ಹೆತ್ತ ತಂದೆ-ತಾಯಿಯನ್ನು ಸಾವಿನ ಬಳಿಕವೂ ನೆನೆಯುವ ಶ್ರಾದ್ಧ ಕ್ರಮ ಹಿಂದೂ ಧರ್ಮದ ವಿಶೇಷ. ವರ್ಷವೂ ಬರುವ ತಿಥಿಯಂದು ಮನೆಯವರು ಮತ್ತು ಬಂಧು ಮಿತ್ರರು ಸೇರಿ ಮೃತರಾದವರನ್ನು ನೆನಪು ಮಾಡಿಕೊಳ್ಳುವ ಪ್ರಕ್ರಿಯೆಯ ಹಿಂದೆ ಧಾರ್ಮಿಕ ನಂಬಿಕೆ ಇದೆ.
ಪಿತೃ ಋಣದ ಮೂಲಕ ದೇವ ಋಣ ಮತ್ತು ಋಷಿ ಋಣ ಎರಡನ್ನೂ ಪೂರೈಸುವ ಅಪೂರ್ವ ಅವಕಾಶ. ಹೆತ್ತವರು ಸ್ವರ್ಗದಲ್ಲಿ ನೆಮ್ಮದಿಯಾಗಿರಲಿ ಎನ್ನುವ ದೊಡ್ಡ ಆಶಯದೊಂದಿಗೆ ನಡೆಯುವುದು ಧಾರ್ಮಿಕ ವಿಧಿ.
ಕೆಲವರಿಗೆ ಸಕಾಲದಲ್ಲಿ ಶ್ರಾದ್ಧ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಕೆಲವರ ಸಾವಿನ ನಿಖರ ದಿನಾಂಕವೇ ಗೊತ್ತಿರುವುದಿಲ್ಲ. ಇಂಥವರ ಶ್ರಾದ್ಧ ಕಾರ್ಯ ನಡೆಸಲು ಪ್ರಸಕ್ತವಾದ ಕಾಲವೇ ಪಿತೃ ಪಕ್ಷ. ಮಹಾನವಮಿ ಆರಂಭಕ್ಕೆ ಮುನ್ನ ಭಾದ್ರಪದ ಕೃಷ್ಣ ಹುಣ್ಣಿಮೆಯಿಂದ ಭಾದ್ರಪದ ಬಹುಳ ಅಮಾವಾಸ್ಯೆ ವರೆಗೆ 16 ದಿನಗಳ ಅವಧಿ ಇದು. ಇದರ ಕೊನೆಯ ದಿನವೇ ಮಹಾಲಯ ಅಮಾವಾಸ್ಯೆ.
ಪಿತೃ ಪಕ್ಷದ ಯಾವುದೇ ದಿನಗಳಲ್ಲಿ ಅಥವಾ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ನಡೆಸಿದರೆ ಅದಕ್ಕೆ ಪೂರ್ಣ ಫಲವಿದೆ. ಆ ದಿನದಂದು ಅಗಲಿದ ಹಿರಿಯರಿಗೆ ಪ್ರಿಯವಾದ ತಿನಿಸು ಮಾಡಲಾಗುತ್ತದೆ. ತಿಲ ದರ್ಪಣ, ಜಲ ದರ್ಪಣ ಮತ್ತು ಬಲಿ ಪಿಂಡ ಪ್ರದಾನ, ಬಡವರಿಗೆ ದಾನದ ಮೂಲಕ ಪಿತೃಗಳನ್ನು ಸಂತುಷ್ಟಗೊಳಿಸಲಾಗುತ್ತದೆ.
ಪೌರಾಣಿಕ ಹಿನ್ನೆಲೆ
ಮಹಾಭಾರತ ಯುದ್ಧದಲ್ಲಿ ಅರ್ಜುನನ ಕೈಯಿಂದ ಹತನಾದ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದೊಯ್ಯುವಾಗ ದಾರಿ ಮಧ್ಯೆ ಅವನಿಗೆ ತಿನ್ನಲು ಏನೂ ಸಿಗುವುದಿಲ್ಲ. ಬದಲಾಗಿ ಎಲ್ಲಿ ನೋಡಿದರೂ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯಗಳು ಮಾತ್ರ ಇದ್ದವು. ನೊಂದ ಕರ್ಣ ಯಮನನ್ನು ಪ್ರಾರ್ಥಿಸುತ್ತಾರೆ. ಪ್ರತ್ಯಕ್ಷನಾದ ಯಮ, ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನದಂದು ದಾನ ಮಾಡಲು ಹೇಳುತ್ತಾರೆ. ಯಮನ ಸೂಚನೆಯಂತೆ ಮರಳಿ ಭೂಮಿಗೆ ಬಂದ ಕರ್ಣ ಪಿತೃ ಪಕ್ಷದಲ್ಲಿ ಹಿರಿಯರಿಗೆ, ಬಡವರಿಗೆ ಅನ್ನ, ವಸ್ತ್ರದಾನ ಮಾಡುತ್ತಾನೆ. ಪಿತೃಗಳು ಸಂತುಷ್ಟರಾಗಿ ಆಶೀರ್ವಾದ ಮಾಡುತ್ತಾರೆ. ಕರ್ಣ ಯಾವುದೇ ಸಮಸ್ಯೆ ಇಲ್ಲದೆ ಸ್ವರ್ಗಕ್ಕೆ ಹೋಗುತ್ತಾನೆ ಎಂಬುದು ಪುರಾಣ ಕಥನ.