ತುಮಕೂರಿನ ಪುರಾತನ ದೇವಾಲಯಗಳು

*ಶ್ರೀನಿವಾಸ ಮೂರ್ತಿ ಎನ್ ಎಸ್

ರಾಜ್ಯದ ಬಹುತೇಕ ಪುರಾತನ ದೇವಾಲಯಗಳು ಕಂಡು ಬಂದಂತೆ ಹಲವು ನಗರಗಳಲ್ಲಿಯೂ ಪುರಾತನ ದೇವಾಲಯ ನೋಡಬಹುದು. ಆದರೆ ಊರು ಬೆಳೆದಂತೆ ಇಲ್ಲಿನ ದೇವಾಲಯಗಳು ಜನ ಮಾನಸದಿಂದ ಅದರ ವಿಶಿಷ್ಟತೆಯ ಅರಿವಿಲ್ಲದೇ ದೂರವಾಗಿದೆ. ಅವುಗಳಲ್ಲಿ ತುಮಕೂರಿನ ನಗರದಲ್ಲಿನ ಪುರಾತನ ದೇವಾಲಯಗಳತ್ತ ಒಂದು ನೋಟ.

ತುಮಕೂರು ಅನ್ನೋ ಹೆಸರು ಬರುವುದಕ್ಕೆ ಕಾರಣ ಟುಮಕೆ (ದೊಡ್ಡ ನಗಾರಿ) ಬಾರಿಸುತ್ತಿದ್ದ ಕಾರಣ ಟುಮಕಿಹಳ್ಳಿ ನಂತರ ತುಮಕೂರು ಆಯಿತು ಎಂಬ ನಂಬಿಕೆ ಇದೆ. ಇಲ್ಲಿನ ಸ್ಥಳೀಯ ನಂಬಿಕೆಯಂತೆ ತುಂಬೆಗಿಡಗಳು ಇಲ್ಲಿ ಹೆಚ್ಚು ಇದ್ದ ಕಾರಣ ತುಂಬೆ ಊರು – ತುಮ್ಮೆಗೂರು – ತುಮಕೂರು ಆಯಿತು ಹೇಳಲಾಗುತ್ತದೆ.

ಗಂಗರ ಕಾಲದ ಶಾಸನದಲ್ಲಿ ತುಮ್ಮೆಗೂರು ಎಂದೇ ಉಲ್ಲೇಖಿಸಲಾಗಿದೆ. ಇಲ್ಲಿನ ಶೀರಾಗೇಟ್ ಬಳಿಯ ಮಹಿಷಾಸುರ ಮರ್ದಿನಿ ಹಾಗು ದುರ್ಗಾಶಿಲ್ಪ ಗಂಗರ ಕಾಲದ್ದು. ಇಲ್ಲಿನ ಬಸವೇಶ್ವರ ದೇವಾಲಯದ ಶಿವಲಿಂಗ ಹಾಗು ನಂದಿ ಹೊಯ್ಸಳರ ಕಾಲದ್ದು ಎಂಬ ನಂಬಿಕೆ ಇದೆ. ಇಲ್ಲಿ ಹೊಯ್ಸಳ ಮುಮ್ಮುಡಿ ನರಸಿಂಹನ ಕಾಲದ ವೀರಗಲ್ಲುಗಳು ದೊರೆತಿದೆ.

ಶ್ರೀ ಲಕ್ಷ್ಮಿಕಾಂತ ದೇವಾಲಯ

ಇಲ್ಲಿನ ಪುರಾತನ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ಹಲವು ಘಟ್ಟಗಳಲ್ಲಿ ನವೀಕರಣಗೊಂಡಿದೆ. ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮಂಟಪಗಳನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಸುಂದರವಾದ ಐದು ಅಡಿ ಎತ್ತರದ ಲಕ್ಶ್ಮೀಕಾಂತನ ಶಿಲ್ಪವಿದೆ. ತೊಡೆಯ ಮೇಲೆ ಲಕ್ಶ್ಮೀ ಪವಡಿಸಿದ್ದು ನಾರಾಯಣನ ಶಿಲ್ಪ ದೇವಿಯನ್ನು ಆವರಿಸಿದ್ದು ಕೈಗಳಲ್ಲಿ ಪದ್ಮ, ಚಕ್ರ, ಶಂಖ ಹಾಗು ಚಿನಮುದ್ರೆ  ಕೆತ್ತನೆ ಇದ್ದು ಶಿಲ್ಪದ ಕಿರಿಟ, ಕೊರಳ ಹಾರಗಳು, ಗಮನ ಸೆಳೆಯುತ್ತದೆ.  ನವರಂಗದಲ್ಲಿನ ಕಂಭಗಳಲ್ಲಿನ ಉಬ್ಬು ಶಿಲ್ಪಗಳ ಕೆತ್ತನೆ ಗಮನ ಸೆಳೆಯುತ್ತದೆ.  ಅಂತರಾಳದಲ್ಲಿ ಅಳ್ವಾ ಹಾಗು ಲಕ್ಶ್ಮೀಯ ಶಿಲ್ಪ ಗಮನ ಸೆಳೆಯುತ್ತದೆ. ಇಲ್ಲಿನ ಕೋಷ್ಟಕಗಳಲ್ಲಿ ಸುಂದರವಾದ ಕಾಳಿಂಗಮರ್ಧನ ಶಿಲ್ಪವಿದೆ. ಇನ್ನು ಅಂತರಾಳದ ದ್ವಾರಪಾಲಕರುಗಳ ಕೆತ್ತನೆ ಮೈಸೂರು ಅರಸರ ಕಾಲದ ನವೀಕರಣದಲ್ಲಿನ ಸೇರ್ಪಡೆ. ದೇವಾಲಯ ವಿಶಾಲವಾದ ಪ್ರಾಕಾರವನ್ನು ಹೊಂದಿದ್ದು ದೇವಾಲಯಕ್ಕೆ ನೂತನವಾಗಿ ರಾಜಗೋಪುರವನ್ನು ಸ್ಥಾಪಿಸಲಾಗಿದೆ. ದೇವಾಲಯದಲ್ಲಿ ಗರುಡಗಂಬ ಹಾಗು ದ್ವಜಸ್ಥಂಭ ಗಮನ ಸೆಳೆಯುತ್ತದೆ.

ಕೋಟೆ ಆಂಜನೇಯ ದೇವಾಲಯ:

ನವೀಕರಣಗೊಂಡಿರುವ ಈ ದೇವಾಲಯ ಗರ್ಭಗುಡಿ, ನವರಂಗ ಹಾಗು ವಿಶಾಲವಾದ ಮಂಟಪವನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಸುಮಾರು ನಾಲ್ಕು ಆಡಿ ಎತ್ತರದ ಆಂಜನೇಯನ ಮೂರ್ತಿ ಇದೆ. ಇನ್ನು ಇಲ್ಲಿನ ವಿಶಾಲವಾದ ಮಂಟಪ ಅಥವಾ ಹಜಾರದಲ್ಲಿ ಆಂಜನೇಯನ ವಿವಿಧ ಕಥಾನಕಗಳನ್ನು ಚಿತ್ರಿಸಲಾಗಿದೆ. ದೇವಾಲಯಕ್ಕೆ ಹೊಸದಾಗಿ ಗೋಪುರವನ್ನ ನಿರ್ಮಿಸಲಾಗಿದೆ. ಗೋಪುರದಲ್ಲಿನ ಬೃಹತ್ ಆಂಜನೇಯ ಗಮನ ಸೆಳೆಯುತ್ತದೆ. ಇನ್ನು ಮುಖ್ಯ ರಸ್ತೆಯ ಪ್ರವೇಶದಲ್ಲಿಯೇ ಬೃಹತ್ ಆಂಜನೇಯನ ಶಿಲ್ಪವನ್ನು ಹೊಸದಾಗಿ ನಿರ್ಮಿಸಲಾಗಿದೆ.

ಇಲ್ಲಿ ಪುರಾತನವಾದ ಗಂಗಾಧರೇಶ್ವರ, ಸಿದ್ದಲಿಂಗೇಶ್ವರ, ಲಕ್ಶ್ಮೀನರಸಿಂಹ, ಹರಳೆಪೇಟೆ ಹಾಗು ಸುಂಕದ ಬಸವನ ದೇವಾಲಯಗಳು ಇದ್ದು ಇತಿಹಾಸದ ಕೊಂಡಿಯಂತಿದೆ.

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles