ಕಲಾದೇಗುಲಕ್ಕೆ ನಮೋ ಎನ್ನಿ: ಕೇದಾರೇಶ್ವರನಿಗೆ ಕೈಮುಗಿಯ ಬನ್ನಿ

* ವೀರೇಂದ್ರ ಬೇಗೂರು

‘ದೋರಸಮುದ್ರ, ದ್ವಾರಸಮುದ್ರ ‘ಎಂದು ಕರೆಯಲ್ಪಡುತ್ತಿದ್ದ ಹೊಯ್ಸಳರ ರಾಜಧಾನಿಯಾಗಿದ್ದ ಈಗಿನ ‘ಹಳೇಬೀಡು’ ಕಲೆಗಳಬೀಡು, ದೇಗುಲಗಳ ನಾಡು. ಎಲ್ಲಿ ನೋಡಿದರಲ್ಲಿ ಕಲಾದೇಗುಲಗಳ ಕುರುಹುಗಳು, ಜೈನಬಸದಿಗಳ ಅವಶೇಷಗಳು ಕಾಣಸಿಗುತ್ತವೆ. ಹಿಂದೊಮ್ಮೆ 720ಕ್ಕೂ ಹೆಚ್ಚು ಜೈನಬಸದಿಗಳು, 25ಕ್ಕೂ ಹೆಚ್ಚು ಶೈವ, ವೈಷ್ಣವ ದೇಗುಲಗಳು ಇದ್ದವೆಂದು ಇತಿಹಾಸದಲ್ಲಿ ಉಲ್ಲೇಖಿತವಾಗಿದ್ದರೂ, ನಮಗೆ ಇಂದು ಕಾಣಸಿಗುವುದು ಕೆಲವು ಮಾತ್ರ. ಎಲ್ಲವೂ ಇದ್ದಿದ್ದರೆ ಶಿಲ್ಪಕಲಾ ಸಾಮ್ರಾಜ್ಯದ ಹೆಗ್ಗರುತಾಗಿ ಕಲಾಜಗತ್ತಿನ ಗ್ಯಾಲರಿಯಾಗಿ “ಶಿಲೆಯಲ್ಲವಿದು ಕಲೆಯ ಬಲೆ” ಎಂಬ ಮಾತನ್ನು ಸಾರ್ಥಕ ಪಡಿಸುತ್ತಿತ್ತು.


ಕೇದಾರೇಶ್ವರ ದೇಗುಲವು ಹಳೇಬೀಡಿನಿಂದ ಅನತಿ ದೂರದಲ್ಲಿರುವ ಬಸದಿಹಳ್ಳಿಯ ಜೈನಬಸದಿಗಳಿಂದ ಮುಂದೆ ಅರ್ಧಮೈಲು ದೂರ ಸಾಗಿದರೆ, ಪೂರ್ವದಲ್ಲಿರುವ ದೋರ ಸಮುದ್ರದ ಕೆರೆಯ ದಂಡೆಯ ಮೇಲೆ ದೂರದಿಂದಲೇ ಕೈ ಬೀಸಿ ಪ್ರವಾಸಿಗರನ್ನು ಕರೆಯುತ್ತದೆ. ದೂರದಿಂದ ಈ ದೇಗುಲವು ಅಷ್ಟಕೋನಾಕೃತಿಯಲ್ಲಿ ಕಂಡುಬಂದರೆ, ಹತ್ತಿರದಲ್ಲಿ ಹೋಗಿ ನೋಡಿದರೆ ಮುಂಭಾಗವು ಸೋಮನಾಥಪುರದ ಸೋಮೇಶ್ವರ ದೇಗುಲದಂತೆ ಕಾಣುತ್ತದೆ.
ಕೇದಾರೇಶ್ವರ ದೇವಾಲಯವು ಶಿವನಿಗಾಗಿ ಅರ್ಪಿಸಿದ ದೇಗುಲವಾಗಿದೆ. ಬೆಳಗಾವಿಯ ದಕ್ಷಿಣ ಕೇದಾರೇಶ್ವರ ದೇವಾಲಯದಿಂದ ಸ್ಪೂರ್ತಿಪಡೆದು ಹೊಯ್ಸಳದೊರೆ ಎರಡನೇ ವೀರ ಬಲ್ಲಾಳನ ಕಿರಿಯ ರಾಣಿ ಕೇತಲಾದೇವಿಯು ಕ್ರಿ.ಶ.1219ರಲ್ಲಿ ನಿರ್ಮಿಸಿದಳೆಂದು ತಿಳಿಯುತ್ತದೆ. ವಿಶಾಲವಾದ ಆವರಣದಲ್ಲಿ ಜಗತಿಯಮೇಲೆ ನಿರ್ಮಿತವಾಗಿರುವ ಈ ದೇಗುಲವು ಮೂರು ಗರ್ಭಗೃಹಗಳನ್ನು ಹೊಂದಿದೆ. ಪ್ರಧಾನ ಗರ್ಭಗೃಹದಲ್ಲಿ ‘ಕೇದಾರೇಶ್ವರ’ ಎಂದು ಕರೆಯ ಲ್ಪಡುವ ಶಿವನ ಲಿಂಗವಿದೆ. ಹಿಂದೆ ಈ ಗರ್ಭಗೃಹಕ್ಕೆ ಶಿಖರವಿತ್ತು ಎಂದು ಹೇಳಲಾಗುತ್ತದೆ. ಆದರೆ ಇಂದು ಅದು ಕಂಡು ಬರುವುದಿಲ್ಲ. ಉಳಿದ ಗರ್ಭಗೃಹಗಳು ಖಾಲಿಯಾಗಿವೆ. ಮುಖಮಂಟಪ, ಅಂತರಾಳ, ಸುಖನಾಸಿಗಳನ್ನು ದೇಗುಲ ಹೊಂದಿದೆ ಒಳಗೊಡೆಯಲ್ಲೂ ಬಹುಸುಂದರ ಶಿಲ್ಪಗಳು ಕಂಡುಬರುತ್ತವೆ. ಈ ದೇಗುಲವನ್ನು ಹೊಯ್ಸಳ ಮತ್ತು ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿರುವುದು ವಿಶೇಷ.
ಈ ದೇವಾಲಯವು ಸುಂದರವಾದ ತೋಟಗಳ ಮಧ್ಯೆ ಕಂಡುಬರುತ್ತದೆ. ಮುಖ್ಯ ದ್ವಾರವು ತುಂಡಾಗಿದ್ದು ಅಷ್ಟು ಕಲಾತ್ಮಕವಾಗಿಲ್ಲ. ಹೊರಗಿನಿಂದ ದೇವಾಲಯವು ಎತ್ತರ ಜಗತಿಯಮೇಲೆ ನಕ್ಷತ್ರಾಕಾರದಲ್ಲಿ ನಿರ್ಮಾಣವಾಗಿರುವುದನ್ನು ಕಾಣಬಹುದು.

