(ಜುಲೈ 28 ಗುರುಗಳ ಆರಾಧನೆಯ ಪ್ರಯುಕ್ತ ಸಂಗ್ರಹ ಲೇಖನ)
ದ್ವೈತ ಸಿದ್ಧಾಂತದ ಇತಿಹಾಸದಲ್ಲಿ ತಮ್ಮ ಟೀಕಾಗ್ರಂಥಗಳಿಂದ ಜಯಸ್ಥಂಭ ನಿಲ್ಲಿಸಿದ ಜಯತೀರ್ಥರು ಮುನಿತ್ರಯರಲ್ಲಿ ಒಬ್ಬರೆನಿಸಿದ್ದಾರೆ. ಈ ಭೂಮಿಯ ಮೇಲೆ ಅವರ ಅವತಾರ ಕಾರ್ಯ 1340 ರಿಂದ 1388. ತಮ್ಮ ತಪಸ್ಸು- ವಿದ್ಯೆ- ತ್ಯಾಗ- ಅಧ್ಯಯನ- ಅಧ್ಯಾಪನ ಗ್ರಂಥ ರಚನೆಗಳಲ್ಲಿ ಸೀಮಾ ಪುರುಷರಾಗಿದ್ದಾರೆ. ಇದು ಒಂದು ಯುಗದ ಸಾಧನೆಯಲ್ಲ. ಆ ಮಹಾಮಹಿಮರ ಯುಗಾಂತರಗಳ ಸಾಧನೆ.
ಶ್ರೀಕೃಷ್ಣನ ಶಿಷ್ಯನಾಗಿ, ಅವನ ಮುಖದಿಂದಲೇ ಗೀತಾಮೃತವನ್ನು ಪಾನ ಮಾಡಿದ “ಉಪದೇಷ್ಯಂತಿತೇ ಜ್ಞಾನಂಜ್ಞಾನಿನ: ತತ್ವದರ್ಶಿನ:”-ಮುಂದೆ ಮಹಾಜ್ಞಾನಿಗಳೇ ನಿನಗೆ ತತ್ವೋಪದೇಶ ಮಾಡುವರು ಎಂಬ ಅನುಗ್ರಹ ಪಡೆದ “ಹೇಪಶೋ” ಎಂದು ರಥಸ್ತಂಭದಲ್ಲಿದ್ದ ಮಾರುತಿಯಿಂದ ಅರ್ಜುನ ಸಂಭೋದಿಸಲ್ಪಟ್ಟ ಶ್ರೀಕೃಷ್ಣ-ಭೀಮರ ಅನುಗ್ರಹದ ಪರಿಣಾಮ ಕಲಿಯುಗದಲ್ಲಿ ಎತ್ತಾಗಿ ಅವತಾರ. ವೃಷಭ ರೂಪದಲ್ಲಿದ್ದು ಮಾಡಿದ್ದಾದರೂ ಏನು ? “ಆನಂದತೀರ್ಥರು ನಿತ್ಯ ಪಠಿಸುವ ಪುಸ್ತಕ ಹೊರುತಿರಲು” ಎಂಬುದಾಗಿ ವ್ಯಾಸವಿಠಲರು ಹಾಡಿದ್ದಾರೆ. ಶ್ರೀಮದಾಚಾರ್ಯರ ಗ್ರಂಥಗಳನ್ನು ಎತ್ತಾಗಿ ಹೊತ್ತು ಸಾರ್ಥಕ ಸೇವೆಗೈದುದು ಅವರ ಒಂದು ಭಾಗ್ಯವಾದರೆ ಶ್ರೀಮದಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ ಹೇಳುವಾಗ ಆ ಪಾಠವನ್ನು ಸಮಗ್ರವಾಗಿ ಕೇಳಿ ಚಿಂತನೆ ಮಾಡಿದುದು ಮತ್ತೊಂದು ಭಾಗ್ಯ. ಶ್ರೀಮದಾಚಾರ್ಯರ ಅಧ್ಯಾತ್ಮದ ಐಸಿರಿಯನ್ನು ತಲೆ ತುಂಬ ತುಂಬಿಕೊಂಡು ಚಿಂತನೆ ಮಾಡಲು ಪಶುಜನ್ಮ ತುಂಬಾ ಸಾಧುವಲ್ಲವೇ ?
ಪಾಠದ ಸಮಯದಲ್ಲಿ ಶಿಷ್ಯರು ಕೇಳಿದರು, “ಸ್ವಾಮಿ, ಅರ್ಥಗರ್ಭಿತವಾದ ತಮ್ಮ ಗ್ರಂಥಗಳಿಗೆ ವ್ಯಾಖ್ಯಾನ ಮಾಡುವವರು ಯಾರು ?” “ವ್ಯಾಖ್ಯಾಷ್ಯತಿ ಏಷಗೋರಾಟ್” ಎಂದರು ಆಚಾರ್ಯರು. ತಮಗಿಲ್ಲದ ಭಾಗ್ಯ ಈ ಪಶುವಿನ ಪಾಲಾಯಿತಲ್ಲಾ- ಎಂದುಕೊಂಡ ಒಬ್ಬ ಶಿಷ್ಯ ಎತ್ತಿಗೆ ವಿಷ ಹಾಕಿದ. ಸಂಕಟಪಡುತ್ತಿರುವ ಎತ್ತು ಅಶ್ರುನೇತ್ರಗಳಿಂದ ಆಚಾರ್ಯರನ್ನು ನೋಡಿತು. ತಟ್ಟನೆ ಆಚಾರ್ಯರು ಎತ್ತಿನ ಬೆನ್ನು ತಟ್ಟಿದರು. ವಿಷ ಬಾಧೆಯಿಂದ ರಕ್ಷಿಸಿದರು. ಎತ್ತು ಕೃತಜ್ಞತಾ ಭಾವದಿಂದ ಶ್ರೀಮದಾಚಾರ್ಯರನ್ನು ನೋಡಿತು. ಮುಂದಿನ ಅವತಾರದಲ್ಲಿ ಶ್ರೀಕೃಷ್ಣ-ಮಧ್ವರ ಸೇವೆಯನ್ನು ಮಾಡಲು ಸಂಕಲ್ಪಿಸಿ, ಸಾಧಿನಾಡಿನ ದೇಶಪಾಂಡೆ ಮನೆತನದಲ್ಲಿ ಜನಿಸಿ, ಧೋಂಡೋರಾಯನೆಂದು ಕರೆಸಲ್ಪಟ್ಟು ನಂತರದಲ್ಲಿ ಹಂಸನಾಮಕ ಪರಮಾತ್ಮನ ಪೀಠದಲ್ಲಿ ವಿರಾಜಮಾನರಾಗಿ ಶ್ರೀ ಜಯತೀರ್ಥರೆಂಬ ಸಾರ್ಥಕ ಹೆಸರು ಹೊಂದಿ ತಮ್ಮ ಗ್ರಂಥಗಳ ಮೂಲಕ ವೇದಾಂತ ತತ್ವಗಳ ಮಳೆಯನ್ನೇ ಸುರಿಸಿದರು. ವಿಷದ ಬಾಧೆಯಿಂದ ತಮ್ಮನ್ನು ರಕ್ಷಿಸಿದ ಶ್ರೀಮದಾಚಾರ್ಯರನ್ನು ಮುಂದೆ “ಶ್ರೀವತ್ಪೂರ್ಣ ಪ್ರಮತಿ ಗುರುಕಾರುಣ್ಯ ಸರಣೀಂ ಪ್ರಪನ್ನಾಮಾನ್ಯಾಸ್ಮ:” ಎಂಬುದಾಗಿ ಸುಂದರ ಶಬ್ದಗಳಲ್ಲಿ ಕೃತಜ್ಞತೆಯಿಂದ ನಮಿಸಿದ್ದಾರೆ.
ಸಾದಿನಾಡಿನಲ್ಲಿ ಯುವರಾಜರಾಗಿ ಮೆರೆಯುತ್ತಿದ್ದ ಧೋಂಡೋರಾಯರು ಬೇಟೆಯಾಡಿ ದಣಿದು ಬಂದು ಅಶ್ವಾರೋಹಿಯಾಗಿಯೇ ಭೀಮಾ ಪ್ರವಾಹಕ್ಕೆ ಬಾಯಿ ಹಚ್ಚಿ ನೀರು ಕುಡಿದುದನ್ನು ನದಿಯ ದಂಡೆಯಲ್ಲಿಯೇ ಕುಳಿತ್ತಿದ್ದ ಶ್ರೀ ಅಕ್ಷೋಭ್ಯತೀರ್ಥರು ನೋಡಿದರು.”ಕಿಂಪಶು:ಪೂರ್ವದೇಹೇ”-ಎಂದು ಎಚ್ಚರಿಸಿದರು. ಈ ಶಬ್ದಪುಂಜ ಧೋಂಡೋರಾಯರ ಮಿದುಳನ್ನು ಮೀಟಿತು. ಅಂತ:ಪಟಲವನ್ನು ಕಲುಕಿತು. ಜನ್ಮಾಂತರಗಳ ಚಿತ್ರವೆಲ್ಲವೂ ಅವರ ಕಣ್ಣು ಮುಂದೆ ಕಟ್ಟಿದಂತಾಯಿತು. ತಟ್ಟನೆ ಆ ರಾಜವೇಷವನ್ನು ಬಿಟ್ಟರು. ಶ್ರೀ ಅಕ್ಷೋಭ್ಯತೀರ್ಥರ ಪಾದಗಳಲ್ಲಿ ತಲೆ ಇಟ್ಟರು. ಗುರುಗಳ ಆದೇಶದ ಮೇರೆಗೆ ಅಂದು ಶ್ರೀಮೂಲರಾಮನ ಸನ್ನಿಧಾನದಲ್ಲಿ ಮಲಗಿದಾಗ ಶ್ರೀ ವಾಯುದೇವರು ಧೋಂಡೋರಾಯರಿಗೆ ಸ್ವಪ್ನದಲ್ಲಿ ಸೂಚಿಸಿದರು, “ನೀನು ಸನ್ಯಾಸ ಸ್ವೀಕರಿಸಿ ಶ್ರೀ ರಾಮನನ್ನು ಪೂಜಿಸು.ವಿದ್ವದಗ್ರಗಣ್ಯನೂ ಸರ್ವಜ್ಞಾನಿಗೆ ಆಶ್ರಯನೂ ಆಗುವಿ”. ತಕ್ಷಣ ಎಚ್ಚೆತ್ತು ಶ್ರೀ ಅಕ್ಷೋಭ್ಯತೀರ್ಥರ ಪಾದಗಳಲ್ಲಿ ತಲೆ ಇಟ್ಟರು. ಸನ್ಯಾಸಾಶ್ರಮ ಕೊಡಲು ಪ್ರಾರ್ಥಿಸಿದರು. ಗುರುಗಳಿಗೆ ಪರಮಾನಂದ. ಗುರುಗಳು ಆಶ್ರಮ ನೀಡಿ ಉಪದೇಶಿಸಿದರು. ಇದನ್ನು ತಿಳಿದ ಅವರ ತಂದೆ ಮಗನನ್ನು ಒತ್ತಾಯದಿಂದ ಮನೆಗೆ ಕರೆದೊಯ್ದರು. ಅದು ಪ್ರಯೋಜನವಾಗಲಿಲ್ಲ.
ಪುನಃ ಅವರನ್ನು ಶ್ರೀ ಅಕ್ಷೋಭ್ಯತೀರ್ಥರ ಸನ್ನಿಧಿಗೆ ತಲುಪಿಸಿದರು. ಗುರುಗಳಿಂದ ಉಪಕೃತರಾದ ಶ್ರೀ ಜಯತೀರ್ಥರು, “ಅಕ್ಷೋಭ್ಯತೀರ್ಥ ಮುನಿನಾ ಶುಕವತ್ ಶಿಕ್ಷಿತಸ್ಯಮೇ”-ಎಂದು ತಮ್ಮ ಗ್ರಂಥದಲ್ಲಿ ಗುರುಗಳನ್ನು ಕೊಂಡಾಡಿದ್ದಾರೆ. ದೇವದತ್ತವಾದ ಘಂಟಾ-ಪೂಗೀಫಲಗಳನ್ನು ಉಪಯೋಗಿಸಿ ಯರಗೋಳ ಗುಹೆಯಲ್ಲಿ ಕುಳಿತು ಶ್ರೀಮದಾಚಾರ್ಯರ ಭಾಷ್ಯ ಗ್ರಂಥಗಳಿಗೆ ಟೀಕೆಗಳನ್ನು ರಚಿಸಿದರು. ಶಂಖನೆಂಬ ಋಷಿಯು ಒಬ್ಬ ಬೇಟೆಗಾರನಿಗೆ ಶ್ರೀ ವಿಷ್ಣುತತ್ವವನ್ನು ಉಪದೇಶಿಸಿ, ಅವನು ಮೋಕ್ಷಕ್ಕೆ ಹೋಗುವಂತೆ ಮಾಡಿದ ಸ್ಥಳವೇ ಈ ಯರಗೋಳ ಗುಹೆ. ಜೋಳದ ನುಚ್ಚನ್ನು ಮಾತ್ರ ಆಹಾರವಾಗಿ ಸ್ವೀಕರಿಸಿ ವೈರಾಗ್ಯನಿಧಿಯೆನಿಸಿದರು. 18 ಟೀಕಾಗ್ರಂಥಗಳು, 2 ಸ್ವತಂತ್ರ ಕೃತಿಗಳು ಅವರ ಗ್ರಂಥಕೋಶದಲ್ಲಿ ಸೇರಿವೆ.
ನಾನೇಕೆ ಬರೆಯುತ್ತೇನೆ ಎಂಬ ಪ್ರಜ್ಞೆಯನ್ನು ಇಟ್ಟುಕೊಂಡು ಬರೆದ ಚೇತನ ಶ್ರೀ ಜಯತೀರ್ಥರು. ಹೀಗಾಗಿ ಅವರ ಶೈಲಿ ತುಂಬಾ ಗಾಂಭೀರ್ಯ. ಮೌಲಿಕ ಚರ್ಚೆ-ಯುಕ್ತಿಗಳ ಹಿತ-ಮಿತ ಬಳಕೆ-ಹೃದಯಂಗಮ ಭಾಷೆ-ಪದ-ಅರ್ಥಗಳ ಸಮನ್ವಯ-‘ತದುಕ್ತಂ ಭವತಿ’-ಎಂದು ಹೇಳುವ ಸಂಗ್ರಹ ಕೌಶಲ್ಯ ಮುಂತಾದ ಗುಣಗಳಿಂದ ಆಕರ್ಷಣೀಯವೂ-ಅಸಭ್ಯನೀಯವೂ ಆಗಿದೆ. ಆದ್ದರಿಂದಲೇ “ಭಾತಿಶ್ರೀ ಜಯತೀರ್ಥ ವಾಕ್” ಅವರಿಗೆ ಬಿರುದು ಬಂದದ್ದು ನಂತರ ಅವರ ಪರಂಪರೆಯಲ್ಲಿ ಬಂದ ಎಲ್ಲಾ ಯತಿವರೇಣ್ಯರೂ, ವಿದ್ವಾಂಸರೂ ಜಯತೀರ್ಥ ವಾಕನ್ನು ಬಹುವಾಗಿ ಪ್ರಶಂಸಿಸಿದ್ದಾರೆ. ಶ್ರೀ ವಿದ್ಯಾಧಿರಾಜರು, ಶ್ರೀ ವ್ಯಾಸರಾಯರಂತಹ ಅನೇಕ ಮೇಧಾವಿಗಳು ಇವರ ಶಿಷ್ಯರು.
‘ಜಯತೀರ್ಥ’ ಈ ಹೆಸರೇ ಅವರ ಸಮಗ್ರ ಚರಿತ್ರೆಯನ್ನು ಚಿತ್ರಿಸುತ್ತದೆ. ತೀರ್ಥಗ್ರಂಥಗಳ ಮೇಲೆ ಜಯ ಸಾಧಿಸಿದವರು; ಕಾಮ-ಕ್ರೋಧಾದಿಗಳ ಮೇಲೆ ಜಯ ಪಡೆದವರು; ಜಯಪ್ರದ ಗ್ರಂಥ ರಚಿಸಿದವರು. ಜಯಾ ಎಂದರೆ 18. ಅಷ್ಟು ಟೀಕಾ ಗ್ರಂಥಗಳನ್ನು ರಚಿಸಿದವರು. ವಿಶ್ವದ ವೇದಾಂತ ಶಾಸ್ತ್ರದಲ್ಲಿ ಇಂತಹ ಟೀಕಾಚಾರ್ಯರು ಇವರೊಬ್ಬರೇ ಎಂದು ಹೇಳಬಹುದು.
ತಿರುಪತಿ-ಶ್ರೀಮುಷ್ಣಂ-ಶ್ರೀರಂಗ-ತಿರುಪತಿ-ಬದರಿ-ಕಾಶಿ ಹೀಗೆ ದೇಶದ ಉದ್ದಗಲಕ್ಕೂ ಸಂಚರಿಸಿ ಧರ್ಮಪ್ರಸಾರ ಮಾಡಿದವರು. ಸಂಚಾರತ್ವೇನ ಶ್ರೀ ಜಯತೀರ್ಥರು ಅಹಮದಾಬಾದಿಗೆ ಬಂದಾಗ ಅಲ್ಲಿಯ ಬೌದ್ಧ ವಿಶ್ವವಿದ್ಯಾಲಯದ ಕುಲಪತಿ ಕಾಮದೇವನು ಅವರ ಪಾಂಡಿತ್ಯವನ್ನು ಕಂಡು ತಾನು ತಿಬೇಟಿಗೆ ಹೋಗಿ ಬರುವವರೆಗೆ ಶ್ರೀ ಜಯತೀರ್ಥರನ್ನು ಕುಲಪತಿಗಳನ್ನಾಗಿ ನಿಯಮಿಸಿದನು. ಅವರ ಪ್ರಚಂಡ ವಿದ್ಯಾ ವೈಭವಕ್ಕೆ ಇದು ಸಾಕ್ಷಿ.
“ಸಂಸಾರ ಸುಖವು ಕೋಪಗೊಂಡ ಹಾವಿನ ಹೆಡೆಯ ನೆರಳಿನಂತಿದೆ. ಅದನ್ನು ಪರಿಹರಿಸುವ ಏಕೈಕ ಉಪಾಯವೆಂದರೆ ಶ್ರೀಹರಿಯ ಪಾದವನ್ನು ನಿರಂತರ ಸೇವಿಸುವುದು. ತಮ್ಮ ಮೇರುಕೃತಿ ಶ್ರೀಮನ್ಯಾಯಸುಧೆಯಲ್ಲಿ ಶ್ರೀ ಜಯತೀರ್ಥರೇ ಹೇಳಿದ ಈ ಮಾತು ಅವರು ನಮಗೆ ನೀಡಿದ ಸಂದೇಶ ಸಾರವೂ ಹೌದು; ಅವರ ಜೀವನ ಚಿತ್ರದ ದರ್ಶನವೂ ಹೌದು.
ಈ ಜ್ಞಾನಮೇರು ಇಪ್ಪತ್ತೊಂದು ವರ್ಷ ವೇದಾಂತ ಸಾಮ್ರಾಜ್ಯವನ್ನಾಳಿ, ಸರ್ವಜ್ಞರ ಪ್ರತಿನಿಧಿಯಾಗಿ, ಜ್ಞಾನಗಂಗೆಯನ್ನು ಹರಿಸಿ, ಆಷಾಢ ಕೃಷ್ಣ ಪಂಚಮಿ ಮಳಖೇಡದಲ್ಲಿ ಬೃಂದಾವನ ಪ್ರವೇಶ ಮಾಡಿದರು. ನಾಡಿನ ಹೊರಗೂ-ಒಳಗೂ ಅವರ ಆರಾಧನೆ ಜರುಗುತ್ತಿರುವ ಈ ಸಂದರ್ಭದಲ್ಲಿ ಆ ದಿವ್ಯ ಚೇತನಕ್ಕೆ ಅನಂತ ಪ್ರಣಾಮಗಳು.
ಸಂಗ್ರಹ : ದೇಸಾಯಿ ಸುಧೀಂದ್ರ