ಗೋ ಪೂಜೆ- ಗೋ ಸೇವೆ ಹೇಗೆ ಮಾಡಬೇಕು? ಅದರಿಂದೇನು ಫಲ?

*ದೇವಿಪ್ರಸಾದ್ ಗೌಡ, ಸಜಂಕು

ಗೋವುಗಳನ್ನು ಹಿಂದೂಗಳು ಪೂಜಿಸುತ್ತಾರೆ. ಗೋವಿಗೆ ಮಾತೆಯ ಸ್ಥಾನ ನೀಡಿ ಗೋಮಾತೆ ಎಂದೇ ಕರೆಯುತ್ತಾರೆ. ಗೋವಿನ ದೇಹದಲ್ಲಿ ಬಾಯಿಯನ್ನು ಹೊರತು ಪಡಿಸಿ ದೇಹದ ಇತರ ಎಲ್ಲಾ ಭಾಗಗಳಲ್ಲಿ ಎಲ್ಲಾ ದೇವತೆಗಳು ನೆಲೆಸಿದ್ದಾರೆ ಎಂದು ನಮ್ಮ ನಂಬಿಕೆ.

ಭಾಗವತ ಪುರಾಣದಲ್ಲಿ ಬರುವ “ಲಿಂಗಮೂಲಾನ್ವೇಷಣೆ’ ಕಥೆಯಲ್ಲಿ ಹರಿ-ಹರ- ಬ್ರಹ್ಮರಿಗೆ ಒಮ್ಮೆ ಸ್ಪರ್ಧೆ ಏರ್ಪಟ್ಟು ಹರನು ಲಿಂಗರೂಪಿಯಾಗಿ ನಿಂತು ಅನಂತವಾಗಿ ಬೆಳೆಯುತ್ತಾ ಹೋಗಿ ಹರಿ ಹಾಗೂ ಬ್ರಹ್ಮನಿಗೆ ತನ್ನ ಮೂಲ ಹುಡುಕುವಂತೆ ಹೇಳಿದಾಗ ಹರಿಯು ಆದಿ ಭಾಗದ ಅನ್ವೇಷಣೆಗೂ, ಬ್ರಹ್ಮನು ಅಂತ್ಯ ಭಾಗದ ಅನ್ವೇಷಣೆಗೂ ಹೊರಡುತ್ತಾರೆ.

ಹರನ ಲೀಲಾ ಮಹಿಮೆ ಅರಿತಿದ್ದ ಹರಿಯು ತನಗೆ ಆದಿಭಾಗದ ಮೂಲ ಸಿಕ್ಕಿಲ್ಲ ಎಂದು ಹೇಳುತ್ತಾನೆ. ಆದರೆ ಬ್ರಹ್ಮನು ಅಂತ್ಯ ಭಾಗಕ್ಕೂ ಅಂತ್ಯ ಇಲ್ಲವೆಂದರೆ ತಾನು ಸೋತ ಹಾಗೆಯೇ ಎಂದು ಕೇದಗೆ ಹೂ ಹಾಗೂ ಶಬರಿ ಎಂಬ ಗೋವನ್ನೂ ತಾನು ಲಿಂಗದ ಅಂತ್ಯ ಕಂಡಿರುವೆ ಎಂದು ಹರನೆದುರು ಸಾಕ್ಷಿ ನುಡಿಯಲು ಜೊತೆಗೆ ಕರೆತಂದು ತಾನು ಲಿಂಗರೂಪಿಯಾದ ಹರನ ಅಂತ್ಯ ನೋಡಿದೆನೆಂದೂ ಅದಕ್ಕೆ ಸಾಕ್ಷಿ ಶಬರಿ ಹಾಗೂ ಕೇದಗೆ ಎಂದು ಹೇಳುತ್ತಾನೆ.

