ಕಡೇನಂದಿಹಳ್ಳಿ (ಶಿಕಾರಿಪುರ): ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶಿಷ್ಟ ಮಹತ್ವವಿದೆ. ಶರನ್ನವರಾತ್ರಿ ನಾಡ ಹಬ್ಬವು ನಾಡಿನಾದ್ಯಂತ ಆಚರಿಸಲ್ಪಡುತ್ತದೆ. ಹಬ್ಬಗಳ ಆಚರಣೆಯಿಂದ ಧಾರ್ಮಿಕ ಮೌಲ್ಯಗಳು ಪುನರುತ್ಥಾನಗೊಂಡು ಜನ ಜೀವನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಕಡೇನಂದಿಹಳ್ಳಿ ಕ್ಷೇತ್ರದಲ್ಲಿ ಅಕ್ಟೋಬರ್ 7 ರಂದು ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ 30ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ದೇವಿಯ ಅವತಾರವಾಗಿದೆ. ಶಿವನನ್ನು ಬಿಟ್ಟು ಶಕ್ತಿ ಶಕ್ತಿ ಬಿಟ್ಟು ಶಿವನಿಲ್ಲ. ಶಿವಶಕ್ತಿಯಿಂದ ಒಳಗೊಂಡಿರುವುದೇ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವೆ0ದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಬೋಧಿಸಿದ್ದಾರೆ. ಮನುಷ್ಯನಲ್ಲಿ ಮನೆ ಮಾಡಿಕೊಂಡಿರುವ ಅಸುರಿ ಗುಣಗಳು ನಾಶವಾಗಿ ದೈವೀ ಗುಣಗಳು ಪ್ರಜ್ವಲಗೊಳ್ಳಬೇಕಾಗಿದೆ. ಶರನ್ನವರಾತ್ರಿ ಆಚರಣೆಯಲ್ಲಿ ಪ್ರಜೆಗಳ ಕಲ್ಯಾಣಕ್ಕಾಗಿ ವಿಜಯನಗರ ಅರಸರು ತದನಂತರ ಮೈಸೂರಿನ ಯದುವಂಶದ ಅರಸರು ವೈಭವದಿಂದ ಆಚರಿಸಿಕೊಂಡು ಬಂದರು. ಅರಮನೆಗಳು ನಿಂತ ನಂತರ ರಾಜ್ಯ ಸರಕಾರ ಆಚರಿಸಿಕೊಂಡು ಬರುತ್ತಿದೆ. ಮೈಸೂರಿನ ಅರಸರು ಖಾಸಗಿ ದಸರಾ ದರ್ಬಾರ ಆಚರಿಸಿಕೊಂಡು ಬರುತ್ತಿರುವುದು ಶಕ್ತಿ ಆರಾಧನೆಗೆ ಸಾಕ್ಷಿಯಾಗಿದೆ. ಗುರುಮನೆ ದಸರಾ ಮಹೋತ್ಸವದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಹಲವಾರು ಜನ ಹಿತಕರ ವಿಚಾರ ಧಾರೆಗಳ ಮಂಡನೆಗೆ ಅವಕಾಶವಿದ್ದು ಧಾರ್ಮಿಕ ಪರಂಪರೆ- ಸಂಸ್ಕೃತಿಗೆ ಹೊಸ ಮೆರಗು ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ದಸರಾ ಸಮಾರಂಭ ಉದ್ಘಾಟಿಸಿದ ನಿಕಟಪೂರ್ವ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಭಾರತೀಯರ ಆಧ್ಯಾತ್ಮಿಕ ಸಂಪತ್ತು ಅಪಾರ. ಋಷಿಮುನಿಗಳು ಮತ್ತು ಆಚಾರ್ಯರು ಕಾಲ ಕಾಲದಲ್ಲಿ ಬೋಧಿಸಿ ಉದ್ಧರಿಸಿದ್ದಾರೆ. ಅರಮನೆ ದಸರಾದಲ್ಲಿ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ನಡೆದರೆ ಗುರು ಪೀಠದ ದಸರಾ ನಾಡಹಬ್ಬದಲ್ಲಿ ವೈವಿಧ್ಯಮಯವಾದ ವಿಚಾರ ಚಿಂತನೆ ನಡೆಯಲಿದೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಗುರುರಕ್ಷೆ ದೊರಕುತ್ತಿರುವುದು ಸಂತಸದ ಸಂಗತಿ. ಶ್ರೀ ರಂಭಾಪುರಿ ಜಗದ್ಗುರುಗಳ ಅದೆಷ್ಟೊ ದಸರಾ ಮಹೋತ್ಸವ ನಾನೇ ಉದ್ಘಾಟಿಸಿದ್ದೇನೆ. ಇಂದು ನನ್ನ ಮತಕ್ಷೇತ್ರದಲ್ಲಿ ನಡೆಯಲಿರುವ 30ನೇ ವರ್ಷದ ದಸರಾ ಧರ್ಮ ಸಮಾರಂಭ ಉದ್ಘಾಟಿಸಿರುವುದು ನನ್ನ ಸೌಭಾಗ್ಯವೆಂದ ಅವರು ಜನಸಮುದಾಯದಲ್ಲಿ ಧರ್ಮ ನಿಷ್ಠೆ, ರಾಷ್ಟç ಭಕ್ತಿ, ಕ್ರಿಯಾಶೀಲ ಬದುಕು, ಸಾಮರಸ್ಯ ಸದ್ಭಾವನೆ ಬೆಳೆದು ಬರಲು ಪ್ರೇರಕ ಶಕ್ತಿಯಾಗಲೆಂದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಆದಿ ಶಕ್ತಿಯ ಮಹತ್ವವನ್ನು ವಿವರಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಒಂದು ಸಣ್ಣ ಕ್ಷೇತ್ರದಲ್ಲಿ ಮಹತ್ವಪೂರ್ಣ ಕಾರ್ಯಕ್ರಮ ನಡೆಯಲಿರುವುದು ಭಕ್ತರ ಶಕ್ತಿಗೆ ಕಾರಣವಾಗಿದೆ. ಶರನ್ನವರಾತ್ರಿ ಸಂದರ್ಭದಲ್ಲಿ ಜಗಜ್ಜನನೀ ದೇವಿಯನ್ನು ಆರಾಧಿಸಿ ಶಕ್ತಿ ಪಡೆದುಕೊಳ್ಳೋಣ. ಶ್ರೀ ರಂಭಾಪುರಿ ಜಗದ್ಗುರುಗಳ ಆಧ್ಯಾತ್ಮ ನುಡಿ ಕೇಳಿ ಧನ್ಯರಾಗೋಣ ಎಂದರು.
ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಕಲ ಸದ್ಭಕ್ತರ ಸಹಕಾರದಿಂದ ಈ ಅದ್ಭುತ ಕಾರ್ಯಕ್ರಮ ನಡೆಯುತ್ತಿದೆ. ಭಗವಂತನ ಪ್ರೇರಣೆಯಾದ ಕಾರಣ ಶ್ರೀ ರಂಭಾಪುರಿ ಜಗದ್ಗುರುಗಳ ೩೦ನೇ ವರ್ಷದ ದಸರಾ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನಿಮ್ಮೆಲ್ಲರ ಸಹಕಾರ ಸದಾ ಇರಲೆಂದು ಬಯಸಿದರು. ಹಲವಾರು ಮಠಾಧೀಶರಿಗೆ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಆಶೀರ್ವದಿಸಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ (ರಿ) ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿದರು. ಮಳಲಿ, ಚನ್ನಗಿರಿ ಹಾರನಹಳ್ಳಿ, ತೊಗರ್ಸಿ, ಕಡೆನಂದಿಹಳ್ಳಿ ಹಾಗೂ ಇನ್ನಿತರ ಶ್ರೀಗಳು ಉಪಸ್ಥಿತರಿದ್ದರು.
ಎಸ್.ಎಸ್. ಜ್ಯೋತಿಪ್ರಕಾಶ, ಅಶೋಕ, ಚನ್ನವೀರಪ್ಪ, ಸಣ್ಣಹನುಮಂತಪ್ಪ, ಸುವರ್ಣಮ್ಮ ವೇ. ಮರಿಸ್ವಾಮಿ ಸೋಗಿ ಹಿರೇಮಠ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಅಗಮಿಸಿದ ಎಲ್ಲಾ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು