ಧರ್ಮಾಚರಣೆ

ಒಂದು ದಿನ ಧರ್ಮರಾಯನು ಭೀಷ್ಮರನ್ನು ಕೇಳಿದನು, ಧರ್ಮಾಚರಣೆಯಿಂದ ಏನಾಗುತ್ತದೆ? ಎಂದು. ಆಗ ಭೀಷ್ಮನು, ಅದಕ್ಕಾಗಿ ನಿನಗೊಂದು ಕಥೆಯನ್ನು ಹೇಳುವೆನು ಎನ್ನುತ್ತಾ , ಅಂಬರೀಷನ ಕಥೆಯನ್ನು ಹೇಳುತ್ತಾನೆ.
ಹಿಂದೆ ಅಂಬರೀಷನೆಂಬ ರಾಜನಿದ್ದನು. ಅವನು ತನ್ನ ಪುಣ್ಯದ ಫಲದಿಂದ ಸ್ವರ್ಗಕ್ಕೆ ಹೋಗಿ ಅಲ್ಲಿ ಉದ್ಯಾನವನವೊಂದರಲ್ಲಿ ಉತ್ತಮವಾದ ರಥದಲ್ಲಿ ಕುಳಿತು ವಿಹರಿಸುತ್ತಿದ್ದನು. ಆದರೆ ಅಲ್ಲಿ ತನಗಿಂತಲೂ ಎತ್ತರದಲ್ಲಿ ವಿಮಾನವೊಂದರಲ್ಲಿ ಕುಳಿತು ಚಲಿಸುತ್ತಿದ್ದವನೊಬ್ಬನನ್ನು ಕಂಡು ಅಸೂಯೆಯಿಂದ ನೋಡಿದಾಗ ಅವನು ತನ್ನ ಸೇನಾಪತಿ ಸುದೇವನೆಂದು ತಿಳಿಯುತ್ತದೆ. ಅತ್ಯಂತ ಅಚ್ಚರಿಯೂ ಆಗುತ್ತದೆ. ತಾನು ರಾಜ ಎಷ್ಟೊಂದು ಯಜ್ಞ- ಯಾಗಾದಿಗಳು, ದಾನ-ಧರ್ಮಗಳು ಎಲ್ಲವನ್ನೂ ಮಾಡಿರುವೆ. ಇವನು ನನ್ನ ಕೈ ಕೆಳಗಿನವನು ಎಂದು ಭಾವಿಸಿ,ಕುತೂಹಲ ತಡೆಯಲಾರದೆ ಇಂದ್ರನ ಬಳಿಗೆ ಬಂದು ಕೇಳಿದನು. ಆಗ ದೇವೇಂದ್ರನು ಹೀಗೆ ಹೇಳಿದನು. ಒಮ್ಮೆ ರಾಕ್ಷಸರು ನಿನ್ನ ರಾಜ್ಯದ ಮೇಲೆ ಯುದ್ಧಕ್ಕೆ ಬಂದರು ,ಆಗ ನೀನು ನಿನ್ನ ಸೇನಾಪತಿಯನ್ನು ಕರೆದು ರಾಕ್ಷಸರ ಮೇಲೆ ಯುದ್ಧ ಮಾಡುವಂತೆ ಆದೇಶಿಸಿದೆ. ಹಾಗು ಗೆದ್ದೇ ಬರಬೇಕು. ಖಂಡಿತವಾಗಿಯೂ ಸೋಲಿನೊಂದಿಗೆ ಹಿಂತಿರುಗಿ ಬರಬಾರದು ಎಂದು ಆಜ್ಞಾಪಿಸಿದೆ. ಆದರೆ ರಾಕ್ಷಸರ ಸೈನ್ಯ ಮುವ್ವತ್ತು ಕೋಟಿ ಇತ್ತು. ನಿನ್ನ ಸೈನ್ಯದಲ್ಲಿ ಕೇವಲ ಮೂರೂ ಸಾವಿರವಿತ್ತು. ಇನ್ನು ಜಯ ಹೇಗೆ ಬರುತ್ತದೆ? ಆದ್ದರಿಂದ ಇತ್ತ ರಾಜಾಜ್ಞೆಯನ್ನು ಮೀರುವಂತಿಲ್ಲ. ಅತ್ತ ಯುದ್ಧವೂ ಸಾಧ್ಯವಿಲ್ಲ. ಆದುದರಿಂದ ಸೇನಾಪತಿ ಸುದೇವನು ಮನೆಗೆ ಹೋಗಿ ಶಿವನ ಮುಂದೆ ಕುಳಿತು ನಿವೇದಿಸಿಕೊಳ್ಳುತ್ತಾ ತನ್ನ ಶಿರಸ್ಸನ್ನು ಕತ್ತರಿಸಿ ಶಿವನಿಗೆ ಸಮರ್ಪಿಸಿಕೊಳ್ಳಲು ಸಿದ್ಧನಾದನು. ಆದರೆ ಪರಶಿವನು ಪ್ರತ್ಯಕ್ಷನಾಗಿ ‘ನೀನು ದೇಶಕ್ಕಾಗಿ ನಿನ್ನ ಪ್ರಾಣವನ್ನು ತ್ಯಜಿಸುತ್ತಿರುವೆ.’ ನಿನ್ನ ತ್ಯಾಗಕ್ಕೆ ಮೆಚ್ಚಿದ್ದೇನೆ ಎನ್ನುತ್ತಾ ಒಂದು ದಿವ್ಯವಾದ ರಥವನ್ನೂ, ಒಂದು ಧನುಸ್ಸು,ಅನೇಕ ಬಾಣಗಳನ್ನು ಕೊಡುತ್ತ, ಕೇವಲ ರಾಕ್ಷಸರು ಮಾತ್ರವಲ್ಲದೆ ,ದೇವತೆಗಳು ಬಂದರೂ ಜಯವನ್ನು ಗಳಿಸುವೆ. ಆದರೆ ಯಾವುದೇ ಕಾರಣಕ್ಕೂ ರಥದಿಂದ ಇಳಿಯಬಾರದು ಎಂದು ಹೇಳಿದನು. ಮೊದಲಿಗೆ ಸಮ,ಧಮ ಮತ್ತು ವಿಧಮರೆಂಬ ರಾಕ್ಷಸರು ಯುದ್ಧಕ್ಕೆ ಬಂದರು. ಸಮ ಹಾಗೂ ದಮರನ್ನು ಸೋಲಿಸಿದನು. ವಿಧಮನು ವೇಗವಾಗಿ ಇವನ ಕಡೆ ಬರಲು ಶಿವನ ಮಾತನ್ನು ಮರೆತನು ರಥದಿಂದ ಕೆಳಗೆ ಇಳಿದನು. ಕೂಡಲೇ ವಿಧಮನು ಸುದೇವನನ್ನು ಕೊಂದನು. ಸುದೇವನೂ ವಿಧಮನನ್ನು ಸಂಹರಿಸಿದನು. ಹೀಗೆ ಧರ್ಮಕ್ಕಾಗಿ ಸುದೇವನು ಹೋರಾಡಿದನು ಆದ್ದರಿಂದಲೇ ಇಂದು ಅವನು ಇಲ್ಲಿ ಸ್ವರ್ಗದಲ್ಲಿ ನಿನಗಿಂತಲೂ ಉತ್ತಮ ಸ್ಥಿತಿಯಲ್ಲಿರುವನು ಎಂದು ಇಂದ್ರನು ಅಂಬರೀಷನಿಗೆ ಹೇಳಿದನು.
ಸಂಗ್ರಹ

Related Articles

ಪ್ರತಿಕ್ರಿಯೆ ನೀಡಿ

Latest Articles