ಬ್ರಹ್ಮನು ಸುಳ್ಳು ಹೇಳುತ್ತಿದ್ದಾನೆ ಎಂದು ಹರಿ ನುಡಿದಾಗ ಕೋಪಗೊಂಡ ಹರನು ಗೋವು ಹಾಗೂ ಕೇದಗೆಯಲ್ಲಿ ಈ ಬಗ್ಗೆ ಕೇಳಿದಾಗ ಇಬ್ಬರೂ ಸುಳ್ಳು ಸಾಕ್ಷಿ ನುಡಿಯುತ್ತಾರೆ. ಕೋಪಗೊಂಡ ಹರನು ಸುಳ್ಳು ನುಡಿದ ಗೋವಿನ ಬಾಯಿ ಅಪವಿತ್ರವಾಗಲಿ, ಕೇದಗೆ ಹೂವನ್ನೂ ಯಾರೂ ಪೂಜೆಗೂ ಬಳಸದಿರಲಿ ಎಂದು ಶಪಿಸುತ್ತಾನೆ.
ಶಬರಿಯು ಪಶ್ಚಾತ್ತಾಪದಿಂದ ಬ್ರಹ್ಮನ ಕುತಂತ್ರವನ್ನು ತಿಳಿಸಿ ಕ್ಷಮೆ ಕೇಳಿದಾಗ ಹರನು ಆಕೆಯ ಬಾಯಿಯನ್ನು ಹೊರತು ಪಡಿಸಿ ಇತರ ಎಲ್ಲಾ ಅಂಗಗಳಲ್ಲಿ ದೇವತೆಗಳು ನೆಲೆಸುವಂತೆಯೂ ಹಾಗೂ ಆಕೆಯನ್ನು ಪೂಜಿಸಿದವರಿಗೆ ಸಕಲ ಇಷ್ಟಾರ್ಥ ಪ್ರಾಪ್ತಿ ಆಗುವಂತೆಯೂ ವರ ನೀಡುತ್ತಾನೆ.

ಇಂತಹ ಸಕಲ ಇಷ್ಟಾರ್ಥ ಪ್ರದಾಯಕವಾದ ಗೋಪೂಜೆ-ಗೋ ಸೇವೆ ಹೇಗೆ ಮಾಡಬೇಕು ಎಂದು ಮೊದಲು ವ್ಯಾಖ್ಯಾನ ಮಾಡಿದವರು ಪುರಾಣ ಪುರುಷ, ಸೂರ್ಯ ವಂಶದ ಯಶಸ್ವಿ ರಾಜ ಅಯೋಧ್ಯೆಯ ದಿಲೀಪ ಮಹಾರಾಜ. ದಿಲೀಪ ಮಹಾರಾಜನ ಆಡಳಿತ ಅವಧಿದಲ್ಲಿ ದೇವ ಲೋಕದ ಮೇಲೆ ಶೋಣಿತಾಪುರದ ವೀರಸೇನ ದೈತ್ಯ ತನ್ನ ಭ್ರತ್ಯರಾದ ಚಂಡ ಬಂಡರೊಡನೆ ದಾಳಿ ಮಾಡಿ ದೇವತೆಗಳನ್ನು ಹೊಡೆದೋಡಿಸುತ್ತಾನೆ.

ಆಗ ದೇವರಾಜ ಅಯೋಧ್ಯೆಯ ಮಹಾರಾಜ ದಿಲೀಪನನ್ನು ಸ್ವರ್ಗ ಲೋಕಕ್ಕೆ ಕರೆಯಿಸಿ ದೇವಸೇನಾಧಿಪತಿಯನ್ನಾಗಿ ಮಾಡುತ್ತಾನೆ. ದಿಲೀಪ ಮಹಾರಾಜ ಘನ ಘೋರ ಯುದ್ಧ ಮಾಡಿ ಸಮಸ್ತ ದೈತ್ಯರ ಸಂಹಾರ ಮಾಡುತ್ತಾನೆ. ಇದರಿಂದ ಹರ್ಷ ಚಿತ್ತನಾದ ದೇವೇಂದ್ರ ದೇವ ಸಭೆಯಲ್ಲಿ ತನಗೆ ಸಮಾನವಾದ ಆಸನದಲ್ಲಿ ಮಹಾರಾಜ ದಿಲೀಪನನ್ನು ಕೂರಿಸಿ ಸತ್ಕರಿಸಿ “ಧರ್ಮ ದೇವತಾ” ಎಂಬ ಬಿರುದು ನೀಡುತ್ತಾನೆ. ದಿಲೀಪ ಮಹಾರಾಜ ದೇವತೆಗಳ ಸತ್ಕಾರ ಸ್ವೀಕರಿಸಿ ಅಯೋಧ್ಯೆಗೆ ಹಿಂತಿರುಲು ಸಿದ್ಧನಾಗಿ ದೇವೇಂದ್ರನ ಕೊರಿಕೆಯಂತೆ ದೇವ ಲೋಕದ ಉದ್ಯಾನವನ ನಂದನ ವನದ ಮೂಲಕ ವಾಪಸು ಬರುತ್ತಿರಬೇಕಾದರೆ ಕಾಮಧೇನುವಿನ ಮಗಳು ಕಲ್ಪವೃಕ್ಷದ ಕೆಳಗೆ ವಿಶ್ರಮಿಸಿರುತ್ತಾಳೆ. ತನ್ನ ರಾಜ್ಯಕ್ಕೆ ಹೋಗುವ ತರಾತುರಿಯಲ್ಲಿ ಇದ್ದ ಮಹಾರಾಜನಿಗೆ ಈ ಕಲ್ಪವೃಕ್ಷ, ನಂದಿನಿ ಹಾಗೂ ಇತರ ಸುವಸ್ತುಗಳ ಬಗ್ಗೆ ಗಮನ ಹರಿಯುವುದಿಲ್ಲ. ಆಗ ಮುನಿಸಿಕೊಂಡ ನಂದಿನಿ ತನಗೆ, ಕಲ್ಪವೃಕ್ಷ ಹಾಗೂ ಇತರ ಸುವಸ್ತುಗಳಿಗೆ ಪ್ರದಕ್ಷಿಣೆ, ನಮಸ್ಕಾರ ಮಾಡದೆ ಮುಂದಡಿ ಇಡುತ್ತಿರುವ ಮಹಾರಾಜನಿಗೆ ಮುಂದಕ್ಕೆ ತನ್ನನ್ನು ಅಥವಾ ತನ್ನ ಸಂತತಿಯ ಸೇವೆಯನ್ನು ಮಾಡದ ಹೊರತು ಸಂತಾನ ಪ್ರಾಪ್ತಿ ಆಗದಿರಲಿ ಎಂದು ಶಾಪ ನೀಡುತ್ತಾಳೆ. ಅದೇ ಸಮಯಕ್ಕೆ ಐರಾವತ ಇತರ ಆನೆಗಳೊಂದಿಗೆ ಜಲಕ್ರೀಡೆಯಲ್ಲಿ ಇದ್ದ ಕಾರಣ ಆ ಸದ್ದಿನಲ್ಲಿ ನಂದಿನಿಯ ಶಾಪ ಮಹಾರಾಜನಿಗೆ ಕೇಳಿಸದೇ ಹೋಯಿತು.

ಕಾಲ ಉರುಳಿತು, ದಿಲೀಪ ಮಹಾರಾಜ ತನಗೆ ಸಂತಾನ ಪ್ರಾಪ್ತಿ ಆಗದಕಾರಣ ಪಿತೃ ಋಣದಿಂದ ಮುಕ್ತಿ ಹೇಗೆ ಎಂದು ಚಿಂತಿಸುತ್ತಾ ತನ್ನ ಗುರುಕುಲ ಪುರೋಹಿತರಾದ ವಸಿಷ್ಠರ ಬಳಿಗೆ ಹೋದಾಗ ಗುರು ವಸಿಷ್ಠರು ನಂದಿನಿಯ ಶಾಪದ ಬಗ್ಗೆ ತಿಳಿಸಿ ಪ್ರಸ್ತುತ ನಂದಿನಿಯು ವರುಣ ಲೋಕದಲ್ಲಿ ಯಜ್ಞದ ಸಹಾಯಕ್ಕೆ ಹೋಗಿದ್ದು ಆಕೆಯ ಮಗಳಾದ ಧೇನು ತನ್ನ ಆಶ್ರಮದಲ್ಲಿ ಇದ್ದು ಆಕೆಯನ್ನು ಸೇವಿಸಲು ಗೋಪೂಜೆ-ಗೋಸೇವೆಯ ದೀಕ್ಷೆ ಮಹಾರಾಜ ದಿಲೀಪನಿಗೆ ನೀಡುತ್ತಾರೆ. ಗೋವಿನ ಮುಖದಲ್ಲಿ ಹರಿ,ಕಂಠದಲ್ಲಿ ಹರ, ಬೆನ್ನಲ್ಲಿ ಬ್ರಹ್ಮ, ಬಾಲದಲ್ಲಿ ಸಮಸ್ತ ನಾಗಸಂಕುಲ,ಕೆಚ್ಚಲಿನಲ್ಲಿ ಚತುರ್ವೇದಗುಳು, ನಾಲ್ಕು ಕಾಲಿನ ಎಂಟು ಬೆರಳಿನಲ್ಲಿ ಅಷ್ಟ ದಿಕ್ಪಾಲಕರು, ರೋಮ ರೋಮದಲ್ಲಿ ಸಮಸ್ತ ದೇವತೆಗಳು ಇದ್ದು ಗೋವು ಚತುರ್ದಶ ಭುವನಕ್ಕೆ ಸಮಾನ, ಗೋವನ್ನು ಸೇವೆ ಮಾಡಿದರೆ ಚತುರ್ದಶ ಭುವನಾಧಿಪತಿ ಶ್ರೀಮನ್ನಾರಾಯಣನ ಸೇವೆ ಮಾಡಿದಂತೆ ಎಂದು ಹೇಳುತ್ತಾರೆ. ದಿಲೀಪನು ತನ್ನ ಧರ್ಮ ಪತ್ನಿ ಸುಧಕ್ಷಣೆಯ ಜೊತೆಗೆ ವಸಿಷ್ಠರ ಆಶ್ರಮದ ಹತ್ತಿರವೇ ಆಶ್ರಮ ಮಾಡಿ ಗೋಪೂಜೆ-ಗೋಸೇವೆಯ ದೀಕ್ಷೆ ತೊಟ್ಟು ಧೇನುವಿನ ಸೇವೆಯಲ್ಲಿ ತೊಡಗುತ್ತಾನೆ.

ಗೋ ಸೇವೆ, ಪೂಜೆ ಹೇಗೆ ಅನುಷ್ಠಾನ ಮಾಡುತ್ತಾನೆಂದರೆ ತಾನು ಬಳಸುವ ಗಂಧ ಸುಗಂಧ ಧೇನುವಿನ ಮೈಗೆ ಹಚ್ಚುತ್ತಾನೆ, ಪತ್ನಿ ನೀಡಿದ ವನಮಾಲೆಯನ್ನು ಧೇನುವಿನ ಕೊರಳಿಗೆ ಹಾಕುತ್ತಾನೆ, ತನ್ನ ಅಂಗವಸ್ತ್ರದಿಂದ ಧೇನುವಿನ ಮೈ ಉಜ್ಜುತ್ತಾನೆ, ಹುಲ್ಲುಗಾವಲಿಗೆ ಧೇನು ಹೋದಾಗ ಅದರ ಹಿಂದೆಯೇ ಸಾಗುತ್ತಾನೆ, ನಿಂತರೆ ತಾನೂ ನಿಲ್ಲುತ್ತಾನೆ, ಸಂಜೆ ಧೇನವಿಗೆ ಮನಸ್ಸಾಗಿ ಆಶ್ರಮಕ್ಕೆ ಹಿಂತಿರುಗಿದರೆ ತಾನೂ ಹಿಂತಿರುಗುವುದು, ಅಲ್ಲಿಯೇ ವಿಶ್ರಮಿಸಿದರೆ ತಾನೂ ವಿಶ್ರಮಿಸುವುದು, ಯಾವುದೇ ಕ್ರಿಮಿ ಕೀಟ, ನೊಣದ ಬಾದೆ ಆಗುವಂತೆ ಕಾಯುವುದು ಇತ್ಯಾದಿ ರೀತಿಯಲ್ಲಿ ಧೇನುವಿನ ಸೇವೆಯಲ್ಲಿ ತೊಡಗುತ್ತಾನೆ. ಹೀಗೆ ಕೆಲ ಕಾಲ ಕಳೆದಾಗ ಧೇನುವಿಗೆ ದಿಲೀಪ ಮಹಾರಾಜನ ಮೇಲೆ ಪ್ರಸನ್ನತೆ ಮೂಡುತ್ತದೆ. ಆದರೂ ರಾಜನ ಬದ್ಧತೆಯನ್ನು ಪರೀಕ್ಷೆ ಮಾಡಲು ತೀರ್ಮಾನ ಮಾಡುತ್ತದೆ.

ವಸಿಷ್ಠರ ಆಶ್ರಮದ ಪಕ್ಕದಲ್ಲೇ ಒಂದು ಉಪವನವಿತ್ತು. ಅದು ಶಿವ ಪಾರ್ವತಿಯರ ವಿಹಾರ ಸ್ಥಳ ಆಗಿತ್ತು. ಅಲ್ಲೊಂದು ದೇವದಾರು ವೃಕ್ಷವನ್ನು ಪಾರ್ವತಿದೇವಿಯು ತನ್ನ ಮಗನಂತೆ ಪ್ರೀತಿಸುತ್ತಿದ್ದುಳು. ಒಂದು ಬಾರಿ ಆನೆಯೊಂದು ತನ್ನ ದಂತಕ್ಕೆ ತುರಿಕೆ ಆದಾಗ ಇದೇ ದೇವದಾರು ವೃಕ್ಷಕ್ಕೆ ತನ್ನ ದಂತವನ್ನು ತಿಕ್ಕಿತು. ಆಗ ದೇವದಾರು ವೃಕ್ಷದ ತೊಗಟೆ ಎದ್ದು ಹೋಯಿತು. ಇದನ್ನು ನೋಡಿ ಪಾರ್ವತಿ ದೇವಿಗೆ ಬಹಳ ದುಃಖವಾಯಿತು. ಪಾರ್ವತಿಯ ದುಃಖ ಶಮನ ಮಾಡಲು ಮಹಾದೇವ ತನ್ನ ಗಣಗಳಲ್ಲಿ ಒಬ್ಬನಾದ ಕುಂಡೋದರನಿಗೆ ಸಿಂಹತ್ವವನ್ನು ಪ್ರಧಾನ ಮಾಡಿ ವೃಕ್ಷದ ರಕ್ಷಣೆಗೆ ಇರಿಸಿದನು. ಇದನ್ನು ಅರಿತಿದ್ದ ಧೇನುವು ಅದೊಂದು ದಿನ ಮೇಯುತ್ತಾ ಇದೇ ದೇವದಾರು ವೃಕ್ಷದ ಬೀಜ ತಿನ್ನಲು ಹೋಯಿತು. ಆಗ ಈ ಸಿಂಹ ರೂಪಿ ಕುಂಡೋಧರನು ಧೇನುವನ್ನು ಹಿಡಿದುಕೊಂಡಿತು. ಧೇನುವಿನ ಹಿಂದೆಯೇ ಇದ್ದ ದಿಲೀಪ ಮಹಾರಾಜ ಧೇನುವಿನ ರಕ್ಷಣೆಗೆ ಬಿಲ್ಲು ಹಿಡಿದು ತನ್ನ ಬತ್ತಳಿಕೆಗೆ ಕೈಹಾಕಿದರೆ ಕೈ ಮುಂದೆ ಹೋಗುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂದು ಚಿಂತಿಸುತ್ತಾ ಸಿಂಹಕ್ಕೆ ಬೊಬ್ಬಿಡುತ್ತಾ ಇರುವಾಗ ಸಿಂಹವು ಮಹಾರಾಜನಿಗೆ ದೇವದಾರು ವೃಕ್ಷದ ಕಥೆ ಹೇಳಿ ತಾನು ಇದರ ರಕ್ಷಕನೆಂದೂ ತನಗೆ ಹಸಿವು ಆಗಿರುವುದರಿಂದ ಧೇನುವನ್ನು ಭಕ್ಷಿಸುವುದಾಗಿ ಹೇಳಿದಾಗ ಮಹಾರಾಜನು ವ್ರತ ಭಂಗವಾಗಿ ಬದುಕುವ ಬದಲು ಮರಣವೇ ಲೇಸು ಎಂದೆನಿಸಿ ಸಿಂಹಕ್ಕೆ ಧೇನುವಿನ ಬದಲು ತನ್ನನ್ನು ಭಕ್ಷಿಸಿ ಧೇನುವನ್ನು ಬಂಧ ಮುಕ್ತ ಮಾಡಬೇಕಾಗಿ ಪ್ರಾರ್ಥನೆ ಮಾಡುತ್ತಾನೆ.

ಮಹಾರಾಜನ ಧರ್ಮನಿಷ್ಠೆಗೆ ಸೋತ ಸಿಂಹವು ಧೇನುವನ್ನು ಬಂಧ ಮುಕ್ತ ಮಾಡಿ ತನ್ನ ನಿಜ ರೂಪವನ್ನು ತೋರಿಸಿ ಹರಸುತ್ತದೆ. ಆಗ ಧೇನುವೂ ಬಹಳ ಪ್ರಸನ್ನತೆಯಿಂದ ಮಹಾರಾಜನಿಗೆ ಬಹಳ ಖ್ಯಾತಿವಂತ, ಯಶೋವಂತ ಪುತ್ರ ರತ್ನ ಪ್ರಾಪ್ತಿ ಆಗಲಿ ಎಂದು ವರ ನೀಡುತ್ತದೆ. ಆ ಪ್ರಕಾರವಾಗಿ ಹುಟ್ಟಿದ ಮಗುವೇ ಸ್ವರ್ಗದಿಂದ ಇಳೆಗೆ ಗಂಗೆಯನ್ನು ತಂದ ಭಗೀರಥ ಮಹಾರಾಜ. ಇಂತಹ ಗೋಪೂಜೆ-ಗೋಸೇವೆ ಏಳು ಜನ್ಮದ ಪಾಪಗಳನ್ನು ಕಳೆದು ಭಗವಂತನ ಅನುಗ್ರಹ ದೊರಕಲು ದಾರಿ ತೋರಿಸುತ್ತದೆ. ಇಂತಹ ಇಷ್ಟಾರ್ಥ ದಾಯಕ ಗೋಪೂಜೆ-ಗೋಸೇವೆ ಮಾಡಿ ಹರಿಹರ ಅನುಗ್ರಹಕ್ಕೆ ನಾವೆಲ್ಲಾ ಪಾತ್ರರಾಗೋಣ. ಗಾವೋ ಲೋಕಶ್ಯ ಮಾತರಂ ಇಂತು.

Related Articles

Latest Articles