ನರೇಗಲ್: ದೇವರು ಕೊಟ್ಟ ಜೀವನ ಅಮೂಲ್ಯ. ಬಹು ಜನ್ಮದಿಂದ ಪ್ರಾಪ್ತವಾದ ಮಾನವ ಜೀವನವನ್ನು ಸಾರ್ಥಕಪಡಿಸಿಕೊಂಡು ಬಾಳಬೇಕೆಂದರೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೆ.24 ರಂದು ಅಬ್ಬಿಗೇರಿ ಹಿರೇಮಠದ ಲಿಂ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳವರ ಪ್ರಥಮ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವ ಜೀವನ ತೆರೆದಿಟ್ಟ ಪುಸ್ತಕ. ಆ ಪುಸ್ತಕದ ಮೊದಲ ಮತ್ತು ಕೊನೆಯ ಪುಟವನ್ನು ಭಗವಂತನೇ ಬರೆದು ಕಳಿಸಿದ್ದಾನೆ. ಮೊದಲ ಪುಟದಲ್ಲಿ ಹುಟ್ಟು ಬರೆದರೆ ಕೊನೆಯ ಪುಟದಲ್ಲಿ ಮೃತ್ಯುವನ್ನು ಬರೆದು ಕಳಿಸಿದ್ದಾನೆ. ಈ ಹುಟ್ಟು ಸಾವುಗಳ ಮಧ್ಯದ ಬದುಕನ್ನು ಸಾರ್ಥಕಪಡಿಸಿಕೊಂಡು ಬಾಳಬೇಕಾಗಿದೆ. ಹುಟ್ಟುವಾಗ ಉಸಿರು ಇರುತ್ತದೆ. ಹೆಸರು ಇರುವುದಿಲ್ಲ. ಅಗಲಿದಾಗ ಉಸಿರು ಇರುವುದಿಲ್ಲ. ಆದರೆ ಹೆಸರು ಉಳಿಯುವಂತೆ ಜೀವನ ಸಾಗಿಸಬೇಕಾಗಿದೆ ಎಂದ ಜಗದ್ಗುರುಗಳು ಲಿಂ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು 50 ವರುಷಗಳ ಕಾಲದಲ್ಲಿ ಅದ್ಭುತವಾದ ಕಾರ್ಯಗಳನ್ನು ಮಾಡಿದ್ದಾರೆ. ಅವರಲ್ಲಿದ್ದ ಧರ್ಮ ನಿಷ್ಠೆ ಗುರು ಪೀಠಾಭಿಮಾನ ಎಂದಿಗೂ ಮರೆಯಲಾಗದೆಂದರು.
ಧರ್ಮ ಸಮಾರಂಭವನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ನೇತೃತ್ವ ವಹಿಸಿದ ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಲಿಂ.ಸೋಮಶೇಖರ ಶ್ರೀಗಳ ಕ್ರಿಯಾ ಕರ್ತೃತ್ವ ಶಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದರು. ಸುಳ್ಳ ಪಂಚಗೃಹ ಹಿರೇಮಠದ, ಚಳಗೇರಿ ಹಿರೇಮಠದ, ರಾಜೂರು ಹಿರೇಮಠದ, ಮಳಲಿ ಸಂಸ್ಥಾನ ಮಠದ, ಸಂಗೊಳ್ಳಿ ಹಿರೇಮಠದ, ನರೇಗಲ್ಲ ಹಿರೇಮಠದ ಶ್ರೀಗಳು, ಕಲ್ಲೂರು ವೀರಯ್ಯಸ್ವಾಮಿ, ಐ.ಎಸ್.ಪಾಟೀಲ, ಡಾ. ಹಿರೇಮಠ ಗದಗ, ಗಜೇಂದ್ರಗಡದ ಸಿದ್ಧಣ್ಣ ಬಂಡಿ, ಗದಗಿನ ರಾಜು ಮಲ್ಲಾಡದ, ಅಜ್ಜಪ್ಪ ಮಲ್ಲಾಡದ, ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರು ಹಾಗೂ ಅಪಾರ ಅಭಿಮಾನಿ ಬಳಗದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಲಿಂ. ಶ್ರೀಗಳೆಲ್ಲರ ಗದ್ದುಗೆಗೆ ವಿಶೇಷ ಪೂಜೆ ಜರುಗಿತಲ್ಲದೇ ಹತ್ತಾರು ವೀರಶೈವ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಜರುಗಿತು. ಸಮಾರಂಭದ ನಂತರ ಆಗಮಿಸಿದ ಎಲ್ಲ ಭಕ್ತರಿಗೆ ಅನ್ನದಾಸೋಹವನ್ನು ಅಬ್ಬಿಗೇರಿ ಗ್ರಾಮದ ಭಕ್ತರು ನೆರವೇರಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು