ಹೆಣ್ಣು ಮಕ್ಕಳ ಸಂಭ್ರಮದ ಹಬ್ಬ ಗುಳ್ಳವ್ವನ ಹಬ್ಬ

ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಹಬ್ಬ, ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗಿ ನಾಗರ ಅಮಾವಾಸ್ಯೆಯವರೆಗೂ ನಡೆಯುತ್ತದೆ. ಅಮಾವಾಸ್ಯೆಯಿಂದ ಅಮಾವಾಸ್ಯೆ ಮಧ್ಯೆ ಬರುವ ಪ್ರತಿ ಮಂಗಳವಾರದ0ದು ಗುಳ್ಳವ್ವನನ್ನು ಕೂಡಿಸಿ ಪೂಜೆ ಮಾಡುತ್ತಾರೆ.

*ವೈ.ಬಿ.ಕಡಕೋಳ(ಶಿಕ್ಷಕರು)

ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಹಬ್ಬ ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದು. ಮದುವೆ ಆದವರು, ಆಗದವರು ಎಲ್ಲರೂ ಸೇರಿಕೊಂಡು ಉತ್ಸಾಹದಿಂದ ಆಚರಿಸುವ ಹಬ್ಬ ಇದಾಗಿದೆ. ಮದುವೆ ಆಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ಸಹ ‘ಮುತ್ತೈದೆ ಭಾಗ್ಯ’ಕ್ಕಾಗಿ, ಮಣ್ಣಿನ ¨ಸವಣ್ಣನನ್ನು, ಗುಳ್ಳವ್ವನನ್ನು ಮಾಡಿ ಪೂಜಿಸುತ್ತಾರೆ. ಈ ಮಣ್ಣು ಪೂಜೆ ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗಿ ನಾಗರ ಅಮಾವಾಸ್ಯೆಯವರೆಗೂ ನಡೆಯುತ್ತದೆ. ಅಮಾವಾಸ್ಯೆಯಿಂದ ಅಮಾವಾಸ್ಯೆ ಮಧ್ಯೆ ಬರುವ ಪ್ರತಿ ಮಂಗಳವಾರದ0ದು ಈ ಗುಳ್ಳವ್ವನನ್ನು ಕೂಡಿಸಿ ಪೂಜೆ ಮಾಡುತ್ತಾರೆ.
ಆಷಾಢ ಮಾಸದಲ್ಲೇ ‘ಗುಳ್ಳವ್ವನ ಹಬ್ಬ’ ಬರುತ್ತದೆ. ಈ ಹಬ್ಬವು ಮಹಿಳೆಯರಿಗೆ ಸೀಮಿತವಾದ ಹಬ್ಬ.. ವಾರಿಗೆ ಗೆಳತಿಯರು, ಓಣಿ ಕೇರಿಯ ವಾರಿಗೆ ಹೆಣ್ಣುಮ್ಮಕ್ಕಳು ಸೇರಿ ಆಚರಿಸುವ ಹೆಣ್ಣುಮಕ್ಕಳ ಹಬ್ಬ ಇದಾಗಿದೆ.
‘ಗುಳ್ಳವ್ವ’, ‘ಗುಳಕವ್ವ’, ‘ಗೋಲಕವ್ವ’ ಎಂಬ ವಿವಿಧ ಹೆಸರುಗಳಿಂದ ಕರೆಸಿಕೊಂಡು, ಪೂಜೆಗೊಳ್ಳುವ ‘ಗುಳ್ಳವ್ವ’ ಜನಪದರ ದೇವತೆ.
ಗುಳ್ಳವ್ವನ ಬಗ್ಗೆ ಇರುವ ಜನಪದ ಕಥೆ
ಹಿಂದಿನ ಕಾಲದಲ್ಲಿ ಒಂದು ಊರು. ಆ ಊರಲ್ಲಿ ಒಬ್ಬ ಬಡ ರೈತನಿದ್ದ. ಅಷ್ಟೇ ಅಲ್ಲ ಬಹಳ ಆಗರ್ಭ ಶ್ರೀಮಂತ ಕೂಡ ಆ ಊರಿನಲ್ಲಿದ್ದ. ಬಡವನಿಗೆ ಹೆಣ್ಣು ಮಗಳಿದ್ದಳು ಅವಳ ಹೆಸರು “ಚಿನ್ನವ” ಎಂದಿತ್ತು. ಮಗಳು ಬೆಳೆದು ದೊಡ್ಡವಳಾಗಿದ್ದರೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಬಡವನಿಗೆ ಅವಳ ವಿವಾಹ ಮಾಡಲಾಗಿರಲಿಲ್ಲ.
ಆ ಊರಿನ ಶ್ರೀಮಂತನಿಗೂ ಕೂಡ ಒಬ್ಬನೇ ಮಗನಿದ್ದ. ಕಾರಣಾಂತರಗಳಿ0ದ ಇರುವ ಒಬ್ಬನೇ ಮಗನಿಗೆ ವಿವಾಹ ಮಾಡಲು ಶ್ರೀಮಂತನಿಗೂ ಆಗಿರಲಿಲ್ಲ. ಹೀಗಿರುವಾಗ ಶ್ರೀಮಂತನ ಮಗನು ಸಾವನ್ನಪ್ಪುವನು. ಶವ ಸಂಸ್ಕಾರದ ಪದ್ಧತಿಯಂತೆ “ಮದುವೆ ಆಗದೆ ಮಹಿಳೆ, ಪುರುಷರು ಸತ್ತರೆ ಅವರನ್ನು ಅಡ್ಡ ಒಯ್ಯಬೇಕು. ‘ಮದುವೆ ಆಗದೆ ಸತ್ತರೆ ಅವರಿಗೆ ಮೋಕ್ಷವಿಲ್ಲ ಎಂಬ ನಂಬಿಕೆಯಿ0ದಾಗಿ ಸತ್ತವರಿಗೆ ‘ಎಕ್ಕೆ’ ಗಿಡಕ್ಕೆ ಮದುವೆ ಮಾಡುವ ಸಂಪ್ರದಾಯ ಆ ಹಳ್ಳಿಯಲ್ಲಿತ್ತು. ಇಂದಿಗೂ ಕೂಡ ಹೀಗೆ ಮದುವೆ ಮಾಡಿ ಸಂಸ್ಕಾರ ಮಾಡಿದರೆ ಮೋಕ್ಷ ಸಿಗುತ್ತದೆಂಬ ನಂಬಿಕೆ ನಮ್ಮಲ್ಲಿದೆ. ಈ ನಂಬಿಕೆಯಿ0ದಾಗಿಯೇ ಶ್ರೀಮಂತ ಮಗನ ಮದುವೆ ಮಾಡಿ ಶವ ಸಂಸ್ಕಾರ ಮಾಡಿದರಾಯಿತು ಎಂದುಕೊ0ಡು ಯಾರಾದರೂ ಬಡತನದವರಿದ್ದರೆ ಅವರ ಹೆಣ್ಣು ಮಗಳನ್ನು ಸತ್ತಿರುವ ತನ್ನ ಮಗನಿಗೆ ಧಾರೆ ಎರೆದು ಕೊಡಲು ಮುಂದೆ ಬಂದರೆ ಅವರಿಗೆ ಒಡವೆ ಸಂಪತ್ತು ನೀಡುವ ತೀರ್ಮಾನಕ್ಕೆ ಬಂದು ಅಂಥಹವರೇನಾದರೂ ಸಿಕ್ಕರೆ ಕರೆದುಕೊಂಡು ಬರುವಂತೆ ತನ್ನ ಕೈಯಲ್ಲಿನ ಕೆಲಸಗಾರರಿಗೆ ಅಪ್ಪಣೆ ಮಾಡುತ್ತಾನೆ.. ಈ ಸುದ್ದಿ ತಿಳಿದ ಬಡವ ವರದಕ್ಷಿಣೆ ಕೊಡಲಾಗದೆ, ಮದುವೆ ಆಗದೆ, ಮನೆಯಲ್ಲಿದ್ದ ಚಿನ್ನವ್ವಳನ್ನು ಈ ಶ್ರೀಮಂತನ ಮಗನೊಂದಿಗೆ ಮದುವೆ ಮಾಡಲು ಒಪ್ಪಿ, ಮಗಳನ್ನು ಕರೆದುಕೊಂಡು ಸತ್ತ ಶ್ರೀಮಂತನ ಮಗನ ಶವದ ಹತ್ತಿರ ಬರುತ್ತಾನೆ. ಸತ್ತ ಶ್ರೀಮಂತನ ಮಗನೊಂದಿಗೆ ಬಡವಿ ಚಿನ್ನವ್ವನ ಮದುವೆ ಕಾರ್ಯ ನಡೆದು ಬಿಡುತ್ತದೆ.
ಇನ್ನೇನು ಮಗನನ್ನು ಕುಣಿಯೊಳಗಿಟ್ಟು ಶವಸಂಸ್ಕಾರ ಮಾಡಬೇಕೆನ್ನುವಷ್ಟರಲ್ಲಿ ಚಿನ್ನವ್ವ, ನನ್ನ ಪತಿಯನ್ನು ಮಣ್ಣಿನಲ್ಲಿ ಮುಚ್ಚಬೇಡಿ. ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇವಳ ಕರೆಗೆ ಓಗೊಟ್ಟು ಮಣ್ಣು ಮುಚ್ಚದೆ, ರಾತ್ರಿಯಾದುದರಿಂದ ಚಿನ್ನವ್ವಳೊಬ್ಬಳನ್ನೇ ಬಿಟ್ಟು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೊರಟು ಹೋಗುತ್ತಾರೆ. ಇತ್ತ ಸ್ಮಶಾನದಲ್ಲಿ ಚಿನ್ನವ್ವ ಸತ್ತ ಗಂಡನನ್ನು ಜೀವಂತಗೊಳಿಸಬೇಕೆ0ಬ ದೃಢ ನಿರ್ಧಾರದಿಂದ ಪಕ್ಕದ ಹೊಲದಲ್ಲಿರುವ ಮಣ್ಣನ್ನು ತಂದು ಬಸವಣ್ಣನ ಮೂರ್ತಿ ಮಾಡುತ್ತಾಳೆ. ತನ್ನ ಪತಿಯ ಶವದ ಮುಂದೆ ಮಣ್ಣಿನ ಬಸವಣ್ಣನ ಮೂರ್ತಿಯನ್ನು ಇಟ್ಟು ಭಯ-ಭಕ್ತಿಯಿಂದ ಪೂಜಿಸುತ್ತಾಳೆ. ದೇವರು ಇವಳ ಭಕ್ತಿಗೆ ಮೆಚ್ಚಿ ಅವಳ ಗಂಡನಿಗೆ ಜೀವದಾನ ಮಾಡುತ್ತಾನೆ. ಜೀವದಾನ ಪಡೆದ ಗಂಡನೊ0ದಿಗೆ ಚಿನ್ನವ್ವ ತಂದೆಯ ಮನೆಗೆ ಬರುತ್ತಾಳೆ. ಅಂದು ಅಮವಾಸ್ಯೆ ಇದ್ದ ಪ್ರಯುಕ್ತ ಈ ಅಮವಾಸ್ಯೆಯನ್ನೇ ‘ಮಣ್ಣೆತ್ತಿನ ಅಮಾವಾಸ್ಯೆ’ ಎಂದು ಆಚರಿಸುವ ಸಂಪ್ರದಾಯ ಬೆಳೆದು ಬಂದಿತೆ0ದು ಹೇಳುತ್ತಾರೆ. ಚಿನ್ನವ್ವ ಸತ್ತ ಗಂಡನ ಜೀವವನ್ನು ಮಣ್ಣಿನ ಎತ್ತನ್ನು ಮಾಡಿ ಪೂಜಿಸಿ ಪಡೆದುದರ ಹಿನ್ನೆಲೆಯಿಂದಲೇ ಇಂದಿಗೂ ಈ ಮಣ್ಣಿನ ಬಸವಣ್ಣ ಹಾಗೂ ಗುಳ್ಳವ್ವನನ್ನು ಮಾಡಿ ಪೂಜಿಸುವ ಸಂಪ್ರದಾಯ ಉಳಿದುಕೊಂಡು ಬಂದಿದೆ. ಇಲ್ಲಿ ಗುಳ್ಳವ್ವನನ್ನು ಚಿನ್ನವ್ವನ ರೂಪದಲ್ಲಿ, ಸತ್ತ ಅವಳ ಪತಿಯನ್ನು ಬಸವಣ್ಣನ ರೂಪದಲ್ಲಿ ಪೂಜಿಸುತ್ತ ಬಂದಿರುವುದು ವಿಶಿಷ್ಟವಾದ ಪದ್ಧತಿಯಾಗಿದೆ. ನಮ್ಮ ಹಿರಿಯರು ಆಕಾಶದಲ್ಲಿ ಕಂಡು ಬರುವ ನಕ್ಷತ್ರವನ್ನು ‘ಚೆನ್ನವ್ವನ ದಂಡಿ’ ಎಂದು ಇಂದಿಗೂ ತೋರಿಸುವುದನ್ನು ನಾವು ಗ್ರಾಮೀಣ ಪ್ರದೇಶದಲ್ಲಿ ಕಾಣುತ್ತೇವೆ.ಹೀಗೆ ಚಿನ್ನವ್ವಳ ಪ್ರತಿರೂಪ ಗುಳ್ಳವ್ವನ ಹಬ್ಬ ಆಷಾಢ ಮಾಸದಲ್ಲಿ ಬೆಳೆದು ಬಂದಿದೆ ಎಂದು ಗ್ರಾಮೀಣ ಹಿರಿಯರು ಹೇಳುವರು.

ಗುಳ್ಳವ್ವನನ್ನು ಇಡುವ ರೀತಿ
ಗುಳ್ಳವ್ವನನ್ನು ಇಡುವವರು ಮಣ್ಣೆತ್ತಿನ ಅಮಾವಾಸ್ಯೆಯಿಂದ ಬರುವ ಮೊದಲನೆ ಸೋಮವಾರ, ಕೆಲವು ಕಡೆ ಮಂಗಳವಾರ ಇಡುವರು. ಮೊದಲವಾರ ಒಂದೆತ್ತರ; ಎರಡನೇ ವಾರ ಎರಡೆತ್ತರ, ಮೂರನೆ ವಾರ ಮೂರೆತ್ತರ, ನಾಲ್ಕನೇ ವಾರ ನಾಲ್ಕೆತ್ತರ ಗುಳ್ಳವ್ವನನ್ನಿಟ್ಟು ಪೂಜಿಸುವ ಸಂಪ್ರದಾಯವಿದೆ. ಕೊನೆಯದಾಗಿ ನಾಗರ ಪಂಚಮಿ ಹಬ್ಬ ಬರುತ್ತದೆ. ಈ ಗುಳ್ಳವ್ವನ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಮತ್ತು ನಾಗರ ಪಂಚಮಿ ಹಬ್ಬಗಳನ್ನು ಬೆಸೆಯುವ ಒಂದು ಕೊಂಡಿಯAತಿದೆ. ಆಯಾ ವಾರಗಳ ಪ್ರಕಾರವಾಗಿ ಕಮಾನುಗಳುಳ್ಳ ಗುಳ್ಳವ್ವನ ಚಟ್ಟುಗಳನ್ನು ಅಕ್ಕ-ಪಕ್ಕದಲ್ಲಿ ಚೌಕಾಕಾರ ಇಲ್ಲವೆ ಶಂಕುವಿನಾಕೃತಿಯಲ್ಲಿ ಕಂಬಗಳನ್ನು ತಯಾರಿಸಿ ಇಡುತ್ತಾರೆ.
ಕಂಬಗಳಿಗೆ ಚಿತ್ತಾರದ ಬಣ್ಣ ಬಣ್ಣದ ಹಾಳೆಗಳನ್ನು ಹಚ್ಚಿ ಶೃಂಗರಿಸುತ್ತಾರೆ. ಈ ಕಮಾನುಗಳ ಮಧ್ಯ ಅರಲಿನಿಂದ ಮಾಡಿದ ಕಂಬಗಳನ್ನು ಗುಳ್ಳವ್ವನ ಚಟ್ಟಿನೊಂದಿಗಿಟ್ಟು ಶೃಂಗರಿಸುತ್ತಾರೆ. ಈ ಕಮಾನುಗಳಿಗೆ ಕುಸುಬೆ, ಗುಲಗಂಜಿ ಹಚ್ಚಿ ಶೃಂಗಾರ ಮಾಡುತ್ತಾರೆ. ಇದಲ್ಲದೆ ಅಕ್ಕಪಕ್ಕದಲ್ಲಿ ಬಣ್ಣದ ಚಿತ್ತಾರಗಳನ್ನು ಚುಂಚಿರುತ್ತಾರೆ. ಮುಂಭಾಗದಲ್ಲಿ ಮಣ್ಣಿನಿಂದ ಮಾಡಿದ ಗುಳ್ಳವ್ವ ಮತ್ತು ಬಸವಣ್ಣನ ಮೂರ್ತಿಗಳನ್ನು ಇಟ್ಟಿರುತ್ತಾರೆ. ಈ ಗುಳ್ಳವ್ವ, ಗೊಗ್ಗವ್ವ ಮಣ್ಣೆತ್ತುಗಳನ್ನು ಕೂಡ ಕುಸುಬೆ, ಗುಲಗಂಜಿ, ಜೋಳದ ಕಾಳುಗಳನ್ನು ಹಚ್ಚಿ ಶೃಂಗರಿಸುತ್ತಾರೆ. ಸಂಜೆ ಹೊತ್ತು ಊರಿನ ಗೆಳತಿಯರನ್ನೆಲ್ಲ ಕರೆದು ಪೂಜೆ ಮಾಡಿ ಆರತಿ ಬೆಳಗುತ್ತಾರೆ. ಚುರುಮರಿ ಪಂಚ ಫಳಾರ, ಪನಿವಾರವೆಂದು ಹಂಚುತ್ತಾರೆ. ರಾತ್ರಿ ಊಟ ಮಾಡಿದ ಮೇಲೆ ಹಾಗೂ ಗುಳ್ಳವ್ವನ ಪೂಜಾ ಸಂದರ್ಭದಲ್ಲಿ ಗುಳ್ಳವ್ವನ ಬಗ್ಗೆ ಹಾಗೂ ಬಸವಣ್ಣನ ಕುರಿತಾದ ಹಾಡುಗಳನ್ನು ಹಾಡುತ್ತಾರೆ. ಗುಳ್ಳವ್ವನ ಬಗ್ಗೆ , ಬಸವಣ್ಣನ ಬಗ್ಗೆ ಗುಣಗಾನ ಮಾಡುತ್ತಾರೆ. ಹೀಗೆ ಆಷಾಢ ಮಾಸದಲ್ಲಿ ಬರುವ ಗುಳ್ಳವ್ವನ ಪೂಜಿಸುವ ಸಂಪ್ರದಾಯ ಇಂದು ಕಣ್ಮರೆಯಾಗುತ್ತಿದೆ.ಅದನ್ನು ಉಳಿಸಿ ಬೆಳೆಸುವ ಪರಂಪರೆ ಬೆಳೆಯಬೇಕಾಗಿದೆ. ಇಲ್ಲದಿದ್ದಲ್ಲಿ ಆಚರಣೆಗಳು ಒಂದೊAದಾಗಿ ನಶಿಸುವ ಸಾಧ್ಯತೆಯುಂಟು.

ಗುಳ್ಳವನ ಕುರಿತ ಹಾಡುಗಳು
ಗಂಡನ ಮನೆಯಲ್ಲಿದ್ದ ಯುವತಿಯರು ಪಂಚಮಿ ಹಬ್ಬ ಬರುವ ಸಮಯ ತವರಿಗೆ ಹೋಗುವ ಕಾತರ ಅಲ್ಲಿ ಗುಳ್ಳವ್ವನನ್ನು ಮಾಡಿ ಗೆಳತಿಯರೊಂದಿಗೆ ಆಡುವ ತವಕ ಅದನ್ನು ತಮ್ಮ ಹಾಡಿನಲ್ಲಿ ಈ ರೀತಿ ವ್ಯಕ್ತಪಡಿಸುವರು
ಪಂಚಮಿ ಬಂತು ಸನಿಯಾಕ
ನಮ್ಮಣ್ಣ ಬರಲಿಲ್ಲ ಕರಿಲಾಕ
ಕರಿ ಸೀರಿ ಉಡಸಾಕ
ಅಳ್ಳಿಟ್ಟ ತಂಬಿಟ್ಟ ತಿನಿಸಾಕ
ಗುಳ್ಳವ್ವನ ಮಣ್ಣ ತರಲಿಲ್ಲ
ಗುಲಗಂಜಿ ಹಚ್ಚಿ ಆಡಲಿಲ್ಲ
ಯಾವಾಗ ನೋಡೆನ ತಾಯೀನ
ಯಾವಾಗ ಹೋದೇನ ತವರಿಗೆ

