಗಬೇಕೆಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ.
‘ಸಮುತ್ಸಾರ್ಯತಮಃ ಸ್ತೋಮಮ್ ಸನ್ಮಾರ್ಗಂ ಸಂಪ್ರಕಾಶ್ಯಚ/’
‘ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್// ಎಂದು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರನ್ನು ಶ್ರೀಮಚ್ಚಂದ್ರಿಕಾಚಾರ್ಯರು ಸ್ತುತಿಸಿದರೆ, ಶ್ರೀ ಸಾಗರಕಟ್ಟೆ ಮಠದ ಪ್ರಪ್ರಥಮ ಯತಿಗಳಾದ ಶ್ರೀ ಪ್ರದ್ಯುಮ್ನತೀರ್ಥರು ಸಹ ಕನ್ನಡದಲ್ಲಿ ನರಹರಿ ಅಂಕಿತದಿಂದ ಶ್ರೀ ಬ್ರಹ್ಮಣ್ಯತೀರ್ಥರನ್ನು ಸ್ತುತಿಸಿದ್ದಾರೆ.
ಹರಿದಾಸವರೇಣ್ಯರಾದ, ಶ್ರೀ ಜಗನ್ನಾಥ ದಾಸಾರ್ಯರ ತಂದೆಯವರು ಶ್ರೀ ನರಸಿಂಹ ವಿಠಲರು, ಶ್ರೀ ಗೋಪಾಲದಾಸಾರ್ಯರು ತಮ್ಮ ಕೃತಿಗಳಿಂದ ಸ್ತುತಿಮಾಡಿದ್ದಾರೆ. ಶ್ರೀ ತಂದೆ ವೆಂಕಟೇಶವಿಠಲರೂ, ಶ್ರೀ ಪ್ರಸನ್ನ ಶ್ರೀನಿವಾಸ ದಾಸರು, ಮೈಸೂರಿನ ಹರಿದಾಸ ಕವಿಕುಲತಿಲಕರಾದ ಶ್ರೀ ಗುರುಗೋವಿಂದವಿಠಲರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ ಕುರಿತು ಸ್ತುತಿಪದಗಳು ರಚನೆ ಮಾಡಿದ್ದಾರೆ. ಶ್ರೀ ಗುರುಗೋವಿಂದವಿಠಲರು ಶ್ರೀ ಗುರುಗಳ ಇಡೀ ಜೀವನವನ್ನು ದರ್ಪಣದಂತೆ ದೀರ್ಘಕೃತಿಯನ್ನು ರಚಿಸಿದ್ದಾರೆ. ಇಂತಹ ಮಹಾನ್ ಗುರುಗಳ ಕಟಾಕ್ಷ ವೀಕ್ಷಣೆ ನಮ್ಮ ಮೇಲೆ ಸ್ವಲ್ಪಮಾತ್ರವಿದ್ದರೂ ನಮ್ಮ ಜೀವನದಲ್ಲಿ ಜ್ಞಾನದ ಸೂರ್ಯ ಬೆಳಕನ್ನು ತುಂಬಿದಂತೆಯೇ..
ಶ್ರೀ ಬ್ರಹ್ಮಣ್ಯತೀರ್ಥರ ಪಾದಪದ್ಮಗಳನ್ನು ಗಟ್ಟಿಯಾಗಿ ಹಿಡಿದು ಅವರ ಸ್ಮರಣೆ ಕ್ಷಣಕ್ಷಣಕ್ಕೂ ಬಿಡದೆ ನಮ್ಮಿಂದ ಮಾಡುವಂತಾಗಲೀ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡೋಣ…
*ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ/*
*ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮಮಾನಸೇ//*
ಹರಿದಾಸರು ತಮ್ಮ ಕೃತಿಗಳಲ್ಲಿ ಕಂಡಂತೆ ಶ್ರೀ ಬ್ರಹ್ಮಣ್ಯತೀರ್ಥರು..
