ಸಣ್ಣ ಸಣ್ಣ ಖುಷಿಯ ಸಂಭ್ರಮ

ದಿನನಿತ್ಯ ಅದೇ ಕೆಲಸ, ಆಫೀಸ್‍ಗೆ ಹೋದರೆ ಅದೇ ಟೀಬಲ್, ಅದೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು ಅಂದರೆ ಬೋರೇ ಬೋರ್ ಅಂತಿರುತ್ತಾರೆ ಕೆಲವರು. ನಿಜ. ಅದೇ ಕೆಲಸವನ್ನು ವಿಭಿನ್ನವಾಗಿ ಮಾಡುತ್ತಾ, ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸುತ್ತಾ ಜೀವನ ಕಳೆದರೆ ಬುದುಕು ನೀರಸ ಅನ್ನಿಸುವುದಿಲ್ಲ. ಮನೆ ತೆಗೆದುಕೊಳ್ಳುವುದು, ಮದುವೆಯಾಗುವುದು, ವೃತ್ತಿಯಲ್ಲಿ ಬಡ್ತಿ ಹೊಂದುವುದು ಇವೆಲ್ಲವೂ ಜೀವನದ ಅಪರೂಪದ ಘಟನೆಗಳು. ಆ ಕ್ಷಣ ಸಂಭ್ರಮಿಸಿರುತ್ತೇವೆ, ಸಂತೋಷ ವ್ಯಕ್ತಪಡಿಸಿರುತ್ತೇವೆ. ಬದುಕಿನ ನಿಜವಾದ ಸುಖದ ಕ್ಷಣಗಳು ಅವೇ ಎಂದುಕೊಂಡಿರುತ್ತೇವೆ. ಅಂತಹ ಕ್ಷಣಗಳಿಂದ ಮಾತ್ರ ಖುಷಿ ಸಿಗುತ್ತದೆ ಎಂದೇ ಭಾವಿಸಿರುತ್ತಾರೆ. ಅಂತಹ ಖುಷಿಗಾಗಿ ತಿಂಗಳು, ವರ್ಷಗಳು ಇಲ್ಲವೇ ಜೀವನಪೂರ್ತಿ ಕಾಯುತ್ತಿರುತ್ತಾರೆ. ಆದರೆ ಜೀವನದಲ್ಲಾಗುವ ಸಣ್ಣ ಸಣ್ಣ ಘಟನೆಗಳಲ್ಲೂ ಸಂತೋಷವನ್ನು ಕಂಡುಕೊಳ್ಳುವುದರಿಂದ ದುಃSಕ್ಕೆ ಅಲ್ಲಿ ಜಾಗವಿರುವುದಿಲ್ಲ.


ನಮ್ಮ ಸಂತೋಷಗಳು ಈ ಕ್ಷಣದಲ್ಲಿಲ್ಲ, ಸಂತೋಷದ ಕ್ಷಣಗಳಿಗಾಗಿ ಕಾಯಬೇಕು, ಭವಿಷ್ಯದ ಬಗ್ಗೆ ಕನಸು ಕಾಣುವುದರಿಂದ,ಯೋಚನೆ, ಯೋಜನೆಗಳಿಂದ ಮಾತ್ರ ಸಂತೋಷವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ ಎಂದೇ ಭಾವಿಸುತ್ತಾರೆ. ಅದೇ ಗುಂಗಿನಲ್ಲಿ ಈ ಕ್ಷಣದ ಸಂತೋಷವನ್ನು ಅನುಭವಿಸುವುದರ ಬದಲು ಬಾರದ ಸಂತೋಷವನ್ನು ನೆನೆದು ದುಃಖಿಸುತ್ತಾರೆ.

ಹರುಷಕ್ಕಿದೆ ದಾರಿ
“ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು- ಮಂಕುತಿಮ್ಮ’ ಎನ್ನುತ್ತಾರೆ ಡಿವಿಜಿ. ಹೌದು. ಸುಖ, ಸಂತೋಷ ನಾಳೆ ಬರುತ್ತದೆ ಎಂದುಕೊಂಡು ಕಾಯುವುದರಲ್ಲಿ ಅರ್ಥ ಇಲ್ಲ. ಈ ಕ್ಷಣದ ಸುಖವನ್ನು ಅನುಭವಿಸಬೇಕು. ಇಲ್ಲವಾದರೆ ಇಂದಿನ ಈ ಕ್ಷಣದ ಸುಖವನ್ನು ಕಳೆದುಕೊಳ್ಳುತ್ತೇವೆ.
ಖುಷಿ ಕೊಡುವ ಗೆಳೆಯರು, ಇಷ್ಟವಾಗುವ ಸಂಗೀತ, ಸಿನಿಮಾ ನೋಡಿದಾಗ ಆಗುವ ಖುಷಿ, ಹಳೆಯ ಗೆಳತಿ ಸಿಕ್ಕಾಗ ಹಂಚಿಕೊಂಡ ನೆನಪುಗಳಿಂದ ಸ್ವಲ್ಪ ಸಮಯವಾದರೂಮನಸ್ಸಿಗೆ ಸಿಗುವ ನಿರಾಳತೆ ಇವೆಲ್ಲಾ ಸಣ್ಣಸಣ್ಣ ಖುಷಿಗಳೇ. ಆದರೆ ಅದನ್ನು ಸಂಭ್ರಮಿಸಲು ಹೋಗುವುದಿಲ್ಲ.
ಜೀವನ ಅಂದರೆ ತಡೆದುಕೊಳ್ಳಲಾಗದಷ್ಟು ನೋವು ಹಾಗೂ ದುಃಖಗಳ ಸರಮಾಲೆ ಎಂದೇ ಕೆಲವರು ಭಾವಿಸುವುದುಂಟು. ಆದರೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದರ ಮೂಲಕ ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸಬಹುದು.
ಪರಮಸುಖ ಎಂಬುದು ಕೆಲವೊಂದು ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರುತ್ತದೆ, ಆ ಆನಂದ ಎಲ್ಲಿಂದಲೋ ಬರುವಂತಹದ್ದು ಎಂದೇ ಭಾವಿಸುತ್ತೇವೆ. ಆ ಕನಸಿಗೆ ಭಾವಪರವಶರಾಗುತ್ತೇವೆ ಕೂಡಾ.
ವಾಸ್ತವ ಅಂದರೆ ಅಂತಹ ಕನಸುಗಳು ನನಸಾಗುವುದು ತೀರಾ ಅಪರೂಪ.
ನಮ್ಮೊಳಗೆ ನಾವು ಒಂದು ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಅದೆರೆಡೆಗೇ ನಮ್ಮ ಪ್ರಯತ್ನ ಇದ್ದಾಗ ನಾವು ಸಾಧಿಸಬಹುದು. ಅದರಿಂದ ಮಹದಾನಂದವನ್ನು ಪಡೆಯುವುದಕ್ಕೆ ಸಾಧ್ಯ.
ಕೆಲವೊಮ್ಮೆ ನಾವು ತಪ್ಪಾಗಿ ಯೋಚನೆ ಮಾಡುತ್ತೇವೆ. ನಾವಿರುವವರೆಗೂ ಕಷ್ಟಗಳು ತಪ್ಪಿದ್ದಲ್ಲ ಎಂದುಕೊಂಡು ಖುಷಿಪಡುವುದಕ್ಕೂ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಸಂತೋಷಪಟ್ಟರೆ ನಾಳೆ ದುಃಖ ಬರುತ್ತದೆಯೋ ಏನೋ ಎಂಬ ದುಗುಡದಲ್ಲೇ ದಿನ ದೂಡುತ್ತೇವೆ. ಇಡೀ ಜಗತ್ತೇ ನಮ್ಮ ಜತೆಗಿದೆ ಎಂಬ ಭರವಸೆಯೊಂದಿಗೆ ಕ್ಷಣ ಕ್ಷಣದ ಸುಖವನ್ನು ಅನುಭವಿಸಬೇಕು.
ಶ್ರೀಮಂತಿಕೆಯಿದ್ದರೆ, ದೊಡ್ಡ ಹುದ್ದೆಯಲ್ಲಿದ್ದರೆ ಮಾತ್ರ ಸುಖ, ಸಂತೋಷ ಎಂಬುದು ತಪ್ಪು ಕಲ್ಪನೆ. ಇರುವ ಮತ್ತು ಇಲ್ಲದಿರುವ ವಸ್ತುಗಳ ನಡುವೆ ಹೋಲಿಕೆ ಮಾಡಿಕೊಂಡು ಸಂತೋಷವನ್ನು ಅಳತೆ ಮಾಡುತ್ತೇವೆ. ಆಧ್ಯಾತ್ಮಿಕ ಮೌಲ್ಯಗಳಿಗಿಂತ ಹೆಚ್ಚಾಗಿ ಐಷಾರಾಮಿ ವಸ್ತುಗಳನ್ನು ಹೊಂದಿರುವುದು ಮತ್ತಷ್ಟು ಗಳಿಸುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆಯೇ ಹೊರತು ಅದರಿಂದ ಸಂತೋಷ ಇರುವುದಿಲ್ಲ.
ದೊಡ್ಡ ಸಂಭ್ರಮದ ಕ್ಷಣಗಳಿಗೆ ಕಾದು ಕುಳಿತರೆ ಖಂಡಿತಾ ಅದು ಬರುವುದಿಲ್ಲ. ಕಾಯುವುದರಿಂದ ನಕಾರಾತ್ಮಕತೆ ಹಾಗೂ ದುಃಖಗಳೇ ತುಂಬಿಕೊಳ್ಳುತ್ತವೆ.

ನಾಳೆಯ ದಿನಗಳು ಖಂಡಿತಾ ಖುಷಿಯ ದಿನಗಳೇ ಆಗಿರುತ್ತವೆ ಅನ್ನುವ ಧನಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಂಡು ಈ ಕ್ಷಣದ ಸಂತೋಷವನ್ನು ಅನುಭವಿಸಬೇಕು.
ಜೀವನವನ್ನು ಸಂಭ್ರಮಿಸುವುದು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ದಿನನಿತ್ಯದ ಕೆಲಸ ಆದರೂ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಿ. ಪುಟ್ಟ ಪುಟ್ಟ ಬದಲಾವಣೆಯೂ ಬದುಕಿನಲ್ಲಿ ಖುಷಿಯನ್ನು ತರಬಲ್ಲುದು.

Related Articles

ಪ್ರತಿಕ್ರಿಯೆ ನೀಡಿ

Latest Articles