ಸುರಿಸುರಿ ಸುರಿಯಬಾರದೆ ಮುತ್ತಾಗಿ ನೀರು

ಬಾರಯ್ಯ ಬಾರೋ ಮಳೆರಾಯ ನೀನು
ನಿನಗಾಗಿ ಕಾದಿಹರು ರೈತಾರು
ಭೂಮಿ ಹದವಾ ಮಾಡ್ಯಾರು
ಬೀಜ ಗೊಬ್ಬರಗಳ ತಂದಾರು
ಸುರಿಸುರಿ ಸುರಿಯಬಾರದೆ ಮುತ್ತಾಗಿ ನೀರು//


ಮೊದಲ ಜಳಕಕ್ಕೆ ಭೂತಾಯಿ ಕಾದಿಹಳು
ಬೆವರ ಕೊಳೆ ಕಳೆಯಲು ಕಾತರಿಸಿಹಳು
ತನಿಸಬಾರದೇ ಅವಳ ತನುವನೊಮ್ಮೆ ನೀ
ಗುಡುಗುಡುಸಿ ತುಸು ನರ್ತಿಸಿ
ಸುರಿಸುರಿ ಸುರಿಯಬಾರದೆ ಮುತ್ತಾಗಿ ನೀರು//


ಎತ್ತ ನೋಡಿದತ್ತ ಕರೀ ಮಣ್ಣೆ ಕಾಣುವುದು
ನಿನ್ನಾಗಮನದಿ ಬಿತ್ತುವಾ ಸುಗ್ಗಿಯು
ನಂತರವೇ ಹಚ್ಚ ಹಸುರಿನ ಪೈರು
ಬಹಳ ಕಾಯಿಸದಿರು ಮಳೆರಾಯ ನೀನು
ಸುರಿಸುರಿ ಸುರಿಯಬಾರದೆ ಮುತ್ತಾಗಿ ನೀರು//


ರೈತಪ್ಪ ನಂಬಿದ್ದು ನಿಮ್ಮಿಬ್ಬಿರನ್ನು
ಭೂತಾಯಿ ಮತ್ತು ಮಳೆರಾಯನನ್ನು
ನಾಡೆಲ್ಲ ನಂಬಿದ್ದು ರೈತಪ್ಪನನ್ನು
ಹುಸಿಯಾಗಿಸಬೇಡ ಅವರ ನಂಬಿಕೆಯನ್ನು
ಸುರಿಸುರಿ ಸುರಿಯಬಾರದೆ ಮುತ್ತಾಗಿ ನೀರು//

ನವಿಲು ನಾಟ್ಯವ ಮರಿತಿಹುದು
ಕೋಗಿಲೆ ಗಾಯನ ನಿಲ್ಲಿಸಿಹುದು
ಖಗ ಮೃಗಗಳು ಸ್ನಾನವ ಕೇಳುತಿಹವು
ಗಿಡ ಮರಗಳು ಕೂಡಾ ನಿನಗಾಗಿ ಕಾಯುತಿಹವು
ಸುರಿಸುರಿ ಸುರಿಯಬಾರದೆ ಮುತ್ತಾಗಿ ನೀರು//

ನಿನ್ನಿಂದಲೇ ಸಿರಿ ಸಂಪತ್ತು
ನೀ ಮುನಿದರೆ ಆಪತ್ತು
ದಯಮಾಡಿ ಬಾ ಈ ಹೊತ್ತು
ಕ್ಷಮೆ ಕೋರಿದೆ ಜೀವ ಜಗತ್ತು

ಸುರಿ ಸುರಿ ಸುರಿಯಬಾರದೆ ಮುತ್ತಾಗಿ ನೀರು//

ಜ್ಯೋತಿ ಸಿ ಕೋಟಗಿ

ಸಹ ಶಿಕ್ಷಕಿ
ಸರಕಾರಿ ಮಾದರಿ ಶಾಲೆ ತಲ್ಲೂರ
ತಾ: ಸವದತ್ತಿ ಜಿ: ಬೆಳಗಾವಿ.

Related Articles

ಪ್ರತಿಕ್ರಿಯೆ ನೀಡಿ

Latest Articles