ಕಲಾ ವೈಭವ:

ದೇವಾಲಯದ ಸುತ್ತಲೂ ರಾಮಾಯಾಣ, ಮಹಾಭಾರತದ ಪುರಾಣ ಕಥೆಗಳನ್ನು ಚಿತ್ರಿಸಲಾಗಿದೆ. ಶಿವನ ನರ್ತನದ, ಮೋಹಿನಿಯರ, ಭೂದೇವಿಯರ, ನಂದಿಯ,ವಿಷ್ಣವಿನ ವಿಗ್ರಹಗಳನ್ನು ಕೆತ್ತಲಾಗಿದೆ. ಇದೇ ಅಲ್ಲದೇ ಆನೆ,ಕುದುರೆ,ಮಕರ,ಕುದುರೆಯ ಸಾಲುಸಾಲು ಚಿತ್ರಗಳು, ವಿವಿಧ ಮದನಿಕಾ ವಿಗ್ರಹಗಳನ್ನು ಮನೋಜ್ಞವಾಗಿ ಕೆತ್ತಲಾಗಿದೆ. ಇವುಗಳನ್ನು ನೋಡುತ್ತ ಸಾಗುತ್ತಿದ್ದರೆ, ದೇವಾಲಯವನ್ನು ಬಿಟ್ಟು ಮನಸ್ಸೇ ಆಗುವುದಿಲ್ಲ. ಇಲ್ಲಿರುವ ಭುವನೇಶ್ವರಿಯ ವಿಗ್ರಹವು ಮನೋಹರ ಶಿಲ್ಪಗಳಲ್ಲಿ ಒಂದಾಗಿದೆ. ಇಲ್ಲಿದ್ದ ಹಲವು ವಿಗ್ರಹಗಳು ಈಗ ಇಲ್ಲಿಲ್ಲ. ಹಲವು ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿವೆ ಎನ್ನಲಾಗುತ್ತದೆ. ದೇಗುಲದ ಬಾಗಿಲವಾಡವು ಮನೋಹರವಾದ ರಚನೆಯಾಗಿದ್ದು, ನೋಡುಗರನ್ನು ಆಕರ್ಷಕವಾಗಿ ಸ್ವಾಗತಿಸುತ್ತದೆ. ಇಲ್ಲಿನ ಅದ್ಭುತ ಕಲಾಶಿಲ್ಪಗಳು ಆಧುನಿತೆಯನ್ನು ನಾಚಿಸುತ್ತದೆ.ಭಾವನೆಯನ್ನು ಕೆರಳಿಸುತ್ತದೆ. ಇಲ್ಲಿನ ಶಿವಲಿಂಗವು ಭಕ್ತಿಯನ್ನು ಅರಳಿಸುತ್ತದೆ. ಈ ಕಲಾಧ್ಬತವನ್ನು ಕಾಣದೇ ಇದ್ದರೆ ಕಣ್ಣಿದ್ದು ಕುರುಡಾದಂತೆಯೇ ಸರಿ.
ಕರ್ನಾಟಕದ ಪರಂಪರೆಯ ಪ್ರತೀಕ ವಾಗಿರುವ ಕಲಾದೇಗುಲಗಳು ಹೊಯ್ಸಳ ದೊರೆಗಳ ಕಲಾಶ್ರೀಮಂತಿಕೆಯ ದ್ಯೋತಕವಾಗಿ ಕಲೋಪಾಸನೆಗೆ ಸಾಕ್ಷ್ಯವಾಗಿವೆ.ಅದ್ದರಿಂದ ಹೊಯ್ಸಳರ ನಾಡನ್ನು ಕಾಣಬರುವವರು ಹಳೇಬೀಡನಲ್ಲಿರುವ ಹೊಯ್ಸಳೇಶ್ವರನನ್ನು ಕಂಡ ನಂತರದಲ್ಲಿ ಕೇದಾರೇಶ್ವರನನ್ನು ಕಂಡು ಕೈಮುಗಿದು ಬನ್ನಿ: ಈ ಕಲಾದೇಗುಲಕ್ಕೆ ನಮೋ ಎಂದು ಬನ್ನಿ.

Related Articles

ಪ್ರತಿಕ್ರಿಯೆ ನೀಡಿ

Latest Articles