ನೆಲ್ಲಿಕಾಯಿ ಸವಿರುಚಿ

*ವೇದಾವತಿ ಹೆಚ್.ಎಸ್.


ನೆಲ್ಲಿಕಾಯಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಧುಮೇಹ, ಅಸಿಡಿಟಿ ಮುಂತಾದ ತೊಂದರೆ ಇದ್ದವರು ಇದನ್ನು ಸೇವಿಸುವುದರಿಂದ ಒಳ್ಳೆಯ ಬದಲಾವಣೆಯನ್ನು ದೇಹದಲ್ಲಿ ಕಾಣಲು
ನೆಲ್ಲಿಕಾಯಿ ಲೇಹ:
ಬೇಕಾಗುವ ಸಾಮಾಗ್ರಿಗಳು:
ಬೆಟ್ಟದ ನೆಲ್ಲಿಕಾಯಿಯ ತುರಿ ಮೂರು ಕಪ್, ಬೆಲ್ಲ ಎರಡೂವರೆಯಿಂದ ಮೂರು ಕಪ್, ನೀರು ಅರ್ಧ ಕಪ್.
ತಯಾರಿಸುವ ವಿಧಾನ: ಬೆಟ್ಟದ ನೆಲ್ಲಿಕಾಯಿಯನ್ನು ತುರಿದು ಕೊಳ್ಳಿ. ದೊಡ್ಡ ಗಾತ್ರದಾದರೆ ಇಪ್ಪತ್ತು ಬೇಕಾಗುತ್ತದೆ. ಬೆಲ್ಲದಲ್ಲಿ ಮಣ್ಣಿದ್ದರೆ ಸ್ವಲ್ಪ ನೀರು ಹಾಕಿ ಕುದಿಸಿ ಸೋಸಿಕೊಂಡು ನೆಲ್ಲಿಕಾಯಿ ತುರಿಗೆ ಸೇರಿಸಿ. ಇಲ್ಲವಾದರೆ ಹಾಗೇಯೇ ಹಾಕಬಹುದು. ಬೆಲ್ಲವನ್ನು ನೆಲ್ಲಿಕಾಯಿ ತುರಿಗೆ ಸೇರಿಸಿ ಅರ್ಧ ಕಪ್ ನೀರನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ.ಆಗಾಗ ಸೌಟಿನಿಂದ ಮಿಶ್ರಣ ಮಾಡುತ್ತಾ ಇರಿ. ಗಟ್ಟಿಯಾಗಿ ಪಾಕ ಬಂದಾಗ ಒಲೆಯಿಂದ ಇಳಿಸಿ. ಪೂರ್ತಿ ತಣ್ಣಾಗಾದ ಮೇಲೆ ಡಬ್ಬಿಯಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ. ಮೂರು ತಿಂಗಳ ಕಾಲ ಹಾಳಾಗುವುದಿಲ್ಲ.