ನಾಲ್ಕು ಗುಳ್ಳವಾದರೂನೂ
ನಮ್ಮಣ್ಣ ಬರಲಿಲ್ಲ ಕರಿಲಾಕ

ಎರಡನೆಯ ಹಾಡು ಗುಳ್ಳವ್ವನನ್ನು ಕೂಡ್ರಿಸಿ ಪ್ರತಿ ವಾರವೂ ಒಂದೊ0ದು ಎತ್ತರಕ್ಕೆ ಏರಿಸುವ ಆಕೃತಿಯನ್ನು ಕುರಿತಂತೆ ಹೀಗೆ ಹಾಡುವರು.
೨) ಬಸವಕ್ಕ ಬಸವನ್ನೀರೆ
ಬಸವನ ಪಾದಕ ಶರಣೆನ್ನೀರೆ
ಒಂದು ಸುತ್ತಿನ ಕ್ವಾಟಿ(ಕೋಟೆ)
ಅದರೊಳು ಹೊಂದಿ ನಿಂತಾನೋ ಬಸವ

ಬಸವಕ್ಕ ಬಸವನ್ನೀರೆ
ಬಸವನ ಪಾದಕ ಶರಣೆನ್ನೀರೆ
ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ಮಾಡತೀಯೇನೋ ಬಸವ

ಹೀಗೆ ಹತ್ತು ಸುತ್ತಿನ ಕೋಟೆಯವರೆಗೂ ಹಾಡು ಬೆಳೆಸುತ್ತ ಗುಳ್ಳವನ ಮುಂದೆ ಗೆಳತಿಯರು ಹಾಡುವರು.

ಗುಳ್ಳವ್ವ ಮರಣ ಹೊಂದಿದಾಗ ಹಾಡುವ ಹಾಡು
೩)
ಸತ್ತೇನ ಚನವೀರಿ
ನಿನ್ಯಾರ ಬಂದಿದ್ದಿ
ನಿನ್ನ ಗಂಡ ಮಲ್ಲೇಶಿಗೇನು ಹೇಳಿ ಹೋದೆ
ಚನವೀರಿ

ಎಂದು ದುಃಖದಿಂದ ಹೇಳುವ ಹಾಡನ್ನು ಗಂಡು ಹೆಣ್ಣು ಬೇಧವಿಲ್ಲದೇ ಎಲ್ಲರೂ ಹಾಡಿಕೊಂಡು ಅಳುತ್ತಾರೆ. ಮುಂದುವರಿದು
ಬಳ್ಳೊಳ್ಳಿ ಬನದಾಗ
ಉರುಳಾಡಿ ಅಳತಾನ
ಏಳವ್ವ ಚನವೀರಿ
ನಿನ ಗಂಡ ಕರಿತಾನ

Related Articles

ಪ್ರತಿಕ್ರಿಯೆ ನೀಡಿ

Latest Articles