*ಸುಮ ಚಂದ್ರಶೇಖರ್, ಬೆಂಗಳೂರು
ಪ್ರತಿ ಶಿಕ್ಷಕನೂ ಶ್ರೇಷ್ಠ ಶಿಕ್ಷಕನಾದರೆ ಭಾರತ ಜಗದ್ಗುರುವಾಗುವಲ್ಲಿ ಸಂಶಯವೇ ಇಲ್ಲ. ಆದುದರಿಂದ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮಹತ್ತರವಾದುದು. ಶಿಕ್ಷಕನೇ ರಾಷ್ಟ್ರದ ಜೀವಾಳ, ಉಸಿರು ಎಂಬುದನ್ನು ಅರಿತೇ ಆದರ್ಶ ಶಿಕ್ಷಕ ಡಾ|| ಎಸ್.ರಾಧಾಕೃಷ್ಣನ್ ರವರು ಸೆ.5 ತಮ್ಮ ಜನ್ಮದಿನವನ್ನು ಶಿಕ್ಷಕ ದಿನಾಚರಣೆಯಾಗಿ ಆಚರಿಸಲು ತಿಳಿಸಿ ಧನ್ಯತಾ ಭಾವ ಹೊಂದಿದರು.
ಗುರು ಎಂದರೆ ಬರೀ ಪಾಠ ಮಾಡುವ ಉಪನ್ಯಾಸಕನಲ್ಲ ಅಥವಾ ಬರೀ ಶಿಕ್ಷೆಯನ್ನೇ ನೀಡುವ ಶಿಕ್ಷಕನೂ ಅಲ್ಲ. ಅವನೊಬ್ಬ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಯಾಗಿ, ತಂದೆಯಾಗಿ, ತಾಯಿಯಾಗಿ, ಬಂಧುವಾಗಿ ಅವರ ಭಾವನೆಗಳಿಗೆ ಸ್ಪಂದಿಸಿ, ಮನೋಭಿಲಾಷೆಯನ್ನು ಅರಿತು ಸ್ನೇಹ ಭಾವದಿಂದ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದ ಬೀಜವ ಬಿತ್ತಿ, ಅದು ಬೆಳೆದು ಹೆಮ್ಮರವಾಗಿ ದೇಶದ ಸರ್ವತೋಮುಖ ಅಭಿವೃದ್ಧಿಯಾಗುವಲ್ಲಿ ಅತೀ ಮುಖ್ಯ ಪಾತ್ರ ವಹಿಸುವವನು. ಅವನೇ ಮುಂದೆ ಗುರು ಎಂದು ಕರೆಸಿಕೊಳ್ಳಲ್ಪಡುವನು.
ಆದರೆ ಇಂದಿನ ಶಿಕ್ಷಣ ಪದ್ಧತಿಯು ಇವೆಲ್ಲವುಗಳಿಗೆ ಹೊರತಾಗಿದ್ದು ವಿದ್ಯಾರ್ಥಿಗಳಲ್ಲಿ ಅಂಕ ಗಳಿಸುವುದರ ಬಗ್ಗೆಯೇ ಹೆಚ್ಚಿನ ಒಲವನ್ನು ತೋರಿಸುತ್ತಿದ್ದು, ಬದುಕುವ ಕಲೆಯನ್ನು ತಿಳಿಸುವುದರಲ್ಲಿ ವಿಫಲವಾಗಿದೆ! ಇದಕ್ಕೆ ಪೂರಕವಾಗಿ ಪೋಷಕರು, ಸಮಾಜವೂ ಕೂಡಾ ಅಂಕ ಗಳಿಕೆಯ ಕಡೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿರುವಾಗ, ಶಿಕ್ಷಕನು ಏನು ತಾನೇ ಮಾಡಬಲ್ಲ? ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿ ಹಾಗೂ ಶಿಕ್ಷಕ ಇಬ್ಬರೂ ಈ ಒತ್ತಡದಲ್ಲಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಹೆಣಗಾಡುತ್ತಿದ್ದಾರೆ. ಈ ಜಂಜಾಟದಲ್ಲಿ ಕೊನೆಗೆ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತುಕೊಳ್ಳುವ ಸರದಿ ಶಿಕ್ಷಕರದು.
ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಸುಂದರವಾದ ಸಮಾಜದ ನಿರ್ಮಾಣ ಮಾಡಲು ಪೂರಕವಾದ ಶಿಕ್ಷಣದ ಅವಶ್ಯಕತೆ ಇದೆ. ಜೊತೆಗೆ ಅಂತಹ ಶಿಕ್ಷಕರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ, ಅವರ ಗುರುತಿಸುವಿಕೆಯೂ ಆಗಬೇಕಾಗಿದೆ. ಅದೇ ರೀತಿ ಇಷ್ಟಪಟ್ಟು ಶಿಕ್ಷಕ ವೃತ್ತಿ ಆಯ್ದುಕೊಳ್ಳುವುದು ಕೂಡಾ ಬಹಳವೇ ಮುಖ್ಯವಾಗಿದೆ. ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಪಾಠ ಮಾಡುವ ಮನಸ್ಸಿರುವವರು ಮಾತ್ರವೇ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಾಗಾಗಿ ನಮ್ಮ ಸಮಾಜದಲ್ಲಿನ ಎಲ್ಲಾ ರೀತಿಯ ಅಂಕುಡೊ0ಕುಗಳನ್ನು ತಿದ್ದಿ ತೀಡಿ, ಭವ್ಯ ಭಾರತದ ನಿರ್ಮಾಣಕ್ಕೆ ಹಾಗೂ ಭಾರತವು ವಿಶ್ವಗುರು ಆಗಲು ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಯಾರೋ ಕೆಲವು ಅಧ್ಯಾಪಕರು, ಪೋಷಕರು, ಶಿಕ್ಷಣ ಸಂಸ್ಥೆಗಳಿ0ದ ಸರಿಪಡಿಸಲು ಸಾಧ್ಯವಿಲ್ಲ. ಎಲ್ಲರೂ ಜೊತೆಯಾಗಿ ಹೆಜ್ಜೆ ಹಾಕಿದಾಗ ಮಾತ್ರ ಸಮರ್ಥ ಸಮಾಜ ನಿರ್ಮಾಣ ಸಾಧ್ಯ.
ಒಂದೇ ಮಾತಿನಲ್ಲಿ ಹೇಳುವುದಾದರೆ ಶಿಕ್ಷಣ ಜಗತ್ತಿನ ಎಲ್ಲ ಕೆಡುಕುಗಳಿಗೆ ರಾಮಬಾಣ. ಶಿಕ್ಷಣ ಕ್ಷೇತ್ರವು ವಿಶಾಲವಾದ ವ್ಯಾಪ್ತಿಯುಳ್ಳದ್ದು. ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಪೂರ್ಣಾಪೇಕ್ಷಿತ ಅಂಶಗಳನ್ನು ಆಧರಿಸಿ ತಮಗೆ ಬೇಕಾದ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕಾಗುತ್ತದೆ.
ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಕರಿಗೆ ಉಪದೇಶ ಹೇಳುವ ಕಾರ್ಯಕ್ರಮವಾಗದೆ, ಅವರ ಜವಾಬ್ದಾರಿಗಳನ್ನು ನೆನಪಿಸುವ ಕಾರ್ಯಕ್ರಮವಾಗಿ, ಗುರುವಿಗೆ ಇರುವ ಸ್ಥಾನಮಾನವನ್ನು ತಂದು ಕೊಡುವ ಮತ್ತು ರಾಧಾಕೃಷ್ಣನ್ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳನ್ನು ಶಿಕ್ಷಕರಿಗೆ ನೆನಪಿಸಿ ಅವರ ಜೀವನ ಮಟ್ಟವನ್ನು ಉನ್ನತೀಕರಿಸುವ ವೇದಿಕೆಯಾಗಬೇಕು. ಭಾರತದ ಪುನರುತ್ಥಾನಕ್ಕೆ ಶಿಕ್ಷಕನ ಕರ್ತವ್ಯವೇನು ಎನ್ನುವ ವಿಚಾರವನ್ನು ಅವರಿಗೆ ತಿಳಿಯಪಡಿಸುವ ಕೆಲಸಗಳಾಗಬೇಕಿದೆ.
