ಖಜುರಾಹೋದಲ್ಲಿ ವಾಮನನಿಗೊಂದು ಸುಂದರ ಆಲಯ

ಖಜುರಾಹೋ ಸ್ಮಾರಕಗಳು ಭಾರತದ ಪ್ರವಾಸಿ ತಾಣಗಳಲ್ಲಿ ಪ್ರಸಿದ್ಧ. ಇದು ಅನೇಕ ಹಿಂದೂ ಮತ್ತು ಜೈನ ದೇವಸ್ಥಾನಗಳ ಸಮೂಹಗಳನ್ನೊಳಗೊಂಡಿದೆ. ಖಜುರಾಹೋ ಸ್ಮಾರಕಗಳು ಯುನೆಸ್ಕೋ ಜಾಗತಿಕ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದೆ. ಇಲ್ಲಿರುವ ಸ್ಮಾರಕಗಳ ಸಮೂಹದಲ್ಲಿ ಅನೇಕ ದೇವಾಲಯಗಳನ್ನು ಒಂದೇ ಕಡೆ ನೋಡಬಹುದು. ಪ್ರಮುಖವಾಗಿ ಲಕ್ಷ್ಮಣ ದೇವಸ್ಥಾನ, ಬ್ರಹ್ಮದೇವನಿಗೆ ಅರ್ಪಿತಗೊಂಡಿರುವ ದೇಗುಲ, ಚಿತ್ರಗುಪ್ತ, ವಿಶ್ವನಾಥ, ನಂದಿ ದೇಗುಲ ಸೇರಿದಂತೆ ಅನೇಕ ದೇಗುಲಗಳಿವೆ. ಅವುಗಳಲ್ಲಿ ವಾಮನ ದೇಗುಲವೂ ಒಂದಾಗಿದೆ.
ಚಾಂದೇಲಾ ರಾಜವಂಶಸ್ಥರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನಗಳಲ್ಲಿ ವಿಷ್ಣುವಿನ ಐದನೇ ಅವತಾರವಾದ ವಾಮನ ದೇವಸ್ಥಾನವೂ ಇದೆ. ದೇವಸ್ಥಾನದ ಮುಂಭಾಗದಲ್ಲಿ ಮುಖಮಂಟಪ, ಧ್ವಜಸ್ಥಂಬ, ಮಹಾಮಂಟಪವನ್ನು ಕಾಣಬಹುದು. ಈ ದೇವಸ್ಥಾನ ಅನೇಕ ಕುಸುರಿ ಕೆತ್ತನೆಗಳಿಂದ ಕೂಡಿದ ಅದ್ಭುತ ವಾಸ್ತುಶಿಲ್ಪ ಶೈಲಿಯನ್ನೊಳಗೊಂಡಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ದೇಗುಲ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ.
ದೇವಸ್ಥಾನದ ಹೊರಭಾಗದ ಗೋಡೆಗಳಲ್ಲಿ ಅಪ್ಸರೆಯರ ಚಿತ್ರಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಕನ್ನಡಿ ನೋಡುತ್ತಿರುವ ಮಹಿಳೆ, ಸಂಗೀತಗಾರರು, ನೃತ್ಯಗಾರರ ಚಿತ್ರಗಳನ್ನು ಕೆತ್ತಲಾಗಿದ್ದು ಆಕರ್ಷಕವಾಗಿದೆ.

ಇತರೆ ಆಕರ್ಷಣೆ
ಲಕ್ಷ್ಮಣ ದೇಗುಲ: ಚಾಂದೇಲ ರಾಜರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನ ಖಜುರಾಜೋದ ಮೊದಲ ರಚನೆ. ವಿಷ್ಣುದೇವನಿಗೆ ಅರ್ಪಿತಗೊಂಡಿದೆ. ಇದರ ವಾಸ್ತುಶಿಲ್ಪ ಸುಂದರವಾಗಿದ್ದು ಗೋಡೆಗಳಲ್ಲಿ 600ಕ್ಕೂ ಹೆಚ್ಚು ದೇವರ ಚಿತ್ರಗಳನ್ನು ರಚಿಸಲಾಗಿದೆ. ದೇಗುಲ ಪ್ರವೇಶ ಮಂಟಪ, ಮುಖಮಂಟಪ, ಮಹಾಮಂಟಪ ಹಾಗೂ ಗರ್ಭಗೃಹವನ್ನೊಳಗೊಂಡಿದೆ.
ಚಿತ್ರಗುಪ್ತ ದೇವಸ್ಥಾನ: ಖಜುರಾಹೋದ ಕಂಡು ಬರುವ ಮತ್ತೊಂದು ದೇಗುಲ ಇದಾಗಿದ್ದು, ಸೂರ್ಯದೇವನಿಗೆ ಅರ್ಪಿತಗೊಂಡಿದೆ. ಏಳು ಕುದುರೆಗಳು ಎಳೆಯುವ ರಥದಲ್ಲಿ ಸೂರ್ಯದೇವ ವಿರಾಜಮಾನನಾಗಿದ್ದಾನೆ. ಇಂತಹದ್ದೇ ಮೂರು ಚಿತ್ರಗಳನ್ನು ದ್ವಾರದ ಮೇಲು ಹಾಸಿನಲ್ಲಿ ಕಾಣಬಹುದು.

ಹೋಗುವುದು ಹೇಗೆ
ಖಜುರಾಹೋದಲ್ಲಿ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ದೇಶದ ಪ್ರಮುಖ ನಗರ ಮುಂಬೈ, ವಾರಣಾಸಿ, ಅಲಹಾಬಾದ್, ಭೋಪಾಲ್‍ನಿಂದ ವಿಮಾನ ಹಾರಾಟವಿದೆ. ಅಲ್ಲಿಂದ ಟ್ಯಾಕ್ಸಿ ಮೂಲಕ ಖಜುರಾಹೋ ದೇಗುಲಗಳ ಸಂಕೀರ್ಣವನ್ನು ತಲುಪಬಹುದು. ಹತ್ತಿರದ ರೈಲು ನಿಲ್ದಾಣ ಮಹೂಬಾ ಜಂಕ್ಷನ್. ಅಲ್ಲಿಂದ 63 ಕಿಮೀ. ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles