ರಾಗಿ ರಸಪಾಕ

  • ವೇದಾವತಿ ಹೆಚ್. ಎಸ್.

ರಾಗಿ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ರಾಗಿ ತಿಂದರೆ ರೋಗಗಳು ನಮ್ಮ ಹತ್ತಿರ ಬರುವುದಿಲ್ಲ ಎಂಬ ಮಾತಿದೆ.ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ.

ರಾಗಿ ಪಾನಕ
ಬೇಕಾಗುವ ಸಾಮಾಗ್ರಿಗಳು:
ರಾಗಿ 1/2ಕಪ್,ಬೆಲ್ಲ ಸಿಹಿ ಎಷ್ಟು ಬೇಕು ಅಷ್ಟು,ಏಲಕ್ಕಿ ಪುಡಿ 1/2ಟೀ ಚಮಚ,ನೀರು ಅರ್ಧ ಲೀಟರ್.

ತಯಾರಿಸುವ ವಿಧಾನ:
ರಾಗಿಯನ್ನು ನೀರಿನಲ್ಲಿ ಅರ್ಧ ಗಂಟೆಯಿಂದ ಒಂದು ಗಂಟೆಯ ಕಾಲ ನೆನೆಸಿಡಿ.ಜಾಸ್ತಿ ನೆನೆಸಿದಷ್ಟು ರುಬ್ಬಿಕೊಳ್ಳಲು ಅನುಕೂಲವಾಗುತ್ತದೆ. ನಂತರ ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿ.ಈ ರುಬ್ಬಿದ ಮಿಶ್ರಣಕ್ಕೆ ಪುನಃ ತುರಿದ ಬೆಲ್ಲವನ್ನು ಹಾಕಿ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಜರಡಿಯಲ್ಲಿ ಸೋಸಿಕೊಳ್ಳಿ.ನಂತರ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಈ ಪಾನಕ ಆರೋಗ್ಯಕ್ಕೆ ಶಕ್ತಿವರ್ಧಕವಾಗಿದೆ ಹಾಗೂ ದೇಹಕ್ಕೆ ತಂಪು.

ರಾಗಿ ಅಂಬಲಿ.
ಬೇಕಾಗುವ ಸಾಮಾಗ್ರಿಗಳು:
ರಾಗಿ ಹಿಟ್ಟು 3ಟೀ ಚಮಚ
ಜೀರಿಗೆ ಪುಡಿ 1/2 ಟೀ ಚಮಚ
ಮಜ್ಜಿಗೆ ಅಥವಾ ಥಳ್ಳನೆ ಮೊಸರು ಒಂದು ಕಪ್ ಕಪ್,ಉಪ್ಪು ರುಚಿಗೆ ತಕ್ಕಷ್ಟು,ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು ಸ್ವಲ್ಪ/ಬೇಕಿದ್ದರೆ
ಕೊತ್ತುಂಬರಿ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ:
ರಾಗಿಯನ್ನು ಜರಡಿ ಹಿಡಿದು ಹೊಟ್ಟು ತೆಗೆದುಕೊಂಡು ಬಾಣಲೆಯಲ್ಲಿ ಹಾಕಿ. ಈ ಹಿಟ್ಟಿಗೆ ಎರಡು ಕಪ್ ನೀರು ಮತ್ತು ಉಪ್ಪು ಹಾಕಿ ಗಂಟಾಗದ ರೀತಿಯಲ್ಲಿ ಕಲಸಿ ಕೊಳ್ಳಿ.
ಒಲೆಯ ಮೇಲಿಟ್ಟು ಚಮಚದಲ್ಲಿ ತಿರುವುತ್ತಾ ಬನ್ನಿ. ಬೆಂದು ಗಟ್ಟಿಯಾದ ನಂತರ ಜೀರಿಗೆ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಪೂರ್ತಿ ಅರಿದ ನಂತರ ಹೆಚ್ಚಿಕೊಂಡ ಈರುಳ್ಳಿ, ಮಜ್ಜಿಗೆ, ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ನಂತರ ಗ್ಲಾಸ್ ನಲ್ಲಿ ಹಾಕಿ ಕುಡಿಯಲು ಕೊಡಿ.

ರಾಗಿ ಖರ್ಜೂರದ ಮಿಲ್ಟ್.

ಬೇಕಾಗುವ ಸಾಮಗ್ರಿಗಳು:
ಹಾಲು ಳಿ ಲೀಟರ್,10-15ಚಿಕ್ಕದಾಗಿ ಕತ್ತರಿಸಿದ ಖರ್ಜೂರ, ರಾಗಿ ಹಿಟ್ಟು 1/2ಕಪ್, ನೀರು 1/2ಲೀಟರ್, ಏಲಕ್ಕಿ ಪುಡಿ 1/2ಟೀ ಚಮಚ, ಅಲಂಕರಿಸಲು ಪಿಸ್ತಾ, ಬಾದಾಮಿ ಚೂರುಗಳು.

ತಯಾರಿಸುವ ವಿಧಾನ:
ಮೊದಲು ಅರ್ಧ ಲೀಟರ್ ಹಾಲಿನಲ್ಲಿ ಅರ್ಧ ಕಪ್ ಹಾಲನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಬಿಸಿಮಾಡಿ. ನಂತರ ಅದರಲ್ಲಿ ಕತ್ತರಿಸಿದ ಖರ್ಜೂರವನ್ನು ಹಾಕಿ ಮೆತ್ತಗಾಗುವ ತನಕ ಬೇಯಿಸಿ ಕೊಳ್ಳಿ.ಬೆಂದ ನಂತರ ಒಲೆಯಿಂದ ಇಳಿಸಿ ಆರಲು ಬಿಡಿ. ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟಿಗೆ ಮುಕ್ಕಾಲು ಕಪ್ ನೀರನ್ನು ಹಾಕಿ ಹಿಟ್ಟನ್ನು ನೀರಿನಲ್ಲಿ ಕರಗಿಸಿಕೊಳ್ಳಿ. ನಂತರ ಉಳಿದ ನೀರನ್ನು ಒಂದು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿಕೊಳ್ಳಿ. ಈ ಬಿಸಿಯಾದ ನೀರಿಗೆ ರಾಗಿ ಹಿಟ್ಟಿನ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಮಗುಚಿ. ರಾಗಿ ಬಿಸಿ ನೀರಿನಲ್ಲಿ ಬೆಂದು ಬರುವಾಗ ರುಬ್ಬಿ ಕೊಂಡ ಮಿಶ್ರಣವನ್ನು ಮತ್ತು ಉಳಿದ ಹಾಲನ್ನು ಸೇರಿಸಿ ಸಣ್ಣ ಉರಿಯಲ್ಲಿ ಮಗುಚಿ.ಈ ಮಿಶ್ರಣವು ಕುದಿ ಬರುವಾಗ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.ನಂತರ ಒಲೆಯಿಂದ ಇಳಿಸಿ.ಕುಡಿಯುವಾಗ ಬಾದಾಮಿ ಮತ್ತು ಪಿಸ್ತಾದ ಚೂರುಗಳನ್ನು ಸೇರಿಸಿ ಕುಡಿಯಿರಿ. ಸಿಹಿ ಜಾಸ್ತಿ ಬೇಕಿದ್ದರೆ ಬೆಲ್ಲವನ್ನು ಸೇರಿಸಿ ಕೊಳ್ಳಿ. ಇದು ಮಕ್ಕಳು ಮತ್ತು ದೊಡ್ಡವರು ಸಹ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

Related Articles

ಪ್ರತಿಕ್ರಿಯೆ ನೀಡಿ

Latest Articles