ಶಿಕ್ಷಕರ ಜವಾಬ್ದಾರಿ ಎಷ್ಟು ದೊಡ್ಡದೋ ಅವರ ಸಮಸ್ಯೆಗಳೂ ಅಷ್ಟೇ ದೊಡ್ಡದು. ಅಲ್ಲದೇ ಆದರ್ಶ ಶಿಕ್ಷಕರು ಹೇಗಿರಬೇಕು ಎಂಬುದನ್ನು ವಿವರಿಸುವುದಕ್ಕಿಂತಲೂ ಶಿಕ್ಷಕ ಸ್ಥಾನಕ್ಕೆ ಎಂಥವರನ್ನು ಆರಿಸಿಕೊಳ್ಳಬೇಕು ಎಂಬ ವಿಷಯವೇ ಹೆಚ್ಚು ಮುಖ್ಯವೆಂದು ಕಾಣುತ್ತದೆ. ಅಲ್ಲಲ್ಲಿ ಕೆಲವರು ಬೇರಾವ ಉದ್ಯೋಗಾವಕಾಶವೂ ದೊರೆಯದೆ ಶಿಕ್ಷಕ ಸ್ಥಾನಕ್ಕೆ ಬಂದರೂ ಕ್ರಮೇಣ ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ಸಮರ್ಥ ಶಿಕ್ಷಕರಾದ ಉದಾಹರಣೆಗಳುಂಟು. ಅಂಥವರಲ್ಲದೇ, ಶಿಕ್ಷಕ ವೃತ್ತಿಯನ್ನೇ ಗುರಿಯನ್ನಾಟ್ಟುಕೊಂಡು ಬಂದು, ಅತ್ಯುತ್ತಮ ಶಿಕ್ಷಕರಾಗಿ ಅರಳಿ, ನೂರಾರು ವಿದ್ಯಾರ್ಥಿಗಳ ಜೀವನವನ್ನು ಬೆಳಗುವವರೂ ಉಂಟು.
ಚ0ಚಲಚಿತ್ತದ ವಿದ್ಯಾರ್ಥಿಯ ಬುದ್ಧಿಯನ್ನು ತಿದ್ದಿ ಅವನನ್ನು ಸುಶಿಕ್ಷಿತ ವ್ಯಕ್ತಿಯನ್ನಾಗಿಸುವುದು ಮಹಾ ಪ್ರಯಾಸದ ಕಾರ್ಯ. ಯಾವ ವಿದ್ಯಾರ್ಥಿಯಲ್ಲಿ ಎಂಥ ಪ್ರತಿಭೆ ಅಡಗಿದೆ ಎಂಬುದನ್ನು ಕಂಡುಹಿಡಿಯುವುದೇ ಮೊದಲ ಮಹಾಕಾರ್ಯ. ಅದು ವ್ಯಕ್ತಗೊಂಡು ಅರಳಲು ಅವಕಾಶ ಪ್ರೋತ್ಸಾಹ ಮಾರ್ಗದರ್ಶನ ನೀಡಬೇಕಾದ್ದು ಎರಡನೇ ಮಹಾಕಾರ್ಯ. ಆ ಪ್ರತಿಭೆಯು ಪರಿಪೂರ್ಣವಾಗಿ ವಿಕಸನಗೊಂಡು ಒಂದು ಮೂರ್ತರೂಪಕ್ಕೆ ಬರುವವರೆಗೆ ಅತ್ಯಂತ ತಾಳ್ಮೆಯಿಂದ ಶ್ರಮಿಸಬೇಕಾದ್ದು ಮೂರನೆಯ ಮಹಾಕಾರ್ಯ, ಸಮರ್ಥ ಶಿಕ್ಷಕ ಮಾಡುವ ಕಾರ್ಯ ಇಂಥದ್ದು.
ಮಳೆ ಹನಿಯ ಹಣೆಬರವು ಅದು ಬೀಳುವ ಸ್ಥಳದ ಮೇಲೆ ನಿರ್ಧರಿತವಾಗುತ್ತದೆ. ಅದು ಕಾದ ಕಬ್ಬಿಣದ ಮೆಲೆ ಬಿದ್ದರೆ ತಕ್ಷಣವೇ ಆವಿಯಾಗುತ್ತದೆ. ಅದೇ ಮಳೆ ಹನಿಯು ತಾವರೆಯ ಎಲೆಯ ಮೇಲೆ ಬಿದ್ದರೆ ಸ್ವಲ್ಪ ಹೊತ್ತು ಫಳಫಳ ಹೊಳೆದು ಮಾಯವಾಗುತ್ತದೆ. ಆದರೆ ಅದೇ ಮಳೆ ಹನಿಯು ಸಮುದ್ರದ ಮೇಲೆ ಬಾಯಿ ತರೆದು ತೇಲುತ್ತಿರುವ ಚಿಪ್ಪಿನ ಮೇಲೆ ಬಿದ್ದರೆ ಶಾಶ್ವತವಾಗಿ ಫಳಫಳ ಹೊಳೆಯುವ ಸ್ವಾತಿ ಮುತ್ತಾಗುತ್ತದೆ.
ಅದೇ ರೀತಿ ವಿದ್ಯಾರ್ಥಿಗಳಲ್ಲೂ ಮೂರು ವಿಧ. ಕೆಲವರು ಮುತ್ತುಗಳಂತೆ. ತಮ್ಮ ಶಿಕ್ಷಣ ಮುಗಿಯುತ್ತಿದ್ದಂತೆ ಉನ್ನತ ಸ್ಥಾನಮಾನದಿಂದಲೇ ತಮ್ಮ ಜೀವನಯಾತ್ರೆಯನ್ನು ಆರಂಭಿಸುತ್ತಾರೆ. ಇಂತಹವರು ವಿಲಾಸೀ ಜೀವನವನ್ನು ಆರ್ಥಿಕ ನೆಮ್ಮದಿಯನ್ನು, ಯಶಸ್ಸಿನ ಪರಿಮಳವನ್ನು ತಮ್ಮ ವೃತ್ತಿ ಜೀವನದಲ್ಲಿ ಬಲು ಬೇಗನೇ ಸವಿಯತೊಡಗುತ್ತಾರೆ. ಇದು ಹೇಗೆ ಸಾಧ್ಯವಾಯಿತೆಂದರೆ, ಅವರು ಓದುವ ವಯಸ್ಸಿನಲ್ಲಿ ತಮ್ಮ ಸಮಯವನ್ನೆಲ್ಲ ಶಿಕ್ಷಣದಲ್ಲಿ ತೊಡಗಿಸಿರುತ್ತಾರೆ. ಬೇರೆ ಆಕರ್ಷಕವೆನಿಸುವ ಚಟುವಟಿಕೆಗಳಲ್ಲಿ ಅವರು ತೊಡಗಿರುವುದಿಲ್ಲ. ಇಲ್ಲಿ ಮಳೆ ಹನಿ ನೇರವಾಗಿ ಚಿಪ್ಪಿನಲ್ಲಿ ಸೇರಿ ಮುತ್ತಾಯಿತು. ಮತ್ತೆ ಕೆಲವು ವಿದ್ಯಾರ್ಥಿಗಳು ಶೂರರಂತೆ ಕಂಡು ಬರುತ್ತಾರೆ. ಕಾಪಿ ಹೊಡೆದು ಒಳ್ಳೆಯ ಅಂಕಗಳನ್ನು ಪಡೆದಿರಬಹುದು. ಅಥವಾ ಯಾರದೋ ವಶೀಲಿಯಿಂದ ಒಳ್ಳೆಯ ಕೆಲಸವನ್ನೂ ಸಂಪಾದಿಸಿರಬಹುದು. ಅಂತಹವರು ಆರಂಭದಲ್ಲಿ ಮಿಂಚುತ್ತಾರೆ. ಆದರೆ ವೃತ್ತಿರಲ್ಲಿ ತೊಡಗುತ್ತಿದ್ದಂತೆ, ತುಂಬ ಜಾಣ ಮತ್ತು ಚತುರ ಸಹೋದ್ಯೋಗಿಗಳೊಂದಿಗೆ ಏಗಬೇಕಾಗುತ್ತದೆ. ಆಡಳಿತಕ್ಕೆ ಮತ್ತು ಮಾಲೀಕರಿಗೆ ಇಂಥವರ ಮೂಲ ಮೌಲ್ಯ ಗೊತ್ತಾದಾಗ ಮೂಲೆಗುಂಪು ಆಗಿಬಿಡುತ್ತಾರೆ. ಈ ತರಹದ ವಿದ್ಯಾರ್ಥಿಗಳ ಜೀವನ ತಾವರೆಎಲೆ ಮೇಲೆ ಬಿದ್ದ ನೀರಿನ ಹನಿಯಂತೆ. ಧಾರಾಳವಾಗಿ ಖರ್ಚು ಮಾಡುತ್ತ, ಸುತ್ತಲೊಂದು ಪಟಾಲಂ ಇಟ್ಟುಕೊಂಡು, ಕಣ್ಣು ಕೋರೈಸುವ ಹೀರೋಗಳಂತೆ, ತಮ್ಮ ಕಾಲೇಜು ದಿನಗಳಲ್ಲಿ ಬೇರೆಯವರಲ್ಲಿ ಹೊಟ್ಟೆಕಿಚ್ಚನ್ನು ಹೊತ್ತಿಸುವವರದು, ಮೂರನೇ ಗುಂಪು, ಕಾಲೇಜಿನಿಂದ ಹೊರಬೀಳುವ ಇಂಥವರಿಗೆ ಯಾವ ಒಳ್ಳೆಯ ನೌಕರಿ ತಾನೇ ಸಿಕ್ಕೀತು? ಒಂದು ನಿರ್ಜೀವ ಸಣ್ಣ ನೌಕರಿಯಲ್ಲೇ ತೃಪ್ತಿ ಪಡಬೇಕು. ವೇಗವಾಗಿ ಬೆಳೆಯಲು ಪೂರಕ ತಳಹದಿ ಇರದ ಈ ಸಂದರ್ಭದಲ್ಲಿ ಜೀವನದ ರುಚಿಯನ್ನೇ ಕಳೆದುಕೊಂಡು ಇಂತಹವರು, ಕಾದ ತಗಡಿನ ಛಾವಣಿಯ ಮೇಲೆ ಬಿದ್ದ ಮಳೆ ಹನಿಯಂತೆ, ತಕ್ಷಣವೇ ಉತ್ಸಾಹ ಕಳೆದುಕೊಂಡು ಆವಿಯಾಗಿ ಬಿಡುತ್ತಾರೆ.
