ದಾಸಶ್ರೇಷ್ಠರಾದ ಪುರಂದರದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗಿರುವ ಬದುಕಿಗೆ ಸ್ವಾವಲಂಬನೆಯ ಪಾಠ, ಸಕಾರಾತ್ಮಕ ಚಿಂತನೆ ಕುರಿತು ಚಿಂತನ ಬರಹ.
* ಕೃಷ್ಣಪ್ರಕಾಶ ಉಳಿತ್ತಾಯ
ಪುರಂದರ ದಾಸರ ಹಾಡುಗಳು ಏಕಕಾಲದಲ್ಲಿ ಧಾರ್ಮಿಕ ಪ್ರಜ್ಞೆಯ ಮೂಲಕ ಅಲೌಕಿಕ ತತ್ತ್ವದ ಅರಿವನ್ನೂ ಮತ್ತು ಕರ್ತವ್ಯ ಪ್ರಜ್ಞೆಯನ್ನು ಜನರಲ್ಲಿ ಉದ್ದೀಪಿಸಿ ವ್ಯಕ್ತಿತ್ವ ವಿಕಸನಕ್ಕೆ ಆ ಕಾಲದಲ್ಲೇ ಅಡಿಗಲ್ಲನ್ನು ಕನ್ನಡದ ಒಳ್ನುಡಿಯ ಮೂಲಕ ಹಾಕಿದೆ. ಭಕ್ತಿಪಂಥ ಇದರ ಹೊರಮುಖವಾದರೂ ಕವಿತೆಗಳ ಗರ್ಭದಲ್ಲಿ ಮಾನವೀಯ ಮೌಲ್ಯಗಳು ಪುಟಪಾಕಗೊಂಡಿದೆ.
ಪುರಂದರದಾಸರು ಜೀವನವನ್ನು ಎಚ್ಚರದಿಂದ ಗಮನಿಸಿದವರು. ಕೇವಲ ಮಾನವರನ್ನು ಮಾತ್ರವಲ್ಲ ಜಡ ಚೇತನ ಪ್ರಕೃತಿಯನ್ನೂ ಬಿಟ್ಟ ಕಣ್ಣಿಂದ ಗಮನಿಸಿ ಅಲ್ಲಿರುವ ತಥ್ಯವನ್ನು ಜನಮನಕ್ಕೆ ಮುಟ್ಟಿಸಿದವರಾಗಿದ್ದಾರೆ. ಇದು ಜೀವನೋತ್ಸಾಹವನ್ನೂ, ಸಕಾರಾತ್ಮಕ ಅಂಶಗಳನ್ನು ಜನರಲ್ಲಿ ತುಂಬಿಸುತ್ತದೆ.
ಚಿಂತೆ ಏತಕೋ ಬಯಲು ಭ್ರಾಂತಿ ಏತಕೋ
ಕಂತುಪಿತನ ದಿವ್ಯನಾಮ ಮಂತ್ರವನ್ನು ಜಪಿಸುವರಿಗೆ || ಪ||
ಎಂಬ ಪಲ್ಲವಿಯೊಡನೆ ಜನರಿಗೆ ಪ್ರಶ್ನೆಯನ್ನು ಹಾಕುತ್ತಾ ಪುರಂದರದಾಸರು ಈ ಹಾಡನ್ನು ಹಾಡುತ್ತಾರೆ. ಇಲ್ಲಿ ಹರಿಯ ಜಪ-ಧ್ಯಾನ ಮಾಡುವವರಿಗೆ ಚಿಂತೆ ಯಾಕೆ ಎಂಬ ಭರವಸೆ ಇದ್ದರೂ ಇಡೀ ಪದ್ಯದಲ್ಲಿ ಜಗದ ನಡೆ ಸಹಜವಾಗಿ ನಡೆಯುತ್ತಿದೆ. ತಮ್ಮ ಪಾಲಿನ ಕರ್ತವ್ಯ ಮಾಡುತ್ತಾ ಸಾಗಬೇಕು; ನಮ್ಮ ಎಲ್ಲಾ ಚಿಂತೆಗಳು ಕೇವಲ ಭ್ರಾಂತಿ ಎಂಬ ಸೂಕ್ಷ್ಮವೇ ಮುಖ್ಯವಾಗಿ ಕಾಣುತ್ತದೆ.
