ಹಾರೈಕೆ ಎಂಬ ಸಂತೃಪ್ತಿ

ಮತ್ತೊಬ್ಬರಿಗೆ ಒಳ್ಳೆಯದು ಮಾಡಿದರೆ ನಾಳೆ ನಮಗೆ ಖಂಡಿತಾ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆಯಿಂದಲೇ ಇನ್ನೊಬ್ಬರಿಗೆ ಒಳ್ಳೆಯದು ಮಾಡುತ್ತೇವೆ. ಯಾವುದೇ ರೀತಿಯ ಸಹಾಯ ಇರಬಹುದು ಇಲ್ಲವೇ “ಒಳ್ಳೆಯದಾಗಲಿ’ ಎಂದು ಹಾರೈಸುವ ಮನಸ್ಸು ತೃಪ್ತಿಪಟ್ಟುಕೊಳ್ಳುತ್ತದೆ.


  • “ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ. ನೂರು ಕಾಲ ಸುಖವಾಗಿ ಬಾಳು. ಜೀವನದಲ್ಲಿ ಬಯಸಿದ್ದು ಸಿಗಲಿ. ಒಳ್ಳೆಯದಾಗಲಿ’ ಎಂದು ಹಾರೈಸುವ ಮನಸ್ಸು ಮತ್ತು ಹಾರೈಕೆ ಪಡೆದುಕೊಂಡವರು ಖುಷಿಯಿಂದಿರುತ್ತಾರೆ, ಅವರಲ್ಲಿ ಒಂದು ಶಕ್ತಿಯ ಸಂಚಾರವಾಗುತ್ತದೆ. ಅವರ ಹಾರೈಕೆಯಿಂದ ಒಳ್ಳೆಯದಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಹಾರೈಕೆ ಸಿಕ್ಕಿತಲ್ಲ ಎಂದು ಸಂಭ್ರಮಿಸುವವರೇ ಹೆಚ್ಚು.
    ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳುವುದು, ಒಳ್ಳೆಯದಾಗಲಿ ಎಂದು ಹಾರೈಸುವುದು ಎರಡು ಕೂಡಾ ಮನಸ್ಸಿನ ವಿಷಯ. ದೇವರಿಂದಲೂ ಆಶೀರ್ವಾದ ಬೇಡುತ್ತೇವೆ. ನಿರಾಕಾರನಾದ ದೇವನು ಒಂದಲ್ಲ ಒಂದು ದಿನ ಒಳ್ಳೆಯದು ಮಾಡುತ್ತಾನೆ ಎಂಬ ನಿರೀಕ್ಷೆಯಲ್ಲಿರುತ್ತೇವೆ. ಅದೇ ನಿರೀಕ್ಷೆಯಲ್ಲಿ ಅನುದಿನವೂ ಒಳ್ಳೆಯದು ಮಾಡು ಎಂದು ಪ್ರಾರ್ಥಿಸುತ್ತೇವೆ. ಆ ಭರವಸೆಯಲ್ಲಿಯೇ ಮತ್ತೊಬ್ಬರಿಗೆ ಒಳ್ಳೆಯದನ್ನೇ ಮಾಡುತ್ತೇವೆ. ಇತರರಿಗೆ ಇಂದು ಒಳ್ಳೆಯದು ಮಾಡಿದರೆ ಮುಂದೊಂದು ದಿನ ನಮಗೆ ಒಳ್ಳೆಯದೇ ಆಗುತ್ತದೆ ಎಂಬ ಭಾವನೆಯ ಫಲ ಅದು.

ಆಶೀರ್ವಾದದ ಶಕ್ತಿ
ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳುವಾಗ ಅವರು ಮನಸ್ಸುಪೂರ್ವಕವಾಗಿ ತಲೆಮುಟ್ಟಿ, ಬೆನ್ನು ತಟ್ಟಿ ಆಶೀರ್ವದಿಸುತ್ತಾರೆ. ಆಶೀರ್ವಾದ ಪಡೆದುಕೊಂಡವರಲ್ಲಿ ಆ ಸಂದರ್ಭ ಏನೋ ಒಂದು ರೀತಿಯ ಶಕ್ತಿ ಸಂಚರಿಸಿದಂತಾಗುವುದು. ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಏನೋ ಪಡೆದುಕೊಂಡದರ ಅನುಭವವಾಗುತ್ತದೆ. ಒಳಗೊಳಗೇ ಸಂಭ್ರಮಿಸುತ್ತಾರೆ. ಅದು ಆಶೀರ್ವಾದ ಪಡೆದವರಿಗಷ್ಟೇ ಅಲ್ಲ, ಹಾರೈಸಿದವರ ಮನಸ್ಸಿನಲ್ಲಿಯೂ ಒಂದು ರೀತಿಯ ಸಂಭ್ರಮ ಇರುತ್ತದೆ. ಯಾವುದಾದರೊಂದು ಕೆಲಸ ಆರಂಭ ಮಾಡುವುದಕ್ಕೂ ಮೊದಲು ಹಿರಿಯರು ‘ಒಳ್ಳೆಯದಾಗಲಿ, ಶುಭವಾಗಲಿ ಎಂದು ಹಾರೈಸುತ್ತಾರೆ. ಹಾಗೆ ಹಾರೈಸುವ ಅವರ ಮನದಲ್ಲೂ ಒಳ್ಳೆಯದಾಗಲಿ ಅನ್ನುವ ಸಕಾರಾತ್ಮಕ ಯೋಚನೆ ಹರಿದಾಡುತ್ತದೆ. ಆ ಸಕಾರಾತ್ಮಕ ಮನಸ್ಥಿತಿ ಅವರ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.
ಆಶೀರ್ವಾದ ಮತ್ತು ಹಾರೈಕೆ ಎರಡೂ ಪದಗಳನ್ನು ಆಗಾಗ್ಗೆ ಬಳಸುತ್ತಿರುತ್ತೇವೆ.
ಎರಡೂ ಕೂಡಾ ಒಬ್ಬರು ಮತ್ತೊಬ್ಬರ ಮೇಲೆ ಹರಿಸುವ ಧನಾತ್ಮಕ ಅಭಿವ್ಯಕ್ತಿಗಳು ಎಂದೇ ಹೇಳಬಹುದು. “ಪ್ರತಿಕೂಲ ಸಂದರ್ಭದಲ್ಲಿ ಬೆಂಕಿಯನ್ನು ನೀರನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯ’ ಎನ್ನುವಷ್ಟರ ಮಟ್ಟಿಗೆ ಆಶೀರ್ವಾದ ಪ್ರಭಾವಿ ಶಕ್ತಿಯನ್ನು ಹೊಂದಿದೆ. ಆಶೀರ್ವದಿಸುವವರು ಹಿರಿಯರೇ ಆಗಿರುತ್ತಾರೆ, ವಯಸ್ಸಿನಲ್ಲಿ ಮಾತ್ರವಲ್ಲ, ಪ್ರಭಾವೀ ವ್ಯಕ್ತಿಗಳಾಗಿರುತ್ತಾರೆ, ಅನುಭವಿಗಳಾಗಿರುತ್ತಾರೆ, ಗೌರವಾನ್ವಿತರಾಗಿರುತ್ತಾರೆ. ಆದರೆ ಆಶೀರ್ವಾದ ಪಡೆದುಕೊಳ್ಳುವ ವ್ಯಕ್ತಿ ಆಶೀರ್ವದಿಸುವವನ ಹಂತವನ್ನು ತಲುಪಿರುವುದಿಲ್ಲ ಅಷ್ಟೇ. ಅಂತಹ ಉನ್ನತಿಯನ್ನು ಪಡೆಯುವಂತಾಗಲಿ ಎಂಬುದೇ ಆಶಿರ್ವಾದ ಬೇಡುವ ಉದ್ದೇಶ. ಆಶೀರ್ವಾದ ಬೇಡುವವರು ದೈನ್ಯ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಅದು ಆಶೀರ್ವದಿಸುವವರ ಅಹಂನ್ನು ಹೆಚ್ಚಿಸಬಹುದು. ದೇವರನ್ನು ಹೊರತಾಗಿ ಮನುಷ್ಯರಲ್ಲಿ ಅದು ಸಹಜ ಗುಣ. ಅದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಹಾಗೆ ಆದಾಗ ಆಶೀರ್ವಾದದ ಅರ್ಥ ಮತ್ತು ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಹಾರೈಕೆಯ ಮನಸ್ಸು
ಹಾರೈಕೆ ಸಮಾನ ಮನಸ್ಥಿತಿಯನ್ನು ತೋರಿಸುತ್ತದೆ. ಶುಭಹಾರೈಕೆಯು ಸ್ವಾರ್ಥವಿಲ್ಲದ, ಸಾಮರಸ್ಯದ, ಸಹಾನುಭೂತಿಯ ಪರಸ್ಪರ ಅರ್ಥ ಮಾಡಿಕೊಳ್ಳುವ ಮನಸ್ಸುಗಳನ್ನು ಪ್ರತಿನಿಧಿಸುತ್ತದೆ. ಅದರಿಂದ ಉತ್ಕøಷ್ಟತೆ ಅಥವಾ ಕೀಳರಿಮೆಯ ಭಾವ ಉಂಟಾಗುವುದಿಲ್ಲ. ಹಾರೈಕೆಯನ್ನು ಕೇಳಿ ಪಡೆದುಕೊಳ್ಳುವುದಲ್ಲ, ಒಳ್ಳೆಯ ಮನಸ್ಸಿನವರಿಂದ ಶುಭಾಶಯವನ್ನು ಪಡೆದುಕೊಳ್ಳುವುದು. ಒಳ್ಳೆಯದಾಗುತ್ತದೆ ಎಂಬ ಭರವಸೆಯಿದ್ದಾಗ ಒಳ್ಳೆಯದನ್ನು ಮಾಡುವುದಕ್ಕೂ ಮುಂದಾಗುತ್ತವೆ. ಬೇರೆಯವರಿಗೆ ಒಳ್ಳೆಯದು ಮಾಡದಿದ್ದರೂ ಚಿಂತೆಯಲ್ಲ, ಕೆಟ್ಟದ್ದು ಮಾಡಬಾರದು ಎನ್ನುವ ಮಾತಿದೆ. ಮತ್ತೊಬ್ಬರೆಡೆಗೆ ಕರುಣೆ, ಪ್ರೀತಿ ಇದ್ದಾಗ ಇತರರಿಗೆ ಒಳ್ಳೆಯದು ಮಾಡುವ ಮನಸ್ಸು ಇರುತ್ತದೆ. ಮತ್ತೊಂದೆಡೆ ಮನಸ್ಸು ಹೇಳುತ್ತಿರುತ್ತದೆ “ನಾಳೆ ನಿನಗೂ ಒಳ್ಳೆಯದೇ ಆಗುತ್ತದೆ’ ಎಂದು. ಇಂತಹ ಸಕಾರಾತ್ಮಕ ಯೋಚನೆ ಮನಸ್ಸನ್ನು ಖುಷಿಯಾಗಿಡುತ್ತದೆ.

ಧನ್ಯತಾ ಭಾವ
ಭಾರತೀಯ ಸಂಸ್ಕøತಿಯಲ್ಲಿ ಹಿರಿಯರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುವುದು ಪದ್ಧತಿ. ವಯಸ್ಸಿನಲ್ಲಿ ಹಿರಿಯರಾದವರನ್ನು ಕಾಲು ಮುಟ್ಟಿ ನಮಸ್ಕಾರ ಮಾಡುತ್ತೇವೆ. ಅಹಂಕಾರವನ್ನು ಹಿಡಿತದಲ್ಲಿಟ್ಟುಕೊಂಡು ಅವರ ಪಾದವನ್ನು ಮುಟ್ಟಿದಾಗ ಅವರ ಹೃದಯದಿಂದ ಸಕಾರಾತ್ಮಕ ಚಿಂತನೆ ಮತ್ತು ಶಕ್ತಿ ನಮ್ಮ ಕೈಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ‘ಶ್ರದ್ಧಾ’ ಅಹಂನ್ನು ಕಡಿಮೆ ಮಾಡುತ್ತದೆ, ‘ಕರುಣಾ’-ಹಿರಿಯರ ಮನಸ್ಸು ತುಂಬಿದ ಆಶೀರ್ವಾದವನ್ನು ಸೂಚಿಸುತ್ತದೆ. ಪಾದಸ್ಪರ್ಶ ಮಾಡುವಾಗ ಆಶೀರ್ವಾದ ಬೇಡುವ ಮತ್ತು ಕೊಡುವ ಮನಸ್ಸುಗಳನ್ನು ಬೆಸೆಯುವಂತೆ ಮಾಡುತ್ತದೆ. ಹಿರಿಯರ ಆಶೀರ್ವಾದ ಎಂಬುದು ಜ್ಞಾನ ಮತ್ತು ಪ್ರಬಲವಾದ ಶಕ್ತಿ ಎಂದೇ ಹೇಳಬಹುದು. ಆಶೀರ್ವಾದ ಪಡೆದುಕೊಂಡ ಅನುಭವ ಬಹುದಿನಗಳವರೆಗೆ ನಮ್ಮನ್ನು ಮುನ್ನಡೆಸುತ್ತದೆ. ಅದರಿಂದ ಮಾಡುವ ಕೆಲಸಕ್ಕೆ ಪ್ರೋತ್ಸಾಹ, ಬದುಕಿನಲ್ಲಿ ಭರವಸೆಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ.
ದೇವರನ್ನು ಬೇಡುವ ರೀತಿಗೂ ಇದನ್ನು ಅನ್ವಯಿಸಿಕೊಳ್ಳಬಹುದು. ದೇವರನ್ನು ಪ್ರಾರ್ಥಿಸುವಾಗ ಶ್ರದ್ಧೆ ಇಲ್ಲದೇ ಹೋದರೆ ಭಕ್ತನಾದವನು ಕರುಣಾ (ಆಶೀರ್ವಾದ)ವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಹಿರಿಯರ ಹಾರೈಕೆ, ಆಶೀರ್ವಾದದ ಜತೆಗೆ ಅವರ ಮಾರ್ಗದರ್ಶನ ಇದ್ದಾಗ ಬದುಕಿನಲ್ಲಿ ಒಳ್ಳೆಯದನ್ನು, ಉನ್ನತವಾದುದನ್ನು ಸಾಧಿಸುವುದಕ್ಕೆ ಸಾಧ್ಯ. ದೇವರೆಡೆಗೆ ಕೃತಜ್ಞನಾಗಿಲ್ಲದವನು ಮನುಷ್ಯರೆಡೆಗೂ ಕೃತಜ್ಞರಾಗಿರುವುದಿಲ್ಲ. ಜಗತ್ತಿನ ಆಗುಹೋಗುಗಳಿಗೆ ಕಾರಣಕರ್ತನಾದ ದೇವರಿಗೆ ಧನ್ಯವಾದ ಹೇಳುವುದನ್ನು ಮರೆತ ಜನರು ಮನುಷ್ಯರೆಡೆಗೆ ಹೃದಯ ವೈಶಾಲ್ಯತೆ, ಉಪಕಾರ ಸ್ಮರಣೆ ಮಾಡಲು ಹಿಂಜರಿಯುತ್ತಾರೆ. ಹಾಗಾಗಿ ಹಾರೈಸಿದವನಿಗೆ ಅಥವಾ ಆಶೀರ್ವದಿಸಿದವರಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿರಬೇಕು ಕೂಡಾ.

Related Articles

ಪ್ರತಿಕ್ರಿಯೆ ನೀಡಿ

Latest Articles