ಸತ್ಯಸಂಧತೆ, ಪ್ರಾಮಾಣಿಕತೆ, ದಯಾಪರತೆ, ಸೋದರತೆ, ಕಾರ್ಯದಕ್ಷತೆ, ಸೌಜನ್ಯ, ಔದಾರ್ಯ, ಸಚ್ಚಾರಿತ್ರ, ರಾಷ್ಟçಭಕ್ತಿ, ಗುರುಭಕ್ತಿ, ದೈವಭಕ್ತಿ ಇಂತಹ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಮುದ್ರೆಯೊತ್ತಿದ್ದ ಅಧ್ಯಾಪಕರು ನಿಜವಾದ ರಾಷ್ಟçನಿರ್ಮಾಪಕರೇ ಸರಿ. ನೈತಿಕತೆಯಿಲ್ಲದ ವಿದ್ಯಾಭ್ಯಾಸ ನೀರಿಲ್ಲದ ಊರಿನಂತೆ ಎಂಬ ಸಂಗತಿಯನ್ನು ಶಿಕ್ಷಕರಲ್ಲದೇ ಮತ್ತಾರು ತಿಳಿಸಬಲ್ಲರು? ಉತ್ತಮ ಶಿಕ್ಷಕವರ್ಗದಿಂದ ಮಾತ್ರವೇ ಶಿಕ್ಷಣ ಸಂಸ್ಥೆಯೊ0ದು ಅತ್ಯುತ್ತಮವೆನಿಸಬಲ್ಲದು. ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂದರೆ ಅತ್ಯುತ್ತಮ ಶಿಕ್ಷಕ ವರ್ಗವೆಂದೇ ಅರ್ಥ. ಸಹಸ್ರಾರು ವಿದ್ಯಾರ್ಥಿಗಳು ಐದಾರು ಗಂಟೆಗಳ ಕಾಲ ಇರಬೇಕಾದ ಶಾಲಾ-ಕಾಲೇಜುಗಳ ಪರಿಸರವು ಸ್ವಚ್ಛತೆಯಿಂದ ಮಿರುಗುತ್ತಿರಬೇಕೆಂಬ ಅರಿವು ಪರಹಿತದೃಷ್ಟಿಯ ಶಿಕ್ಷಕರಲ್ಲಿ ಮಾತ್ರ ಇರಲು ಸಾಧ್ಯ. ವಿದ್ಯಾರ್ಥಿಗಳು ತರಗತಿಗಳಲ್ಲೂ ಕುಳಿತಿರಬೇಕು. ಬಳಿಕ ಇತರ ಸಮಯಗಳಲ್ಲಿ ಟ್ಯೂಷನ್ನಿಗೂ ಹೋಗಿ ಕುಳಿತುಕೊಳ್ಳಬೇಕು ಎಂಬ0ತಿದ್ದರೆ ಅವರಿಗೆ ಆಟಕ್ಕೇ ಆಗಲಿ ಅಧ್ಯಯನಕ್ಕೆ ಆಗಲಿ ಸಮಯವೆಲ್ಲ? ಸಮರ್ಥ ಶಿಕ್ಷಕರು ವಿದ್ಯಾಥಿಗಳನ್ನು ಇಂಥ ಗೊಂದಲಕ್ಕೆ ಗುರಿಯಾಗಿಸದೇ ತರಗತಿಗಳಲ್ಲಿ ನಿಯತ್ತಾಗಿ ಪಾಠ ಮಾಡಿ ಅವರ ಸಮಯ ಉಳಿಸುತ್ತಾರೆ ಮತ್ತು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳ ಮನಮುಟ್ಟುವಂತೆ ಪಾಠ ಮಾಡುವದು ಎಷ್ಟು ಮುಖ್ಯವೋ ಅವರ ಸಮಸ್ಯೆಗಳನ್ನು ಅರಿತು ಬಗೆಹರಿಸುವದೂ, ಸಮಯೋಚಿತ ಸಲಹೆ ನೀಡುವದೂ ಅಷ್ಟೇ ಮುಖ್ಯ ಎಂಬ ಮರ್ಮವನ್ನು ಸಮರ್ಥ ಶಿಕ್ಷಕರು ಮಾತ್ರ ಬಲ್ಲರು.
ತಮ್ಮ ಮಾತಾಪಿತೃಗಳಿಂದ ಮನೆಗಳಲ್ಲೇ ಮಾರ್ಗದರ್ಶನ ಪಡೆಯಬಲ್ಲ ವಿದ್ಯಾರ್ಥಿಗಳ ಮನೆಗಳಲ್ಲೇ ಮಾರ್ಗದರ್ಶನ ಪಡೆಯಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತ್ಯಲ್ಪ ಏಕೆಂದರೆ ಅಂಥ ಸುಶಿಕ್ಷಿತ ಮಾತಾಪಿತೃಗಳು ಅಪರೂಪ. ಶಿಕ್ಷಕರಿಗೆ ಶರಣಾಗಿ ತಮ್ಮ ಮಕ್ಕಳನ್ನು ಶ್ರೇಷ್ಠ ವಿದ್ಯಾವಂತರನ್ನಾಗಿಸುವ ಹೊಣೆಯನ್ನು ಶಿಕ್ಷಕರಿಗೇ ಹೊರಿಸಿ ನಿಶ್ಚಿಂತರಾಗಿ ಕುಳಿತುಕೊಳ್ಳುವ ತಂದೆ-ತಾಯಿಯರೇ ಹೆಚ್ಚು ಇದನ್ನು ಗಮನಿಸಿದಾಗ ವಿದ್ಯಾರ್ಥಿಗಳ ಪಾಲಿಗೆ ಸಮರ್ಥ ಶಿಕ್ಷಕರು ಅನಾಥ ರಕ್ಷಕರೇ ಸರಿ.
ಪ್ರಜ್ವಲಿಸುವ ದೀಪ ಮಾತ್ರವೇ ಇನ್ನೊಂದು ದೀಪವನ್ನು ಬೆಳಗಿಸಲು ಸಾಧ್ಯ. ಅಂತೆಯೇ ಸುಜ್ಞಾನಿಯಾದ ಶಿಕ್ಷಕ ಮಾತ್ರವೇ ವಿದ್ಯಾರ್ಥಿಗಳಲ್ಲಿ, ಜ್ಞಾನದ ಕಿಡಿಯನ್ನು ಪ್ರಜ್ವಲಿಸಬಲ್ಲ. ಎಲ್ಲ ಶಿಕ್ಷಕ ಬಂಧುಗಳು ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನದ ಕಿಡಿಯನ್ನು ಪ್ರಜ್ವಲಿಸಿ ಅವರನ್ನು ಸ್ವಾತಿ ಮುತ್ತನ್ನಾಗಿಸಲು ಪಣ ತೊಟ್ಟರೆ ಶಿಕ್ಷಕ ದಿನಾಚರಣೆ ಅರ್ಥಪೂರ್ಣವಾದೀತು.
1962 ರಿಂದ ಪ್ರತಿವರ್ಷ ಸೆಪ್ಟೆಂಬರ್ 5ರಂದು ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಗುರುಶಿಷ್ಯರ ಸಂಬ0ಧ ಆತ್ಮೀಯವಾಗಿರಬೇಕು, ಗುರುವಿನೊಳಗೆ ಶಿಷ್ಯ, ಶಿಷ್ಯನೊಳಗೆ ಗುರುವಿನ ಭಾವನೆಗಳು ಐಕ್ಯವಾದಾಗ ಸಮಾಜದ ಪ್ರಗತಿಯಾಗುತ್ತದೆ. ಜಾನ್ ರಸ್ಕಿನ್ ಹೇಳುವಂತೆ ಒಂದು ದೇಶದ ಪ್ರಗತಿ ಆ ದೇಶದಲ್ಲಿರುವ ಚಿನ್ನ, ಬೆಳ್ಳಿಯಲ್ಲಿಲ್ಲ. ಅಲ್ಲಿರುವ ಚಿನ್ನದಂತಹಯ ವ್ಯಕ್ತಿಗಳ ವ್ಯಕ್ತಿತ್ವದಲ್ಲಡಗಿದೆ, ಅಂತಹ ವ್ಯಕ್ತಿತ್ವ ನಿರ್ಮಾಣ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಅಕ್ಷರ ಜ್ಞಾನದ ಜೊತೆಗೆ ನೈತಿಕತೆ, ಮಾನವೀಯ ಮೌಲ್ಯಗಳನ್ನು ಬೆಳೆಸಲಾಗುತ್ತಿತ್ತು. ಕಾರಣಾಂತರಗಳಿ0ದ, ಇಂದು ಅಂಕ ಗಳಿಕೆಗೆ ಒತ್ತು ನೀಡಲಾಗುತ್ತಿದೆ. ಉದ್ಯೋಗಾಕಾಂಕ್ಷೆಯ ಜತೆಗೆ, ವ್ಯಕ್ತಿಯೊಬ್ಬ ಸ್ವಾಸ್ಥ್ಯ ಜೀವನ ನಡೆಸಲು ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳು, ನಾಯಕತ್ವ ಗುಣವನ್ನು ಶಿಕ್ಷಕರು ಬೆಳೆಸಬೇಕು.