ಚಿತ್ತ ಶುದ್ಧಿಗೆ ದೇವಿ ಆರಾಧನೆ

* ಕೃಷ್ಣಪ್ರಕಾಶ್ ಉಳಿತ್ತಾಯ

ವದನಸ್ಮರ ಮಾಂಗಲ್ಯ ಗೃಹತೋರಣ ಚಿಲ್ಲಿಕಾ| ವಕ್ತ್ರಲಕ್ಷ್ಮೀ ಪರೀವಾಹ ಚಲನ್ಮೀನಾಭಲೋಚನಾ||

ದೇವಿಯನ್ನು ವರ್ಣಿಸುವಲ್ಲಿ ಮಂತ್ರ ದ್ರಷ್ಟಾರ ಋಷಿಯ ಅಲಂಕಾರಗಳ ಪ್ರಜ್ಞೆ  ಮೇರೆಮೀರಿ ಕುಣಿದಿದೆ ಈ ಹಾಡಲ್ಲಿ. ಕಾಮರಾಜನ ಮಂಗಲ ಗೃಹದ ತೋರಣದ ಹಾಗಿರುವ ಹುಬ್ಬುಗಳು ತಾಯಿಯವು ಎಂಬ ಅದ್ಭುತ ಉಪಮೆ ಜಪಿಸುವವನನ್ನು ಮೈಮರೆಸದೇ ಇರದು.

ತಾಯಿ ತನ್ನ ಇನಿಯ ಕಾಮೇಶ್ವರ ( ಶಿವ)ನಿಗೆ ಅತ್ಯಂತ ಪ್ರೀತಿಪಾತ್ರಳಾದವಳು-ಎಂಬುದೊಂದು ಬಗೆಯಾದರೆ ತಾಯಿಯನ್ನು ನೋಡುತ್ತಾ ಇರುವ ಕಾಮೇಶ್ವರ ಆಕೆಯಲ್ಲೇ ಆಕೆಯನ್ನು ನೋಡುತ್ತಲೇ ಐಕ್ಯವಾಗುತ್ತಾನೆ. ದೃಷ್ಟಿಯಲ್ಲಿ ಐಕ್ಯವಾಗುವ ಕ್ರಿಯೆಯಲ್ಲಿ ಕಣ್ಣು ಎಂಬುದು ಮನೆಯ ಬಾಗಿಲಾದರೆ ಹುಬ್ಬು ಆ ಮಂಗಲಮಯವಾದ ಮನೆಯ ಬಾಗಿಲ ತೋರಣ. ಅಬ್ಬಾ ನೋಟವೇ! ಇದು ಕಾಮೇಶ್ವರನ ಭಾಗ್ಯವೋ? ತಾಯಿಯ ಭಾಗ್ಯವೋ? ಎಷ್ಟಾದರೂ ಅವರಿಬ್ಬರೂ ಪರಸ್ಪರರ ತಪಸ್ಸಿನ ಫಲಸ್ವರೂಪರಲ್ಲವೇ?

” ನಿಜತಪಃ ಫಲಾಭ್ಯಾಂ” ಎಂದು ಆಚಾರ್ಯ ಶಂಕರರು ತಮ್ಮ ಶಿವಾನಂದ ಲಹರಿ ಸ್ತೊತ್ರಮಾಲೆಯಲ್ಲಿ ಶಿವಶಕ್ತಿಯರನ್ನು ಸ್ತುತಿಸಿದ್ದಾರೆ. “ವದನಸ್ಮರಮಾಂಗಲ್ಯ ಗೃಹತೋರಣಚಿಲ್ಲಿಕಾ” ಈ ಹೆಸರಿನ ಅರ್ಥವನ್ನುಮತ್ತೊಮ್ಮೆ ಸ್ಮರಿಸೋಣ. ನಮ್ಮ ಮನದಲ್ಲಿರುವ ಅಮಂಗಲವನ್ನು ಹೋಗಲಾಡಿಸೋಣ.

“ವಕ್ತ್ರಲಕ್ಷ್ಮೀಪರೀವಾಹ ಚಲನ್ಮೀನಾಭಲೋಚನಾ” ತಾಯಿಯ ಕಣ್ಣುಗಳೇ ಇಲ್ಲಿಯ ಕೇಂದ್ರ ವಸ್ತು. ತಾಯಿಯ ಮುಖವನ್ನು ಜಲಪ್ರವಾಹಕ್ಕೆ ಹೋಲಿಸಿ ಕಣ್ಣುಗಳನ್ನು ಅಲ್ಲಿ ಚಲಿಸುತ್ತಿರುವ ಮೀನುಗಳಿಗೆ ಹೋಲಿಸಿದ್ದಾರೆ.

ತಾಯಿಯ ಮುಖದಲ್ಲಿ ಪ್ರವಹಿಸುತ್ತಿರುವುದು ಜಗತ್ತಿನ ಸಮಸ್ತ ರಸ-ಭಾವಗಳು (ಶೃಂಗಾರ,ಹಾಸ್ಯ ಇತ್ಯಾದಿ); ಅಲ್ಲಿ ಚಲಿಸುತ್ತಿದೆ ತಾಯಿಯ ಕಣ್ಣುಗಳು. ಈ ದೃಷ್ಟಿಯಿಂದ ತಾಯಿಯನ್ನು ಅನುಸಂಧಾನಮಾಡಿದರೆ ನಮ್ಮ ದೃಷ್ಟಿ( ಅಂತರಂಗ ಮತ್ತು ಬಹಿರಂಗ) ಶುದ್ಧವಾಗಿ ಆ ಮುಖೇನ  ನಮ್ಮ ಚಿತ್ತ ಶುದ್ಧಿಯನ್ನು ಸಾಧಿಸೋಣ.

Related Articles

ಪ್ರತಿಕ್ರಿಯೆ ನೀಡಿ

Latest Articles