ಇದೇ ರೀತಿ ಇರಲಿ ಜೀವನ ಪ್ರೀತಿ- ನೀತಿ

ಪುರಂದರದಾಸರ ಹಾಡುಗಳು ದೇಶಕಾಲಾತೀತವಾದ ಸತ್ಯವನ್ನು ಸ್ಫುರಿಸುವಂತಹದ್ದು. ಕಷ್ಟಕಾಲದಲ್ಲಿ ಶರಣ್ಯವಾಗುವ ನೀತಿಯನ್ನೂ ಜೀವನದ ರೀತಿಯನ್ನು ಜಗತ್ತಿಗೆ ಕನ್ನಡದ ಭಾಷೆಯಲ್ಲಿ ಹೇಳಿದ ಸಾಹಿತ್ಯರತ್ನ.

* ಕೃಷ್ಣಪ್ರಕಾಶ ಉಳಿತ್ತಾಯ

ಸಬೇಕು –ಇದ್ದು ಜಯಿಸಬೇಕು ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ||ಪಲ್ಲವಿ||  ಎಂಬ ಪಲ್ಲವಿಯೊಡನೆ ಈ ಕೀರ್ತನೆ ಆರಂಭವಾಗುತ್ತದೆ. ಮೊದಲ ಸಾಲೇ ಚೇತೋಹಾರಿಯಾಗಿದೆ. ಕರ್ಮಯೋಗವನ್ನು ಪ್ರತಿಪಾದಿಸುವ ದಿಕ್ಸೂಚಿಯಂತಿದೆ. ಜೀವನ್ಮುಖಿಯಾಗಿ ಇದ್ದು ಜೀವನದ ಪ್ರವಾಹದ ಜತೆಗೆ ನಾವೂ ಸಾಗಬೇಕು ಎನ್ನುವ ಜೀವನ ಪ್ರೀತಿಯನ್ನು ಪ್ರತಿಪಾದಿಸುವ ಸಾಲಿದು. “ಈಸಬೇಕು ಇದ್ದು ಜಯಿಸಬೇಕು” ಏನನ್ನು ಜಯಿಸಬೇಕು ಎನ್ನುವುದು ವಿವಕ್ಷೆ. ಎರಡನೆಯ ಸಾಲಿನಲ್ಲೇ ಇದಕ್ಕೆ ಉತ್ತರವಿದೆ.

“ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ”. ಇದು ಬಹಳ ಕಷ್ಟ. ಸಂಸಾರವೆಂಬುದು ಪರಮ ಪ್ರಿಯವಾಗಿರುವಾಗ ದಾಸರ “ಹೇಸಿಕೆ ಸಂಸಾರ” ಎಂಬ ಮಾತನ್ನು ಒಪ್ಪಿಕೊಳ್ಳುವುದಾದರೂ ಹೇಗೆ? “ಲೇಶ ಆಸೆ ಇಡದ ಹಾಗೆ” ಎಂಬ ಮಾತಲ್ಲಿ ಸಂಸಾರವೆಂಬುದನ್ನು ನಾವು ಜೀವನದಲ್ಲಿ ಅನ್ವಯಿಸಬೇಕೆಂಬುದು ದಾಸರ ಮಾತು. ಹಾಗೆ ಅನ್ವಯಿಸಿಕೊಂಡು ಅನುಷ್ಠಾನ ಮಾಡಿದರೆ ಸಂಸಾರವೆಂಬುದು ಹೇಸಿಕೆ ಅಂದರೆ ಹೆಚ್ಚು ಇದ್ದೂ ಇಲ್ಲದಂತಿರಬೇಕಾದ್ದು. ಆದರೆ, ಇರಲೇಬೇಕಾದದ್ದು ಎಂಬ ಮಾತೂ ಇಲ್ಲಿ ಮುಖ್ಯವಾಗುತ್ತದೆ. “ಲೇಶ ಆಸೆ ಇಡದ ಹಾಗೆ” “ಈಸಿ ಜಯಿಸಬೇಕು” ಎಂಬ ಮಾತಿನಲ್ಲಿ ನಾವು ಪಲಾಯನ ಪಂಡಿತರು ಆಗಬಾರದೆಂಬ ಸೂಚನೆಯೂ ಇದೆ.

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ||1||   ತಾವರೆಯ ಮೇಲಿನ ನೀರಿನಂತೆ ತಾವರೆಯ ದಳಕ್ಕೆ ಹಚ್ಚಿಕೊಂಡಿರದೆ ರಾಮ ನಾಮವನ್ನು ನೆನೆಯುತ್ತಾ ಸಂಸಾರದಲ್ಲಿ ಇರಬೇಕು ಎನ್ನುವ ಮಾತು ಇಲ್ಲಿದೆ. ಇಲ್ಲಿಯ ತಾವರೆಯ ಮೇಲಿನ ನೀರು ನಮ್ಮನ್ನು ಪ್ರತಿನಿಧಿಸುತ್ತದೆ. ತಾವರೆ ಸಂಸಾರದ ಪ್ರತೀಕ. ನೀರು ಅದರ ಮೇಲಿರದೆ ನಿರ್ವಾಹವಿಲ್ಲ. ಇರಲೇಬೇಕು. ತಾವರೆಯ ಸ್ಪರ್ಶವನ್ನು ಅನುಭವಿಸಲೇ ಬೇಕು. ಇಲ್ಲಿ ಮನಸ್ಥಿತಿ ಹೇಗಿರಬೇಕೆಂಬುದು ಮುಖ್ಯವಾಗುತ್ತದೆ. ಇರುವಿಕೆ ಎಂಬುದು ಮನಃಪೂರ್ವಕವಾಗಿರಬೇಕೆಂಬುದು ದಾಸರವಾಣಿ. ತ್ರಿಕರಣ ಪೂರ್ವಕವಾಗಿ ತನ್ನ ಕರ್ತವ್ಯಮಾಡಿಕೊಂಡಿರುವುದು ಎಂಬುದೂ ಇಲ್ಲಿ ಮುಖ್ಯವಾಗುವುದು. ದಾಸರು ಎಂದಿಗೂ ಜೀವನ ವಿರೋಧಿಯಲ್ಲ. ಜೀವನ್ಮುಖಿಯಾಗಿ ಅತೀತದ ಕುರಿತಾಗಿ ಅನುಸಂಧಾನ ಮಾಡುತ್ತಾ ಜೀವನವನ್ನು ಸಾಗಿಸಬೇಕೆಂಬುದು ಅವರ ಸೂಚನೆ. ಇಲ್ಲಿ ದಾಸರು ಕೊಡುವ ಮತ್ತೊಂದು ಉಪಮಾಲಂಕಾರ ನೋಡೋಣ-

ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ.||2||  ಗೇರುಹಣ್ಣಿನ ಬೀಜ ಹೇಗೆ ಅಂಟಿಯೂ ಅಂಟದಂತೆ ಇರುತ್ತದೋ ಹಾಗೇ ನಾವು ಯಾವತ್ತೂ ಸಾಕ್ಷಿ ಪ್ರಜ್ಞೆಯಲ್ಲಿ ಜೀವನವನ್ನು ನೋಡಬೇಕು ಎಂದು ದಾಸರು ಹೇಳುತ್ತಾರೆ. “ಮೀರಿ ಆಶೆ ಮಾಡದ ಹಾಗೆ” ಇಲ್ಲಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬ ನೀತಿಯನ್ನೂ ಹೇಳುತ್ತಾರೆ ದಾಸರು.  

 ಮಾಂಸದಾಸೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು ಮೋಸಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ||3||  ಜೀವನದಲ್ಲಿ ಕ್ಷಣಕ್ಷಣ ನಮಗೊದಗುವ ಪ್ರಲೋಭನೆಗಳನ್ನು ಕುರಿತಾಗಿ “ಮಾಂಸದಾಸೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು” ಎಂಬ ಮಾತಿನಿಂದ ನಮ್ಮನ್ನು ಎಚ್ಚರಿಸುತ್ತಾ ತನ್ನ ಜನಾನುರಾಗವನ್ನು ಜನರಲ್ಲಿ ನೈತಿಕಪ್ರಜ್ಞೆಯನ್ನು ಸದಾ ಜಾಗ್ರತೆಯಲ್ಲಿ ಇರಿಸಲು ತನ್ನ ಕೆಲಸವನ್ನು ಹಾಡುಗಳ ಮೂಲಕ ಮಾಡಿದ್ದಾರೆ. ಇದು ನಿಜವಾಗಿಯೂ ಜನಸೇವೆ. ದಾಸರ ವಾಣಿ ಸದಾ ನಮಗೆ ದಾರಿದೀಪ. ಜನಮನದಲ್ಲಿ ಭಕ್ತಿಯ ದೀಪವನ್ನು ಹಚ್ಚಿ ಸದಾಚಾರ ಮತ್ತು ಸದ್ಭಾವಗಳನ್ನು ಬೆಳಗಿಸಿ ಸಮಾಜದ ಸ್ವಾಸ್ಥ್ಯವನ್ನು ಅನುದಿನವೂ ಕಾಪಾಡಿ ತಮ್ಮಕಾಲಾನಂತರ ಅವರ ಅಮರ ಕೃತಿಗಳ ಮೂಲಕ ಮಾಡುತ್ತಿದ್ದಾರೆ.

(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು. ಮಂಗಳೂರು)    

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles