ಎಲೆ ಅಡಾ
ಕೇರಳ ಶೈಲಿಯ ಸಿಹಿ ತಿನಿಸು. ಕೇರಳದವರು ಹಬ್ಬಗಳಿಗೆ ಸಾಮಾನ್ಯವಾಗಿ ಈ ತಿನಿಸನ್ನು ಹೆಚ್ಚಾಗಿ ಮಾಡುತ್ತಾರೆ.
ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು- 1ಕಪ್, ನೀರು ಕಲೆಸಲು -1ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು, ಏಲಕ್ಕಿ ಪುಡಿ-ಅರ್ಧ ಚಮಚ, ಬಾಳೆ ಎಲೆ, ತೆಂಗಿನ ತುರಿ-1ಕಪ್, ಬೆಲ್ಲ-ಅರ್ಧ ಕಪ್.
ತಯಾರಿಸುವ ವಿಧಾನ: ತೆಂಗಿನ ತುರಿ, ಏಲಕ್ಕಿ, ಬೆಲ್ಲದ ಪುಡಿಯನ್ನು ಮಿಶ್ರಣ ಮಾಡಿಟ್ಟುಕೊಳ್ಳಿ. ಅಕ್ಕಿ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ಹಾಕಿ ರೊಟ್ಟಿಯ ಹದಕ್ಕೆ ಕಲೆಸಿ. ಬಾಳೆಎಲೆಯನ್ನು ಬಾಡಿಸಿ, ಬಾಳೆ ಎಲೆಗೆ ಎಣ್ಣೆ ಸವರಿ ಅದಕ್ಕೆ ಮಿಶ್ರಣ ಮಾಡಿಟ್ಟ ಅಕ್ಕಿ ಹಿಟ್ಟನ್ನು ಹಾಕಿ ಆಯತಾಕಾರದಲ್ಲಿ ತಟ್ಟಿ. ಅದರಲ್ಲಿ ಸ್ವಲ್ಪ ಹೂರಣವನ್ನು ತುಂಬಿ ಎಲೆಯನ್ನು ಮಡಚಿ. ನಂತರ ಹಬೆಯಲ್ಲಿ 30 ನಿಮಿಷ ಬೇಯಿಸಿ.
ರವೆ ಕಜ್ಜಾಯ
ಆಂಧ್ರಪ್ರದೇಶದ ವಿಶೇಷ ಸಿಹಿ ತಿನಿಸು. ಹಬ್ಬದ ಸಂದರ್ಭಗಳಲ್ಲಿ ಹೆಚ್ಚಾಗಿ ಈ ಸಿಹಿತಿಂಡಿಯನ್ನು ತಯಾರಿಸುತ್ತಾರೆ.
ಬೇಕಾಗುವ ಸಾಮಗ್ರಿ: ರವೆ -1ಕಪ್, ಅಕ್ಕಿಹಿಟ್ಟು-1ಕಪ್, ತುರಿದ ಬೆಲ್ಲ-ಒಂದೂವರೆ ಕಪ್, ಹಾಲು-ಅರ್ಧ ಕಪ್, ಗಸಗಸೆ-2ಕಪ್, ಏಲಕ್ಕಿ ಪುಡಿ-1ಚಮಚ.
ತಯಾರಿಸುವ ವಿಧಾನ: ರವೆಗೆ ಒಂದು ಚಮಚ ಎಣ್ಣೆ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಪಾತ್ರೆಗೆ 2 ಚಮಚ ಎಣ್ಣೆ ಮತ್ತು 2ಕಪ್ ನೀರು ಹಾಕಿ ರವೆಯನ್ನು ಬೇಯಿಸಿಕೊಳ್ಳಿ. ನಂತರ ತುರಿದ ಬೆಲ್ಲವನ್ನು ರವೆಗೆ ಸೇರಿಸಿ. ಬೆಲ್ಲ ಕರುಗುವವರೆಗೆ ತಿರುವುತ್ತಿರಿ. ಈ ಮಿಶ್ರಣಕ್ಕೆ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಎಲ್ಲಾ ಮಿಶ್ರಣವನ್ನು ತೆಗೆದು ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ. ಗಸೆಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣಸಣ್ಣ ಉಂಡೆ ಮಾಡಿ ತಟ್ಟಬೇಕು. ಎಣ್ಣೆಯಲ್ಲಿ ಕರಿಯಿರಿ.
ಹಾಲು ಹೋಳಿಗೆ
ಸತ್ಯನಾರಾಯಣ ಪೂಜೆ, ಗೃಹಪ್ರವೇಶ ಇವೇ ಮೊದಲಾದ ಶುಭ ಸಂದರ್ಭಗಳಲ್ಲಿ ಹಾಲು ಹೋಳಿಗೆಯನ್ನು ತಯಾರಿಸುತ್ತಾರೆ.
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 1ಕಪ್, ಮೈದಾಹಿಟ್ಟು-1ಕಪ್, ಚಿರೋಟಿ ರವೆ-1ಕಪ್, ಚಿಟಿಕೆ ಉಪ್ಪು, ಎಣ್ಣೆ -2 ಚಮಚ, ಬೆಲ್ಲ-1ಕಪ್, ಕೊಬ್ಬರಿ ಅಥವಾ ಕಾಯಿತುರಿ-1ಕಪ್, ಹುರಿದ ಗಸಗಸೆ-1ಚಮಚ, ಹುರಿಗಡಲೆ-1ಚಮಚ, ಏಲಕ್ಕಿ ಪುಡಿ, ಒಣದ್ರಾಕ್ಷಿ, ಗೋಡಂಬಿ.
ತಯಾರಿಸುವ ವಿಧಾನ: ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಬಿಟ್ಟು ಉಳಿದವುಗಳನ್ನು ನುಣ್ಣಗೆ ರುಬ್ಬಿಕೊಂಡು ಅದನ್ನು ಕುದಿಸಿ. ಪಾಯಸದಷ್ಟು ಹದವಾಗಿರಲಿ. ತುಪ್ಪದಲ್ಲಿ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಕಲೆಸಿಟ್ಟ ಮೈದಾ ಹಾಗೂ ಗೋಧಿ ಹಿಟ್ಟನ್ನು ಪೂರಿಯಂತೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಕರಿಯಿರಿ.ಕರಿದದ್ದನ್ನು ಮಿಶ್ರಣಕ್ಕೆ ಹಾಕಿ ತೆಗೆಯಿರಿ. ನಂತರ ಗೋಡಂಬಿ, ದ್ರಾಕ್ಷಿಯಿಂದ ಅಲಂಕರಿಸಿ ಸವಿಯಿರಿ.