ಸ್ವಾವಲಂಬನೆಯ ಪಾಠ:
ಹಾಡಿನಲ್ಲಿ ಮೊದಲ ಚರಣದಲ್ಲಿ:
ಏಳುತುದಯ ಕಾಲದಲ್ಲಿ
ವೇಳೆಯರಿತು ಕೂಗುವಂಥ
ಕೋಳಿತನ್ನ ಮರಿಗೆ ಮೊಲೆಯ ಹಾಲಕೊಟ್ಟು ಸಲಹುತಿಹುದೆ? ||1||
ಇಲ್ಲಿಯ ಚರಣಗಳಲ್ಲಿ ಯಾಕೆ ಅಸಂಗತ ವಿಚಾರಗಳನ್ನು ದಾಸರು ಹೇಳಿದರು ಎಂಬ ಪ್ರಶ್ನೆ ಏಳಬಹುದು. “ಕೋಳಿ ತನ್ನ ಮರಿಗೆ ಮೊಲೆಯ ಹಾಲಕೊಟ್ಟು ಸಲಹುತಿಹುದೆ?” ಕೋಳಿ ಮರಿ ಯಾವತ್ತೂ ಕೂಡಾ ತನ್ನ ಮರಿಗಳಿಗೆ ಮೊಲೆ ಹಾಲು ನೀಡಿ ಸಾಕುವುದಿಲ್ಲ. ಅಂದರೆ ಎಲ್ಲ ಜೀವವೈವಿಧ್ಯಗಳಿಗೂ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಆ ದಾರಿಯಲ್ಲೇ ಅದರ ಜೀವನ ಸಾಗಬೇಕು. ಕೋಳಿಮರಿಗೆ ಯಾವತ್ತೂ ಹೇಂಟೆ ಅಗತ್ಯಕ್ಕಿಂತ ಹೆಚ್ಚು ಪೋಷಣೆ ಕೊಡದು. ಮರಿಗಳು ತಾಯಿಯನ್ನು ನೋಡಿ ಜೀವನ ಪಾಠ ಕಲಿಯುತ್ತವೆ. ತಾನೇ ಕಾಳನ್ನು ತಿನ್ನಿಸುವುದಿಲ್ಲ. ಸ್ವಾವಲಂಬನೆಯ ಬದುಕುವ ಮಾರ್ಗವನ್ನು ತೋರಿಸಿದೆ. ಅಂದರೆ ಪಶು ಪಕ್ಷಿಗಳಿಂದಲೂ ಮನುಷ್ಯ ಕಲಿಯಬೇಕಾದ ಪಾಠಗಳು ಅನೇಕ.
ಇದು ಸಹಜ ಪ್ರಕ್ರಿಯೆ:
ಸಡಗರದಲಿ ನಾರಿಜನರು
ಹಡೆಯುವಾಗ ಸೂಲಗಿತ್ತಿ ಅಡವಿಯೊಳಗೆ ಹೆರುವ ಮೃಗವ ಪಿಡಿದು ರಕ್ಷಣೆ ಮಾಳ್ಪವರಾರು?
ಮನುಷ್ಯರಾದರೋ ಜನ್ಮಕೊಡುವ ಸಂದರ್ಭದಲ್ಲಿ ಅವರಿಗಿರುವ ಆರೈಕೆ-ಈಗಿನ ಸಂದರ್ಭದಲ್ಲಿ ಆಸ್ಪತ್ರೆ ರಹಿತ ಹೆರಿಗೆ ಊಹೆಗೂ ನಿಲುಕದ್ದು. ಮೊದಲೆಲ್ಲಾ ಸಹಜ ಹೆರಿಗೆ ಇದ್ದದ್ದನ್ನು ಈಗ ಹೇರಿಕೆಯ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮಾಡಿಸುವ ಮನಸ್ಥಿತಿ ಇದೆ.
ಆದರೆ ದಾಸರು ನೋಡುವುದು ಪ್ರಾಣಿಗಳಿಗೆ ಹೆರಿಗೆ ಎನ್ನುವುದು ಮಲ ಮೂತ್ರ ವಿಸರ್ಜನೆಯಂತಹಾ ಸಾಮಾನ್ಯ ಪ್ರಕ್ರಿಯೆ ಅಷ್ಟೆ. ಯಾವ ಸೂಲಗಿತ್ತಿ ಇರುತ್ತಾಳೆ ಅಡವಿಯಲ್ಲಿ ಹೆರುವ ಮೃಗಗಳಿಗೆ? ಅಂದರೆ ಈ ರೂಪಕವನ್ನು ಅನ್ವಯಿಸುವಾಗ ನನಗನಿಸುವುದು ನಾವು ಜೀವನವನ್ನು ಸಹಜ ಪ್ರಕ್ರಿಯೆಯಾಗಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂಬುದು. ದಾಸರು ಹೇಳುವ “ಹರಿಯ ದಿವ್ಯನಾಮ ಮಂತ್ರವನ್ನು ಜಪಿಸುವವರಿಗೆ” ಅಂದರೆ ಇಡೀ ಪ್ರಪಂಚದ ಚಾಲಕ ಶಕ್ತಿಯ ಬಗೆಗಿನ ಸಂತತವಾದ ಅನುಸಂಧಾನ. ಈ ಅನುಸಂಧಾನಕ್ಕೆ ನಾವು ಮೂರ್ತ ರೂಪವನ್ನೂ ಕೊಡಬಹುದು ಅಥವಾ ಅಮೂರ್ತ ಚೈತನ್ಯವಾಗಿಯೂ ಚಿಂತಿಸಬಹುದು. ಅಂದರೆ ನಮ್ಮಳತೆಗೆ ಸಿಗದ ಆದರೆ ನಮ್ಮೆಲ್ಲವನ್ನೂ ನಿಯಂತ್ರಿಸುವ ಶಕ್ತಿ ಒಂದಿದೆ ಅದನ್ನು ಸತತವಾಗಿ ಚಿಂತಿಸೋಣ ಎನ್ನುವ ಅಂಶ ಮುಖ್ಯವಾಗುತ್ತದೆ.
ಹೆತ್ತ ತಾಯಿ ಸತ್ತ ಶಿಶುವು ಮತ್ತೆ ಕೆಟ್ಟಿತೆಂಬರು ಜನರು ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ- ನಿತ್ತು ರಕ್ಷಣೆ ಮಾಡುವರಾರು? ||5||
ಘಟ್ಟಿ ಮಣ್ಣಿನ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸಲಿಲ್ಲ ಕೊಟ್ಟ ದೇವರು ಕೊಂಡುಹೋದರೆ ಕುಟ್ಟಿಕೊಂಡು ಅಳುವುದೇಕೋ ||4||
ಪರದಲ್ಲಿ ಪದವಿಯುಂಟು ಇಹದಲ್ಲಿ ಇಷ್ಟ ಉಂಟು ಗುರು ಪುರಂದರವಿಟ್ಠಲನ್ನ ಸ್ಮರಣೆಯನ್ನು ಮರೆಯದವಗೆ ||5|| ಮೂರು ಚರಣಗಳಲ್ಲೂ ಜೀವನವನ್ನುಸಕಾರಾತ್ಮಕವಾಗಿ ನೋಡುವಲ್ಲಿ ನಮ್ಮ ತೆರೆದ ಕಣ್ಣು ಕಾರಣವಾಗುತ್ತದೆ ಎಂಬ ಸೂಕ್ಷ್ಮವನ್ನು ಹೇಳಿದ್ದಾರೆ.
