ಕಾಡುವ ಖಾಲಿತನ

ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿದೆ. ನಿಜ. ತುಂಬಿದ ಕೊಡ ಯಾವತ್ತಿಗೂ ಶಬ್ದ ಮಾಡುವುದಿಲ್ಲ. ಅದೇ ರಿತಿ ಖಾಲಿ ಕೊಡ ಕೂಡಾ ನೀರಿನ ಶಬ್ದ ಮಾಡುವುದಿಲ್ಲ. ಅದು ಪರಿಪೂರ್ಣತೆ. ಆದರೆ ಪೂರ್ಣತೆ ಮತ್ತು ಖಾಲಿತನ ಎನ್ನುವುದು ಪರಸ್ಪರ ವಿರುದ್ಧ ಪದಗಳಲ್ಲ.

ಖಾಲಿತನವೇ ಪೂರ್ಣತೆ ಎಂದಿದ್ದಾರೆ ಗೌತಮ ಬುದ್ಧ. ಆದರೆ ಖಾಲಿತನ ಮತ್ತು ಪೂರ್ಣತೆ ಎರಡೂ ಪದಗಳು ಸಾಮಾನ್ಯವಾಗಿ ನೋಡುವುದಾದರೆ ಅವು ಸಂಪೂರ್ಣವಾಗಿ ವಿರುದ್ಧ ಪದಗಳು. ಆದರೆ ಅದನ್ನು ಆಧ್ಯಾತ್ಮಿಕವಾಗಿ ನೋಡುವುದಾದರೆ ಅವೆರಡು ವಿರುದ್ಧ ಪದಗಳಲ್ಲ. ದೇವರೊಂದಿಗೆ ಪೂರ್ಣತೆಯನ್ನು ಪಡೆದುಕೊಳ್ಳಲು ತಮ್ಮೆಲ್ಲಾ ಬಯಕೆಗಳನ್ನು ಖಾಲಿ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ಯಾವ ಬಯಕೆಗಳೂ ಇರುವಂತಿಲ್ಲ. ಆದರೆ ಆ ಖಾಲಿತನದಿಂದ ಪೂರ್ಣತೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯ. ಜೀವನದಲ್ಲಿರುವ ಬಯಕೆಗಳನ್ನು ಖಾಲಿ ಮಾಡಿಕೊಂಡಾಗಲಷ್ಟೇ ದೈವತ್ವದೆಡೆಗೆ ಹೋಗುವುದಕ್ಕೆ ಸಾಧ್ಯ. ಆ ಖಾಲಿತನದಿಂದಲೇ ಪರಿಪೂರ್ಣ ಜೀವನವನ್ನು ಪಡೆದುಕೊಳ್ಳಬಹುದು.
ಮಕ್ಕಳ ಮನಸ್ಸು ಬಿಳಿಯ ಖಾಲಿ ಹಾಳೆಯಂತೆ.  ಏನು ಹೇಳಿದರೂ ಅದನ್ನು ಮನದಲ್ಲಿಟ್ಟುಕೊಳ್ಳುತ್ತಾರೆ. ಅದು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂಬುದನ್ನು ಗಮನಿಸಿರುತ್ತೇವೆ. ಅದು ನಿಜ. ಆದರೆ ಮನಸ್ಸಿನಲ್ಲಿ ನೂರಾರು ಗೊಂದಲಗಳೇ ತುಂಬಿರುವಾಗ ಯಾವುದರ ಸ್ಪಷ್ಟತೆಯೂ ಇರುವುದಿಲ್ಲ. ಅದೇ ಗುರಿ ಒಂದೇ ಆಗಿದ್ದಾಗ ಪರಿಪೂರ್ಣತ್ವದೆಡೆಗೆ ಸಾಗುವುದು ಸುಲಭ.
ಕೆಲವೊಮ್ಮೆ, ಮನಸ್ಸು ಏಕೋ ಖಾಲಿ ಖಾಲಿಯಾದಂತಿದೆ. ಏನೂ ಹೊಳೆಯುತ್ತಿಲ್ಲ, ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎನ್ನುವವರನ್ನು ಕೇಳಿರುತ್ತೇವೆ. ಅಂದರೆ ಈ ಖಾಲಿತನವು ಎನ್ನುವುದು ಬದುಕಿಗೆ ಪ್ರೇರಣೆ ಇಲ್ಲದಂತೆ ಮಾಡಿಬಿಡುತ್ತದೆ, ನಮ್ಮಲ್ಲಿ ಮಂದಭಾವನೆಯನ್ನು ಮೂಡಿಸುತ್ತದೆ.
ಆದರೆ ಆಧ್ಯಾತ್ಮಿಕವಾಗಿ ಅದನ್ನು ಯೋಚಿಸುವುದಾದರೆ ಪೂರ್ಣತೆ ಮತ್ತು ಖಾಲಿತನ ಎರಡೂ ಕೂಡಾ ಒಳ್ಳೆಯದೆ. ನಮ್ಮಲ್ಲಿ ಸಂಪತ್ತು ತುಂಬಿದ್ದರೆ ಅಥವಾ ಜ್ಞಾನ ಇದ್ದರೆ ಅದನ್ನು ಹಂಚುವುದು ಸುಲಭ. ಅಥವಾ ಖಾಲಿತನವೇ ತುಂಬಿದ್ದರೆ ಅದನ್ನು ತುಂಬಿಸಿಕೊಳ್ಳಲು ದೊಡ್ಡ ಅವಕಾಶವೇ ಸಿಕ್ಕಂತಾಗುತ್ತದೆ. ಮಾತ್ರವಲ್ಲ ಖಾಲಿತನ ಇದ್ದಾಗಲೇ ಯಾವುದರ ಚಿಂತೆಯೂ ನಮ್ಮನ್ನು ಕಾಡುವುದಿಲ್ಲ.
ಸಾವಿರಾರು ಜನರು ವಿಭಿನ್ನ ವ್ಯಕ್ತಿತ್ವವಿಭಿನ್ನ ದೃಷ್ಟಿಕೋನದ ವ್ಯಕ್ತಿಗಳು ನಮ್ಮ ಮುಂದೆಯೇ ಹಾದು ಹೋಗುತ್ತಿರುತ್ತಾರೆ. ಕೆಲವರು ಬುದ್ಧಿವಂತಿಕೆಯಿಂದ ವ್ಯವಹರಿಸುವವರು. ಮತ್ತೆ ಕೆಲವರು ಹೃದಯವಂತಿಕೆಯಿಂದ ಭಾವನಾತ್ಮಕವಾಗಿ ಸಂಬಂಧ ಬೆಳೆಸುವವರು.
ಬುದ್ಧಿ ಮತ್ತು ತರ್ಕದಿಂದ ಮಾತನಾಡುವವರು ಕಂಡುಕೊಂಡ ಮಾರ್ಗವನ್ನು ಜ್ಞಾನಮಾರ್ಗ ಎಂದು ಕರೆಯಬಹುದು.
ಹೃದಯವಂತಿಕೆ ಉಳ್ಳವರು ಭಕ್ತಿ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಎರಡೂ ಮಾರ್ಗಗಳೂ ಕೂಡಾ ನಮ್ಮನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂಬುದು ಮಾತ್ರ ಸತ್ಯ. ಜ್ಞಾನ ಹಾಗೂ ಭಕ್ತಿ ಈ ಎರಡೂ ಮಾರ್ಗಗಳ ಮೂಲಕ ತಲುಪುವ ಡೆಸ್ಟಿನೇಶನ್ ಮಾತ್ರ ಒಂದೇ ಆಗಿರುತ್ತದೆ. ಅದುವೇ ಪರಿಪೂರ್ಣತೆಯೆಡೆಗೆ.

ಜ್ಞಾನ ಮಾರ್ಗ
ವ್ಯಕ್ತಿಯೊಬ್ಬ ಜ್ಞಾನದ ಮಾರ್ಗದಲ್ಲಿ ಮುನ್ನಡೆಯುತ್ತಿರುತ್ತಾನೆ. ಬಹಳ ಬುದ್ಧಿವಂತಿಕೆಯಿಂದ ಜ್ಞಾನ ಗಳಿಸಿಕೊಳ್ಳುತ್ತಾನೆ. ಜ್ಞಾನ ಗಳಿಸಿಕೊಳ್ಳುವುದು ಒಂದು ರೀತಿಯ ಧ್ಯಾನದಂತೆ. ಜ್ಞಾನವನ್ನು ಪಡೆದುಕೊಳ್ಳುವಾಗ ಆತ ಧ್ಯಾನದ ಮೊರೆ ಹೋಗುತ್ತಾನೆ. ಧ್ಯಾನಸ್ಥರಾದಾಗ ಮನಸ್ಸು ಸ್ಥಿರವಾಗುತ್ತದೆ. ಅಂತಹ ಸ್ಥಿತಿಯನ್ನು ತಲುಪಿದಾಗ ಅದು ಖಾಲಿತನ ಎನ್ನಿಸಿಕೊಳ್ಳುತ್ತದೆ.

ಭಕ್ತಿಮಾರ್ಗ
ಭಕ್ತಿ ಎಂದರೆ ಅದು ಪ್ರೀತಿಯ ಸಾಗರವಿದ್ದಂತೆ. ಅಲ್ಲಿ ಯಾವುದೇ ತಾರ್ಕಿಕ ಮನೋಭಾವವಿಲ್ಲ, ಅದು ಹೃದಯಾಂತರಾಳದ ಭಾವನೆಗಳು. ಅಲ್ಲಿ ನಿಜವಾದ ಭಾವನೆಗಳ ಪ್ರವಾಹ ಇರುತ್ತದೆಯೇ ಹೊರತು ಬುದ್ಧಿವಂತಿಕೆಯಿರುವುದಿಲ್ಲ. ದೇವರನ್ನು ನಿಷ್ಠೆಯಿಂದ ಪೂಜಿಸುತ್ತಾನೆ ಎಂದಾದರೆ ಆತನಿಗೆ ದೇವರ ಮೇಲೆ ಭಕ್ತಿ ಇದೆ ಎಂದರ್ಥ.  ಪ್ರೀತಿ ಇದ್ದಾಗ ಮತ್ತು ಭಕ್ತಿ ಇರುವುದಕ್ಕೆ ಸಾಧ್ಯ. ಹೀಗೆ ಭಕ್ತನಾದವನು ಭಜನೆ, ಸತ್ಸಂಗ, ದೇವರ ಧ್ಯಾನದಲ್ಲಿ ತನ್ನ ಭಾವನೆಯನ್ನು ಮಿಳಿತಗೊಳಿಸುತ್ತಾನೆ. ಆಗ ಭಕ್ತನಲ್ಲಿ ಶಾಂತತೆ, ನೆಮ್ಮದಿಯ ಭಾವ ಸುರಿಸುತ್ತದೆ.
ಭಕ್ತ ಭಕ್ತಿಯಿಂದ ಮತ್ತು ಜ್ಞಾನಿ ಜ್ಞಾನದಿಂದ ಪರಿಪೂರ್ಣತೆಯನ್ನು ಕಂಡುಕೊಳ್ಳುತ್ತಾರೆ. ಇಬ್ಬರಿಗೂ ಕೂಡಾ ಶಾಂತತೆಯನ್ನು ಹೊಂದಿದಂತಹ ಸ್ಥಿತಿ. ಆ ಶಾಂತತೆಯೇ ಅಥವಾ ಪ್ರಸನ್ನತೆಯೇ ಖಾಲಿತನ, ಆದರೆ ಅದು ಪ್ರೀತಿಯಿಂದ ತುಂಬಿರುತ್ತದೆ.
ಭಕ್ತನಾದವನು ಪ್ರತಿಯೊಂದು ವಸ್ತು, ವ್ಯಕ್ತಿಗಳಲ್ಲಿ ದೇವರನ್ನು ಕಂಡುಕೊಳ್ಳುತ್ತಾನೆ. ಜ್ಞಾನಿಗೆ ಅದ್ಯಾವುದೂ ಏನೂ ಅಲ್ಲ. ಅಂದರೆ ಒಬ್ಬರಿಗೆ ಖಾಲಿ ಅನ್ನಿಸಿದ್ದು, ಮತ್ತೊಬ್ಬರಿಗೆ ಪೂರ್ಣತೆಯ ರೂಪದಲ್ಲಿ ಕಂಡುಬರುತ್ತದೆ. ಆದರೆ ಅವರಿಬ್ಬರೂ ಪೂರ್ಣತೆಯ ಸಾಕಾರವನ್ನು ಹೊಂದುತ್ತಾರೆ. ಅಂದರೆ ದೈವಭಕ್ತ ದೈವತ್ವವನ್ನು ಹೊಂದಿ ಪರಿಪೂರ್ಣನೆನೆಸಿಕೊಂಡರೆ, ಜ್ಞಾನಿ ಜ್ಞಾನವನ್ನು ಪಡೆದು ಪರಿಪೂರ್ಣನೆನಿಸಿಕೊಳ್ಳುತ್ತಾನೆ. ಒಟ್ಟಿನಲ್ಲಿ ಅವರಿಬ್ಬರೂ ತಮ್ಮ ತಮ್ಮ ದಾರಿಯಲ್ಲಿ ಪೂರ್ಣತ್ವವನ್ನು ಹೊಂದುತ್ತಾರೆ.  

ಕಾಡುವ ಖಾಲಿತನ
ಖಾಲಿತನ ಕಾಡುತ್ತದೆಯೆಂದಾರೆ ನೀವು ಒಂಟಿಯಾಗಿದ್ದೀರಿ ಎಂದರ್ಥವಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಆಗಾಗ್ಗೆ ಜೀವನ ಅಂದರೆ ಏನೂ ಇಲ್ಲವೇನೋ ಎಂದು ಕಾಡುವುದು ಸಹಜ. ಏನನ್ನೋ ಇಲ್ಲವೇ ಯಾರನ್ನೋ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದರ್ಥ. ಆಗಲೇ ಅಲ್ಲವೇ ಜೀವನ ಅಂದರೆ ಇಷ್ಟೇ ಎನ್ನುವ ಭಾವ ತಳೆಯುವುದು. ಈ ಖಾಲಿತನದಿಂದಾಗಿ ನಿಧಾನವಾಗಿ ನಮ್ಮ ಬಯಕೆಗಳು, ಭರವಸೆಗಳು ಕಳೆದುಕೊಳ್ಳುತ್ತೇವೆ. ತಮ್ಮ ಬಗ್ಗೆಯೇ ಕಾಳಜಿ ವಹಿಸುವುದನ್ನು ಮರೆತು ಬಿಡುತ್ತೇವೆ. ಖಾಲಿತನದಿಂದ ಒಂಟಿತನ ಕಾಡುವುದು ಮಾತ್ರವಲ್ಲದೆ ಮಾಡಿದ ಕೆಲಸ ಯಾವುದೇ ಆಗಿರಲಿ ಅದರಲ್ಲಿ ತೃಪ್ತಿ ಇರುವುದಿಲ್ಲ. ಸಂಬಂಧದಲ್ಲಿ ಪ್ರೀತಿ ಇಲ್ಲ, ಯಾವುದೂ ಶಾಶ್ವತವಲ್ಲ ಎನ್ನುವ ಭಾವ ಹೊಂದುತ್ತಾರವರು. ಆದರೆ ಇಂತಹ ಖಾಲಿತನ ಯಾವತ್ತಿಗೂ ಒಳ್ಳೆಯದಲ್ಲ. ಖಾಲಿತನದ ಭಾವವು ನಮ್ಮನ್ನು ಪರಿಪೂರ್ಣತೆಯೆಡೆಗೆ ಕೈಹಿಡಿದು ಮುನ್ನಡೆಸುವಂತಿರಬೇಕು. ಅದರಿಂದ ಸುಖ – ನೆಮ್ಮದಿಯ ಜೀವನ ಹೊಂದುವಂತಿರಬೇಕು.

ಶ್ರೀದೇವಿ ಅಂಬೆಕಲ್ಲು
ಶ್ರೀದೇವಿ ಅಂಬೆಕಲ್ಲುhttp://sakshatkara.com/
ಪ್ರತಿಯೊಬ್ಬರ ಬದುಕಿನಲ್ಲಿಯೂ ಆಧ್ಯಾತ್ಮಿಕ ವಿಚಾರಧಾರೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗವೂ ಹೌದು. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಹೇಗೆ ಸಹಕಾರಿಯೋ ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles