ಶ್ರೀ ಕೌತಾಳಂ ರಂಗಯ್ಯನವರ ವೃಂದಾವನದ ಬಗೆಗಿನ ಕುತೂಹಲಕಾರಿ ಚರಿತ್ರೆಯಿದು

ಇಂದು ಶ್ರೀ ಕೌತಾಳಂ ರಂಗಯ್ಯನವರ ಆರಾಧನೆ. ಈ ಪ್ರಯುಕ್ತ ವಿಶೇಷ ಲೇಖನ.

ಒಮ್ಮೆ ಮಂತ್ರಾಲಯ ಶ್ರೀ ರಾಯರ ಮಠದ ಪರಂಪರೆಯಲ್ಲಿ ಬಂದ ಶ್ರೀ ವಾದೀಂದ್ರತೀರ್ಥ ಗುರುಗಳು ಸಂಚಾರ ಮಾಡುತ್ತಾ ಕೌತಾಳಂ ಗ್ರಾಮಕ್ಕೆ ಬರುತ್ತಾರೆ. ಗುರುಗಳಿಗೆ ಇವರ ಬಗ್ಗೆ ಮೊದಲೇ ತಿಳಿದಿತ್ತು. ಶ್ರೀನಿವಾಸನ ಪರಮ ಭಕ್ತರು ಇವರೆಂದು. ಶ್ರೀ ವಾದೀಂದ್ರ ಗುರುಗಳ ಬಗ್ಗೆ ಸಹ ಶ್ರೀರಂಗಯ್ಯನವರಿಗೆ ತಿಳಿದಿತ್ತು ಮಹಾಜ್ಞಾನಿಗಳು, ರಾಯರ ಪ್ರೀತಿ ಪಾತ್ರರೆಂದು. ಹೀಗೆ ಜ್ಞಾನಿಗಳ ಬಗ್ಗೆ ಜ್ಞಾನಿಗಳು ತಿಳಿಯುವದು ವಿಚಿತ್ರವೇನಲ್ಲ.

ಶ್ರೀ ರಂಗಯ್ಯನವರಿಗೆ ಸ್ವಪ್ನದಲ್ಲಿ ಒಲಿದು ಬಂದು ಅವರಿಂದಲೇ ಪ್ರತಿಷ್ಠಿತವಾದ ಶ್ರೀ ಕೇಶವ ದೇವರ ಗುಡಿಯಲ್ಲಿ ಗುರುಗಳ ಸಂಸ್ಥಾನ ಪೂಜೆಗ ಸಕಲ ವ್ಯವಸ್ಥೆ ಆಗಿತ್ತು. ಬಂದಂತಹ ಭಕ್ತರಿಗೆ ಎಲ್ಲಾ ಮುದ್ರಾಧಾರಣೆ ನಡೆಯುತ್ತಾ ಇದೆ. ರಂಗಯ್ಯನವರು ಸಹ ಮುದ್ರಾಧಾರಣೆಗೆ ಬಂದು ನಿಂತಾಗ ಗುರುಗಳು ನಸು ನಗುತ್ತಾರೆ. ಯಾಕೆಂದರೆ ಶ್ರೀ ರಂಗಯ್ಯನವರ ಮೈತುಂಬಾ ಶಂಖು ಚಕ್ರಾದಿಗಳು ಕಾಣಿಸಿಕೊಂಡವು. ಅದನ್ನು ಕಂಡು ಗುರುಗಳು ಅವರಿಗೆ ಶ್ರೀನಿವಾಸನ ಅನುಗ್ರಹ ಪಾತ್ರರೆಂದು ಕೊಂಡಾಡಿ ಆಶೀರ್ವಾದ ಮಾಡುತ್ತಾರೆ. ಈ ದೃಶ್ಯವನ್ನು ಶ್ರೀವಾದೀಂದ್ರ ಗುರುಗಳ ಶಿಷ್ಯರು ಆದ ಶ್ರೀ ಪುರುಷೋತ್ತಮಾಚಾರ್ಯರು ಕಾಣುತ್ತಾರೆ. ಇದನ್ನು ಕಂಡು ಶ್ರೀ ಪುರುಷೋತ್ತಮಾಚಾರ್ಯರು ರಂಗಯ್ಯನವರಿಗೆ ಗೌರವ, ಭಕ್ತಿಯಿಂದ ಪಾದ ನಮಸ್ಕಾರ ಮಾಡಿದಾಗ ಅಯ್ಯನವರು ಅವರನ್ನು ಪ್ರೀತಿ ಇಂದ ಆಲಂಗಿಸಿಕೊಂಡು ‘ಆಚಾರ್ಯರೇ, ಇಂದು ನೀವು ನಮಗೆ ನಮಸ್ಕಾರ ಮಾಡುತ್ತಾ ಇದ್ದೀರಿ. ಆ ಶ್ರೀ ಹರಿಯ ಸಂಕಲ್ಪ. ನಾಳೆ ನೀವು ನಮ್ಮಿಂದ ನಮಸ್ಕಾರ ಮಾಡಿಸಿಕೊಳ್ಳುವಿರಿ. ಶ್ರೀ ವಾದೀಂದ್ರ ಗುರುಗಳ ನಂತರ ಪೀಠದಲ್ಲಿ ನೀವು ಬಂದು ಶ್ರೀ ವಸುಧೇಂದ್ರರು ಎಂದು ನಾಮದಿಂದ ಮೆರೆಯುವಿರಿ. ನಾನು ಇನ್ನೂ ಕೆಲದಿನಗಳಲ್ಲಿ ಇಹಲೋಕ ಯಾತ್ರೆ ಯನ್ನು ಮುಗಿಸಬೇಕಾಗಿದೆ. ಶ್ರೀನಿವಾಸನ ಸಂಕಲ್ಪ. ಹೋಗಲೇಬೇಕು. ನೋಡಿ, ಭಗವಂತನ ಸಂಕಲ್ಪ ಎಷ್ಟು ವಿಚಿತ್ರವಾಗಿದೆ. ಬ್ರಹ್ಮಚಾರಿಯಾದ ನನಗೆ ವೃಂದಾವನ ವ್ಯವಸ್ಥೆ ಆಗುವದು. ಆ ವೃಂದಾವನ ಸನ್ನಿಧಿಯಲ್ಲಿ ತಾವು ಬಂದು ಸಂಸ್ಥಾನದ ಪೂಜೆಯನ್ನು ಮಾಡಬೇಕು. ಆಗ ಮಾತ್ರ ಈ ಬಡವನನ್ನು ಮರೆಯಬೇಡಿ’ ಎಂದು ಹೇಳುತ್ತಾರೆ.

(ಪೀಠಕ್ಕೆ ಬರುವ ಮುಂಚೆ ಅವರಿಗೆ ಭವಿಷ್ಯ ಹೇಳಿದ್ದು. ಕಾಲಾನಂತರದಲ್ಲಿ ಶ್ರೀ ವಸುಧೇಂದ್ರ ತೀರ್ಥರು ಅಲ್ಲಿಗೆ ಬಂದು ವೃಂದಾವನ ಸಮ್ಮುಖದಲ್ಲಿ ಸಂಸ್ಥಾನ ಪೂಜೆಯನ್ನು ಮಾಡಿ ಜನರಿಗೆ ಅವರ ಮಹಿಮೆಯನ್ನು ತಿಳಿಸುತ್ತಾರೆ.) ಕಾಲ ಕ್ರಮೇಣ ಶ್ರೀರಂಗಯ್ಯ ನವರಿಗೆ 60 ವರುಷಗಳು ತುಂಬಿದೆ. ಒಂದು ದಿನ ತಮ್ಮ ಶಿಷ್ಯನಾದ ಚನ್ನಯ್ಯನನ್ನು ಕರೆದು ತಮಗಾಗಿ ಒಂದು ವೃಂದಾವನ ನಿರ್ಮಿಸಲು ಹೇಳುತ್ತಾರೆ. ರಂಗಯ್ಯನವರ ಮಾತಿಗೆ ಶಿಷ್ಯ ಕಣ್ಣೀರು ಹಾಕುತ್ತಾ, ‘ನಾನು ಈ ವಿಯೋಗವನ್ನು ಭರಿಸಲಾರೆ’ ಅಂದಾಗ ಶ್ರೀರಂಗಯ್ಯನವರು ಹೇಳುತ್ತಾರೆ, “ಚನ್ನಯ್ಯ! ಹುಟ್ಟಿದ ಪ್ರತಿ ಜೀವಿ ಸಾಯಲೇಬೇಕು. ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸಲು ಸಾಧ್ಯವಿಲ್ಲ. ನಿಜವಾದ ಜ್ಞಾನಿಗಳು ಸಾವಿಗೆ ಭಯ ಪಡುವದಿಲ್ಲ ಅದಕ್ಕೆ ಸ್ವಾಗತವನ್ನು ಬಯಸುವನು. ಭಗವಂತನು ಹೊಸ ಅಂಗಿಯನ್ನು ಕರುಣಿಸುವಾಗ ಈ ಹಳೆಯ ಅಂಗಿಗೆ ವಿವೇಕ ಉಳ್ಳವರು ಚಿಂತಿಸುವದಿಲ್ಲ. ಕಾಲನಾಮಕ ಭಗವಂತನ ಆಜ್ಞೆಯನ್ನು ಮೀರಲು ರಮಾ ಬ್ರಹ್ಮಾದಿಗಳಾಗಲಿ, ದೇವತೆಗಳಾಗಲಿ ಯಾರಿಂದಲು ಸಹ ಸಾಧ್ಯವಿಲ್ಲ. ನಿನ್ನಲ್ಲಿ ಭಗವಂತನ ಅನುಗ್ರಹವಿದೆ. ಈ ಕಾರ್ಯವನ್ನು ಪೂರೈಕೆ ಮಾಡು” ಅಂತ ಆಜ್ಞೆ ಮಾಡುತ್ತಾರೆ.

ಅಕ್ಷಯ ನಾಮ ಸಂವತ್ಸರ ವೈಶಾಖ ಬಹುಳ ದ್ವಾದಶಿಯಂದು ಲಯಚಿಂತನೆ ಮಾಡುತ್ತಾ ಶ್ರೀರಂಗನ ಪುರಕ್ಕೆ ಶ್ರೀರಂಗಯ್ಯನವರು ತಮ್ಮ ಪಾರ್ಥೀವ ದೇಹವನ್ನು ಬಿಟ್ಟು ತೆರಳುತ್ತಾರೆ.

ನಂತರ ಅವರ ಶಿಷ್ಯನಾದ ಚೆನ್ನಯ್ಯನು ಗುರುಗಳ ವಾಣಿಯಂತೆ ವೃಂದಾವನ ಪ್ರವೇಶದ ಕಾರ್ಯಕ್ರಮ ಮಾಡಲು ಊರಿನವರಲ್ಲಿ ಕೇಳಲು ಆ ಊರಿನ ಪ್ರಮುಖರು ಅವನ ಮಾತಿಗೆ ಬೆಲೆಕೊಡದೆ ಬ್ರಹ್ಮಚಾರಿಗಳಿಗೆ ವೃಂದಾವನ ಪ್ರತಿಷ್ಠಿತ ಮಾಡುವುದು ಶಾಸ್ತ್ರ ವಿರುದ್ದ. ಯತಿಗಳಿಗೆ ಮಾತ್ರ ವೃಂದಾವನ ಪ್ರತಿಷ್ಠಿತ ಮಾಡುವುದು” ಅಂತ ಹೇಳಿ ಅವರ ದೇಹವನ್ನು ಅಗ್ನಿ ಸಂಸ್ಕಾರ ಮಾಡುತ್ತಾರೆ.

ಆ ರಾತ್ರಿಯೇ ಶ್ರೀ ರಂಗಯ್ಯನವರು ಎಲ್ಲರ ಕನಸಿನಲ್ಲಿ ಕಾಣಿಸಿಕೊಂಡು ಹೇಳುತ್ತಾರೆ: ‘ನನ್ನ ದೇಹವನ್ನು ದಹನ ಮಾಡಬೇಡಿ ಅಂತ ಮೊದಲೇ ಹೇಳಿದ್ದರು, ಸಹ ನೀವು ಅದರ ವಿರುದ್ಧವಾಗಿ ಮಾಡಿದ್ದೀರಿ. ಆದರು ಚಿಂತೆಇಲ್ಲ. ನನ್ನ ದೇಹ ದಹನವಾದರು ಸಹ ಆ ಚಿತಾ ಭಸ್ಮದಲ್ಲಿ ನನ್ನ ಕಿರುಬೆರಳು, ಕೌಪೀನ ತುಳಸಿ ಮಾಲೆಗಳು ಹಾಗೇಯೇ ಇವೆ. ತಂದು ವೃಂದಾವನದಲ್ಲಿ ಇಟ್ಟು ಪ್ರತಿಷ್ಠಿತ ಮಾಡಿರಿ” ಅಂತ ಸೂಚಿಸಿದರು.

ಎಲ್ಲರು ಭಯಭೀತರಾಗಿ ಸ್ಮಶಾನಕ್ಕೆ ಹೋಗಿ ನೋಡಿದಾಗ ರಂಗಯ್ಯ ನವರ ಚಿತಾಭಸ್ಮದ ಮಧ್ಯದಲ್ಲಿ ಅವರ ಕಿರುಬೆರಳು, ಕೌಪೀನ, ತುಲಸಿ ಮಾಲೆಗಳು ತೇಜಃ ಪುಂಜವಾಗಿ ಕಾಣಿಸಿದವು. ತಕ್ಷಣ ತಂದು ವೃಂದಾವನದಲ್ಲಿ ಇಟ್ಟು ಪ್ರತಿಷ್ಠಿತ ಮಾಡಿದರು. ಶ್ರೀ ರಂಗಯ್ಯನವರು ಎಂದಿನಂತೆ ಮೊದಲಿನ ಹಾಗೇ ಇವಾಗಲು ಬಂದ ಭಕ್ತರಿಗೆ ಅಭಯ ಪ್ರದಾನ ಮಾಡುತ್ತಾ ಅಲ್ಲಿ ಸನ್ನಿಹಿತರಾಗಿದ್ದಾರೆ.

ಶ್ರೀ ವೀರ ರಘುಪತಿವಿಠ್ಠಲ ದಾಸರು ಹೇಳಿದಂತೆ, ‘ಕನಸಿನಲಿ ಬಂದು ಕಿರಿಬೆರಳು ಕೌಪೀನವು| ವಣಗದಿಹ ತುಲಸಿ ಮಾಲೆಯು ಉಳಿದಿವೆ| ಅನುಮಾನಿಸದೇ ಇವನು ತಂದು| ವೃಂದಾವನದೊಳಿರಿಸೆ| ಘನ ಮಹತ್ತುಗಳನೆಲ್ಲ ತೋರಿಸುವೆನೆಂದು|” ಇಂತಹ ಅನೇಕ ಜ್ಞಾನಿಗಳು ನಮ್ಮ ಪರಂಪರೆಯಲ್ಲಿಬಂದು ಯತಿಗಳಾಗಿ, ಹರಿದಾಸರಾಗಿ, ಬಂದು ಹೋಗಿದ್ದಾರೆ. ನಿತ್ಯ ಸದಾಕಾಲ ಇಂತಹ ಪರಮ ಭಾಗವತರ ಸ್ಮರಣೆ, ವರ್ಣನೆ ಇಂದ ನಮ್ಮ ಅಂತಃಕರಣವು ಶುದ್ದವಾಗಿ ಭಗವಂತನ ಅನುಗ್ರಹ ಲಭಿಸುವುದು. ಹಾಗಾಗಿ ಇಂತಹ ಭಗವಂತನ ಭಕ್ತರೇ ಗತಿಯು ನಮಗೆ…

ಸಂಗ್ರಹ : ರಾಧಿಕಾ ಜೋಶಿ (ಗುರುಗಳ ವಂಶಸ್ಥರು)

Related Articles

ಪ್ರತಿಕ್ರಿಯೆ ನೀಡಿ

Latest Articles