ಶ್ರೀ ನರಸಿಂಹ ವಿಠಲಾಂಕಿತರ ಕೃತಿ. ನಿನ್ನ ನಂಬಿದೆನೋ ಬ್ರಹ್ಮಣ್ಯ ತೀರ್ಥಾರ್ಯಾ ಸನ್ನುತಚರಣಪಾವನ ಸುಚರ್ಯಾ ಘನ್ನ ಭವದ ಭಯವನ್ನು ಕಳೆದು ಯತಿ ರನ್ನ ಎನ್ನನು ಧನ್ಯಮಾಡೋ.. ಹರಿ ಭಕ್ತಿ ವೈರಾಗ್ಯ ಪರ ತತ್ವ ಜ್ಞಾನ ವರವ ಪಾಲಿಸು ಸರ್ವವಿದ್ಯಾಪ್ರವೀಣ ನರಸಿಂಹವಿಠ್ಠಲ ಶ್ರೀ ಹರಿ ಸನ್ನಿಧಾನ ಕರುಣಾಪಾತ್ರ ನೇ ದಿವ್ಯವರ ಪೂರ್ಣ ಜ್ಞಾನ ಹರಿ ಗುರು ಭಜನ ತ್ವತ್ಪದ ವ್ಯಾಸಾರ್ಯರ ಗುರುವೆಂದೆನಿಸಿದೆ ಧರೆಯೊಳು ಮೆರೆದೆ..
ಶ್ರೀ ತಂದೆ ವೇಂಕಟೇಶ ವಿಠಲಾಂಕಿತರ ಕೃತಿಯಲ್ಲಿ
ಧನ್ಯ ವಿದ್ವಜ್ಜನ ಶರಣ್ಯ ಶ್ರೀ ಬ್ರಹ್ಮಣ್ಯಾಭಿದಾ ಗುರುವರೇಣ್ಯ ಕಣ್ವ ತಟಿನೀಜ್ಞಾನಮಂಟಪ ಸನ್ನಿಧಾತೃಬ್ರಹ್ಮಣ್ಯ ವಿಠಲಾಭಿನ್ನ ನೃಹರಿ ಕಾರುಣ್ಯಪಾತ್ರಾಪನ್ನಪಾಲನರತ ಮಹಾತ್ಮಾ.. ಪ್ರತ್ಯರ್ಥಿ ಪಾಟನ ಚತುರಾ ಪುರುಷೋತ್ತಮ ತೀರ್ಥಾರ್ಯ ಕುವರ ಅರ್ಥಿಕಲ್ಪಿತಕಲ್ಪ ಪೃಥ್ವೀಜರಹ ವ್ಯಾಸ ತೀರ್ಥ ರ್ಗೆ ಮತ ರಾಜ್ಯವಿತ್ತು ವತ್ಸರ ಸರ್ವಜಿತ್ತಿನೆರಡನೆಯ ಬಹುಳ ದ್ವಾದಶಿ ಉತ್ತರಾಯಣದಲ್ಲಭೀಪುರ ಕ್ಷೇತ್ರ ತಂದೆ ವೇಂಕಟೇಶ ವಿಠಲನ ನೇತ್ರ ಧಾಮ ಸೇರುತ್ತ ಮೆರೆದೆ
ಶ್ರೀ ಬಾಗೇಪಲ್ಲಿ ಶೇಷದಾಸರ ರಚನೆ
ಕೈ ಪಿಡಿದು ಪಾಲಿಸೈ ಬ್ರಹ್ಮಣ್ಯ ಗುರುವೇ
ಅಯ್ಯ ನೀನೆಂದು ನಿನ್ನಡಿಗೆ ವಂದಿಸುವೆ
ಶ್ರೀ ಗೋಪಾಲದಾಸಾರ್ಯರ ರಚನೆ
ಬ್ರಹ್ಮಣ್ಯತೀರ್ಥರ ಚರಣಾಬ್ಜ ಯುಗ್ಮವಾ ಸಂಭ್ರಮದಲಿ ಸೇವಿಪ ಅಂಬುಜಬಂಧು ಸನ್ನಿಭ ಸಾಧುಯೆನುತ ಶ್ರೀ ಕುಂಭಿಣಿ ಮುನಿವರ್ಯರಾ ಆರ್ಯರಾ
























