ಬದುಕಿನೊಂದಿಗೆ ಬಾಂಧವ್ಯ ಬೆಸೆಯುವ ಗಂಡು ಹೆಣ್ಣಿನ ಬಾಳಿನ ಮಹತ್ವದ ಘಟ್ಟ ಮದುವೆ. ಅ ಸಂಭ್ರಮದ ಗಳಿಗೆಗೆ ವಿಶೇಷ ಕಳೆ ನೀಡುವ ಮದರಂಗಿಯ ರಂಗು. ಅದು ಕೈಗಳ ಅಂದವನ್ನು ಹೆಚ್ಚಿಸುವುದಲ್ಲ, ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹಾಗಾಗಿ ನಮ್ಮ ಆ ಸಾಂಪ್ರದಾಯಿಕ ಆಚರಣೆಗೆ ಅರ್ಥ ಬಂದಿದೆ.
ಭಾರತೀಯ ಮದುವೆ ಕಾರ್ಯಕ್ರಮಗಳಲ್ಲಿ ಮದರಂಗಿ ಶಾಸ್ತ್ರ ಇಲ್ಲದಿದ್ದರೆ ಮದುವೆಶಾಸ್ತ್ರ ಅಪೂರ್ಣವಾದಂತೆ. ಮದುವೆಯಂದು ಹಲವು ಪದ್ಧತಿಗಳನ್ನು ಮಾಡಲಾಗುತ್ತದೆ. ಅರಶಿನ ಶಾಸ್ತ್ರ, ಚಪ್ಪರದ ಮುಹೂರ್ತ, ಹಸೆ ಬರೆಯುವುದು, ಹೀಗೆ. ಅದರಲ್ಲಿ ಮದರಂಗಿ ಶಾಸ್ತ್ರವೂ ಒಂದು.
ಮದುವೆಯಂದು ವಧು ವರನ ಕೈಯಲ್ಲಿ ಮದರಂಗಿಯ ಬಣ್ಣ ಎಷ್ಟು ಗಾಢವಾಗಿ ಬರುತ್ತದೋ ಅದು ಶುಭ, ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯವಾಗಿ ಪ್ರೀತಿಯಿಂದ ಬಾಳುತ್ತಾರೆ ಎಂಬುದನ್ನು ಲೆಕ್ಕಾಚಾರ ಮಾಡುವುದುಂಟು.
ಮೂಲ
ಅರಬ್ ಹಾಗೂ ಪರ್ಷಿಯನ್ನರು ಮೆಹಂದಿ ಬಳಕೆಯನ್ನು ಭಾರತಕ್ಕೆ ಪರಿಚಯಿಸಿದರು.
ಕೈಗಳಿಗೆ ಮೆಹಂದಿ ಹಚ್ಚುವ ಸಂಪ್ರದಾಯ ಕೇವಲ ಮದುವೆ ಕಾರ್ಯಕ್ರಮಗಳಿಗೆ ಮಾತ್ರಸೀಮಿತವಾಗಿಲ್ಲ. ನಾಗರ ಪಂಚಮಿ, ಗೌರಿ ಹಬ್ಬ, ಕೃಷ್ಣಾಷ್ಟಮಿ, ಅಥವಾ ರಜೆಯ ದಿನಗಳಂದೂ ಮೆಹಂದಿ ಹಚ್ಚಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಈ ಬಣ್ಣದ ಚಿತ್ತಾರಕ್ಕೆ ಧರ್ಮ ಜಾತಿ, ವಯಸ್ಸಿನ ಹಂಗಿಲ್ಲ.
ಪ್ರಕೃತಿ ದತ್ತವಾಗಿ ಮದರಂಗಿ ಎಲೆಗಳಿಂದ ಮಾತ್ರವಲ್ಲದೇ ಇಂದು ಬೇರೆ ಬೇರೆ ವಸ್ತುಗಳನ್ನು ಬಳಸಿ ತಯಾರಿಸಿದ ಮೆಹಂದಿ ಕೋನ್ಗಳು ಲಭ್ಯ.
ಹಿಂದೆಲ್ಲಾ ಪ್ರತಿಮನೆಯ ಅಂಗಳದಲ್ಲೊಂದು ಮದರಂಗಿ ಗಿಡವನ್ನು ಕಾಣಬಹುದಿತ್ತು. ಮದುವೆಯ ಶುಭ ಸಂದರ್ಭದಲ್ಲಿ ಮುತ್ತೈದೆಯರು ಮದರಂಗಿ ಗಿಡಕ್ಕೆ ವೀಳ್ಯ ಕೊಟ್ಟು ಆರತಿ ಬೆಳಗಿ ಅದರ ಎಲೆಗಳನ್ನು ತೆಗೆದು ರುಬ್ಬುವ ಕಲ್ಲಿನಲ್ಲಿ ಹಾಕಿ, ಅದಕ್ಕು ವೀಳ್ಯದೆಲೆ ಬಳಸಿ ಮದರಂಗಿ ಪೇಸ್ಟ್ ತಯಾರಿಸುತ್ತಿದ್ದರು. ಅದನ್ನು ತೆಂಗಿನ ಗರಿಯನ್ನು ತೆಗೆದು ಆ ಕಡ್ಡಿಯಿಂದಲೇ ಚಿತ್ತಾರ ಬಿಡಿಸುತ್ತಿದ್ದರು. ಅದರಿಂದ ಮದುಮಗ- ಮದುಮಗಳ ಕೈಗೆ ಸೋದರ ಸಂಬಂಧಿಗಳು ಮೊದಲು ಸೂರ್ಯ- ಚಂದ್ರನನ್ನು ಬಿಡಿಸಿ ಆನಂತರ ಆಕರ್ಷಕ ಚಿತ್ತಾರಗಳನ್ನು ಕೈತುಂಬಾ ಬಿಡಿಸುವ ಸಂಪ್ರದಾಯ ಈಗಲೂ ಉಳಿದುಕೊಂಡು ಬಂದಿದೆ.
ಕೋನ್ ಮಾದರಿಯಲ್ಲಿ ಸಿಗುವ ಮೆಹಂದಿಯಿಂದ ಸುಲಭವಾಗಿ ನಾನಾ ವಿನ್ಯಾಸಗಳನ್ನು ಬರೆಯಬಹುದು. ಹಲವು ಬಗೆಯವಿನ್ಯಾಸದ ಚಿತ್ರಗಳೂ ಮಾರುಕಟ್ಟೆಯಲ್ಲಿದೆ. ಹೇಗೆ ಚಿತ್ರ ಬರೆಯಬಹುದÉ್ರಂಬುದರ ಮಾಹಿತಿಯ ವಿಡಿಯೋಗಳು ಸಾಕಷ್ಟು ಸಿಗುತ್ತವೆ.
ಸೌಂದರ್ಯ ವರ್ಧಕವಾಗಿ
ಕೈ ಕಾಲಿಗೆ ಚಿತ್ತಾರ ಬಿಡಿಸಲು ಮಾತ್ರವಲ್ಲ.ತಲೆಕೂದಲಿಗೂ ಹಚ್ಚಿಕೊಳ್ಳುತ್ತಾರೆ. ಬಿಳಿ ಕೂದಲು ಮರೆಮಾಚಲು ಹೆಂಗಸರು ಇದನ್ನೇ ಡೈ ಆಗಿಯೂ ಬಳಸಿಕೊಳ್ಳುವುದುಂಟು. ಪುರುಷರೂ ತಲೆಕೂದಲಿಗೆ ಮೆಹಂದಿ ಹಚ್ಚಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ.
ಮದರಂಗಿ ಮಹಿಮೆ ಎಷ್ಟೆಂದರೆ ಸಿನಿಮಾಗಳಲ್ಲಿಯೂ ಮದರಂಗಿ ಶಾಸ್ತ್ರದ ಹಾಡುಗಳನ್ನುಬಳಸಿಕೊಂಡಿರುವುದನ್ನು ನೋಡಬಹುದು.