ರೆಸಿಪಿ ಬರಹ: ಶಿವಭಟ್ ಸೂರ್ಯಂಬೈಲು, ಉಪ್ಪಿನಂಗಡಿ
ಮಳೆಗಾಲ ಶುರುವಾದ ಬೆನ್ನಲ್ಲಿಯೇ ಮನೆಯಿಂದ ಹೊರಗೆ ಹೋಗಿ ತರಕಾರಿ ತರಲು ಬೇಸರ. ಹಳ್ಳಿಗರಿಗೆ ಮತ್ತೂ ಕಷ್ಟ. ಮನೆಯ ಹಿತ್ತಲಿನ ತರಕಾರಿ ಗಿಡಗಳೂ ಮಳೆಗೆ ಮಲಗಿಬಿಟ್ಟಿರುತ್ತವೆ . ಅಂಥ ಸಮಯದಲ್ಲಿ ಕೈ ಹಿಡಿಯುವ ಅದ್ಭುತ ತರಕಾರಿ ಈ ಸಾಂಬಾರ ಸೌತೆ.
ಮಲೆನಾಡಿಗರಿಗೆ ಮೊಗೆಕಾಯಿ ಆಪ್ತಮಿತ್ರ. ಬೇಸಿಗೆಯಲ್ಲಿ ಗದ್ದೆಗಳಲ್ಲಿ ಮೊಗೆಕಾಯಿ ಬೆಳೆದು ಮನೆಯ ಜಂತಿಗಳಿಗೆ (ಕಟ್ಟಿಗೆ ಹಲಗೆ) ಮೊಗೆಕಾಯಿ ನೇತುಹಾಕಿಟ್ಟುಕೊಂಡು ವರ್ಷ ಪೂರ್ತಿ ಅಡುಗೆಗೆ ಬಳಸ್ತಾರೆ. ದೋಸೆ, ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ಸೂಪರ್. ಮೊಗೆಕಾಯಿ ಬೀಜವೂ ಅಷ್ಟೇ ಆರೋಗ್ಯಕಾರಿ. ಡ್ರೈ ಪ್ರುಟ್ಸ್ ಸೆಡ್ಡು ಹೊಡೆಯುವಷ್ಟು ಪೋಷಕಾಂಶ ಇದರಲ್ಲಿದೆ. ಮೊಗೆಕಾಯಿ ಬೀಜದ ಜ್ಯೂಸ್ ರಕ್ತದೊತ್ತಡಕ್ಕೆ ರಾಮಬಾಣ. ಹಾಗೇ ಮೊಗೆಕಾಯಿ ಬೀಜ ಒಣಗಿಸಿ ಇಟ್ಟುಕೊಂಡು ವರ್ಷ ಪೂರ್ತಿ ಬಳಸಲಾಗುತ್ತದೆ. ಹಸಿ ತಿರುಳು ಬಿಡಿಸಿ ಬೀಜದಿಂದಲೂ ಮಾಡಬಹುದು.
ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ:
ಮೊಗೆಕಾಯಿ ಬೀಜ- ೧/೪ ಕಪ್ ತೆಂಗಿನ ತುರಿ, ೪ ಚಮಚ ಜೀರಿಗೆ , ೧/೨ ಚಮಚ ಕಾಳುಮೆಣಸು, ಎಣ್ಣೆ ೧ ಚಮಚ, ಸಾಸಿವೆ ೧/೨ ಚಮಚ.
ಮಾಡೋದ್ ಹೀಗೆ: ಮೊದಲಿಗೆ ಮೊಗೆಕಾಯಿ ತಿರುಳು ತೆಗೆದು ಬೀಜ ಬೇರ್ಪಡಿಸಿ ನುಣ್ಣಗೆ ರುಬ್ಬಿ ಸೋಸಿಕೊಳ್ಳಿ. ನಂತರ ತೆಂಗಿನ ತುರಿಗೆ ಜೀರಿಗೆ , ಕಾಳುಮೆಣಸು ಹಾಕಿ ರುಬ್ಬಿಕೊಳ್ಳಿ. ಬೀಜದ ರಸ ಮತ್ತು ರುಬ್ಬಿದ ತೆಂಗಿನ ತುರಿ ಸೇರಿಸಿ ನೀರು ಉಪ್ಪು ಹಾಕಿ ಹದಮಾಡಿ. ಕೊನೆಯಲ್ಲಿ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಯ ಒಗ್ಗರಣೆ ಮಾಡಿ.