ರಂಭಾಪುರಿ ಪೀಠ (ಬಾಳೆಹೊನ್ನೂರು):
ಹಾಸನ ಜಿಲ್ಲೆ ಬೇಲೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ 30ನೇ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದ್ದನ್ನು ಕೊರೊನಾ ಸೋಂಕಿನ 3ನೇ ಅಲೆ ಹೆಚ್ಚಾಗಬಹುದೆಂಬ ಹಿನ್ನೆಲೆಯಲ್ಲಿ ಮುಂದೂಡಿ 2022 ನೇ ಸಾಲಿನಲ್ಲಿ ಆಚರಿಸಲು ಇಂದು ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಜರುಗಿದ ಬೇಲೂರು ದಸರಾ ಪೂರ್ವ ಭಾವಿ ಸಮಾವೇಶದಲ್ಲಿ ನಿರ್ಧರಿಸಲಾಯಿತು.
2021ರ ದಸರಾ ಆಚರಣೆಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿರುವ ಕಡೇನಂದಿಹಳ್ಳಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿಅಕ್ಟೋಬರ್ 7 ರಿಂದ ಅಕ್ಟೋಬರ್15 ರವರೆಗೆ ಸಾಂಪ್ರದಾಯಿಕವಾಗಿ ಆಚರಿಸುವ ನಿರ್ಧಾರವನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.
ಕೊರೊನಾ ಕಾರಣದಿಂದ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಮಿತಗೊಳಿಸಲಾಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಮಾಸ್ಕ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ, ಬಿಜೆಪಿ ಧುರೀಣ ಕೊರಟಗೆರೆ ಪ್ರಕಾಶ, ಹಾಸನ ವೀರಶೈವ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡರು, ಬೇಲೂರು ವೀರಶೈವ ಸಮಾಜದ ಅಧ್ಯಕ್ಷ ರವಿಕುಮಾರ, ವೀರಶೈವ ಮಹಾಸಭಾದ ಮಹಿಳಾ ಘಟಕದ ಮುಖ್ಯಸ್ಥೆ ಚಂದ್ರಕಲಾ, ಹಾಸನ ಜಿಲ್ಲಾ ಪಂಚಾಯತಿ ಸದಸ್ಯೆ ರತ್ನಮ್ಮ ಐಸಾಮಿಗೌಡರು, ಯುವ ಧುರೀಣ ಸಂತೋಷ, ಮಹದೇವ, ರೇಣುಕ ಕುಮಾರ, ದಿಲೀಪಕುಮಾರ, ನಟರಾಜ ಸೇರಿದಂತೆ ನೂರಾರು ಜನ ಗಣ್ಯರು ಪಾಲ್ಗೊಂಡಿದ್ದರು. ಈಗಾಗಲೇ ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸರಳ ಸಂಪ್ರದಾಯಿಕ ದಸರಾ ಆಚರಣೆಯ ಸಿದ್ಧತೆಯನ್ನು ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ತಮ್ಮ ಭಕ್ತರೊಡಗೂಡಿ ಕಾರ್ಯಕ್ರಮ ಸಂಯೋಜಿಸುತ್ತಿದ್ದಾರೆ.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು