ಆಟಿ ತಿಂಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಷಾಢ ಎಂದೇ ಕರೆಯುತ್ತಾರೆ. ಪರಶುರಾಮನ ಸೃಷ್ಟಿಯ ಕ್ಷೇತ್ರ ಎಂದು ಕರೆಸಿಕೊಂಡಿರೋ ತುಳುನಾಡು ಹಲವಾರು ಜನಪದ ಆಚರಣೆಗಳಿಗೆ ಪ್ರಸಿದ್ಧಿ.
ತುಳುನಾಡಿನ ವಿಶಿಷ್ಟ ಆಚರಣೆ ಆಟಿ ಕಳೆಂಜಮಿಕ್ಕ ಕರ್ನಾಟಕಕ್ಕೆಲ್ಲ ಈಗ ಶ್ರಾವಣದ ಸಂಭ್ರಮವಾದರೆ, ದಕ್ಷಿಣ ಕನ್ನಡಕ್ಕೆ ಮಾತ್ರ ಇದು ಆಷಾಢ. ಇಲ್ಲಿ ಅನುಸರಿಸುವ ಸೌರಮಾನ ಪಂಚಾಂಗವೇ ಇದಕ್ಕೆ ಕಾರಣ. ಈ ತಿಂಗಳಲ್ಲಿ ಇಲ್ಲಿ ನಡೆಯುವ ಒಂದು ಗಮನಾರ್ಹ ಆಚರಣೆ ಎಂದರೆ, ಆಟಿ ಕಳೆಂಜ…
ಆಟಿ ತಿಂಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಷಾಢ ಎಂದೇ ಕರೆಯುತ್ತಾರೆ. ಪರಶುರಾಮನ ಸೃಷ್ಟಿಯ ಕ್ಷೇತ್ರ ಎಂದು ಕರೆಸಿಕೊಂಡಿರೋ ತುಳುನಾಡು ಹಲವಾರು ಜನಪದ ಆಚರಣೆಗಳಿಗೆ ಪ್ರಸಿದ್ಧಿ. ಜನಪದ ಆಚರಣೆಗಳು ಸಂಸ್ಕೃತಿ, ಸಂಪ್ರದಾಯವನ್ನು ನೆನಪಿಸುತ್ತದೆ. ಅಂತಹ ಆಚರಣೆಗಳಲ್ಲಿ ಆಟಿಕಳೆಂಜ ಕೂಡ ಒಂದು. ಕಾಲಕ್ಕನುಗುಣವಾಗಿ ಅಲ್ಲಿನ ಪ್ರದೇಶಗಳ ವಾತಾವರಣ ಮತ್ತು ಪ್ರಕೃತಿಯಲ್ಲಾಗುವ ಬದಲಾವಣೆಯನ್ನಾಧರಿಸಿ ಹಬ್ಬಗಳು, ಆಚರಣೆಗಳು ಅಸ್ತಿತ್ವಕ್ಕೆ ಬಂದಿವೆ.
ಆಷಾಢ ಮಾಸದಲ್ಲಿ ವಾತಾವರಣ ಮತ್ತು ಪ್ರಕೃತಿಯಲ್ಲಾಗುವ ಬದಲಾವಣೆಯ ಸಂಕೇತವಾಗಿಯೇ ಹುಟ್ಟಿಕೊಂಡ ಒಂದು ನಂಬಿಕೆ ‘ಆಟಿ ಕಳೆಂಜ’. ‘ಆಟಿ’ ಅಂದರೆ ಆಷಾಢ. ‘ಕಳೆಂಜ’ ಅಂದರೆ ಕಳೆಯುವವನು ಎಂದರ್ಥ. ಊರಿಗೆ ಬಂದ ಮಾರಿಯನ್ನು, ಮನುಷ್ಯ, ಸಾಕುಪ್ರಾಣಿಗಳು ಮತ್ತು ಬೆಳೆಗಳಿಗೆ ಬಂದ ರೋಗಗಳನ್ನು ಕಳೆಯುವವನು ಎಂದರ್ಥ. ಕಳೆಂಜ ಮಾಂತ್ರಿಕನ ರೀತಿಯಲ್ಲಿ ಊರಿಗೆ ಬಂದ ಮಾರಿಯನ್ನು ಕಳೆಯುತ್ತಾನೆ. ಅವನ ವೇಷ ಕೂಡ ಮಾಂತ್ರಿಕನ ವೇಷದಂತಿರುತ್ತದೆ. ಆಷಾಢ ಮಾಸ ಹಲವು ರೀತಿಯಿಂದ ವಿಶೇಷ. ಜುಲೈ-ಆಗಸ್ಟ್ನಲ್ಲಿ ಮಳೆಯಿಂದಾಗಿ ಸಮಸ್ಯೆಗಳದೇ ಆಗರ. ಆಷಾಢ ಮಾಸದಲ್ಲಿ ಕರಾವಳಿ ಜಿಲ್ಲೆಯಲ್ಲಿ ಯಾವುದೇ ಹಬ್ಬ, ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುವುದಿಲ್ಲ.
ಮಳೆಗಾಲಕ್ಕೆಂದು ಕೂಡಿಟ್ಟ ಆಹಾರ ವಸ್ತುಗಳು ಮಳೆಗಾಲ ಮುಗಿಯುವುದರೊಳಗೇ ಖಾಲಿಯಾಗುವುದುಂಟು. ದುಷ್ಟ ಶಕ್ತಿಯ ಪ್ರಭಾವದಿಂದಲೇ ಹೀಗಾಗುತ್ತದೆ ಅನ್ನೋದು ಒಂದು ನಂಬಿಕೆ. ದುಷ್ಟ ಶಕ್ತಿಯನ್ನು ಹೋಗಲಾಡಿಸುವ ಒಂದು ಆಶಯವನ್ನು ಈ ನೃತ್ಯದ ಮೂಲಕ ಪಾಡ್ದನ ಹೇಳುತ್ತಾ ಪ್ರಸ್ತುತ ಪಡಿಸುತ್ತಾರೆ.
ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ (ಭೂತಕೋಲದ ವೇಷ ಹಾಕುವವರು) ಸಮುದಾಯದವರು ಮಾಡುತ್ತಾರೆ. ಅವರು ಆಟಿ ಕಳೆಂಜದ ವೇಷವನ್ನು ಹಾಕಿ ಮನೆ ಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿಹೋಗುತ್ತದೆ ಅನ್ನುವ ನಂಬಿಕೆ. ಕಳೆಂಜದ ವೇಷ ಧರಿಸುವವರು ತೆಂಗಿನ ಎಳೆಯ ಗರಿಗಳಿಂದ ಹೆಣೆದು ಮಾಡಿದ ಉಡುಗೆ, ಕಾಲ್ಗೆಜ್ಜೆ, ಗಾಢ ವರ್ಣದ ಕೆಂಪು ಬಟ್ಟೆ, ಅಡಿಕೆ ಮರದ ಹಾಳೆಯಿಂದ ಮಾಡಿದ ಟೋಪಿಯನ್ನೇ ವೇಷಕ್ಕೆ ಬಳಸಿಕೊಳ್ಳುತ್ತಾರೆ. ಮುಖಕ್ಕೆ ಬಿಳಿ ಬಣ್ಣವನ್ನು ಬಳಿದುಕೊಳ್ಳುತ್ತಾರೆ. ತಟ್ಟಿಯಿಂದ ಹೆಣೆದು ಮಾಡಿದ ಕೊಡೆಯನ್ನು ಹೂವು-ಎಲೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಆ ಕೊಡೆಯನ್ನು ತಿರುಗಿಸುತ್ತಾ ಮನೆಮನೆಗೆ ತೆರಳಿ ಅಲ್ಲಿ ನೃತ್ಯ ಮಾಡುತ್ತಾರೆ. ಪಾಡ್ದನ ಹೇಳಲು ಒಬ್ಬ ಸಹಾಯಕ ಜತೆಗಿರುತ್ತಾನೆ. ಆತ ತೆಂಬರೆಯನ್ನು ಬಾರಿಸುತ್ತಾ ಪಾಡ್ದನದ ಮೂಲಕ ಕಳೆಂಜದ ಕಥೆಯನ್ನು ವಿವರಿಸುತ್ತಾ ಸಾಗುತ್ತಾನೆ. ಕಳೆಂಜ ವೇಷಧಾರಿ ನೃತ್ಯ ಮಾಡುತ್ತಾನೆ. ಕಳೆಂಜ ಭೇಟಿ ನೀಡುವ ಪ್ರತಿ ಮನೆಯವರು ಅಕ್ಕಿ, ಫಲವಸ್ತುಗಳು, ತೆಂಗಿನ ಕಾಯಿ, ಎಲೆ-ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ. ಈ ಮೂಲಕ ಮನೆಗೆ ಸೋಕಿದ ದುಷ್ಟ ಶಕ್ತಿಯನ್ನು ಕಳೆಯುತ್ತಾನೆ. ನಂತರ ತೋಟದಲ್ಲಿ ಬೆಳೆದ ಬಾಳೆಗೊನೆ, ತೆಂಗಿನ ಕಾಯಿಯನ್ನು ಹೇಳದೆ ಕೇಳದೆ ಕೊಂಡೊಯ್ಯುವ ಪದ್ಧತಿ ಇದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದರಿಂದ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ. ಮನೋವೈಜ್ಞಾನಿಕ ರೀತಿಯಲ್ಲಿ ನೋಡುವುದಾದರೆ ಶ್ರೀಮಂತರಿಗೆ ಬಡತನದ ತೀವ್ರತೆಯನ್ನು ತೋರಿಸುವ ಕ್ರಮವೂ ಇರಬಹುದು.
ಕಳೆಂಜನಿಗೆ ದೈವದ ನೆಲೆ ಇಲ್ಲದಿರುವುದರಿಂದ ಗುಡಿಗಳನ್ನು ಕಟ್ಟಿಸಿ ಆರಾಧಿಸುವ ಕ್ರಮ ಇಲ್ಲ. ಆಷಾಢದ ಒಂದು ತಿಂಗಳಲ್ಲಿ ನಲಿಕೆಯವರು ಕಳೆಂಜದ ವೇಷ ಹಾಕಿ ಕಳೆಂಜದ ಇರುವಿಕೆಯನ್ನು ಪ್ರಸ್ತುತ ಪಡಿಸುತ್ತಾರೆ. ಇದರಲ್ಲಿ ಸಾಮಾಜಿಕ ಕಳಕಳಿ ಮತ್ತು ಬಡತನದ ಒಂದು ಭಾಗವೂ ಇದೆ. ಕಳೆಂಜನ ನರ್ತನ ಒಂದೇ ಅಲ್ಲದೆ ಶೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಹಲವಾರು ಕುಣಿತಗಳಿದ್ದವು. ಚಾರಿತ್ರಿಕವಾಗಿ ನೋಡಿದರೆ ನಲಿಕೆಯವರು ಆರ್ಥಿಕವಾಗಿ ದುರ್ಬಲರು. ಆದರೂ ಬಡತನ, ರೋಗರುಜಿನಗಳೇ ತುಂಬಿಕೊಂಡ ಕಾಲಘಟ್ಟದಲ್ಲಿ ಊರಿಗೆ ಸಮೃದ್ಧಿ ಬರಬೇಕು ಅನ್ನುವ ಲೋಕದೃಷ್ಟಿಯ ಆಶಯವನ್ನಿಟ್ಟುಕೊಂಡು ಮಾಡುವ ನೃತ್ಯ ಇದು.