ಹೆಸರೇ ಹೇಳುವಂತೆ ವರ್ಷಪೂರ್ತಿ ಹಿಮದಿಂದ ಆವೃತವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಬೆಂಗಳೂರಿನಿಂದ 220 ಕಿಮೀ ದೂರದಲ್ಲಿರುವ ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಚೋಳ ಅರಸ ಬಲ್ಲಾಳನ ಕಾಲದಲ್ಲಿ (1315ರಲ್ಲಿ) ನಿರ್ಮಾಣಗೊಂಡಿದೆ.
ಸಮುದ್ರಮಟ್ಟದಿಂದ ಸುಮಾರು 4769 ಅಡಿ ಎತ್ತರದಲ್ಲಿರುವ ಈ ಪುಣ್ಯಕ್ಷೇತ್ರ ನಯನಮನೋಹರ. ಬೆಳಗ್ಗೆ ಹಾಗೂ ಸಂಜೆ ಹೊತ್ತು ಹಿಮದಿಂದ ಆವೃತವಾಗುವ ಈ ದೇಗುಲ ಶ್ರೀಕೃಷ್ಣಪರಮಾತ್ಮನಿಗೆ ಅರ್ಪಣೆಗೊಂಡಿದೆ. ದೇಗುಲದೊಳಗೆ ಪೂಜಾ ವಸ್ತುಗಳ ಹೊರತಾಗಿ ಮತ್ತೇನನ್ನೂ ಕೊಂಡೊಯ್ಯುವಂತಿಲ್ಲ.
ದೇಗುಲ ವಿಶೇಷ
ಒಂದೇ ಅಂತಸ್ತಿನ ಗೋಪುರವನ್ನೊಳಗೊಂಡಿದೆ. ಮುಖ ಮಂಟಪ, ಧ್ವಜಸ್ತಂಭ, ಗರುಡಸ್ತಂಭ (ಗರುಡರ ಪೀಠ), ಗರ್ಭಗುಡಿಯಲ್ಲಿ ಮರದ ಕೆಳಗೆ ವಿರಾಜಮಾನನಾದ ಕೃಷ್ಣನ ಮೂರ್ತಿ ಇದೆ. ಇದು ಅಗಸ್ತ್ಯರಿಂದ ಪ್ರತಿಷ್ಠಾಪನೆಗೊಂಡಿದೆ ಎಂಬುದು ತಿಳಿದು ಬರುತ್ತದೆ.
ಗರ್ಭಗುಡಿಯ ಕಂಬಗಳ ಮೇಲೆ ರುಕ್ಮಿಣಿ, ಸತ್ಯಭಾಮೆ, ಗೋವುಗಳ ಕೆತ್ತನೆ ಇದೆ. ವರ್ಷವಿಡೀ ಬತ್ತದ ತಣ್ಣೀರ ಕಾರಂಜಿ ಇದೆ. ಮುಖಮಂಟಪದಲ್ಲಿ ದಶಾವತಾರ, ಕೃಷ್ಣಾವತಾರ ಕೆತ್ತನೆಯನ್ನು ಕಾಣಬಹುದು.
ದೇವರ ದರ್ಶನ ಸಮಯ: ಬೆಳಗ್ಗೆ8.30ರಿಂದ ಸಂಜೆ4
ಹೋಗುವುದು ಹೇಗೆ?
ಬೆಂಗಳೂರಿನಿಂದ 220ಕಿ.ಮೀ., ಮೈಸೂರಿನಿಂದ 75ಕಿ.ಮೀ., ಗುಂಡ್ಲುಪೇಟೆಯಿಂದ 60ಕಿ.ಮೀ. ದೂರ