ನೆಲ್ಲಿಕಾಯಿ ತೊಕ್ಕು:
ಬೇಕಾಗುವ ಸಾಮಾಗ್ರಿಗಳು: ನೆಲ್ಲಿಕಾಯಿ 20.ಎಣ್ಣೆ 3ಟೇಬಲ್ ಚಮಚ, ಸಾಸಿವೆ 1ಟೀ ಚಮಚ, ಅರಶಿನ 1ಟೀ ಚಮಚ, ಜೀರಿಗೆ ಪುಡಿ 1ಟೀ ಚಮಚ, ಇಂಗು 1/2ಟೀ ಚಮಚ, ಮೆಂತ್ಯ ಹುರಿದು ಪುಡಿ ಮಾಡಿ ಕೊಂಡಿದ್ದು 2ಟೀ ಚಮಚ, ಉಪ್ಪು ಒಂದೂವರೆ ಟೇಬಲ್ ಚಮಚ/ನೆಲ್ಲಿಕಾಯಿಯ ಹುಳಿ ನೋಡಿ ಹಾಕಿ. ಅಚ್ಚ ಖಾರದ ಪುಡಿ ಒಂದೂವರೆ ಟೇಬಲ್ ಚಮಚ.
ತಯಾರಿಸುವ ವಿಧಾನ: ಕುಕ್ಕರ್ ಬಟ್ಟಲಿನಲ್ಲಿ ನೆಲ್ಲಿಕಾಯಿಯನ್ನು ಹಾಕಿ ಮೂರು ವಿಷಲ್ ಕೂಗಿಸಿ. ಬೇಕಿದ್ದರೆ ಅರ್ಧ ಕಪ್ ನೀರು ಹಾಕಿ ಬೇಯಿಸಿ. ನಂತರ ವಿಷಲ್ ಇಳಿದ ಮೇಲೆ ಪೂರ್ತಿ ಅರಿದ ನಂತರ ಬೀಜದಿಂದ ಬಿಡಿಸಿ ಕೊಳ್ಳಿ. ಒಂದು ಮಿಕ್ಸಿಯಲ್ಲಿ ಬಿಡಿಸಿ ಕೊಂಡ ನೆಲ್ಲಿಕಾಯಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಕೊಳ್ಳಿ.ಬಿಸಿ ಎಣ್ಣೆಗೆ ಸಾಸಿವೆ, ಇಂಗು ,ಅರಶಿನ, ಜೀರಿಗೆ ಪುಡಿ, ಮೆಂತ್ಯ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.ಈ ಮಿಶ್ರಣಕ್ಕೆ ರುಬ್ಬಿಕೊಂಡ ನೆಲ್ಲಿಕಾಯಿಯನ್ನು ಹಾಕಿ.ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಉಪ್ಪನ್ನು ಸೇರಿಸಿ. ನಂತರ ಖಾರದಪುಡಿಯನ್ನು ಹಾಕಿ. ಸಣ್ಣ ಉರಿಯಲ್ಲಿ ಹತ್ತು ನಿಮಿಷ ಹುರಿಯಿರಿ. ನೀರಿನಾಂಶ ಪೂರ್ತಿ ಹೋಗಲಿ. ಹೀಗೆ ತಯಾರಿಸುವುದರಿಂದ ಹದಿನೈದು ದಿನಗಳ ಕಾಲ ಹೊರಗೆ ಇಟ್ಟರು ಕೇಡುವುದಿಲ್ಲ.
ಪೂರ್ತಿ ಆರಿದ ನಂತರ ಒಂದು ಗಾಜಿನ ಬಾಟಲಿಯಲ್ಲಿ ಹಾಕಿಡಿ.

ನೆಲ್ಲಿಕಾಯಿ ತಂಬುಳಿ:
ಬೇಕಾಗುವ ಸಾಮಾಗ್ರಿಗಳು: ನೆಲ್ಲಿಕಾಯಿ ಮೂರು,ಮಜ್ಜಿಗೆ ಅರ್ಧ ಲೀಟರ್,ಕಾಳು ಮೆಣಸು ಹತ್ತು, ಜೀರಿಗೆ ಒಂದು ಚಮಚ, ತುಪ್ಪ ಅರ್ಧ ಚಮಚ, ತೆಂಗಿನ ತುರಿ ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ಸಾಸಿವೆ ಒಂದು ಚಮಚ,ಒಣಮೆಣಸಿನಕಾಯಿ ಒಂದು,ತುಪ್ಪ ಒಂದು ಚಮಚ
ತಯಾರಿಸುವ ವಿಧಾನ: ಮೊದಲು ನೆಲ್ಲಿಕಾಯಿಯನ್ನು ಬೇಯಿಸಿ ಕೊಂಡು ಬೀಜ ತೆಗೆದು ಕೊಳ್ಳಿ. ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಜೀರಿಗೆ, ಕಾಳುಮೆಣಸು ಹುರಿದು ಕೊಳ್ಳಿ. ನಂತರ ಬೇಯಿಸಿ ಕೊಂಡ ನೆಲ್ಲಿಕಾಯಿಯನ್ನು ಅದರೊಂದಿಗೆ ಹಾಕಿ ಬಾಡಿಸಿ. ಮಿಕ್ಸಿಯಲ್ಲಿ ಹುರಿದ ಪದಾರ್ಥಗಳನ್ನು, ತೆಂಗಿನ ತುರಿ, ಉಪ್ಪು, ರುಬ್ಬಲು ಮಜ್ಜಿಗೆ ಅಥವಾ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಬೌಲ್ಗೆ ಹಾಕಿ.ಉಳಿದ ಮಜ್ಜಿಗೆಯನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಒಗ್ಗರಣೆ ಹಾಕಿ‌. ರುಚಿಯಾದ ಮತ್ತು ಆರೋಗ್ಯಕರವಾದ ನೆಲ್ಲಿಕಾಯಿ ತಂಬುಳಿಯನ್ನು ಅನ್ನದೊಂದಿಗೆ ಸವಿಯಿರಿ.

Related Articles

ಪ್ರತಿಕ್ರಿಯೆ ನೀಡಿ

Latest Articles