ಇಹದಲ್ಲಿ ಇಷ್ಟ ಮತ್ತು ಪರದಲ್ಲಿ ಪದವಿ ಸಿಗಬೇಕಿದ್ದರೆ ನಿರ್ಲಿಪ್ತವಾಗಿ ಆದರೆ ಕರ್ತವ್ಯ ಪರತೆಯಿಂದ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುದು ದಾಸರ ಆಶಯ. ಇಲ್ಲಿ ಗುರು ಪುರಂದರ ವಿಠಲನ ಸ್ಮರಣೆ ಎಂದರೆ ವಿಠಲ ಹೇಳಿದ ತತ್ತ್ವದ ಅನುಷ್ಠಾನ ಅಲ್ಲದೆ ಮತ್ತೇನಲ್ಲ. ಕರ್ಮಸಿದ್ದಾಂತ;ತನ್ನ ಪಾಲಿನ ಕರ್ತವ್ಯವನ್ನು ನಿಭಾಯಿಸುವುದು ಇತ್ಯಾದಿ. “ಕೊಟ್ಟ ದೇವರು ಕೊಂಡು ಹೋದರೆ ಕುಟ್ಟಿಕೊಂಡು ಅಳುವುದೇಕೊ?” ಎಂಬಲ್ಲಿ ನಾವು ತಾಳಬೇಕಾದ ನಿರ್ಭರ ಮನಃಸ್ಥಿತಿಯನ್ನು ಹೇಳುತ್ತದೆ. ಇದು ಕಷ್ಟವೇ. ನಾವು ಕುಟ್ಟಿ ಕುಟ್ಟಿ ಅಳಬೇಕು. ಅತ್ತು ನಿರ್ಲಿಪ್ತರಾಗಬೇಕು. ಹಗುರಾಗಬೇಕು. ಅಳುವ ಸಮಯದಲ್ಲಿ ನಾವು ಜೀವನ ಕೊಟ್ಟ ಅತೀತವನ್ನು ತೆಗಳದೆ ಅದಕ್ಕೆ ಬಾಗಿ ಬೆಳಗಬೇಕು.
ಅಂತಹಾ ಮನದ ಪಾಕವನ್ನು ಬೆಳೆಸಿಕೊಳ್ಳುವುದು ಕಷ್ಟವೆಂಬುದು ಈ ಲೇಖಕನಿಗೆ ಅರಿವಿದೆ ಆದರೆ ಅದನ್ನು ಹೊರತು ಪಡಿಸಿ ಬೇರೆ ದಾರಿಯಿಲ್ಲವೆನ್ನುವುದೂ ಗೊತ್ತಿದೆ. ಜೀವನಕ್ಕೆ ನಾವು ಶರಣಾಗಬೇಕು. ಅದರ ಮಹತ್ತ್ವಕ್ಕೆ ಬಾಗಬೇಕು. ಬಾಗಿ ಬೆಳಗಬೇಕು. ಇದು ಈ ಲೇಖಕ ಮಾಡುವ ಬೋಧನೆಯಲ್ಲ ಖಂಡಿತಾ ಅಲ್ಲ. ಆ ಹಂತಕ್ಕೆ ಏರಬೇಕೆಂದು ಬಯಸುವ ಮನದ ಇಚ್ಛೆ. ಹೇಳುವಷ್ಟು ಸುಲಭವಲ್ಲ ಜೀವನವೆಂಬ ಸತ್ಯದ ಅರಿವು ಇದೆ. ಆದರೆ ಜೀವನೋತ್ಸಾಹ ಕಳೆದುಕೊಳ್ಳದಂತೆ ಮಾಡುವಲ್ಲಿ ದಾಸರ ಹಾಡುಗಳು ಮಹತ್ತ್ವದ ಪಾತ್ರವಹಿಸುತ್ತದೆ ಎಂಬುದು ಇಲ್ಲಿ ಗಮನೀಯ. ಅದು ಸಾಧ್ಯವಾಗುವುದು ದಾಸರು ಹೇಳುವ ಮತ್ತೊಂದು ಉಕ್ತಿಯಂತೆ ನಡೆದರೆ- “ಮನವ ಶೋಧಿಸಬೇಕು ನಿಚ್ಚ-ದಿನ ದಿನದಿ ಮಾಡುವ ಪಾಪಪುಣ್ಯದ ವೆಚ್ಚ”.
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು. ಮಂಗಳೂರು)
🙏